ವಾಚ್ ನ ಹಿಂದಿದೆ ಒಂದು ಬಾಂಧವ್ಯ – ಕೇಶವ ರೆಡ್ಡಿ ಹಂದ್ರಾಳ



ಕೈಗೆ ವಾಚ್ ಹಾಕಿಕೊಂಡಾಗ ಇಡೀ ಊರಿನ ಗಂಡಸರು ನೋಡಲು ನೆರೆದಿದ್ದರು ಎನ್ನುತ್ತಾ ವಾಚ್ ನೊಂದಿಗಿನ ಭಾವನಾತ್ಮಕ ಸಂಬಂಧದ ಬಗ್ಗೆ ಕೇಶವ ರೆಡ್ಡಿ ಹಂದ್ರಾಳ ಅವರು ಸುಂದರವಾಗಿ ಕತೆ ಬರೆದಿದ್ದಾರೆ. ಆ ವಾಚ್ ಈಗೇನಾಯಿತು ? ತಿಳಿಯಲು ಮುಂದೆ ಓದಿ…

ನಮ್ಮ ಬದುಕಿನುದ್ದಕ್ಕೂ ಆತ್ಮೀಯ ಸ್ನೇಹಿತರಂತೆ ಕೆಲವು ಪ್ರಾಣಿ ಮತ್ತು ವಸ್ತುಗಳು ಕೂಡ ನಮ್ಮ ಎದೆಯಾಳದ ಗೂಡಲ್ಲಿ ಉಳಿದುಕೊಂಡುಬಿಟ್ಟಿರುತ್ತವೆ . ನಮ್ಮ ಮನೆಯಲ್ಲೊಂದು ಬಿಳಿಹಸು ಇತ್ತು . ಅದು ಯಾರನ್ನೂ ಹಾಯುತ್ತಿರಲಿಲ್ಲ , ಒದೆಯುತ್ತಿರಲಿಲ್ಲ. ಯಾರು ಎಷ್ಷೊತ್ತಿನಲ್ಲಿ ಕೆಚ್ಚಲಿಗೆ ಕೈ ಇಟ್ಟರೂ ಹಾಲು ಕೊಡುತ್ತಿತ್ತು. ನಾವಂತೂ ಅದರ ಕೆಚ್ಚಲಿಗೆ ಬಾಯಿಟ್ಟು ಹಾಲು ಕುಡಿಯುತ್ತಿದ್ದೆವು. ನಮ್ಮ ಮನೆಯಲ್ಲಿ ಆರೇಳು ಕರುಗಳನ್ನು ಹಾಕಿದ್ದ ಈ ಹಸು ಮನೆಯಲ್ಲೆ ಸತ್ತು ಹೋಗಿ ನಮ್ಮ ಹೊಂಗೆ ತೋಪಿನಲ್ಲಿ ಹೊಂಗೆಮರದ ಬುಡಕ್ಕೆ ಹೂತಿದ್ದೆವು. ನನಗೀಗಲೂ ಹಸುವಿನ ಸಂಪೂರ್ಣ ಚಿತ್ರ ಕಣ್ಮುಂದೆ ನಿಲ್ಲುತ್ತದೆ.

ಫೋಟೋ ಕೃಪೆ : Geo.tv

ನಾನು ಫೈನಲ್ ಇಯರ್ ಡಿಗ್ರಿ ಓದುವಾಗ ನಮ್ಮಪ್ಪ ನನಗೆ ೪೯೫ ರೂಪಾಯಿ ಬೆಲೆಯ HMT automatic ವಾಚನ್ನು ಕೊಡಿಸಿದ್ದ. ಅದನ್ನು ಕಟ್ಟಿಕೊಂಡು ಊರಿಗೆ ಹೋದಾಗ ಇಡೀ ಊರಿನ ಗಂಡಸರೆಲ್ಲಾ ಅದನ್ನು ನೋಡಲು ನೆರೆದಿದ್ದರು. “ಅಯ್ಯೋನಿ ಪಾಸನ್ಕೂಲ ಕೀ ಕೊಡ್ದೇನೆ ಅದೆಂಗ್ ನಡಿತದೋ.. ಅದೇನೋನಪ್ಪ ಎಲ್ಲಾ ಅಯೋಮಯ ” ಎಂದು ಮುಟ್ಟಿ ಮುಟ್ಟಿ ಅಚ್ಚರಿಯನ್ನೆ ಕಣ್ತುಂಬಿಸಿಕೊಂಡಿದ್ದರು . ಸುಮಾರು ವರ್ಷಗಳ ಕಾಲ HMT automatic ವಾಚ್ ಮದುವೆ ಗಂಡುಗಳ ಅಚ್ಚುಮೆಚ್ಚಿನ ವರದಕ್ಷಿಣೆ ಆಗಿತ್ತು. ನಮ್ಮ ಸಣ್ಣಣ್ಣಯ್ಯ ಕೆಲವೊಮ್ಮೆ ದುಡ್ಡು ಶಾರ್ಟೇಜ್ ಆದಾಗ ಈ ವಾಚನ್ನು ಗಿರವಿ ಅಂಗಡಿಯಲ್ಲಿ ಅಡ ಇಟ್ಟು ಒಂದನೆಯ ತಾರೀಖು ಬಿಡಿಸಿಕೊಡುತ್ತಿದ್ಧ.

ಫೋಟೋ ಕೃಪೆ : Justdail

ಅದಿರಲಿ, ನಾನು ಲವ್ ಮ್ಯಾರೇಜ್ ಆಗಿ ಚನ್ನಪಟ್ಟಣದಲ್ಲಿದ್ದೆ. ಕಸ್ತೂರಿನ ಜೂನಿಯರ್ ಕಾಲೇಜಿನಲ್ಲಿ ಗುತ್ತಿಗೆ ಆಧಾರದ ಉಪನ್ಯಾಸಕನಾಗಿದ್ದೆ. ಬೇಸಿಗೆ ರಜೆಯಲ್ಲಿ ಎರಡು ತಿಂಗಳು ಸಂಬಳ ಇರುತ್ತಿರಲಿಲ್ಲ. ಇಂಥದ್ದೇ ಭಾನುವಾರದ ದಿನ ಮನೆಯಲ್ಲಿ ಅಕ್ಕಿಯಿಂದ ಹಿಡಿದು ಏನೂ ಇರಲಿಲ್ಲ. ಜೇಬಿನಲ್ಲಿ ನಯಾಪೈಸೆ ಇರಲಿಲ್ಲ. ಸ್ನೇಹಿತರನ್ನು ಕೇಳಲು ಮುಜುಗರ. ಗೆಳೆಯ ಅಬ್ಬೂರು ಪ್ರಕಾಶ ಅವೊತ್ತು ಊರಿನಿಂದ ಚನ್ನಪಟ್ಟಣಕ್ಕೆ ಬಂದಿದ್ದ. ಅವನ ಹತ್ತಿರವೂ ಕಾಸಿರಲಿಲ್ಲ. ಕೈಲಿದ್ದ ಅಟೋಮೆಟಿಕ್ ವಾಚ್ ಬಿಚ್ಚಿ ಪ್ರಕಾಶನ ಕೈಗೆ ಕೊಟ್ಟು ಗಿರವಿ ಇಟ್ಟು ಕಾಸು ತರುವಂತೆ ಹೇಳಿದ್ದೆ. ಪ್ರಕಾಶ ಮುಜುಗರದಂದಲೇ ಹೋಗಿ ವಾಚ್ ಇಟ್ಟು ನೂರಾಮುವತ್ತು ರೂಪಾಯಿ ತಂದಿದ್ದ. ಸಾಮಾನು ತೆಗೆದುಕೊಂಡು ಹೋಗಿ ಬಿಸಿ ಬಿಸಿ ಅಡುಗೆ ಮಾಡಿ ಊಟ ಮಾಡಿದ್ದೇವು. ನಂತರ ಕಡೆ ಬಸ್ಸಿಗೆ ಪ್ರಕಾಶ ಊರಿಗೆ ಹೋಗಿದ್ದ. ಇದಾದ ವಾರದ ಮೇಲೆ ನಾವು ನಮ್ಮ ಊರಿಗೆ ಹೋಗಿದ್ದೆವು.



ನನ್ನ ಬರಿಗೈ ನೋಡಿ ನಮ್ಮಪ್ಪ #ವಾಚ್ ಕೇಳಿದ್ದ. ನಾನು ಮೇಲೆ ಕೆಳಗೆ ನೋಡುವಾಗ ನನ್ನ ಹೆಂಡತಿ ನಿಜ ಹೇಳಿದ್ದಳು. ” ಥೂ ಬೇಕೂಫ್ ನನ್ಮಗ್ನೆ ಒಂದು ಕಾಗದ ಬರದಾಕೋಕಾಗ್ತಿರ್ಲಿಲ್ವ..‌” ಎಂದು ಉಗಿದು ವಾಪಸ್ಸು ಬರುವಾಗ ಸಾವಿರ ರೂಪಾಯಿ ಕೊಟ್ಟಿದ್ದ.ಕಾರಣಾಂತರಗಳಿಂದ ಆ ವಾಚನ್ನು ಬಿಡಿಸಿಕೊಳ್ಳಲಾಗಲೇ ಇಲ್ಲ. ಸುಮಾರು ಹತ್ತು ವರ್ಷಗಳ ಕಾಲ ಕಟ್ಟಿದ್ದ ಆ ವಾಚನ್ನು ಇವೊತ್ತಿಗೂ ಮರೆಯಲಾಗಿಲ್ಲ.


  • ಕೇಶವ ರೆಡ್ಡಿ ಹಂದ್ರಾಳ (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading