‘ಸ್ಪೋರ್ಟಿ ಸಿಖ್’ : ಅಮರ್ ಜೀತ್ ಸಿಂಗ್ ಚಾವ್ಲಾ



ದಿನೇ ದಿನೇ ಗಿನ್ನಿಸ್ ದಾಖಲೆಗೆ ಹತ್ತಿರವಾಗುತ್ತಿರುವ ಅಮರ್ ಜೀತ್ ಸಿಂಗ್ ಚಾವ್ಲಾರನ್ನು ಜನರು ಗುರುತಿಸುವುದೇ Sporty sikh ಎಂದು. ಅವರ ಸಾಧನೆಯ ಕುರಿತು ಆರ್. ಪಿ ರಘೋತ್ತಮ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಸಾಧಿಸುವ ಕಿಚ್ಚು ನಮ್ಮೊಳಗೆ ಉರಿಯುತ್ತಿದ್ದರೆ, ಈ ಜಗತ್ತಿನ ಯಾವ ನೆಪವೂ ನಮ್ಮ ಸಾಧನೆಯನ್ನು ತಡೆಯುವುದಕ್ಕೆ, ಅಡ್ಡಿಪಡಿಸುವುದಕ್ಕೆ ಸಾಧ್ಯವೇ ಇಲ್ಲ. ಯಾವುದೇ ಸಾಧನೆಗೆ ದೃಷ್ಟಿಯೇ ಅತಿಮುಖ್ಯ. ನಾವು ಇಡೀ ಜಗತ್ತನ್ನು ನೋಡುವ, ಜಗತ್ತಿನೊಡನೆ ಸಂವಹಿಸಲು ಅತಿಮುಖ್ಯವಾಗಿ ಬೇಕಿರುವುದು ಕಣ್ಣುಗಳೇ. ಕಣ್ಣುಗಳೇ ಇಲ್ಲದಿದ್ದರೆ ಏನನ್ನಾದರೂ ಮಾಡಲು ಸಾಧ್ಯವೇ? ಬಹುತೇಕ ಮಂದಿ ಈ ಪ್ರಶ್ನೆಗೆ ಉತ್ತರಿಸುವುದೇ ಸಾಧ್ಯವಿರಲಿಕ್ಕಿಲ್ಲ.

ಫೋಟೋ ಕೃಪೆ : hatkestory

ಆದರೆ, ಪುರುಷ ಪ್ರಯತ್ನದ ಮುಂದೆ ಅಸಾಧ್ಯ ಎನ್ನುವುದು ಆಗಾಗ ಮಣಿಯುತ್ತಲೇ ಇರುತ್ತದೆ. ಅದಕ್ಕೊಂದು ಉದಾಹರಣೆ ಇಲ್ಲಿದೆ. ಕಣ್ಣದೃಷ್ಟಿಯನ್ನು ಕಳೆದುಕೊಂಡರೂ ಕೊಂಚವೂ ಎದೆಗುಂದದೆ, ತಮ್ಮ ಅಂತರ್ದೃಷ್ಟಿಯಿಂದಲೇ ಜಗತ್ತೇ ತಮ್ಮತ್ತ ತಿರುಗಿನೋಡುವ ಸಾಧನೆಯನ್ನು ಮಾಡಿದ, ಮಾಡುತ್ತಿರುವ ಸಾಧಕನ ಕಥೆಯಿದು.

ಆತನ ಹೆಸರು ಅಮರ್ ಜೀತ್ ಸಿಂಗ್ ಚಾವ್ಲಾ.

ಚುರುಕುತನ ಎನ್ನುವುದು ತನ್ನ ಸ್ವತ್ತು ಎನ್ನುವಂತೆ ಬೆಳೆದ ಕನಸುಗಣ್ಣಿನ ಹುಡುಗ. ಅವನು ಕಾಣುತ್ತಿದ್ದ ಕನಸಾದರೋ ಭೂಮಿಯ ಮೇಲಿನದ್ದಲ್ಲ! ಅಮಿತ ಆಕಾಶದ ನಡುವೆ ಗುರಿಯಿಟ್ಟ ಬಾಣದಂತೆ ಸಂಚರಿಸಬೇಕು ಎನ್ನುವ ಬಯಕೆ. ಶತ್ರುಗಳೊಂದಿಗೆ ಹೋರಾಡಿ ಭಾರತದ ಹೆಮ್ಮೆಯ ಸೈನಿಕನಾಗಬೇಕೆಂಬ ಬಯಕೆ. ಫೈಟರ್ ವಿಮಾನಗಳೆಂದರೆ ಸಾಕು ಆತನ ಕಣ್ಣು ಸಾವಿರ ಒಲ್ಟೇಜ್ ಬಲ್ಬನ್ನೂ ಮೀರುವಂತೆ ಮಿನುಗುತ್ತವೆ. ಅಸಲಿಗೆ ಆತನ ಮಹದಾಸೆಯೇ ಫೈಟರ್ ವಿಮಾನದ ಪೈಲಟ್ ಆಗಬೇಕೆಂಬುವುದು.

ಎಲ್ಲವೂ ಆತ ಅಂದುಕೊಂಡಂತೆ ಆಗಿದ್ದರೆ ಖಂಡಿತಕ್ಕೂ ಒಬ್ಬ ದಕ್ಷ ಪೈಲಟ್ ಆಗುತ್ತಿದ್ದನೇನೋ. ಆದರೆ ಆತನ ದುರಾದೃಷ್ಟವೇ ಬೇರೆಯದ್ದು.

ಫೋಟೋ ಕೃಪೆ : Twitter

ಶಾಲೆಯಲ್ಲಿ ನಡೆಯುವ ವಾರ್ಷಿಕ ನೇತ್ರ ತಪಾಸಣಾ ಶಿಬಿರದಲ್ಲಿ ತಪಾಸಣೆ ಮಾಡಿದಾಗ ಆಘಾತ ಕಾದಿರುತ್ತವೆ. ಅವರ ಕಣ್ಣುಗಳನ್ನು ತಪಾಸಣೆ ನಡೆಸಿದ ವೈದ್ಯರು, ದಿನಕಳೆದಂತೆ ಅಮರ್ ಜೀತ್ ಹಂತಹಂತವಾಗಿ ತನ್ನ ದೃಷ್ಟಿಯನ್ನು ಕಳೆದುಕೊಳ್ಳುತ್ತಾನೆಂಬ ಕಹಿಸತ್ಯವನ್ನು ಅವರ ತಂದೆ ತಾಯಿಗೆ ಅರುಹುತ್ತಾರೆ. ಬರಸಿಡಿಲಿನಂತೆ ಬಂದ ಈ ಸುದ್ಧಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ತತ್ತರಿಸುತ್ತಾರೆ ಅಮರ್ ಜೀತ್ ಮತ್ತವನ ಪಾಲಕರು.

ತಮ್ಮ 13ನೇ ವಯಸ್ಸಿಗೆ ಮ್ಯಾಕುಲಾರ್ ಡಿಜನರೇಷನ್ (Macular Degeneration) ಎಂಬ ಅಪರೂಪದ ಖಾಯಿಲೆಗೆ ತುತ್ತಾಗಿರುತ್ತಾರೆ. ತತ್ಪರಿಣಾಮವಾಗಿ ಹಂತಹಂತವಾಗಿ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಾ ಹೋಗಿ ತನ್ನ 40 ನೆಯ ವಯಸ್ಸಿಗೆ ಪೂರ್ಣಪ್ರಮಾಣದಲ್ಲಿ ದೃಷ್ಟಿಹೀನರಾಗುತ್ತಾರೆ.

ಫೋಟೋ ಕೃಪೆ : hatkestory

ಬಾಹ್ಯ ದೃಷ್ಟಿ ಕಾಣದಿದ್ದರೇನಂತೆ ಏನಾದರೂ ಅವರೊಳಗಿನ ಸಾಧಿಸಬೇಕೆಂಬ ಅವರ ಉಜ್ವಲ ಗುರಿ ನಂದಲಿಲ್ಲ. ಹೀಗಾಗಿ ಮ್ಯಾರಥಾನ್’ನತ್ತ ಮುಖ ಮಾಡುತ್ತಾರೆ. ನಂತರದ್ದು ಇತಿಹಾಸ ಮತ್ತು ಎಂಥವರನ್ನೂ ಚಕಿತಗೊಳಿಸುವ ಸ್ಫೂರ್ತಿದಾಯಕ ಕಥೆ. ಅವರ ಸಾಧನೆಗಳ ಪಟ್ಟಿ ದಂಗು ಬಡಿಸುವಂತದ್ದು.



ಉದಾಹರಿಸಬಹುದಾದರೆ :

  • 116 ಅರ್ಧ ಮ್ಯಾರಥಾನ್. ಅರ್ಧ ಮ್ಯಾರಥಾನ್ ಅಂದರೆ 21 ಕಿಲೋಮೀಟರ್ ಗಳ ಓಟ
  • 67 ಅರ್ಧ ಮ್ಯಾರಥಾನ್. ಇವು 10 ಅಥವಾ 12 ಕಿಲೋಮೀಟರ್ ಗಳ ಓಟ
  • 5 ಮ್ಯಾರಥಾನ್. ಇವು 17 ಕಿಮೀ, 24 ಕಿಮೀ, 38 ಕಿಮೀ, 50 ಕಿಮೀ ಮತ್ತು 55 ಕಿಮೀ ಗಳ ಓಟ.

ಜಗತ್ತೇ ತನ್ನತ್ತ ತಿರುಗಿ ನೋಡುವಂತಹ ಅಪರೂಪದ ಸಾಧನೆ ಮಾಡಿರುವ, ದಿನೇದಿನೇ ಗಿನ್ನಿಸ್ ದಾಖಲೆಗೆ ಹತ್ತಿರವಾಗುತ್ತಿರುವ #ಅಮರ್_ಜೀತ್_ಸಿಂಗ್_ಚಾವ್ಲಾರನ್ನು ಜನರು ಗುರುತಿಸುವುದೇ Sporty sikh ಎಂದು. ಎಂತಹ ಸಾರ್ಥಕವಾದ ಹೆಸರಲ್ಲವೇ?


  • ಆರ್. ಪಿ ರಘೋತ್ತಮ  (ಲೇಖಕರು, ಸಾಹಿತಿಗಳು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading