ವೈದ್ಯರಿಂದಲೇ ಬಾಳಿಗೆ ಹಸಿರು. ಮನಸ್ಸಿಗೆ “ರಾಯರಿದ್ದಾರೆ” ಎಂಬ ವಿಶ್ವಾಸ ಹೇಗೋ, ಏನೇ ಬಂದರೂ “ಇವರಿದ್ದಾರೆ” ಎಂಬ ಅಚಲ ಭರವಸೆ ನಮಗೆ. ಡಾ ವಸಂತ್ ಕುಮಾರ್ ಹಾಗೂ ಅವರ ಡಾ.ವಾರಿಣಿ ಅವರ ಕುರಿತು ಲೇಖಕರಾದ ಚೇತನ ಭಾರ್ಗವ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
”ವೈದ್ಯೋ ನಾರಾಯಣೋ ಹರಿಃ” ಎಂಬ ಉಕ್ತಿಯಂತೆ ಆತ್ಮವನ್ನು ಭವಸಾಗರ ದಾಟಿಸುವವನು ಆ ಹರಿಯಾದರೆ, ದೇಹವನ್ನು ಕಾಪಿಟ್ಟು ಜೀವನವನ್ನು ಎದುರಿಸಲು ಸದಾ ಸನ್ನದ್ಧರಾಗಿಸುವವರು ವೈದ್ಯರು. ನಮ್ಮ ಪಾಲಿನ ಮಟ್ಟಿಗಂತೂ ನನ್ನ ಪತಿಯ ಸೋದರಮಾವರಾದ ಡಾ ವಸಂತ್ ಕುಮಾರ್ ಹಾಗೂ ಅವರ ಶ್ರೀಮತಿ ಡಾ.ವಾರಿಣಿ ಅವರೇ ಆ ಸಾಕ್ಷಾತ್ ಧನ್ವಂತರಿ ರೂಪಿಗಳು ಎಂದರೆ ಅದು ಅತಿಶಯೋಕ್ತಿಯಲ್ಲ.
ಪತಿಯ ಸೋದರಮಾವ ಜನರಲ್ ಫಿಸಿಶಿಯನ್ ಆಗಿ ಹಾಗೂ ಪತ್ನಿ ಪ್ರಸೂತಿ ತಜ್ಞೆಯಾಗಿ ಬೆಂಗಳೂರು ಸಮೀಪದ ನೆಲಮಂಗಲದಲ್ಲಿ ಸೇವೆ ಸಲ್ಲಿಸುತ್ತಿರುವ ಜೀವ-ಶಿವ ಸೇವೆಯ ಕೈಂಕರ್ಯದಲ್ಲಿ ಅದೆಷ್ಟು ರೋಗಿಗಳು ತಮ್ಮ ಬಾಧೆಗಳಿಂದ ಮುಕ್ತಿ ಹೊಂದಿದ್ದಾರೋ, ಅದೆಷ್ಟು ಹೆಣ್ಣುಮಕ್ಕಳಿಗೆ ಸುಖಪ್ರಸವವಾಗಿ ಕಂದಮ್ಮಗಳ ಮೊದಲ ಅಳುವಿನಿಂದ ತಾಯಿಯ ಮೊಗದಲ್ಲಿ ನಗು ತಂದಿದ್ದಾರೋ ಅದಕ್ಕೆ ಲೆಕ್ಕವೇ ಇಲ್ಲ.
ದೇವರಿದ್ದಾನೆ ಎಂಬ ನಂಬಿಕೆ ಹೇಗೆ ನಮ್ಮನ್ನು ಭರವಸೆಯ ಹಾದಿಯಲ್ಲಿ ಮುನ್ನಡೆಸುತ್ತದೋ, ಹಾಗೆಯೇ ಇವರ ಇರುವಿಕೆ ಮತ್ತು ಒತ್ತಾಸೆ ನಮ್ಮನ್ನು ಖಾಯಿಲೆಗಳು ತರುವ ಸಂಕಟ ಹಾಗೂ ಆತಂಕಗಳಿಂದ ಮುಕ್ತರನ್ನಾಗಿಸುತ್ತದೆ.

ವಿಶೇಷವಾಗಿ ನನ್ನ ಅತ್ತೆಯವರ ಆರೋಗ್ಯದ ವಿಚಾರದಲ್ಲಿ ಪ್ರತಿ ಹೆಜ್ಜೆಯಲ್ಲೂ ಇವರು ಜೊತೆಯಲ್ಲಿ ನಿಂತು ತೋರಿದ ಪ್ರೀತಿ ಹಾಗೂ ಕಕ್ಕುಲಾತಿಯನ್ನು ನೆನಸಿಕೊಂಡರೆ ಈಗಲೂ ಮನ ತುಂಬಿ ಬರುತ್ತದೆ; ಅತ್ತೆಯವರ ಸೂಕ್ಷ್ಮ ದೇಹಸ್ಥಿತಿಯ ಪೂರ್ಣ ಅರಿವಿದ್ದ ಇಬ್ಬರೂ, ಪರಿಸ್ಥಿತಿ ಕ್ಯಾನ್ಸರ್‌ನಂತಹ ವಿಷಮ ಘಟ್ಟಕ್ಕೆ ತಿರುಗಿದಾಗಲೂ ನಮಗೆ ಧೈರ್ಯ ತುಂಬಿ ಕೊನೆಯವರೆಗೂ ಬೆಂಗಾವಲಾಗಿ ನಿಂತು ನೀಡಿದ ಸಹಕಾರಕ್ಕೆ ನಾವು ಎಂದಿಗೂ ಋಣಿ. ಅತ್ತೆಯವರು ದೈಹಿಕವಾಗಿ ನಮ್ಮನ್ನು ಅಗಲಿದರೂ ಆ ಕಠಿಣ ಕ್ಷಣಗಳಲ್ಲಿ ಅವರು ನೀಡಿದ ಮಾನಸಿಕ ಒತ್ತಾಸೆ ಇಲ್ಲದಿದ್ದಲ್ಲಿ ನಾವು ಕುಗ್ಗಿ ಹೋಗುತ್ತಿದ್ದೆವು. ಕೇವಲ ಅಷ್ಟೇ ಅಲ್ಲದೆ, ನನ್ನ ಎರಡನೇ ಮಗಳ ಹೆರಿಗೆ, ಮಾವನವರ ಹರ್ನಿಯಾ ಶಸ್ತ್ರಚಿಕಿತ್ಸೆ, ಪತಿಯವರಿಗೆ ತಗುಲಿದ್ದ ಡೆಂಗ್ಯೂ – ಹೀಗೆ ಎಲ್ಲಾ ಸಂದರ್ಭಗಳಿಗೂ ಇವರದೇ ಆಸರೆ; ಇತ್ತೀಚೆಗೆ ನನಗೆ ಅಚಾನಕ್ಕಾಗಿ ಆರೋಗ್ಯ ಏರುಪೇರಾಗಿ ವಿಪರೀತ ತಲೆನೋವು ಬಂದಾಗ ರಾತ್ರಿ 11 ಗಂಟೆಗೆ ನೆಲಮಂಗಲದಿಂದ ಬಂದು ಚಿಕಿತ್ಸೆ ನೀಡಿ ಉಪಚರಿಸಿದ ಪತಿಯ ಸೋದರಮಾವ ಅವರ ಕಾಳಜಿಗೆ ನನ್ನ ಬಳಿ ಪದಗಳಿಲ್ಲ.
ಮನಸ್ಸಿಗೆ “ರಾಯರಿದ್ದಾರೆ” ಎಂಬ ವಿಶ್ವಾಸ ಹೇಗೋ, ಏನೇ ಬಂದರೂ “ಇವರಿದ್ದಾರೆ” ಎಂಬ ಅಚಲ ಭರವಸೆ ನಮಗೆ. ಮಕ್ಕಳ ಆರೋಗ್ಯದಲ್ಲಿ ಏನೇ ಏರುಪೇರಾದರೂ ಮೊದಲ ಕರೆ ಹೋಗುವುದು ಇವರಿಗೇ; ಕೆಮ್ಮು-ಜ್ವರದಂತಹ ಸಣ್ಣ ವಿಷಯವಾದರೂ ಅದನ್ನು ತಾಳ್ಮೆಯಿಂದ ಕೇಳಿ ಪರಿಹಾರ ಹೇಳುವ ಇವರ ಗುಣ ಅನನ್ಯವಾಗಿದ್ದು, ಇವರ ವೈದ್ಯಕೀಯ ಕಾಳಜಿ ಕೇವಲ ನಮಗಷ್ಟೇ ಅಲ್ಲದೆ ಪ್ರತಿಯೊಬ್ಬ ರೋಗಿಗೂ ಸಮಾನವಾಗಿ ದೊರೆಯುವುದು ಅಭಿನಂದನೀಯ.
ಸ್ವಂತ ಸಮಯವೇ ಸಿಗದಂತಹ ಅವಿಶ್ರಾಂತ ದಿನಚರಿಯಲ್ಲೂ ಮನೆಗೆ ಬಂದವರನ್ನು ಉಪಚರಿಸಿ ಸತ್ಕರಿಸುವ ಇವರು, ಕೋವಿಡ್ ಮಾರಿಯ ಸಂದರ್ಭದಲ್ಲಿ ಮಾಡಿದ ಸೇವೆ ಹಾಗೂ ಗುರುಪೂರ್ಣಿಮೆಯಂದು ನಡೆಸುವ ಅನ್ನದಾನ ಎಂದಿಗೂ ಅನುಕರಣೀಯ ಜೊತೆಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಈರ್ವರೂ ತಮ್ಮ ಆಸ್ಪತ್ರೆಯ ಸಿಬ್ಬಂದಿ ವರ್ಗದವರನ್ನು ಮನೆಯ ಪ್ರತಿಯೊಂದು ವಿಶೇಷ ಸಮಾರಂಭಕ್ಕೂ ಆಹ್ವಾನಿಸಿ ಸತ್ಕರಿಸುವ ರೀತಿ ಅಪೂರ್ವವಾದುದು.. ಒಟ್ಟಿನಲ್ಲಿ ವೈದ್ಯವೃತ್ತಿಯ ಮೂಲಕ ಮಾನವೀಯತೆಯ ಮೂರ್ತ ಸ್ವರೂಪರಾಗಿರುವ ಈ ದಿವ್ಯ ದಂಪತಿಗಳಿಗೆ ನಮ್ಮ ಸದಾ ಅಭಿಮಾನದ ನಮನಗಳು.
- ಚೇತನ ಭಾರ್ಗವ – ಅರಮನೆತೋಟ
