ಬದುಕಿಗೊಂದು ಸೆಲೆ (ಭಾಗ- ೮೦)

ಬಬಂ ಬಂ ಬಬಂ…ಬಬಂ ಬಂ ಬಬಂ ಎಂಬ ಹಾಡು ಇದೊಂದು ಶುದ್ಧವಾದ ಜಾನಪದ ಗೀತೆ. ಈ ಜಾನಪದ ಗೀತೆಯನ್ನು ಹೇಳುತ್ತಾ ಶಿವನನ್ನು ಭೋಲಾ ಶಂಕರ, ಬಾಬಾ, ಜಗನ್ನಾಥ್ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾ ಆತನ ಗುಣಗಾನ ಮಾಡುತ್ತಾರೆ. ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಬಬಂ ಬಂ ಬಬಂ… ಗೀತೆಯ ಹಿನ್ನೆಲೆ ’ ಕುರಿತು ತಪ್ಪದೆ ಮುಂದೆ ಓದಿ…

ಬಬಂ ಬಂ ಬಬಂ…ಬಬಂ ಬಂ ಬಬಂ ಎಂಬ ಹಾಡನ್ನು ಐಪಿಎಲ್ ಪಂದ್ಯಗಳ ಫೈನಲ್ ನ ಮಧ್ಯಂತರದ ವಿರಾಮದಲ್ಲಿ ಖ್ಯಾತ ಗಾಯಕ ಕೈಲಾಶ್ ಖೇರ್ ಹಾಡಿದರು. ಇದನ್ನು ದಕ್ಷಿಣ ಭಾರತದ ನಾವು ಕೇಳಿದಾಗ ಇದೊಂದು ರಾಪ್ ಸಂಗೀತದ ಹಾಡು ಎಂದು ನಾವು ಭಾವಿಸಿದರೆ ಅದು ಖಂಡಿತ ತಪ್ಪು.

ಇದೊಂದು ಶುದ್ಧವಾದ ಜಾನಪದ ಗೀತೆ. ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ಉತ್ತರಾ ಖಂಡ ರಾಜ್ಯಗಳಲ್ಲಿ ಬೈರಾಗಿಗಳು ಈ ಜಾನಪದ ಗೀತೆಯನ್ನು ಹೇಳುತ್ತಾ ಶಿವನನ್ನು ಭೋಲಾ ಶಂಕರ, ಬಾಬಾ, ಜಗನ್ನಾಥ್ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾ ಆತನ ಗುಣಗಾನ ಮಾಡುತ್ತಾರೆ.

ಉತ್ತರ ಭಾರತೀಯರ ಪ್ರಕಾರ ಶಿವನು ಉತ್ತರಾ ಖಂಡ ರಾಜ್ಯಕ್ಕೆ ಸೇರಿದ್ದು ಮಾತೆ ಪಾರ್ವತಿ ದೇವಿಯು ಹಿಮಾಚಲ ಪ್ರದೇಶಕ್ಕೆ ಸೇರಿದವಳು. ಆಕೆಯ ತಂದೆ ಹಿಮವಂತ. ತಾಯಿ ಮೇನಾದೇವಿ ಆಕೆಗೆ ನೂರು ಜನ ಸಹೋದರರು. ದುಷ್ಟರನ್ನು ಶಿಕ್ಷಿಸಲು ಮಾತೆ ಪಾರ್ವತಿಯು ಈ ಭೂಮಿಯ ಮೇಲೆ ಅವತರಿಸಬೇಕಾಗಿತ್ತು ಆದ್ದರಿಂದ ದೇವತೆಗಳು ಮೇನಾ ದೇವಿ ಹಾಗೂ ಹಿಮವಂತನಿಗೆ ಶಕ್ತಿ ದೇವತೆಯನ್ನು ಪ್ರಾರ್ಥಿಸಲು ಕೇಳಿಕೊಂಡರು.

ದೇವಿಯ ಆಶೀರ್ವಾದದಿಂದ ಹುಟ್ಟಿದ ಪಾರ್ವತಿ ದೇವಿಯು ಮುಂದೆ ಬೆಳೆದು ದೊಡ್ಡವಳಾದ ನಂತರ ಶಿವನನ್ನೇ ವಿವಾಹವಾಗಬೇಕೆಂದು ಇಚ್ಛಿಸಿದಳು.ಇದಕ್ಕೆ ಎಲ್ಲ ದೇವಾದಿ ದೇವತೆಗಳ ಆಗ್ರಹವು ಕೂಡ ಕೂಡಿತ್ತು. ಈಗಾಗಲೇ ಸತಿ ದೇವಿಯನ್ನು ಕಳೆದುಕೊಂಡ ಶಿವ ದುಃಖ ತಪ್ತನಾಗಿದ್ದನು. ಉಗ್ರ ವೈರಾಗ್ಯವನ್ನು ಹೊಂದಿ ಕಠಿಣ ತಪಸ್ಸಿನಲ್ಲಿ ಮುಳುಗಿದ್ದನು. ಆತನ ತಪಸ್ಸನ್ನು ಭಂಗ ಮಾಡುವ ಧೈರ್ಯ ಹಾಗೂ ಶಕ್ತಿ ಯಾರೊಬ್ಬರಿಗೂ ಇರಲಿಲ್ಲ ಆದರೆ ಲೋಕ ಕಲ್ಯಾಣದ ಕಾರಣವನ್ನು ಮುಂದೊಡ್ಡಿ ಈ ಕೆಲಸವನ್ನು ಮನ್ಮಥ ಹಾಗೂ ಆತನ ಪತ್ನಿ ರತಿ ದೇವಿ ಒಪ್ಪಿಕೊಂಡರು. ಪಾರ್ವತಿ ದೇವಿಯು ಶಿವನು ಒಡ್ಡಿದ ಎಲ್ಲ ಪರೀಕ್ಷೆಗಳನ್ನು ಎದುರಿಸಿ ಆತನ ಮನವನ್ನು ಗೆದ್ದಳು. ಅಂತಿಮವಾಗಿ ಶಿವನು ಪಾರ್ವತಿಯನ್ನು ಮದುವೆಯಾಗಲು ಒಪ್ಪಿಕೊಂಡನು.

ಫೋಟೋ ಕೃಪೆ : ಅಂತರ್ಜಾಲ

ಹಿಮಾಚಲ ಪ್ರದೇಶದ ಪಾರ್ವತಿಯ ತಂದೆಯ ಮನೆಗೆ ಉತ್ತರಾಖಂಡದ ಭೈರಾಗಿ ಶಿವನು ತನ್ನ ಗಣಗಳನ್ನು ಒಡಗೂಡಿ ಪಾರ್ವತಿಯನ್ನು ಮದುವೆಯಾಗಲು ಮದುವೆಯ ದಿಬ್ಬಣದೊಂದಿಗೆ ಬಂದನು.ವಿವಾಹದ ಎಲ್ಲಾ ವಿಧಿ ವಿಧಾನಗಳನ್ನು ಪೂರೈಸಿದ ನಂತರ ವಿವಾಹ ಮಹೋತ್ಸವವನ್ನು ನಡೆಸಿಕೊಟ್ಟ ಬ್ರಾಹ್ಮಣ ದಕ್ಷಿಣೆಯನ್ನು ಕೇಳಿದ. ನಸು ನಗುತ್ತಾ ಬೈರಾಗಿ ಶಿವ ದಕ್ಷಿಣೆಯಾಗಿ ತನ್ನ ಜೋಳಿಗೆಯಿಂದ ಮೂರು ಮುಷ್ಟಿ ಬೂದಿಯನ್ನು ನೀಡಿದ (ಭಾನ್). ಆ ಬೂದಿಯ ಮೊದಲ ಮುಷ್ಟಿಯಲ್ಲಿ ಉತ್ತರಾಖಂಡ ರಾಜ್ಯವನ್ನು ಎರಡನೇ ಮುಷ್ಟಿ ಬೂದಿಯಲ್ಲಿ 4 ವೇದಗಳನ್ನು ಹಾಗೂ ಮೂರನೇ ಮುಷ್ಟಿ ಬೂದಿಯಲ್ಲಿ ಈ ಜಗತ್ತಿನ ಸರ್ವ ಸಂಪತ್ತನ್ನು ಆ ಭೈರಾಗಿಗೆ ಆತ ನೀಡಿದ್ದ.

ಇದರ ಅರಿವನ್ನು ಹೊಂದಿರದ ಬ್ರಾಹ್ಮಣನು ಭೈರಾಗಿಯ ಮದುವೆ ಮಾಡಿಸಿದ್ದಕ್ಕೆ ಬೂದಿಯೇ ದೊರೆಯುವುದು ಎಂದು ಬೇಸರ ವ್ಯಕ್ತಪಡಿಸುತ್ತಾ ತನ್ನ ಮನೆಗೆ ಹೊರಟ. ದಾರಿಯಲ್ಲಿ ಆತ ಮನೆಗೆ ಬೂದಿಯನ್ನು ಕೊಂಡೊಯ್ದರೆ ನನ್ನ ಪತ್ನಿ ನನ್ನನ್ನು ಹೀಯಾಳಿಸಿ ಮಾತನಾಡಬಹುದು, ಕೊಂಕು ನಡೆಯಬಹುದು ಎಂಬ ಭಯದಿಂದ ಆ ಬೂದಿಯನ್ನು ಗಂಗೆಯಲ್ಲಿ ಚೆಲ್ಲಿದ.
ಆದರೆ ಏನು ಆಶ್ಚರ್ಯ! ಹಾಗೆ ಚೆಲ್ಲಿದ ಬೂದಿಯು ಚಿನ್ನ, ವಜ್ರಗಳಾಗಿ ನೀರಿನಲ್ಲಿ ಕಾಣಿಸಿತು. ಕೂಡಲೇ ಬ್ರಾಹ್ಮಣನು ಆ ಚಿನ್ನ, ವಜ್ರ, ಮುತ್ತು, ಹವಳಗಳನ್ನು ಹಿಡಿಯಲು ಹೋದಾಗ ಆತನಿಗೆ ಯಾವುದೂ ಸಿಕ್ಕದೆ ಹೋಯಿತು. ಅದೆಷ್ಟೇ ಆತ ಪ್ರಯತ್ನಿಸಿದರೂ ಆತನ ಪ್ರಯತ್ನ ಫಲಪ್ರದವಾಗಲಿಲ್ಲ. ಅಂತಿಮವಾಗಿ ಆತನ ಕೈ ಖಾಲಿಯಾಗಿಯೇ ಉಳಿಯಿತು.

ಸ್ನೇಹಿತರೆ! ಭಗವಾನ್ ಶಿವನ ಸನ್ನಿಧಿಯ ಬೂದಿಯಲ್ಲಿ ಕೂಡ ಚಿನ್ನದ ಅಂಶವಿದೆ ಅದನ್ನು ತಿರಸ್ಕರಿಸಕೂಡದು ಎಂಬುದನ್ನು ಈ ಜನಪದ ಹಾಡಿನ ಮೂಲಕ ಅವರು ವಿಷದ ಪಡಿಸುತ್ತಾರೆ. ಇದಲ್ವೇ ದೈವ ಮಹಿಮೆ ಪ್ರಾಕೃತಿಕವಾಗಿ ದೊರೆತದ್ದು ಸಂಸ್ಕಾರವೆಂಬ ಅಗ್ನಿಕುಂಡದಲ್ಲಿ ಹಾಯ್ದು ಹೋದಾಗ ಸಂಸ್ಕೃತಿ ಬೆಳಗುತ್ತದೆ. ಕುಟ್ಟಿದ ಭತ್ತದಿಂದ ಹೊರಬರುವ ಅಕ್ಕಿ ನೀರು ಹಾಗೂ ಬೆಂಕಿಯ ಸಂಪರ್ಕದಲ್ಲಿ ಅನ್ನವಾಗಿ ಉಣ್ಣಲು ಯೋಗ್ಯವೆನಿಸುತ್ತದೆ. ಅದೇ ಅನ್ನವನ್ನು ದೇವರಿಗೆ ಎಡೆ ಮಾಡಿದಾಗ ಅದು ಪ್ರಸಾದವಾಗುತ್ತದೆ… ಆ ಪ್ರಸಾದವನ್ನು ಸೇವಿಸಿದ ಭಕ್ತರ ಹಸಿವನ್ನು ಅದು ನೀಗಿಸುತ್ತದೆ.

ಫೋಟೋ ಕೃಪೆ : ಅಂತರ್ಜಾಲ

‘ತೇನ ವಿನಾ ತೃಣ ಮಪಿ ನಾ ಚಲತಿ’ ಎಂಬ ವಾಣಿಯನ್ನು ನೆನಪಿನಲ್ಲಿ ಇಟ್ಟುಕೊಂಡು ನಮಗೆ ಬದುಕಿನಲ್ಲಿ ದೊರೆತದ್ದನ್ನು ಮಹಾಪ್ರಸಾದ ಎಂದು ಭಾವಿಸಿ ಇರುವುದರಲ್ಲಿಯೇ ಸಂತೃಪ್ತಿಯನ್ನು ಕಾಣಬೇಕು. ದೇವರು, ದೈವ, ಭಕ್ತಿ ಎಂಬುದು ನಮ್ಮನ್ನು ಸದಾ ಕಾಪಾಡುವ ಸಕಾರಾತ್ಮಕ ಶಕ್ತಿಗಳು. ಅವುಗಳ ಮೇಲೆ ಸದಾ ನಂಬಿಕೆ ಇರಲಿ… ನಂಬಿಕೆಯ ಬಲ ಬಲು ದೊಡ್ಡದು. ನಂಬಿಕೆಟ್ಟವರಿಲ್ಲವೋ ಎಂಬ ಪದ್ಯವನ್ನು ಕೂಡ ಕೇಳಿರಬಹುದು ನಾವು ನಂಬಿದ ದೈವ ಎಂದೂ ನಮ್ಮನ್ನು ಕೈಬಿಡುವುದಿಲ್ಲ.

ನೋಡಿದಿರಾ ಸ್ನೇಹಿತರೆ! ಪ್ರತಿಯೊಂದು ವಿಷಯವು ಮತ್ತೊಂದು ಸಂಗತಿಗೆ ತಳಿಕೆ ಹಾಕಿಕೊಂಡಿರುತ್ತದೆ. ಒಂದು ಹಾಡಿನ ಮೂಲವನ್ನು ಅರಿಯಲು ಹೋದಾಗ ಒಂದು ಇಡೀ ಸಂಸ್ಕೃತಿಯ ತಾತ್ವಿಕತೆಯ ನೆಲೆಗಟ್ಟು ನಮಗೆ ದೊರೆಯಿತು. ನಮ್ಮ ಭಾರತದ ಆತ್ಮ ಆಧ್ಯಾತ್ಮದ ಆತ್ಮ…ಅದೆಷ್ಟೇ ಆಧುನಿಕತೆ ನಮ್ಮನ್ನು ಆಳಿದರೂ ನಮ್ಮ ಸನಾತನ ಸಂಸ್ಕೃತಿಯ ಅರಿವು ನಮಗೆ ಇರಬೇಕು. ಬೇರುಗಳು ಗಟ್ಟಿಯಾದಷ್ಟು ಮರದಲ್ಲಿ ಸತ್ವ ಹೆಚ್ಚಾಗುತ್ತದೆ ಅಲ್ವೇ ಸ್ನೇಹಿತರೆ??


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading