ಅಮ್ಮ ಪ್ರತಿ ಬಾರಿ ಗೋಡೆಯ ಮೇಲೆ ಹಳೆಯದಾಗಿದ್ದ ಫೋಟೋಗಳನ್ನು ಕೆಳಗಿಳಿಸುತ್ತ, ಪೆಟ್ಟಿಗೆಯಲ್ಲಿ ತುಂಬಿಡುತ್ತಿದ್ದುದ್ದು, ತನ್ನ ಬದುಕನ್ನೇ ಇರಬಹುದು ಎಂದನಿಸುತ್ತದೆ. ಒಂದು ದಿನ ಆ ಮನೆಯನ್ನೇ ತೊರೆದರು. ಅಮ್ಮನ ಕುರಿತು ಕಮಲಾ ಅವರು ಬರೆದ ಭಾವನಾತ್ಮಕ ಲೇಖನ, ಮುಂದೆ ಓದಿ…
ಪ್ರತಿ ಬಾರಿ ಮನೆಗೆ ಪೈಂಟ್ ಮಾಡಿಸಿದಾಗ, ನೆಲದ ಟೈಲ್ಸ್ ಬದಲಿಸಿದಾಗ `ಹೊಚ್ಚ ಹೊಸದಾಯಿತು’ ಎನ್ನುವ ಖುಷಿಯೊಡನೆ ಅನೇಕ ನೆನಪುಗಳು ಮಸುಕಾಗಿ ಹೋಗಿರುತ್ತವೆ. ನೀವದನ್ನು ಗಮನಿಸಿದ್ದೀರೋ ಇಲ್ಲವೋ? ಊರಿನಲ್ಲಿದ್ದಾಗ ಯುಗಾದಿ ಹಬ್ಬಕ್ಕೆ ಒಂದು ವಾರ ಮೊದಲಿನಿಂದಲೇ ಸುಣ್ಣ ತೊಡೆಯುವ ಕಾರ್ಯಕ್ರಮವಿರುತ್ತಿತ್ತು. ನಮ್ಮ ದಿವಾನಖಾನೆಯ ಗೋಡೆಯಲ್ಲಿ ಎರಡು ಚಿತ್ರಗಳು ಮನೆಯನ್ನು ಬಿಡುವವರೆಗೂ ತೂಗುತ್ತಿದ್ದವು. ಒಂದು, ನನ್ನ ಮುತ್ತಜ್ಜ ದೊಡ್ಡಯ್ಯನ ಚಿತ್ರ, ಮತ್ತೊಂದು ಶೃಂಗೇರಿಯಿಂದ ಯಾರೋ ತಂದು ಕೊಟ್ಟ (?)ಶಾರದೆಯ ಚಿತ್ರ. ಇದರ ಜೊತೆಗೆ ಅಣ್ಣ `ಎನ್ ಸಿ ಸಿ’ ಕ್ಯಾಂಪಿಗೆ ( Scout uniform ? ) ಹೋಗಿದ್ದಾಗಿನ ಚಿತ್ರ, ಅರಕಲಗೂಡೋ , ಗೊರೂರಿನಲ್ಲೋ ತೆಗೆದಿದ್ದಿರಬೇಕು, ಮರೆತಿದ್ದೇನೆ. ಆ ಚಿತ್ರದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇದ್ದರೆಂಬ ಅಸ್ಪಷ್ಟ ನೆನಪು. ಮೊಳೆಗಳಿಗೆ ಕಟ್ಟಿ ಬಾಗುವಂತೆ ತೂಗು ಹಾಕಿದ್ದ ಈ ಚಿತ್ರಗಳನ್ನು ಜೋಪಾನವಾಗಿ ಇಳಿಸಿ, ಸುಣ್ಣ ತೊಡೆದ ಮೇಲೆ ಯಾರಾದರೂ ಕುರ್ಚಿಯ ಮೇಲೆ ನಿಂತು ಅಷ್ಟೇ ಜೋಪಾನವಾಗಿ ಸಿಕ್ಕಿಸುತ್ತಿದ್ದರು. ದೊಡ್ಡವರು ಈ ಕೆಲಸ ಮಾಡುವಾಗ ಕುರ್ಚಿಯ ಕಾಲನ್ನು ನಾವು ಭದ್ರವಾಗಿ ಹಿಡಿದುಕೊಳ್ಳುತ್ತಿದ್ದೆವು. ಆ ಸಮಯದಲ್ಲಿ ತೀರಾ ಮಸುಕಾದ ಚಿತ್ರಗಳು ಗೋಡೆಯಲ್ಲಿದ್ದರೆ ಅವು ಪೆಟ್ಟಿಗೆಗೆ ಸೇರುತ್ತಿದ್ದವು.

ಫೋಟೋ ಕೃಪೆ : rashminotes
ಆಮೇಲೆ ಅಣ್ಣಂದಿರು ಡಿಗ್ರಿಗಳನ್ನು ಪಡೆದ ಮೇಲೆ, ಸ್ಟುಡಿಯೋದಲ್ಲಿ ಗೌನ್ ಹಾಕಿಕೊಂಡು, ಸರ್ಟಿಫಿಕೇಟ್ ಹಿಡಿದು ತೆಗೆಸಿಕೊಂಡ ಚಿತ್ರಗಳು ಇನ್ನೊಂದು ಬದಿಯಲ್ಲಿ ರಾರಾಜಿಸತೊಡಗಿದವು. ಒಬ್ಬೊಬ್ಬರದೇ ಮದುವೆಯಾದ ಮೇಲೆ ಎಂ. ಜಿ. ರಸ್ತೆಯ `ಜಿ ಕೆ ವೇಲ್ ಅಂಡ್ ಸನ್ಸ್ ‘ ಎಂಬ ದುಂಡಗಿನ ಮುದ್ರೆಯನ್ನು ಒತ್ತಿಕೊಂಡ ಫೋಟೋಗಳು ಬಂದವು. ಕೊನೆಗೆ ಹಜಾರದ ತುಂಬಾ ಫೋಟೋಗಳು ತುಂಬಿ, ಮಕ್ಕಳೆಲ್ಲ ಒಬ್ಬೊಬ್ಬರೇ ಊರು ಬಿಡಲಾರಂಭಿಸಿದಾಗ ಇವನ್ನೆಲ್ಲ ಸಂಭಾಳಿಸಲಾಗದ ಅಮ್ಮ ಪೆಟ್ಟಿಗೆಯಲ್ಲಿಟ್ಟು ಬಿಟ್ಟಳು. ಗೋಡೆ ಖಾಲಿಯಿರುವುದೇ ಸೌಂದರ್ಯ ಎಂಬ ಹೊಸ ವಿಚಾರವೂ ಕೂಡಿಕೊಂಡಿತು. ಸಾಹಿತ್ಯದ ಹುಚ್ಚು ಹಿಡಿದಿದ್ದಾಗ ಊರಿನ ಚಿಕ್ಕ ಮನೆಯ ತೊಲೆಗಳ ಮೇಲೆ ಸಾಹಿತ್ಯ ಪರಿಷತ್ತಿನಿಂದ ತಂದ ಚಿತ್ರಗಳನ್ನೆಲ್ಲ ಅಂಟಿಸಿಕೊಂಡಿದ್ದೆ. ಹಳದಿಯಾಗಿ ಕರೆಗಟ್ಟಿದ್ದ ಚಿತ್ರಗಳನ್ನು ಒಮ್ಮೆ ತೆಗೆದು ಪೆಟ್ಟಿಗೆಗೆ ತುಂಬಿ ಅಮ್ಮ ಚಿಕ್ಕ ಮನೆಯ ಗೋಡೆಯನ್ನು ಶುಚಿಗೊಳಿಸಿದಳು.

ಮದುವೆಯಾದ ಮೇಲೆ ನನ್ನ ಬಳಿಯಿದ್ದ ಗಾಡ್ರೇಜ್ ಕಂಪನಿಯ ಬೀರು ಗೋಡೆಯಾಗಿಹೋಯಿತು. ಸೂರ್ಯಾಸ್ತದ ಸಮಯದಲ್ಲಿ ಮೇಲುಕೋಟೆಯ ಮಂಟಪದಲ್ಲಿ ನಿಂತು ತೆಗೆಸಿಕೊಂಡಿದ್ದ ಅನಂತ ನಾಗ್ ಮತ್ತು ಲಕ್ಷ್ಮಿಯ ಸ್ಟಿಲ್ ಚಿತ್ರ ಸೆಳೆದಿತ್ತು. ಮೆಜೆಸ್ಟಿಕ್ ಬೀದಿಯೊಂದರಲ್ಲಿ ಪೋಸ್ಟರ್ ಮಾರುತ್ತಿದ್ದ ವ್ಯಕ್ತಿಯಿಂದ ಆ ಚಿತ್ರವನ್ನು ಕೊಂಡು ತಂದು ಅಂಟಿಸಿಕೊಂಡಿದ್ದೆ. ಅದು ನನ್ನ ಬೀರುವಿನ ಮೇಲೆ ಒಂದೆರಡು ವರ್ಷ ತೂಗಾಡಿತು. ಮಗ ಹುಟ್ಟಿದ ಮೇಲೆ ಮುದ್ದಾಗಿ ನಗುತ್ತಿದ್ದ ಮಗುವೊಂದರ ಚಿತ್ರ ತಂದು ಅಂಟಿಸಿದೆ. ಶಾಲೆಗೆ ಹೋಗಲು ಶುರು ಮಾಡಿದ ಮೇಲೆ ಮತ್ತೊಂದು. ಹೀಗೆ ಕಾಲ ಕಾಲಕ್ಕೆ ಭಾವನೆಗಳು ಬದಲಾದಂತೆ ಚಿತ್ರಗಳು ಬದಲಾದವು. ಗತಿಸಿದ ತಂದೆ-ತಾಯಿಗಳ ಚಿತ್ರವನ್ನು ಗೋಡೆಗೆ ಹಾಕಿ, ಅದಕ್ಕೊಂದು ದೀಪ ಹಚ್ಚಿ, ದಿನವೂ ಹೊಸ ಹೂ ಮಾಲೆಯನ್ನು ಹಾಕುತ್ತಿದ್ದುದನ್ನು ಚಿತ್ರಗಳಲ್ಲಿ ನೋಡಿದ್ದರೂ ಅದೇಕೋ ನನ್ನ ಮನಸ್ಸಿಗೆ ಅಣ್ಣ, ಅಮ್ಮನನ್ನು ಹಾಗೆ ನೋಡುವುದಕ್ಕೆ ಇಂದಿಗೂ ಸಾಧ್ಯವಾಗುವುದಿಲ್ಲ. ಅಣ್ಣನ ಪುಟ್ಟ ಫೋಟೋವೊಂದನ್ನು ಟೇಬಲ್ ಮೇಲೆ ಇಟ್ಟುಕೊಂಡಿದ್ದೇನೆ. ಅಮ್ಮನ ಚಿತ್ರವನ್ನಲ್ಲ.
ಅಮ್ಮನ ಮುಖವನ್ನು ದಿಟ್ಟಿಸಲು ಇಂದಿಗೂ ಆತಂಕವಾಗುತ್ತದೆ. ಅವಳು ಬದುಕಿದ ಬದುಕಾದರೂ ಎಂತಹದ್ದು ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಸಗಣಿ ಮನೆಯನ್ನು ಸಾರಿಸಿಕೊಂಡು, ಬೀಳುತ್ತಿದ್ದ ಗೋಡೆಗಳ ಮಣ್ಣು ಮೆತ್ತಿಕೊಂಡು, ಕೊಟ್ಟಿಗೆಯಲ್ಲಿದ್ದ ಎಮ್ಮೆ, ಹಸುಗಳನ್ನು ಸಂಭಾಳಿಸಿಕೊಂಡು, ಕಣ್ಣು ಕಾಣದೆ ಏಳೆಂಟು ವರ್ಷ ಹಾಸಿಗೆಯಲ್ಲಿದ್ದ ಅತ್ತೆಯನ್ನು ಬೇಸರವಿಲ್ಲದೆ ಉಪಚರಿಸಿಕೊಂಡು, ಇಪ್ಪತ್ತೋ ಮೂವತ್ತೋ ಜನಕ್ಕೆ ಬೇಯಿಸಿ ಹಾಕುತ್ತ, ಮಕ್ಕಳನ್ನು ದರದರನೆ ಎಳೆದು ಶಾಲೆಗೆ ಬಿಟ್ಟು, ಹನ್ನೊಂದು ಮಕ್ಕಳನ್ನು ಸಾಕಿ ಸಲಹಿ, ಹೈರಾಣಾಗಿ ಹೋಗಿದ್ದರೂ ತೋರಿಸಿಕೊಳ್ಳದೆ ಸುಮ್ಮನೆ ದುಡಿಯುತ್ತಲೇ ಹೋದವಳನ್ನು ಲಂಕೇಶರಂತೆ `ನನ್ನವ್ವ ಫಲವತ್ತಾದ ಕಪ್ಪು ನೆಲ’ ಎಂದು ವರ್ಣಿಸಲಾರೆ.
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.
ಎಂದು ಕೃತಜ್ಞತೆಯ ಕಣ್ಣೀರು ಸುರಿಸಲಾರೆ. ಅವಳು ಬದುಕಿದ ಬದುಕು ಮೆಚ್ಚುಗೆಗೆ ಅರ್ಹವಾದದ್ದು ಎಂದು ಯಾವತ್ತೂ ಅನ್ನಿಸಿಲ್ಲ. ಅಪೂರ್ವ ಕಸೂತಿ ಕಲಾವಿದೆ, ಹಾಡುಗಾರ್ತಿಯಾಗಿದ್ದ ಅಮ್ಮ ತನ್ನದೆಲ್ಲವನ್ನೂ ಬಲಿ ಕೊಟ್ಟು ಬದುಕಬೇಕಾದ ಸ್ಥಿತಿಗೆ ಯಾರೆಲ್ಲ ಹೊಣೆಗಾರರು, ನನ್ನ ಪಾತ್ರವೇನು ಎಂದು ಪರೀಕ್ಷಿಸಿಕೊಳ್ಳುತ್ತಿರುತ್ತೇನೆ. ತನ್ನದು ಪರರದ್ದು ಎನ್ನುವುದು ಗೊತ್ತಿಲ್ಲದ, ಗೊತ್ತಾಗದ ಹಾಗೆ ಬೆಳೆಸಿದ ಅಮ್ಮ ಕೊಂಚ ಸ್ವಾರ್ಥಿಯಾಗಿರಬೇಕಿತ್ತೇನೋ ಎಂದೂ ಅನ್ನಿಸುತ್ತದೆ. ಕಳೆದ ವರ್ಷ ಆರೋಗ್ಯದಲ್ಲಿ ಏರು ಪೇರಾದಾಗ ಡಾಕ್ಟರ್ ಬಳಿ ಹೋಗಿದ್ದೆ. ನನ್ನ ದಿನಚರಿಯನ್ನೆಲ್ಲ ಕೇಳಿದ ಮೇಲೆ ಡಾಕ್ಟರ್, ಕಮಲ, ಈ ವಯಸ್ಸಿನಲ್ಲಿ ಸ್ವಲ್ಪ ಸ್ವಾರ್ಥಿಯಾಗಿರಬೇಕು. ಮೊದಲು ನಿಮ್ಮ ತಿಂಡಿ, ಊಟ, ವ್ಯಾಯಾಮ ಇತ್ಯಾದಿಗಳನ್ನು ನೋಡಿಕೊಳ್ಳಬೇಕು’ ಎಂದು ನಕ್ಕರು. ನಿಜ ಹೇಳಬೇಕೆಂದರೆ ನನ್ನ ತಾಯಿ ಬದುಕಿದ ರೀತಿಯನ್ನು ನೋಡಿದ ನನಗೆ ನಾನು ಬಹಳ ಅಂದರೆ ಬಹಳ ಸ್ವಾರ್ಥಿ ಎನ್ನಿಸುತ್ತಿರುತ್ತದೆ. ನನಗೆ ಸಿಗಬೇಕಾದ ಅಲ್ಪ ಸಮಯವನ್ನು ಪಡೆದೆ ತೀರಬೇಕು ಎನ್ನುವ ಹಟವಾದರೂ ಇದೆ.
ಅಮ್ಮ ಪ್ರತಿ ಬಾರಿ ಗೋಡೆಯ ಮೇಲೆ ಹಳೆಯದಾಗಿದ್ದ ಫೋಟೋಗಳನ್ನು ಕೆಳಗಿಳಿಸುತ್ತ, ಪೆಟ್ಟಿಗೆಯಲ್ಲಿ ತುಂಬಿಡುತ್ತಿದ್ದುದ್ದು ಏನನ್ನು? ತನ್ನ ಬದುಕನ್ನೇ ಇರಬಹುದು ಎಂದನಿಸುತ್ತದೆ. ಒಂದು ದಿನ ಆ ಮನೆಯನ್ನೇನೋ ಎಲ್ಲರೂ ತೊರೆದರು. ಆದರೆ ಗೋಡೆಯ ಮೇಲಿದ್ದ ಫೋಟೋಗಳು ಪೆಟ್ಟಿಗೆಗೆ ಸೇರುತ್ತಾ ಹೋದಂತೆ ಅಮ್ಮನ ಮುಖದಲ್ಲೊಂದು ಶೂನ್ಯ ಭಾವ ಕವಿಯುತ್ತ ಹೋಗುವುದನ್ನು ಕಂಡಿದ್ದೆ. ಅದರರ್ಥವೇನೋ? ಯಾವ ನೆನಪುಗಳನ್ನು ಅವಳು ಮುಚ್ಚಿಟ್ಟಳೋ, ಮಸುಕಾಗಿಸಿದಳೋ ಯಾರಿಗೆ ಗೊತ್ತು? ನನಗ್ಯಾಕೋ ಅವಳನ್ನು ಗೋಡೆಗೆ ತೂಗು ಹಾಕಿ, ಕೃತಜ್ಞತೆಯ ಕಣ್ಣೀರು ಹರಿಸುವುದಕ್ಕಾಗುತ್ತಿಲ್ಲ.
- ಮೇಟಿಕುರ್ಕೆ ರಾಮಸ್ವಾಮಿ ಕಮಲಾ (ಲೇಖಕರು, ಸಾಹಿತಿಗಳು)
