ಮಳೆಗೆ ನೆಲದ ಮೇಲೆ ಪ್ರೇಮವಿತ್ತೊ? ಬರುವ ಬಾನ ದಾರಿಯಲ್ಲೇ ಕರಗುವ ಆಸೆಯಿತ್ತೊ?…ಕವಿ ಟಿ.ಪಿ.ಉಮೇಶ್ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಅಗೋ ಅದಾವ ಮೋಡ ಮೊದಲು ಕಣ್ಣೀರಿಟ್ಟಿತೊ?
ಅದಾವ ಗಾಳಿ ಅದನ್ನು ಹೊತ್ತು ತಂದಿತೊ?
ಅದಾವ ಎಲೆ ಚಿಗುರು ಮೊದಲು ತೇವಗೊಂಡಿತೊ?
ಅದಾವ ಮಣ್ಣು ಅದನ್ನು ತನ್ನದಾಗಿಸಿಕೊಂಡಿತೊ?
ಜಾರಿದ ಹನಿಗಳ ಲೆಕ್ಕ ಹಿಡಿದಷ್ಟು
ಸುಲಭವಲ್ಲ
ಆಕಾಶದ ಮನಸ್ಸಿನ ಆಳ ಅಗಲ ಅರಿಯುವುದು!
ತೇಲಿದ್ದು ಸಾಕೆಂದು ಸುರಿದವೊ?
ಬರುವ ದಾರಿಯಲ್ಲೇ ಕರಗಿದವೊ?
ಎಲೆಯ ತುದಿಯಲ್ಲಿ ನಿಂತು ತೂಗುವ
ಹನಿಗಳ ನಡುಕವನ್ನು ಓದಿದಷ್ಟು
ಸುಲಭವಲ್ಲ
ಬೀಳದ ಹನಿಯ ಕನಸು ಅರ್ಥಮಾಡಿಕೊಳ್ಳುವುದು!
ನೆಲ ಮುಟ್ಟದ ಮಳೆಹನಿಯ ವ್ಯಥೆ
ಮೋಡದೊಳಗೆ ಉಳಿದ ಮಳೆಹನಿಯ ಮಾತು
ಯಾರ ಕಿವಿಗು ಸಂಪೂರ್ಣ ಕೇಳುವುದಿಲ್ಲ!
ಯಾರೋ ಕೊಡೆ ಬಿಚ್ಚಿ ಹಿಡಿದು ನಡೆದರು!
ಯಾರೋ ಕೈಚಾಚಿ ನೆನೆಯುತ್ತ ನಿಂತರು!
ಯಾರೋ ಮನೆಮಬೆಯ ಕಿಟಕಿಯ ಗಾಜಿನ ಮೇಲೆ
ತಮ್ಮ ಏಕಾಂತ ಬರೆದು ಜಾರಿಹೋದರು!
ಮಳೆ ಸದಾ ಏಕಾಂಗಿ
ಮಳೆಯಿಂದ ಒದ್ದೆಯಾದ
ನೆಲದ ಮನ ಮನೆಗಳ ಕಥೆಗಳು ಮಾತ್ರ ಬೇರೆ ಬೇರೆ!
ಮಳೆಗೆ ನೆಲದ ಮೇಲೆ ಪ್ರೇಮವಿತ್ತೊ?
ಬರುವ ಬಾನ ದಾರಿಯಲ್ಲೇ ಕರಗುವ ಆಸೆಯಿತ್ತೊ?
ಭುವಿಯಲ್ಲಿ ನದಿಯಾಗುವ ದಾಹವಿತ್ತೊ?
ಸಮುದ್ರ ಸೇರುವ ಪ್ರತಿಜ್ಞೆಯಿತ್ತೊ?
ಮಳೆಯ ಉನ್ಮಾದ ಉಮ್ಮೇದುಗಳ ಬಲ್ಲವರಾರು?
ಮಳೆಯಲ್ಲಿ ಸುಮ್ಮನೆ ನೆನೆದವರು
ಮತ್ತೆ ಮತ್ತೆ ಮಳೆಯನ್ನು ಕಾಯುವರು!
ಅರ್ಧ ನೆನೆದವರು
ಆಕಾಶವನ್ನೇ ದೂರುವರು!
ಮೋಡಗಳನ್ನೇ ಗದರಿಸುವರು!
ಒಂದು ಹನಿ
ನೆತ್ತಿ ಹಣೆ ಮೂಗು ಕೆನ್ನೆ
ಈ ಎದೆಯ ಮೇಲೆ ಬಿದ್ದು
ನೆನಪಾಗುವುದು ಸಾಮಾನ್ಯವಲ್ಲ!
ತೇವಗೊಂಡ ತುಮುಲ
ಒಣಗಿದ ಮಣ್ಣಿಗು ಮರೆಯುವುದಿಲ್ಲ!
ಮಳೆ ಬರೆಯುವ
ಮಣ್ಣ ಕಥೆಗಳಿಗೆ ಯಾವತ್ತೂ ಅಂತ್ಯವಿಲ್ಲ!
ಕಾಯುತ್ತಿರುವ ಹೃದಯಗಳಿಗು
ಮಳೆ ಹೊರತು ಸಂಪೂರ್ಣ ತೃಪ್ತಿಯಿಲ್ಲ!
- ಟಿ.ಪಿ.ಉಮೇಶ್ – ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಪುರಸ್ಕೃತರು
