ಮೈಸೂರು ದಸರಾ ಒಂದು ಚಿಂತನೆ

ಮೈಸೂರು ದಸರಾ ನಾಡಹಬ್ಬವನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಬರುತ್ತದೆ. ಆದರೆ ಈ ಉತ್ಸವದಲ್ಲಿ ಭಾಗವಹಿಸುವ ಕಲಾವಿದರು ಮಾತ್ರ ಬಹುತೇಕ ಹೊರಗಿನವರಾಗಿರುತ್ತಾರೆ. ಕೋಟಿ ಹಣ ನೀಡಿ ಹೊರಗಿನ ಕಲಾವಿದರನ್ನು ಕರೆಸುವ ಬದಲು ನಮ್ಮವರಿಗೆ ಅವಕಾಶಕೊಟ್ಟರೆ ಸಂತೋಷ.ಲೇಖಕರಾದ ದೇವರಾಜ ಚಾರ್ ಅವರ ಈ ಲೇಖನವನ್ನು ಪೂರ್ತಿಯಾಗಿ ಓದಿ..

ರಾಜರಿದ್ದ ಕಾಲದಲ್ಲಿ ದಸರಾ ಹಬ್ಬವನ್ನು ನಾಡಹಬ್ಬವಾಗಿ ಆಚರಿಸುತ್ತಿದ್ದರು. ಅದಕ್ಕೆ ಒಂದು ಬೆಲೆ ಇತ್ತು. ಧಾರ್ಮಿಕ ನಂಬಿಕೆ, ಸಾಂಸ್ಕೃತಿಕವಾಗಿ ಒಂದು ವಿಶೇಷತೆ ಇತ್ತು.  ವಿವಿಧ ಜಿಲ್ಲೆಗಳಿಂದ ಬಂದು ದಸರಾ ಹಬ್ಬವನ್ನು ನೋಡಿ ಕಣ್ಣು ತುಂಬಿಕೊಂಡು, ಹತ್ತಿರದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಹೋಗುತ್ತಿದ್ದರು.

ಈಗಿನ ದಸರಾ ವೈಭವದಿಂದ ಕೂಡಿದೆ. ಮೋಜು, ಮಸ್ತಿ ಜಾಸ್ತಿ ಇದೆ. ಸ್ಥಳೀಯ ನಾಗರಿಕರಿಂದ ದೂರ ಆಗುತ್ತಿದೆ. ಯುವದಸರ ಅಂದರೆ ಯುವಕರು ಯುವತಿಯರು ಹುಚ್ಚೆದ್ದು ಕುಣಿಯುವ ಒಂದು ಜಾಗವಾಗಿದೆ ಅಷ್ಟೇ. ಒಂದು ವೇದಿಕೆಯಲ್ಲಿ ನಡೆಯುವ ಸಮಾರಂಭವನ್ನು ಲಕ್ಷಾಂತರ ಮಂದಿ ಅನುಭವಿಸುವುದು ಹೇಗೆ? ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಮತ್ತು ಅವರ ಹಿಂಬಾಲಕರು ಸ್ಟೇಜ್ ಮುಂದಿನ ಸುಖಾಸನದಲ್ಲಿ ಸಂಭ್ರಮಿಸುತ್ತಾರೆ.

ದಸರಾ ಬರುವುದೇ ಮಳೆಗಾಲದಲ್ಲಿ. ದಸರಾದ ಸಂದರ್ಭದಲ್ಲಿ ಒಂದೆರಡು ದಿನಗಳು ಮಳೆ ಬರುತ್ತದೆ. ಆ ಒಂದೆರಡು ದಿನಕ್ಕಾಗಿ ಮಾಡಿದ ವೆಚ್ಚ ನಷ್ಟವಾಗುತ್ತದೆ. ದಸರಾದಲ್ಲಿ ಭಾಗವಹಿಸುವ ಹೆಚ್ಚು ಕಲಾವಿದರು ಬೇರೆ ರಾಜ್ಯದವರು ಆಗಿರುತ್ತಾರೆ.

ಇಲ್ಲಿನ ಕಲಾವಿದರು ಸುಮಾರು 10 ಲಕ್ಷ ಸಂಭಾವನೆಗೆ ಸಿಗುವವರಿದ್ದಾರೆ. ಆದರೆ ನಮಗೆ ಕೋಟಿ ಬೆಲೆಬಾಳುವ ಕಲಾವಿದರೇ ಬೇಕು. ನಮ್ಮಲ್ಲಿ ಎಂತೆಂತಹ ಹಾಡುಗಾರರು ಇದ್ದಾರೆ. ಸಂಗೀತದಲ್ಲಿ ನುರಿತ ಕಲಾವಿದರಿದ್ದಾರೆ.ಎಷ್ಟೊಂದು ಬಾಲ ಪ್ರತಿಭೆಗಳು ನಮ್ಮಲ್ಲಿದ್ದಾರೆ?.

ಖಾಸಗಿ ವಾಹಿನಿಯವರು ನಡೆಸುತ್ತಿರುವ ಸ್ಪರ್ಧೆಯಲ್ಲಿ ಎಂತೆಂತಹ ಬಾಲ ಕಲಾವಿದರು ಹಾಡುಗಳನ್ನು ಚೆನ್ನಾಗಿ ಹೇಳುತ್ತಿಲ್ಲವೇ? ಕಾರ್ಯಕ್ರಮ ನಡೆಸುತ್ತಿರುವ ಆಯೋಜಕರು ಮತ್ತು ಮತ್ತು ಮಕ್ಕಳ ಪ್ರತಿಭೆಯನ್ನು ಅಳೆಯುವ ಎಷ್ಟು ಪ್ರಸಂಶನೆ ಮಾಡುತ್ತಾರೆ? ಆದರೆ ನಾವೇಕೆ ಅಂತಹ ಹಾಡುಗಾರರನ್ನು ಬೆಳಕಿಗೆ ತರುತ್ತಿಲ್ಲ?. ಹೆಸರು ಗಳಿಸಿದವರು ಹಣ ಇರುವವರು ಮಾತ್ರ ಮುಂದೆ ಬರುತ್ತಿರಬೇಕೇ? ಒಂದೆರಡು ಸ್ಥಳೀಯ ಕಲಾವಿದರನ್ನು ಗುರುತಿಸಿರಬೇಕು. ಆದರೆ ಪೂರ್ಣ ಪ್ರಮಾಣದಲ್ಲಿ ಸ್ಥಳೀಯ ಕಲಾವಿದರನ್ನು ಬಳಸಿಕೊಳ್ಳುತ್ತಿಲ್ಲ ಏಕೆ? ಹೆಚ್ಚು ಗಾಯಕರು ಹೊರ ರಾಜ್ಯದವರೇ ಆಗಿರುತ್ತಾರೆ. ಕಾರಣ ತಿಳಿದಿಲ್ಲ.

ದಸರಾವನ್ನು ಆ ವರ್ಷದಲ್ಲಿ ಯಾವ ಪಕ್ಷದ ಸರ್ಕಾರ ಇರುತ್ತದೂ ಆ ಸರ್ಕಾರದ ಮಂತ್ರಿಗಳು ದಸರಾವನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಜಿಲ್ಲಾ ಮಂತ್ರಿಗಳು ಇದರ ಉಸ್ತುವಾರಿಯನ್ನು ವಹಿಸಿರುತ್ತಾರೆ. ಅವರಿಗೆ ಸಾಕಷ್ಟು ಕಾರ್ಯಕರ್ತರು(ಹಿಂಬಾಲಕರು) ಇರುತ್ತಾರೆ. ದಶರ ಸಮಯದಲ್ಲಿ ಅವರಿಗೆಲ್ಲ ಒಂದು ಕೆಲಸ ಅಂದರೆ ಉಸ್ತುವಾರಿ ಕೊಟ್ಟು ಅವರ ಜೇಬು ತುಂಬಿಸಬೇಕಲ್ಲವೇ?

ಈ ಸಾರಿಯ ದಸರದಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಕಂಬಳ ನಡೆಸಬೇಕು ಅನ್ನುವ ವದಂತಿ ಇದೆ. ಒಂದು ಯಶಸ್ವಿ ಕಾರ್ಯಕ್ರಮ ಯಾವ ಯಾವ ಜಾಗದಲ್ಲಿ ನಡೆಯಬೇಕು ಅಲ್ಲಿಯೇ ನಡೆಯಬೇಕು. ಕರಾವಳಿ ಪ್ರದೇಶ ಕಂಬಳಕ್ಕೆ ಹೇಳಿ ಮಾಡಿಸಿದ ಜಾಗ. ಅದನ್ನು ಬೇರೆ ಕಡೆ ಮರು ಸೃಷ್ಟಿ ಮಾಡುವುದು ಆ ಜಾಗಕ್ಕೆ ಮಾಡುವ ಅಪಮಾನ.

ಸರ್ಕಾರದ ದಸರಾ ಆಗಬಾರದು ಜನರ ದಸರಾ ಆಗಬೇಕು. ಸರ್ಕಾರ ನಡೆಸುವವರು ಜನಪ್ರತಿನಿಧಿಗಳು.ಜನರ ಇಷ್ಟದಂತೆ ನಡೆದುಕೊಳ್ಳಬೇಕು ವಿನಹ ಜನ ಪ್ರತಿನಿಧಿಗಳು ತಮಗಿಷ್ಟ ಬಂದಂತೆ ಮಾಡಬಾರದು.

ದಸರಾದಲ್ಲಿ ಜಂಬೂ ಸವಾರಿಯನ್ನು ಮಾತ್ರ ಟಿವಿಯಲ್ಲಿ ನೇರ ಪ್ರಸಾರ ಮಾಡುತ್ತಾರೆ. ಆದರೆ ಕೋಟ್ಯಾಂತರ ಖರ್ಚು ಮಾಡಿ ಮೈಸೂರಿನ ಬೇರೆ ಬೇರೆ ಕಡೆ ನಡೆಯುವ ಕಾರ್ಯಕ್ರಮವನ್ನು ಏಕೆ ಪ್ರಸಾರ ಮಾಡಬಾರದು? ಹಿರಿಯ ನಾಗರೀಕರು ಮಕ್ಕಳು ದಸರಾವನ್ನು ಸಂಭ್ರಮಯಿಸಬಹುದಲ್ಲವೇ?. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು.

ದಸರೆಯ 9 ದಿನಗಳಲ್ಲಿ ಆಹಾರ ಮೇಳ, ಪುಸ್ತಕ ಮೇಳ, ಯುವ ದಸರ, ಕಾಲೇಜು ವಿದ್ಯಾರ್ಥಿಗಳ ದಸರಾ, ಅರಮನೆಯಲ್ಲಿ ನಿತ್ಯ ಸಂಗೀತ ಉತ್ಸವ,ಸಿನಿಮಾಗಳ ಉತ್ಸವ, ಕವಿ ಗೋಷ್ಠಿ, ನಾಟಕಗಳ ಉತ್ಸವ ಮೈಸೂರಿನ ನಗರದ ವಿವಿಧಡೆ ಇರುವ ಕಲಾಮಂದಿರದಲ್ಲಿ ಆಯೋಜಿಸುತ್ತಾರೆ. ವಿವಿಧ ಉತ್ಸವ ಗಳನ್ನು ಏಕೆ ದಸರಾದಲ್ಲೇ ಆಯೋಜಿಸಬೇಕು? ಎಲ್ಲಾ ಸ್ಥಳಗಳಿಗೂ ಭೇಟಿ ಕೊಟ್ಟು ಸವಿಯುವ ಅವಕಾಶವಾದರೂ ಜನರಿಗೆ ಎಲ್ಲಿರುತ್ತೆ ?

ಕೆಲವು ಉತ್ಸವಗಳನ್ನು ಡಿಸೆಂಬರ್ ನಲ್ಲಿ ಅಥವಾ ಮೇ ತಿಂಗಳಿನಲ್ಲಿ ನಡೆಸಬಹುದಲ್ಲವೇ?. ಈ ರೀತಿ ಮಾಡಿದರೆ ಜನರ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ದಿನ ನಿತ್ಯದ ಆಡಳಿತದ ಮೇಲೆ ಹೊರೆ ಕಡಿಮೆಯಾಗುತ್ತದೆ.


  • ದೇವರಾಜ ಚಾರ್ – ನಿವೃತ್ತ  ಕೆಪಿಸಿಎಲ್ ಅಧಿಕಾರಿ, ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading