ಲಡಾಖ್ ಒಟ್ಟು ಏಳು ಜಿಲ್ಲೆಗಳನ್ನೊಳಗೊಂಡಿದ್ದು, ಲಡಾಖ್ ನೋಡಿದಷ್ಟು ಉಲ್ಲಾಸ. ಪೆಂಗಾನ್ ಲೇಕ್ ನಮ್ಮ ಹಿಂದಿ ಸಿನೆಮಾ ತ್ರಿ ಈಡಿಯಟ್ ನಿಂದ ಫೇಮಸ್ ಆಯಿತು. ನುಬ್ರಾದಿಂದ ಪೆಂಗಾಂಗ್ ಹೋಗುವ ದಾರಿಯಲ್ಲಿ ಸಾಗುವಾಗ ಜೀವ ಬಾಯಲ್ಲಿ ಹಿಡಿದು ಕುಳಿತ ಅನುಭವವನ್ನು ಲೇಖಕರಾದ ಜ್ಯೋತಿ ಬೊಮ್ಮ ಅವರು ಲಡಾಖ್ ಪ್ರವಾಸದ ಕುರಿತು ತಮ್ಮ ಅನುಭವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ನಮ್ಮ ಕಡೆಯ ಬಿಸಿಲಿಂದ ತಪ್ಪಿಸಿಕೊಂಡು ಎಲ್ಲಾದ್ರೂ ಹೋಗಬೇಕು ಅನಿಸಿ ತಂಪು ಪ್ರದೇಶ ಲಡಾಖಗೆ ಹೋಗಬೇಕೆಂದು ಟ್ರಾವೆಲ್ ಪ್ಯಾಕೇಜ್ ನೋಡಲು ಶುರುಮಾಡಿದೆ.ಜೊತೆಗೆ ಯಾರೂ ಬರುವುದಕ್ಕೆ ಉತ್ಸಾಹ ತೋರದ್ದರಿಂದ ಸೋಲೋ ಟ್ರಾವಲ್ ಮಾಡಲು ನಿರ್ಧರಿಸಿ ಉಮೆನ್ಸ ಸೋಲೋ ಟ್ರಿಪ್ ನ್ ಪ್ಯಾಕೇಜ್ ನೋಡಿ ಅಡ್ವೆಂಚರ್ ಕೇವ್ ಎಂಬ ಉಮೆನ್ಸ ಟೂರ್ ಪ್ಯಾಕೇಜ್ ನೊಂದಿಗೆ ಹೋಗಲು ನಿರ್ಧರಿಸಿದೆ. ಅಪರಿಚಿತರೊಂದಿಗೆ ಒಬ್ಬಂಟಿಯಾಗಿ ಪ್ರಯಾಣಿಸುವುದು ಸ್ವಲ್ಪ ಇರುಸುಮುರುಸಾಗಿ ನನ್ನ ತಂಗಿಗೆ ರೆಡಿ ಮಾಡಿಸ್ದೆ. ಅವಳ ಕಾಲೇಜ್ ಕ್ಲಾಸ್ ಶ್ಯಡೂಲ್ ಆರೆಂಜ್ ಮಾಡಿ ಬರಲು ಅವಳು ಹಿಂದೇಟು ಹಾಕತೊಡಗಿದಳು. ಒಪ್ಪಿಸಿ ಇಬ್ಬರು ರೆಡಿ ಆದೇವು.
ರಾತ್ರಿ ಎಲ್ಲ ಪ್ಲೇನ್ ಪ್ರವಾಸ , ಕನೆಕ್ಟೆಡ್ ಫ್ಲೈಟ್ , ಲೇಹ್ ತಲುಪುವಷ್ಟರಲ್ಲಿ ಸಾಕಾಯ್ತು. ಏರ್ಪೋರ್ಟ್ ನಿಂದ ಹೊರಗೆ ಬರುವಷ್ಟರಲ್ಲಿ ರಾಚುವ ಬಿಸಿಲು. ತಂಪು ಮರುಭೂಮಿ ಎಂಬುದು ಅನ್ವರ್ಥಕ ನಾಮ ಈಗ ಲಡಾಖಗೆ. ವಾತಾವರಣದಲ್ಲಿ ಏರುವ ಬಿಸಿ ಇಡೀ ಪ್ರಪಂಚಕ್ಕೆ ಕುಲುಮೆ ಮಾಡಬಹುದು ಒಮ್ಮೆ.

ಲೇಹ್ ನಲ್ಲಿ ನಮ್ಮ ಮೊದಲ ದಿನ ರೆಸ್ಟ್. ಅಲ್ಲಿನ ಕಡಿಮೆ ಜಲಜನಕಕ್ಕೆ ನಮ್ಮ ದೇಹ ಹೊಂದಿಕೊಳ್ಳಲು ಒಂದು ದಿನ ಪೂರಾ ಹೋಟಲ್ ನಲ್ಲಿ ಇರಬೇಕು. ನಾನು ಮಧ್ಯಾನ್ಹದವರೆಗೆ ಆರಾಮ ಇದ್ದೆ. ಸಂಜೆ ಒಮ್ಮೆಲೆ ತಲೆ ನೋವು, ವಾಂತಿ ಶುರುವಾಯಿತು. ಮೊದಲೆ ಅರೋಗ್ಯದ ಬಗ್ಗೆ ನನಗೆ ಅತೀ ಅಬಸೆಶ್ಸನ್. ಒಮ್ಮೆಗೆ ಆತಂಕ ಆಗಲು ಶುರು ಆಯ್ತು. ಆಕ್ಸಿಜನ್ ಕಡಿಮೆ ಆಗಿರಬಹುದು ಎಂದು ಸ್ವಯಂ ನಿರ್ಧರಿಸಿ ತಲೆ ನೋವು, ವಾಂತಿ ಮತ್ತಷ್ಟು ಹೆಚ್ಚಾಯಿತು. ಆಸ್ಪತ್ರೆಗೆ ಹೋಗಲು ನಿರ್ಧರಿಸಿ ನಾನು ನನ್ನ ತಂಗಿ ಒಂದು ಕ್ಯಾಬ್ ಮಾಡಿಕೊಂಡು ಹೋದೇವು. ಇಡೀ ನಮ್ಮ ಡ್ರೈವರ್ ನಮ್ಮನ್ನು ಕರೆದುಕೊಂಡು ಹೋಗಿದ್ದು ಒಂದು ಸಾರ್ವಜನಿಕ ಆಸ್ಪತ್ರೆಗೆ. ಅಲ್ಲಿ ಒಂದಿಬ್ಬರೆ ಡಾಕ್ಟರ್. ಅಲ್ಲಿ ನುಗ್ಗಿ ಪರ್ಚಿ ತಗೊಂಡು ಡಾಕ್ಡರಗೆ ಕಾಯುತ್ತ ಕುಳಿತೆವು. ಸುಮ್ಮನೆ ಕುಳಿತೆನು ಮಾಡುವದೆಂದು ಆಸ್ಪತ್ರೆ ಒಳಗೆ ಒಂದು ರೌಂಡ್ ಓಡಾಡಲು ಹೋದರೆ ಅಲ್ಲಿ ಎಲ್ಲರಿಗೂ ಆಕ್ಸಿಜನ್ ಮಾಸ್ಕ ಹಾಕಿ ಮಲಗಿಸಿದ್ರು. ಹೆಚ್ಚಿನವ್ರು ಟೂರಿಷ್ಟ. ಬಂದವರಿಗೆಲ್ಲ ಮಾಸ್ಕ ಹಚ್ಚೊದೆ. ನನಗೂ ಇದೇ ಪಾಳಿ ಎಂದು ದಿಗಿಲಾಗಿ ನನ್ನ ತಲೆನೋವು ಮಾಯವಾಗಿತ್ತು. ಅಲ್ಲಿಂದ ವಾಪಸ ಬರೋದೆ ಒಳ್ಳೆಯದೆಂದು ತಿರುಗುವಷ್ಟರಲ್ಲಿ ನನ್ನ ನಂಬರ ಬಂದು ನನಗೆ ಒಳಗೆ ಕರೆದರು. ಅಲ್ಲಿ ಕುಳಿತವರಿಗೆ ಡಾಕ್ಟರ್ ಆಕ್ಸಿಜನ್ ಬಾಳ ಕಮ್ಮಿ ಇದೆ ಮತ್ತು ನಿಮಗೆ ಶುಗರ್ ಇದೆ ಎರಡು ದಿನ ಆಡ್ಮಿಟ್ ಆಗಬೇಕು ಎಂದು ಹೆಳಿತ್ತಿರುವದು ಕೇಳಿ. ಆಯ್ತು ನನ್ನ ಕತೆ , ಇನ್ನೂ ಅಸಕ್ಸಿಜನ್ನೆ ಗತಿ. ನನ್ನೊಂದಿಗೆ ಬಂದ ನನ್ನ ತಂಗಿ ಗತಿ ಏನು. ಮುಂದಿನ ಟೂರ್ ಇಲ್ಲಿಗೆ ಸ್ಟಾಪ್. ಇನ್ನೂ ಎನೇನೋ ಅತೀ ಆಲೋಚನೆಯಲ್ಲಿ ಮುಳುಗಿರುವಾಗಲೆ ನನ್ನ ಬಿಪಿ , ಆಕ್ಸಿಜನ್ ಲೇವಲ್ ಚೆಕ್ ಮಾಡಿದ ಡಾಕ್ಟರ್ ಎಲ್ಲಾ ನಾರ್ಮಲ್ ಇದೆ. ಎರಡು ಇಂಜೆಕ್ಷನ್ ತಗೊಂಡು ಹೋಗಿ ಎಂದಾಗ ಬದುಕಿದೆ ಎಂದು ಹೊರಗೆ ಓಡಿ ಬಂದೆ.

ಅಲ್ಲಿ ಬಂದವರು ಹೆಚ್ಚು ಟೂರಿಷ್ಟ್ ಗಳು ಮತ್ತು ಬೈಕರುಗಳು. ಬೈಕ್ ನಲ್ಲಿ ಪ್ರವಾಸ ಮಾಡುವ ಅಡ್ವೆಂಚರ್ ಟೂರಿಷ್ಟಗಳ ಅಪಘಾತದಿಂದ ಅಡ್ಮೀಟ್ ಆದವರು ಬಾಹಳ ಜನ ಇದ್ದರು. ಹೈ ಅಲ್ಟಿಟ್ಯೂಡ್ ಪ್ರದೇಶ. ಜಲಜನಕ ಕಡಿಮೆ. ಅದರಲ್ಲಿ ಬೈಕ್ ರೈಡ್ ಅಬ್ಬಾ, ಆ ಸಾಹಸಕ್ಕೆ ಯುವ ಜನ ಬಹಳ ಆಸೆ ಪಡತಿದ್ದಾರೆ ಹುಡುಗರು ಹುಡುಗಿಯರು , ಮೈತುಂಬಾ ಬಟ್ಟೆ ಮಾಸ್ಕ ನಿಂದ ಮುಚ್ಚಿಕೊಂಡು ಲಡಾಖ್ ರಸ್ತೆಯಲ್ಲಿ ರೋಯ್ಯ… ಎಂದು ಹೋಗುವದು ನೋಡಿ ನಮಗೂ ಆ ಸಾಹಸ ಮಾಡಲು ಮನಸ್ಸಾಗುತ್ತಿತ್ತು.
ಲೆಹ್ ನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದ ನಂತರ ಮರುದಿನ ಆರಾಮ ಆಯಿತು.ಎರಡನೇ ದಿನ್ ಲೇಹ್ ನಗರದ ಟೋರ್.ಬಿಸಿಲು ನಮ್ಮ ಕಲ್ಬುರ್ಗಿ ಯನ್ನು ಮೀರಿಸುವಂತಿತ್ತು.ಅವತ್ತು ಲೇಹ್ ಪ್ಯಾಲೇಸ್ , ಬುದ್ದ ಸ್ತೂಪ. ಮ್ಯೂಸಿಯಮ್ ನೋಡಿ , ಸಂಗಮ್ ಎಂಬ ಇಂಡಸ್ ನದಿ ಮತ್ತು ಝನಸ್ಕಾರ್ ನದಿಗಳು ಕಲೆಯುವ ಪ್ರದೇಶದ ವಿಶಾಲ ನದಿಯಲ್ಲಿ ರಿವರ್ ರ್ಯಾಫಟಿಂಗ್ ಮಾಡ್ದೆವು.
ನಮ್ಮ ಗುಂಪಿನಲ್ಲಿ ಹದಿನಾರು ಮಹಿಳೆಯರು , ಸೋಲೋ ಟ್ರಾವೆಲ್ ಮಾಡುವ ಅವರಲ್ಲಿ ಡಾಕ್ಡರ್, ಇಂಜಿನಿಯರ್, ಪ್ರೊಫೆಸರ್, ಗೃಹಿಣಿಯರು ಇದ್ದರು. ಎಲ್ಲರೂ 40+ 50+ ಆದ್ರೆ ಎಲ್ಲರೂ ಉತ್ಸಾಹ ಭರಿತರು. ಸೋಲೋ ಟ್ರೀಪ್ ಅನಿಸದಷ್ಟು ಆತ್ಮಿಯತೆ ಉಂಟಾಗಿತ್ತು ಎಲ್ಲರಲ್ಲೂ. ಎರಡನೆಯ ದಿನದ ಪ್ರವಾಸ ಹೋಟೆಲ್ ಗೆ ಬಂದೆವು. ಎರಡು ದಿನದಲ್ಲಿ ನಮ್ಮ ದೇಹ ಇಲ್ಲಿನ ವಾತಾವರಣಕ್ಜೆ ಒಗ್ಗಿಕೊಂಡಿತ್ತು.
ಮೂರನೇ ದಿನ ನುಬ್ರಾ ವ್ಯಾಲಿಗೆ ನಮ್ಮ ಪ್ರಯಾಣ. ಖಾರ್ದುಂಗ್ಲಾ ಪಾಸ್ ನ ಎತ್ತರ ದ ಪ್ರದೇಶಕ್ಕೆ ಹೋಗುವ ಪ್ರಯಾಣದ ದಾರಿ ರೋಚಕ ಅನುಭವ ನೀಡಿತ್ತು. ಅತಿ ಕಡಿಮೆ ಆಕ್ಸಿಜನ್ ಇರುವ ಖರ್ದುಂಗ್ಲಾ ಪಾಸ್ ನಲ್ಲಿ ಇಪ್ಪತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಇರಲಾಗದು. ಆಗಲೆ ಸಣ್ಣ ಹಿಮಪಾತ ಆಗತೊಡಗಿತ್ತು. ಪೋಟೋ ಇಳಸಿಕೊಂಡು ತರಾತುರಿಯಿಂದ ನಮ್ಮ ವಾಹನದಲ್ಲಿ ಬಂದೆವು. ಅಷ್ಟಕ್ಕೇ ಎಲ್ಲರು ಎದುಸಿರು ಬಿಡುತಿದ್ದೆವು. ಜಾಸ್ತಿ ಮೆಲುಸಿರು ಬಿಡುತ್ತಿರುವವರಿಗೆ ವಾಹನದಲ್ಲಿ ಇದ್ದ ಆಕ್ಸಿಜನ್ ಮಾಸ್ಕ ಹಚ್ಚಿ ಆಯಾಸ ಕಡಿಮೆ ಮಾಡಲಾಯಿತು. ಇದೊಂದು ವಿಶಿಷ್ಟ ಮತ್ತು ಸಾಹಸಮಯ ಅನುಭವ ನಮಗೆ. ಸಂಜೆ ನುಬ್ರಾದ ಮರುಭೂಮಿ ಪ್ರದೇಶದಲ್ಲಿ ಒಂಟಿ ಸವಾರಿ. ಹಿಮ ಮತ್ತು ಮರಳು ಒಂದೇ ಕಡೆ ಇರುವ ವಿಶಿಷ್ಟ ಪ್ರದೇಶ ಲಡಾಖ. ಹಿಮದ ಗ್ಲೇಶಿಯರ್ ಕರಗಿ ಗುಡ್ಡದ ಮಣ್ಣಿನೊಂದಿಗೆ ಬೆರೆತು ಗಾಳಿಗೆ ಮರುಳಾಗಿ ಮರುಭೂಮಿ ಸೃಷ್ಟಿಯಾಗಿದೆ.ಸುತ್ತಲೂ ಬೆಟ್ಟಗುಡ್ಡಗಳು , ನಡುವೆ ಮರಳುಗಾಡು , ಸುಂದರ ಪ್ರಕೃತಿ.

ನೋಡಿದಷ್ಟು ಉಲ್ಲಾಸ. ಸಾಕಾಗುವಷ್ಟು ಪೋಟೋ ಇಳಸಿಕೊಂಡು ನಮ್ಮ ಹೋಟೆಲ್ ಗೆ ಬಂದೆವು. ಇವತ್ತಿನ ನಮ್ಮ ವಾಸ್ತವ್ಯ ಟೆಂಟ್ ನಲ್ಲಿ. ಜೋರಾದ ಗಾಳಿಗೆ ಟೆಂಟ್ ಹಾರಿ ಹೋಗುತ್ತದೋ ಎಂಬ ಭಯದಿಂದ ನಿದ್ದೆಯು ಸರಿಯಾಗಿ ಬರಲಿಲ್ಲ. ಮುಂಜಾನೆಯ ವಾತಾವರ ಚನ್ನಾಗಿತ್ತು. ಬೆಟ್ಟಗಳ ಕೆಳಗೆ ತಂಪಾದ ವಾತಾವರಣದಲ್ಲಿ ಓಡಾಡಿ ಪ್ರಕೃತಿ ನೋಡಿ ಖುಷಿ ಪಟ್ಟೆವು.
ನಾಲ್ಕನೇ ದಿನ ನುಬ್ರಾದಿಂದ ಪೆಂಗಾಂಗ್ ಲೇಕ್ ಕಡೆ ಪ್ರಯಾಣ. ಲಡಾಖ್ ಒಟ್ಟು ಏಳು ಜಿಲ್ಲೆಗಳನ್ನೊಳಗೊಂಡಿಧೆ. ಪೆಂಗಾನ್ ಲೇಕ್ ನಮ್ಮ ಹಿಂದಿ ಸಿನೆಮಾ ತ್ರಿ ಈಡಿಯಟ್ ನಿಂದ ಫೇಮಸ್ ಆಯ್ತು. ನುಬ್ರಾದಿಂದ ಪೆಂಗಾಂಗ್ ಹೋಗುವ ದಾರಿ ಬಹಳ ದುರ್ಗಮ. ಜೀವ ಬಾಯಲ್ಲಿ ಹಿಡಿದು ಕುಳಿತುಕೊಳ್ಳಬೇಕು.ಈಗ ಚಾಲಕ ಮಾತ್ರ ನಮ್ಮ ದೇವರು.ಒಂದು ಕಡೆ ಬೆಟ್ಟ ಮತ್ತೊಂದು ಕಡೆ ಕಂದಕ.ನಡುವೆ ಚಿಕ್ಕ ರಸ್ತೆ , ಸುತ್ತಲೂ ಯಾರನ್ನೋ ನಿರೀಕ್ಷೆ ಮಾಡುತ್ತಿರುವಂತೆ ಗಂಭಿರವಾಗಿ ನಿಂತ ಬೆಟ್ಟಗಳು.ರಸ್ತೆಯ ಪ್ರಯಾಣ ಸುತ್ತಲಿನ ಬೆಟ್ಟ ಗುಡ್ಡ ನೋಡುತ್ತ ಬೋರ್ ಆಗಲಿಲ್ಲ.ಆದರೆ ಐದಾರು ತಾಸು ಟೆಂಪು ಟ್ರಾವೆಲ್ ನಲ್ಲಿ ಕುಳಿತು ದೇಹ ದಣಿದಿತ್ತು.ನಮ್ಮ ವಾಸ್ತವ್ಯ ಪೆಂಗಾಂಗ್ ಲೇಕ್ ದಡದ ಕಾಟೇಜ್ ಳಲ್ಲಿ ಆಯೊಜಿಸಿತ್ತು.ರೂ ನಿಂದ ಎದುರಿಗೆ ವಿಶಾಲವಾದ ಸರೋವರ.ಇದಕ್ಕೆ ಸರೋವರ ಏಕೆ ಅನ್ನುತ್ತಾರೋ..ಒಟ್ಟು ನೂರಾಮೂವತ್ತು ಕಿ ಮಿ ದೂರ ಹರಿಯುತ್ತದೆ. ಕೆಲಭಾಗ ಚೀನಾದೊಳಗು ಇದೆಯಂತೆ.
ಜೋರಾಗಿ ಬೀಸುವ ಗಾಳಿ , ಚಳಿ , ಪೋಟೋ ಇಳಸಿಕೊಳ್ಳುವಷ್ಟರಲ್ಲಿ ಎಲ್ಲರೂ ಕುಲ್ಫಿ ಆದೇವು.ನಡುಗುತ್ತ , ಏದುಸಿರು ಬಿಡುತ್ತ ವಾಪಸ ಬಂದು ಬಿಸಿ ನೀರು ಬೀಸಿ ಬೀಸಿ ಚಾ ಕುಡದು ಆಯಾಸ ಪರಿಹರಿಸಿಕೊಂಡೆವು.ನಮ್ಮ ಗ್ರೂಪ್ ನ ಕೆಲವರು ಬಹಳ ಎದಯಸಿರು ಬಿಡುತ್ತಿರುವದರಿಂದ ಆಕ್ಸಿಜನ್ ತಗೊಬೇಕಾಯಿತು.ಲಡಾಖ ಪ್ರವಾಸದಲ್ಲಿ ಆಕ್ಸಿಜನ್ ಯಾರಿಗೆ ಯಾವಾಗ ಬೇಕಾದ್ರೂ ಅವಶ್ಯಕತೆ ಬಿಳಬಹುದು.ವಾತಾವರಣ ಬಹಳ ಬೇಗ ಬದಲಾಯಿಸುತ್ತೆ.ಜೋರಾದ ಬಿಸಿಲು ಇದ್ದಷ್ಟೆ ತಂಡಿಯು ಇರುತ್ತದೆ. ಬರಿ ಗಾಳಿಯ ಒತ್ತಡ , ಅದರಲ್ಲಿ ತೇವಾಂಶ ಇರುವದೆ ಇಲ್ಲ.ಗಾಳಿ ಶಬ್ದ ಜೋರಾಗಿ ಕಿವಿಗೆ ಕೆಳಿಸುತ್ತದೆ ಆದರೆ ಅದು ನಮ್ಮ ಶ್ವಾಸಕೋಶಕ್ಕೆ ಸಾಕಾಗುವದೆ ಇಲ್ಲ.

ವಿಚಿತ್ರ ಅನುಭವ. ರಾತ್ರಿ ಲೇಕ್ ಮುಂದೆ ಕುಳಿತು ಆಕಾಶದಲ್ಲಿ ನರ್ತನ ಮಾಡುವ ಬೆಳಕು (Aurora) ನೋಡಬೇಕೆಂದು ಬಹಳ ಆಸೆ ಇತ್ತು. ಆಕಾಶ ಶುಭ್ರವಾಗಿದ್ದರೆ ಕಾಣುತ್ತದೆ. ಅವತ್ತು ಶುಭ್ರವಾಗಿತ್ತು ಕೂಡ. ಆದರೆ ಜೋರಾಗಿ ಬೀಸುವ ಗಾಳಿ ಐದು ನಿಮಿಷಕ್ಕಿಂತ ಹೆಚ್ಚು ಹೊರಗೆ ಇರಲು ಬಿಡಲಿಲ್ಲ. ಗಾಳಿಯೊಂದಿಗೆ ಸೆಣಸಿ ಸೋತು ಕಾಟೇಜ್ ಸೇರಿಕೊಂಡೆವು. ಆಕ್ಸಿಜನ್ ಕಮ್ಮಿಯಿಂದ ರಾತ್ರಿ ಎಲ್ಲಾ ತಲೆನೋವು, ನಿದ್ರಾಹೀನತೆ.
ಐದನೇ ದಿನ ವಾಪಸ್ ಲೇಹ್ ಕಡೆ ಪ್ರಯಾಣ. ದುರ್ಗಮ ರಸ್ತೆ. ದಾರಿಯಲ್ಲಿ ಸಿಗುವ ಸ್ಥಳ ನೋಡುತ್ತ ಸಾಗಿದೆವು. ಒಂದು ಸ್ಕೂಲ್ ತೋರಿಸಿದರು. ರ್ಯಾಂಚೋ ಸ್ಕೂಲ್ ಅಂತೆ.
ಅದೊಂದು ಖಾಸಗಿ ಶಾಲೆ. ಸರ್ಕಾರಿ ಶಾಲೆಗಳಲ್ಲಿ ಅವರ ಮಾತೃ ಭಾಷೆಯಲ್ಲಿ ಕಲಿಸುತ್ತಾರೆ. ಲಡಾಖನಲ್ಲಿ ಈಗ ಮದ್ಯಪಾನಕ್ಕೆ ಅವಕಾಶ ನೀಡಲಾಗಿದೆ. ಪ್ರವಾಸೋದ್ಯಮ ಬೆಳೆಯುವದಕ್ಕೆ ಮತ್ತು ಸರ್ಕಾರಕ್ಕೆ ಆದಾಯದ ಮೂಲಕ್ಕಾಗಿ ಇರಬಹುದು. ಆದರೆ ಇದರ ಅವಶ್ಯಕತೆ ಇರಲಿಲ್ಲ ಎಂದು ಅಲ್ಲಿನ ಜನರ ಭಾವನೆ. ಜನರು ಶ್ರಮವಹಿಸಿ ದುಡಿದು ಆರೋಗ್ಯ ವಾಗಿದ್ದಾರೆ ಅಲ್ಲಿ. ಮದ್ಯ ಜನರನ್ನು ವ್ಯಸನಕ್ಕಿಡುಮಾಡುತ್ತದೆ ಎಂದು ಅಸಮಾಧಾನ. ಹೋರಾಟಗಾರ ಸೋನ್ಂ ವಾಂಗ್ಚುಕ್ ಅವರ ಬೆಂಬಲಿಗರು ಬಹಳ ಜನ ಇದ್ದಾರೆ.

ಲಡಾಖ್ ನ ರಾಜಕೀಯ ಪರಿಸ್ಥಿತಿ ಏನೇ ಇರಲಿ. ಜನರು ತಮ್ಮ ಪಾಡಿಗೆ ಕರ್ತವ್ಯದಲ್ಲಿ ಇರುತ್ತಾರೆ. ಹೋರಾಟಗಳು ನಡಿಯುತ್ತಿರುತ್ತವೆ. ಮಿಲಿಟರಿ ಅದನ್ನು ನಿಯಂತ್ರಣ ಮಾಡುತ್ತದೆ. ಗಡಿ ಭಾಗದಲ್ಲಿರುವ ಪ್ರದೇಶಗಳಂತೆ ಇಲ್ಲಿಯೂ ಮಿಲಿಟರಿ ಆಡಳಿತ ಇದೆ. ಆದರೆ ಶ್ರೀನಗರ ಜನರಂತೆ ಇಲ್ಲಿನ ಜನ ಮಿಲಿಟರಿ ಆಡಳಿತದ ಬಗ್ಗೆ ಅಸಮಾಧಾನವಾಗಿಲ್ಲ.
ಉಳಿದಂತೆ ಉತ್ತಮ ರಸ್ತೆ ವ್ಯವಸ್ಥೆ ಇದೆ. ಕೆಲ ಪ್ರದೇಶದ ಹೊರತಾಗಿ. ಲಡಾಖ್ ತನ್ನ ಸ್ವಚ್ಚತೆ ಮೂಲಕ ಸುಂದರತೆ ಉಳಿಸಿಕೊಂಡಿದೆ. ಪ್ಲಾಸ್ಟಿಕ್ ಗೆ ಅವಕಾಶ ಇಲ್ಲ. ಎಲ್ಲೆಂದರಲ್ಲಿ ಕಸ ನೀರಿನ ಬಾಟಲ್ ಬಿಸಾಡದಂತೆ ಗೈಡ್ ಗಳು ನಿಯಂತ್ರಿಸುತ್ತಾರೆ. ಇದು ಹೀಗೆ ಮುಂದುವರಿಯಬೇಕು.
ಲಡಾಖ್ ನಲ್ಲಿ ಮಳೆ ಬಿಳುವದು ಕಡಿಮೆ. ಬರಿ ಹಿಮಪಾತ. ಬರಿ ಬಂಜರು ಭೂಮಿ. ಹಸಿರ ನೋಡಲು ಕಾಣದು. ಎಲ್ಲೆಲ್ಲೂ ಬರೀ ಬೋಳು ಗುಡ್ಡಗಳು. ಈಗ ಬೇಸಿಗೆ ಇರುವುದರಿಂದ ಶಿಖರಗಳಿಗಷ್ಟೆ ಹಿಮ ಮೆತ್ತಿತ್ತು. ಜನ ಮನೆ ಮು ಗೋಧಿ ಮತ್ತು ಅಕ್ಕಿ ಬೆಳೆಸುತ್ತಾರೆ, ಹಾಗೆ ತರಕಾರಿ. ಆ್ಯಾಪ್ರಿಕಾಟ್ ಹಣ್ಣುಗಳ ಗಿಡಗಳು ಇವೆ.

ಲಡಾಖ್ ನ ಖಾದ್ಯ ತುಖ್ಫ.ತರಕಾರಿ ಅಥವಾ ನಾನ್ ವೇಜ್ ಮತ್ತು ನೂಡಲ್ಸ ನೊಂದಿಗೆ ಕುದಿಸಿ ಒಂದು ದೊಡ್ಡ ಹರಿವಾಣದಂತ ಬೊಗುಣಿಯಲ್ಲಿ ಕೊಡುತ್ತಾರೆ. ನಾವು ವೆಜ್ ತುಖ್ಫ ತಿಂದೆವು. ಇಲ್ಲ ಕುಡಿದೆವು, ಚನ್ನಾಗಿತ್ತು. ಮೋಮೋಸ್ ಮತ್ತು ನೂಡಲ್ಸಗಳು ಚನ್ನಾಗಿರುತ್ತವೆ.
ಲೇಹ್ ಮಾರ್ಕೆಟ್ ನಲ್ಲಿ ಓಡಾಡಿದೆವು. ದುರ್ಂಧರ ಸಿನಿಮಾದಲ್ಲಿ ರಣವಿರ್ ಸಿಂಗ್ ಕುಡಿದ ನಮಕ್ ವಾಲಾ ಚಾಯ್ ನ ದುಕಾನ್ ಟೂರಿಷ್ಟ್ ಗಳಿಂದ ತುಂಬಿ ಹೋಗಿತ್ತು. ಪೋಟೋ ಇಳಸಿಕೊಳ್ಳಲು.
ಲಡಾಖ್ ಪ್ರವಾಸ ಸಂತೋಷದ ಅನುಭವ ನೀಡಿತು. ಪ್ರವಾಸದ ಆಕಾಂಕ್ಷೆ ಉಳ್ಳವರು ಒಬ್ಬರೆ ಹೊರಟು ಬಿಡಲು ಹೆಣ್ಣು ಮಕ್ಕಳಿಗಾಗೆ ಅನೇಕ ಟ್ರಾವೇಲ್ಸ ಗಳಿವೆ. ದೇಶದ ವಿವಿಧ ಭಾಗಗಳಿಂದ ಬಂದ ಮಹಿಳೆಯರೊಂದಿಗೆ ಬೆರೆತು ಪ್ರವಾಸ ಮಾಡಿದ ಅನುಭವ ವಿಶೇಶ.
ಗುರುತು ಪರಿಚಯ ಇರದ ಯಾರ್ಯಾರೋ ಐದಾರು ದಿನಗಳಲ್ಲೆ ಆತ್ಮೀಯರಾಗಿದ್ದೆವು. ಲಡಾಖ್ ನ ನೆನಪು ಸುಂದರ.
- ಜ್ಯೋತಿ ಬೊಮ್ಮ
