ಪ್ರತಿಸಲವೂ ಸಿಡಿಲು ಇವರನ್ನೇ ಹುಡುಕಿಕೊಂಡು ಬಂದದ್ದಕ್ಕೆ ಇವರನ್ನು ನತದೃಷ್ಟರು ಎನ್ನೋಣವೇ? ಅಥವಾ ಇಷ್ಟೊಂದು ಸಲ ಸಿಡಿಲಿನ ಹೊಡೆತಗಳಿಗೆ ಸಿಲುಕಿಯೂ ಮೃತ್ಯುವನ್ನು ಜಯಿಸಿದ ಇವರನ್ನು ಅದೃಷ್ಟವಂತರು ಎನ್ನೋಣವೇ? ನೀವೇ ನಿರ್ಧರಿಸಿ…
ತರಾಸುರವರ ಕಾದಂಬರಿಯನ್ನು ಆಧರಿಸಿದ “ನಾಗರಹಾವು” ಸಿನಿಮಾ ಯಾರು ತಾನೇ ನೋಡಿಲ್ಲ? ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಸಿನಿಮಾಕ್ಕೆ ಸಂಗೀತ ನೀಡಿದ್ದವರು ವಿಜಯ ಭಾಸ್ಕರ್. ಸದರಿ ಸಿನಿಮಾದಲ್ಲಿ ಓಬವ್ವನ ಕುರಿತಾದ ಒಂದು ಹಾಡಿದೆ ಮತ್ತು ಆ ಹಾಡಿಗೆ ಅದರದ್ದೇ ಆದ ಒಂದು ತೂಕವಿದೆ. ಸಿನಿಮಾ ನೋಡದವರೂ ಸಹ, ಚಿತ್ರದುರ್ಗದ ಕೋಟೆಯನ್ನು, ಒನಕೆ ಓಬವ್ವನ ಪ್ರತಾಪವನ್ನು ಅದ್ಭುತವಾಗಿ ವಿವರಿಸಿರುವ ಈ ಹಾಡನ್ನು ನೋಡಿಯೇ ಇರುತ್ತಾರೆ.

(ಖ್ಯಾತ ಕಾದಂಬರಿಕಾರ ತರಾಸು)
ಈ ಹಾಡಿನಲ್ಲಿ ಒಂದು ಸಾಲು ಬರುತ್ತದೆ. “ಚಿತ್ರದುರ್ಗದ ಕಲ್ಲಿನ ಕೋಟೆ, ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ, ಮದಿಸಿದ ಕರಿಯ ಮದವಡಗಿಸಿದ, ಮದಕರಿನಾಯಕರಾಳಿದ ಕೋಟೆ”. ಈ ಹಾಡನ್ನು ಪ್ರತಿಸಲ ಕೇಳಿದಾಗಲೂ ಚಿತ್ರದುರ್ಗದ ಆ ಏಳು ಸುತ್ತಿನ ಕೋಟೆ ಕಣ್ಮುಂದೆ ಬರುತ್ತದೆ. ಸಿಡಿಲಿಗೂ ಬೆಚ್ಚದಿರುವ ಆ ಕೋಟೆ ಹೇಗಿರಬಹುದು? ಒಂದು ಯಕಃಶ್ಚಿತ್ ಕಲ್ಲಿನಕೋಟೆ ಸಿಡಿಲಿಗೂ ಬೆಚ್ಚದಿರಲು ಸಾಧ್ಯವೇ? ಎಂದು ಅನೇಕ ಸಲ ಯೋಚಿಸಿ ರೋಮಾಂಚನಗೊಂಡಿದ್ದಿದೆ. ಒಮ್ಮೆ ದುರ್ಗಕ್ಕೆ ಹೋಗಿ ಪ್ರತ್ಯಕ್ಷವಾಗಿ ಕೋಟೆಯನ್ನು ಕಣ್ಣಾರೆ ಕಂಡನಂತರವೇ ತಿಳಿದದ್ದು ಆ ಹಾಡಿಗೆ ಸಾಹಿತ್ಯ ಒದಗಿಸಿದ ಚಿ. ಉದಯಶಂಕರ್ ರವರು ಒಂದಕ್ಷರವನ್ನೂ ಉತ್ಪ್ರೇಕ್ಷೆಯಾಗಿ ಬರೆದಿಲ್ಲ ಎಂದು.

ಸಿಡಿಲು ಎಂದರೆ ಅದಕ್ಕೆ ತನ್ನದೇ ಆದ ಅಗಾಧ ಶಕ್ತಿಯಿರುತ್ತದೆ. ಒಂದು ಮಿಲಿ ಸೆಕೆಂಡ್ ಅಥವಾ ಮೈಕ್ರೋ ಸೆಕೆಂಡಿನಲ್ಲಿ ಬಂದೆರಗುವ ಒಂದು ಸಿಡಿಲು ಒಂದು ಬಿಲಿಯನ್ ಜೌಲ್ಸ್ ನಷ್ಟು ಶಕ್ತಿಯನ್ನು ತನ್ನೊಳಗೆ ಹುದುಗಿಸಿಕೊಂಡಿರುತ್ತದೆ. ಇದನ್ನೇ ಸರಳವಾಗಿ ಹೇಳುವುದಾದರೆ ನಮ್ಮ ಮನೆಯಲ್ಲಿನ ಒಂದು ಫ್ರಿಡ್ಜನ್ನು ಆನ್ ಮಾಡಿ ಒಂದಿಡೀ ದಿನ ಅದರ ಬಾಗಿಲು ತೆರೆದು ಇಟ್ಟರೆ ಎಷ್ಟು ವಿದ್ಯುತ್ ಖರ್ಚಾಗುತ್ತದೋ ಮತ್ತು ಒಂದು ೬೦ ವ್ಯಾಟಿನ ಬಲ್ಬನ್ನು ಅಹರ್ನಿಶಿ ಸತತವಾಗಿ ಆರು ತಿಂಗಳು ಕಾಲ ಉರಿಸಿದರೆ ಎಷ್ಟು ವಿದ್ಯುತ್ ಖರ್ಚಾಗುತ್ತದೋ, ಇವೆರಡರ ಮೊತ್ತದಷ್ಟು ವಿದ್ಯುತ್ ಒಂದು ಸಿಡಿಲಿನಲ್ಲಿ ಅಡಕವಾಗಿರುತ್ತದೆ.
ಇಂತಹ ಸಿಡಿಲಿಗೆ ಸಿಕ್ಕರೂ ಬೆಚ್ಚದ ಉಕ್ಕಿನ ಕೋಟೆ ಚಿತ್ರದುರ್ಗದ್ದು. ಇಂತಹ ದೈತ್ಯ ಶಕ್ತಿಯ ಸಿಡಿಲಿಗೆ ಸಿಕ್ಕರೆ ಮನುಷ್ಯ ಮಾತ್ರರಾದವರ್ಯಾರಾದರೂ ಜೀವಂತವಾಗಿರಲು ಸಾಧ್ಯವೇ? ಸಾಧ್ಯವೇ ಇಲ್ಲ ಅಲ್ಲವೇ? ಇಲ್ಲೊಂದಿಬ್ಬರು ಸಿಡಿಲಿನ ಮನುಷ್ಯರ ವಿವರಗಳಿವೆ ಓದಿಕೊಳ್ಳಿ.
ಬ್ರಿಟನ್ನಿನ ವಾಲ್ಟರ್ ಸಮ್ಮರ್ಫೋರ್ಡ್ (Walter Summerford) ನನ್ನು ಇತಿಹಾಸದಲ್ಲೇ ಅತೀ ನತದೃಷ್ಟ ವ್ಯಕ್ತಿ ಎಂದು ಗುರುತಿಸಲಾಗುತ್ತದೆ. ಸಮ್ಮರ್ಫೋರ್ಡ್ ಬ್ರಿಟನ್ನಿನ ಸೇನೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದವನು. ಅವನ ಜೀವನದಲ್ಲಿ ನಡೆದ ಮೂರು ಘಟನೆಗಳು ಇಂತಿವೆ.

- ಮೊದಲ ಘಟನೆ ನಡೆದದ್ದು ೧೯೧೮ ರಲ್ಲಿ. ಮೊದಲ ವಿಶ್ವಯುದ್ಧದ ಸಮಯದಲ್ಲಿ ಸಮ್ಮರ್ಫೋರ್ಡ್ ಬೆಲ್ಜಿಯಮ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಒಮ್ಮೆ ಕುದುರೆಸವಾರಿ ಮಾಡಿಕೊಂಡು ಎತ್ತಲೋ ಸಾಗುತ್ತಿದ್ದ ಸಮ್ಮರ್ಫೋರ್ಡನ ಮೇಲೆ ಬಾನಿನಿಂದ ಘನಘೋರವಾದ ಸಿಡಿಲೊಂದು ಬಂದು ಎರಗುತ್ತದೆ. ಏನಾಗುತ್ತಿದೆ ಎಂದು ತಿಳಿಯುವ ಹೊತ್ತಿಗೆ ಸಮ್ಮರ್ ಫೀಲ್ಡಿನ ಸೊಂಟದ ಕೆಳಗಿನ ಭಾಗ ಪೂರ್ತಿಯಾಗಿ ಪಾರ್ಶ್ವವಾಯುವಿಗೆ ತುತ್ತಾಗುತ್ತದೆ. ಆದರೂ ಮೂಲತಃ ಯೋಧನಾದ ಸಮ್ಮರ್ಫೋರ್ಡ್ ಆಶ್ಚರ್ಯವೆಂಬಂತೆ ಕೆಲವೇ ತಿಂಗಳಲ್ಲಿ ಪೂರ್ತಿ ಗುಣಮುಖನಾಗಿ ಸ್ವತಂತ್ರವಾಗಿ ನಡೆಯುವಂತಾಗುತ್ತಾನೆ. ಆದರೆ ದುರದೃಷ್ಟವಶಾತ್ ಆತ ಗುಣಮುಖನಾಗುವ ಮುನ್ನವೇ ಅವನನ್ನು ಬಲವಂತವಾಗಿ ಸೇನೆಯ ಸೇವೆಯಿಂದ ಬಿಡುಗಡೆಗೊಳಿಸಲಾಗುತ್ತದೆ.
- ಎರಡನೇ ಘಟನೆ ನಡೆದದ್ದು ೧೯೨೪ ರಲ್ಲಿ. ಅಂದರೆ ಮೊದಲ ಘಟನೆ ನಡೆದು ಸರಿಯಾಗಿ ಆರು ವರ್ಷಗಳ ನಂತರ. ಸೇವೆಯಿಂದ ಬಿಡುಗಡೆ ಹೊಂದಿದ ನಂತರ ಸಮ್ಮರ್ಫೋರ್ಡ್ ಕೆನಡಾದಲ್ಲಿ ಹೊಸ ಜೀವನ ಪ್ರಾರಂಭಿಸುತ್ತಾನೆ. ಒಮ್ಮೆ ಮನೆಯ ಹತ್ತಿರದ ಕೊಳದಲ್ಲಿ ಮೀನು ಹಿಡಿಯಲೆಂದು ಹೊರಡುತ್ತಾನೆ. ಒಂದು ಮರದ ಕೆಳಗೆ ಕೂತು ಗಾಳಕ್ಕೆ ಹುಳುವನ್ನು ಸಿಕ್ಕಿಸಿ, ಗಾಳವನ್ನು ನೀರಿಗೆಸೆದು ಮೀನಿನ ನಿರೀಕ್ಷೆಯಲ್ಲಿದ್ದ. ಸೂಚನೆಯೇ ಕೊಡದೆ ಇದ್ದಕ್ಕಿದ್ದಂತೆ ಮಿಂಚು ಗುಡುಗು ಪ್ರಾರಂಭವಾಗಿ, ಒಂದು ಬರಸಿಡಿಲು ಬಂದು ಸಮ್ಮರ್ಫೋರ್ಡನ ಮೇಲೆ ಎರಗುತ್ತದೆ. ಈ ಸಲ ಸಿಡಿಲಿನ ಪ್ರಭಾವ ಕೊಂಚ ಹೆಚ್ಚಿಗೆಯೇ ಆಗುತ್ತದೆ. ತತ್ಪರಿಣಾಮವಾಗಿ ಸಮ್ಮರ್ಫೋರ್ಡನ ಇಡೀ ದೇಹದ ಬಲಭಾಗಕ್ಕೆ ಪಾರ್ಶ್ವವಾಯು ಬಡಿಯುತ್ತದೆ. ಆದರೆ ಅತ್ಯದ್ಭುತವಾದ ಇಚ್ಛಾಶಕ್ತಿ ಹೊಂದಿದ್ದ ಸಮ್ಮರ್ಫೋರ್ಡ್ ಎರಡೇ ವರ್ಷಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡುಬಿದುತ್ತಾನೆ ಮತ್ತು ಮೊದಲಿನಂತಾಗುತ್ತಾನೆ.
- ಸಮ್ಮರ್ಫೋರ್ಡನ ಜೀವನದಲ್ಲಿ ವಿಧಿಯ ಆಟ ಅಷ್ಟಕ್ಕೇ ನಿಲ್ಲುವುದಿಲ್ಲ. ಎರಡನೇ ಸಿಡಿಲು ಬಡಿಸಿಕೊಂಡು ಸರಿಯಾಗಿ ಆರು ವರ್ಷಕ್ಕೆ ಮೂರನೆಯ ಬಾರಿ ಸಿಡಿಲಿಗೆ ಸಿಲುಕುತ್ತಾನೆ. ೧೯೩೦ ರಲ್ಲಿ ಒಂದು ಉದ್ಯಾನವನದಲ್ಲಿ ಪ್ರಕೃತಿಯ ಅಂದವನ್ನು ಸವಿಯುತ್ತಾ ವಾಯುವಿಹಾರಕ್ಕೆ ಹೊರಟಿದ್ದವನನ್ನು ಸಿಡಿಲು ಹುಡುಕಿಕೊಂಡು ಬರುತ್ತದೆ. ಅಂದರೆ ಮೂರನೆಯ ಸಲ ಸಿಡಿಲಿನ ಹೊಡೆತಕ್ಕೆ ಸಿಕ್ಕ ಸಮ್ಮರ್ಫೋರ್ಡ್ ಸಾಕಷ್ಟು ಹೈರಾಣಾಗುತ್ತಾನೆ. ಈ ಮೂರನೆಯ ಸಿಡಿಲು ಅವನನ್ನು ಸಿಕ್ಕಾಪಟ್ಟೆ ಕಂಗೆಡಿಸುತ್ತದೆ.
೧೯೩೨ ರಲ್ಲಿ ಸಮ್ಮರ್ಫೋರ್ಡ್ ಜೀವನದ ಕೊನೆಯ ಯುದ್ಧದಲ್ಲಿ ಸೋತು ಪರಲೋಕ ಸೇರುತ್ತಾನೆ.
ಇಂತಿಪ್ಪ ವಾಲ್ಟರ್ ಸಮ್ಮರ್ಫೋರ್ಡ್ ನನ್ನು ಅವನ ಕುಟುಂಬ ಕೆನಡಾದ ವ್ಯಾನ್ಕುವರ್ ನಲ್ಲಿರುವ ಮೌಂಟೇನ್ ವ್ಯೂ ಸ್ಮಶಾನದಲ್ಲಿ ಸಮಾಧಿ ಮಾಡುತ್ತಾರೆ. ಆದರೆ ಸತ್ತ ನಂತರವೂ ಸಮ್ಮರ್ಫೋರ್ಡನಿಗೆ ಸಿಡಿಲಿನ ಜೊತೆಗಿನ ನಂಟು ಮುಗಿದಿರುವುದಿಲ್ಲ. ಅವನು ಸತ್ತ ನಾಲ್ಕು ವರ್ಷಗಳ ನಂತರ ಅಂದರೆ ಅವನಿಗೆ ಮೂರನೆಯ ಸಲ ಸಿಡಿಲು ಬಡಿದ ಆರು ವರ್ಷಗಳ ನಂತರ, ೧೯೩೬ ರಲ್ಲಿ ಅವನ ಸಮಾಧಿಗೆ ಸಿಡಿಲು ಹೊಡೆದು, ಸಮಾಧಿಯ ಮೇಲೆ ಹೊದಿಸಿದ್ದ ಕಲ್ಲು ಚೂರಾಗುತ್ತದೆ. ಹೇಗಿದೆ ನೋಡಿ ಸಮ್ಮರ್ಫೋರ್ಡನ ಸಿಡಿಲಿನ ಜೊತೆಗಿನ ಸಂಬಂಧ.

ಫೋಟೋ ಕೃಪೆ : historyofyesterday. (ವಾಲ್ಟರ್ ಸಮ್ಮರ್ಫೋರ್ಡ್ ಸಮಾಧಿ)
ಅಮೆರಿಕದ ವರ್ಜೀನಿಯಾ ರಾಜ್ಯದ ಶೆನಾಂಡೋ ರಾಷ್ಟ್ರೀಯ ಉದ್ಯಾನವನದಲ್ಲಿ ಪಾರ್ಕ್ ರೇಂಜರ್ ಆಗಿದ್ದ ರಾಯ್. ಸಿ. ಸಾಲೆವಿನ್ (Roy C Sullivan) ತನ್ನ ಜೀವಿತಾವಧಿಯಲ್ಲಿ ಏಳು ಸಲ ಸಿಡಿಲಿನ ಹೊಡೆತಕ್ಕೆ ಸಿಕ್ಕಿದ್ದಾನೆ. ೧೯೪೨ ರಲ್ಲಿ ಪ್ರಾರಂಭವಾದ ಸಿಡಿಲಿನೊಂದಿಗಿನ ನಂಟು೧೯೭೭ ರವರೆಗೆ ಅವ್ಯಾಹತವಾಗಿ ಮುಂದುವರೆಯುತ್ತದೆ.

ಮೊದಲ ಸಲ ೧೯೪೨ ರಲ್ಲಿ ಸಿಡಿಲು ಬಡಿದು ಸಾಲೆವಿನ್ನನ ಕಾಲಿನ ಹೆಬ್ಬೆರಳು ಮಾತ್ರ ಘಾಸಿಗೊಳ್ಳುತ್ತದೆ. ಎರಡನೆಯ ಸಲ ೧೯೬೯ ರಲ್ಲಿ ಸಿಡಿಲೆರಗಿ ಸಾಲೆವಿನ್ ತನ್ನ ಹುಬ್ಬುಗಳನ್ನು ಕಳೆದುಕೊಳ್ಳುತ್ತಾನೆ. ಮೂರನೆಯ ಸಲ ೧೯೭೦ ರಲ್ಲಿ ಸಿಡಿಲಿಗೆ ಸಿಕ್ಕಿ ಸಾಲೆವಿನ್ ತನ್ನ ಎಡ ಭುಜದ ಸ್ವಾಧೀನವನ್ನೇ ಕಳೆದುಕೊಳ್ಳುತ್ತಾನೆ. ನಾಲ್ಕನೆಯ ಸಲ ೧೯೪೨ ರಲ್ಲಿ ಸಿಡಿಲು ಬಡಿದು ಸಾಲೆವಿನ್ನನ ಅಷ್ಟೂ ತಲೆಕೂದಲು ಸುಟ್ಟುಹೋಗುತ್ತವೆ. ಮರುವರ್ಷವೇ ಐದನೆಯ ಸಲ ಬಡಿದ ಸಿಡಿಲಿಗೆ ಎರಡೂ ಕಾಲುಗಳು ತನ್ನ ಸ್ವಾಧೀನ ಕಳೆದುಕೊಳ್ಳುತ್ತವೆ. ಆರನೆಯ ಸಲ ೧೯೭೬ ರಲ್ಲಿ ಸಿಡಿಲೆರಗಿ ಎರಡೂ ಪಾದಗಳು ಶಕ್ತಿ ಕಳೆದುಕೊಂಡವು. ಏಳನೆಯ ಸಲ ಮತ್ತು ಕೊನೆಯದಾಗಿ ೧೯೭೭ ರಲ್ಲಿ ಸಿಡಿಲು ಬಡಿದು ಎದೆ ಮತ್ತು ಹೊಟ್ಟೆಯ ಭಾಗ ಸಂಪೂರ್ಣ ಬೆಂದುಹೋದವು.
ಹೀಗೆ ತನ್ನ ಜೀವಿತಾವಧಿಯಲ್ಲಿ ಏಳು ಸಲ ಸಿಡಿಲಿನ ಹೊಡೆತಕ್ಕೆ ತುತ್ತಾಗಿದ್ದರೂ ಛಲ ಬಿಡದೆ ಜೀವಿಸಿದ್ದ ಸಾಲೆವಿನ್ ೧೯೮೩ ರಲ್ಲಿ ಬಯಸಿದ ಪ್ರೀತಿ ಸಿಗದೆ ಆತ್ಮಹತ್ಯೆಗೆ ಶರಣಾಗುತ್ತಾನೆ.
- ಆರ್. ಪಿ. ರಘೋತ್ತಮ (ಲೇಖಕರು, ಸಾಹಿತಿಗಳು)
