‘ವಿಡಂಬನೆ’ ಕವನ

ಎಲ್ಲಿ ಖಾಲಿಯೋ ಅಲ್ಲೆಲ್ಲ ಮಹಲುಗಳು ಎದ್ದಿಹವು ಗಗನಚುಂಬಿ…ಕವಿ ಶಿವದೇವಿ ಅವನೀಶಚಂದ್ರ ಅವರು ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ… 

ಕಂಬನಿಯ ಒರೆಸುವ
ಕೈಗಳಿಗೆ ವಿಧಿ ಬರೆವ
ಅಕ್ಷಯ ಲಿಖಿತ
ಸಂಪತ್ತಿನ ಮೊರೆತ

ಕರುಣೆಯಿಂದ ಸಲಹುವ
ಹೃದಯಕೆ
ಅಮೃತಧಾರೆಯ ಜಳಕ
ಅದು ತರಲು ಪುಳಕ

ಕಣ್ತೆರೆದು ನೋಡು ಜಗವನ್ನು
ಹರಿಯುತಿದೆ ಕಂಬನಿಯ ಹೊನಲು
ನಮ್ಮದೇ ಸ್ವಾತಂತ್ರ್ಯದ ಬೇಡಿಯಲ್ಲಿ
ನಮ್ಮ ಗತಿ ದಿಕ್ಕಾಪಾಲು

ಎಷ್ಟು ಸುರಿದರೂ
ಪ್ರಗತಿಯ ಕನಸಿ
ಎಲ್ಲವೂ ಹಿಂಗುವುದೇ
ಧನಪಿಶಾಚಿಗಳ ದಾಹದ
ಮರುಭೂಮಿಯಲಿ

ಬಿಸಿಲು ಮೂಡಿಸಿದ ಭ್ರಮೆಯ
ಮರೀಚಿಕೆಯ ಬಣ್ಣಗಳ
ಮೋಡಿಯ ಬಲೆಯಲಿ
ಸೆರೆಯಾಗುತ ಕನಸುಗಳು

ಎಲ್ಲಿ ಖಾಲಿಯೋ
ಅಲ್ಲೆಲ್ಲ ಮಹಲುಗಳು
ಎದ್ದಿಹವು ಗಗನಚುಂಬಿ
ಹಸಿವ ಜ್ವಾಲೆ ಮುಗಿಲಲಿ

ಬೆವರ ಹರಿಸಿದವರ
ಒಡಲು ಬೆನ್ನಿಗಂಟಿದೆ
ಸೋರುವ ಛಾವಣಿಯ
ಭರವಸೆಯ ನೆಮ್ಮಿ

ಹೃದಯವಿಲ್ಲದವರ
ಕಣ್ಗುರುಡು
ಜಗದ ನೋವಿಗೆಲ್ಲ
ಮಿಡಿಯಲಾರದ ಜೀವವೇಕಿನ್ನೂ
ಉಸಿರಾಡುತಿದೆ
ಬಡವರು ನೆಟ್ಟ ಗಿಡಮರಗಳ
ಪ್ರಾಣವಾಯುವ ಕುಡಿದು

ಬಗೆದಷ್ಟು ವ್ಯಂಗ್ಯ
ಈ ಬದುಕಿನಾಟ
ಶಾಶ್ವತವು ಯಾರು ಇಲ್ಲಿ
ಸವಿಯಗೊಡದ ರೋಗಗಳ
ಗೂಡು ಕಸಿಯುವುದು
ಅಗಣಿತ ಧನವನಿಲ್ಲಿ
ಕೊನೆಗೆ ಹೇಗೋ ಕುಣಿಕುಣಿದು
ಉಸಿರು ಚೆಲ್ಲಿ….
ಆರಡಿ ಮೂರಡಿಯ ನೆಲಕೆ
ಶರಣಾಗುವುದು
ಗತದೇಹವ ಇರಿಸಿ ಅಲ್ಲಿ…


  • ಶಿವದೇವಿ ಅವನೀಶಚಂದ್ರ – ಶಿಕ್ಷಕರು, ಅಂಕಣಕಾರ್ತಿ, ಚೆಟ್ಟಿಮಾನಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading