ಧೃವ ತಾನು ಪ್ರೀತಿಸಿದ ವೈಭವಿಗೆ ನಿನ್ನ ಅತ್ತೆ ಮಗನ್ನೇ ಮದುವೆಯಾಗಿ ಸಂತೋಷದಿಂದ ಇರು ಎಂದಾಗ ವೈಭವಿ ಕಣ್ಣುಗಳಲ್ಲಿ ನೀರು ತುಂಬಿದ್ದವು .. ಮುಂದೇನಾಯಿತು ವಿಕಾಸ್. ಫ್. ಮಡಿವಾಳರ ಅವರ ಕುತೂಹಲಕಾರಿ ಕತೆ ಆ ರಾತ್ರಿ ತಪ್ಪದೆ ಮುಂದೆ ಓದಿ…
ಬೆಳಗಾಯಿತು ವೈಭವಿ ಎದ್ದು ಮುಖತೋಳೆದು ದೃವನಿಗೆ ತಿಂಡಿ ತಂದಳು. ಅವನ ಕಾಲಿನ ಗಾಯ ಸ್ವಲ್ಪ ಕಡಿಮೆಯಾಗಿತ್ತು.
“ಧೃವ ಇನ್ನೂ ಎಷ್ಟು ದಿನ ಹೀಗೆ ಕಾಯ್ಲಿ. ನಿನ್ನ ನಿರ್ಧಾರ ಏನು ಅಂತ ಆದ್ರು ಹೇಳು ” ಧೃವನಿಗೆ ತಿನ್ನಿಸುತ್ತ ವೈಭವಿ ಕೇಳಿದಳು. ಆದರೆ ದೃವ ಅವಳ ಮಾತಿಗೆ ಉತ್ತರಿಸಲಿಲ್ಲ.
ವೈಭವಿ : ” ಹೀಗೆ ಸುಮ್ನೆ ಇದ್ರೆ ನಾನು ಏನು ಅಂತ ತಿಳ್ಕೊಬೇಕು. ಮನೆಯಲ್ಲಿ ಮದ್ವೆ ಮಾಡ್ಕೋ ವಯಸ್ಸಾಯ್ತು ಅಂತ ಒತ್ತಾಯ ಮಾಡ್ತಾ ಇದ್ದಾರೆ. ನಮ್ಮ ಅತ್ತೆ ಮಗಾ ರವಿ ತುಂಬಾ ಹಿಂಸೆ ಕೊಡ್ತಾ ಇದ್ದಾನೆ. ನಾನು ಏನೇನೊ ಕಾರಣ ಹೇಳಿ ಮುಂದೆ ಹಾಕ್ತಾ ಇದೇನಿ. ನೀನು ಹೀಗೆ ಸುಮ್ನೆ ಇದ್ರೆ ನನ್ನ ರವಿಗೆ ಕೊಟ್ಟು ಮದ್ವೆ ಮಾಡಿಸ್ತಾರೆ. ನಂಗೆ ನಿನ್ನ ಬಿಟ್ಟು ಬದುಕೋಕೆ ಆಗಲ್ಲ ”
ವೈಭವಿ ಅಳೋಕೆ ಶುರು ಮಾಡಿದ್ಲು…
ಧೃವ : ನಂಗೆ ನಿನ್ನ ಪರಿಸ್ಥಿತಿ ಅರ್ಥ ಆಗುತ್ತೆ. ಆದ್ರೆ ಏನು ಮಾಡ್ಲಿ ನಿಮ್ಮ ಮನೆಯವರು ನನ್ನನಾ ಒಪ್ಪುತ್ತಾ ಇಲ್ಲ.
ವೈಭವಿ : ಅವರು ಒಪ್ಪಲ್ಲ ಅಂತ ನನ್ನ ಬಿಟ್ಟು ಬಿಡ್ತೀಯಾ?
ಧೃವ : ನೋಡು… ಮೊದಲೇ ನಾನು ಬಡವ. ನಾನಿನ್ನು ಸಾಧಿಸೋದು ತುಂಬಾ ಇದೆ. ನಾವಿಬ್ಬರು ಮದ್ವೆ ಆದ್ರೆ ನಿನಗೆ ಚಪ್ಪಲಿ ಕೊಡಿಸುವಷ್ಟು ಯೋಗ್ಯತೆ ನಂಗೆ ಇಲ್ಲ.
ವೈಭವಿ : ನನಗೆ ಉಳ್ಕೊಳೋಕೆ ಅರಮನೆ ಬೇಕಿಲ್ಲ. ಸಣ್ಣ ಗುಡಿಸಲಲ್ಲಿ ಇಟ್ರು ನಾನು ಇರ್ತೇನಿ. ನಿನ್ನ ಪ್ರೀತಿ ಸಿಕ್ರೆ ಸಾಕು. ಬೇಕಿದ್ರೆ ನಾನು ದುಡೀತೀನಿ. ಕಷ್ಟ ನೊ ಸುಖ ನೊ ಇಬ್ರು ಜೊತೆಗೆ ಹಂಚಿಕೊಳ್ಳೋಣ. ಮೊದ್ಲು ನನ್ನ ಇಲ್ಲಿಂದ ಕರ್ಕೊಂಡು ಹೋಗು ”
ಧೃವ : ” ಪ್ಲೀಸ್ …ಇವಾಗ ನನ್ನ ಏನು ಕೇಳ್ಬೇಡ. ನೀನು ರವಿ ನಾ ಮದ್ವೆ ಆಗೋದು ಕ್ಷೇಮ. ಅವ್ನು ನಿನ್ನ ಚೆನ್ನಾಗಿ ನೋಡ್ಕೋತಾನೆ ”
ವೈಭವಿ : ಬಂಗಾರದ ಪಂಜರದಲ್ಲಿ ಗಿಳಿನಾ ಇಟ್ರೆ ಅದು ಸುಖದಿಂದ ಇರಲ್ಲ. ಮದ್ವೆ ಅಂತ ಆದ್ರೆ ಅದು ನಿನ್ನ ಜೊತೆ ಅಷ್ಟೆ. ಇಲ್ಲ ಅಂದ್ರೆ ನಾನು ಸತ್ತು ಹೋಗ್ತೇನಿ ”
ಧೃವ : “ಯಾಕೆ ಹುಚ್ಚುಹುಚ್ಚಾಗಿ ಮಾತಾಡ್ತಾ ಇದಿಯಾ. ”
ವೈಭವಿ : ” ನಿಂಗೆ ಏನು ಗೊತ್ತು ನನ್ನ ನೋವು. ಯಾವಾಗ ನೋಡಿದ್ರು ಕೆಲ್ಸ ಕೆಲ್ಸ ಅಂತ ಇರ್ತೀಯ. ನಿಂಗು ಒಂದು ಜೀವನ ಇದೆ ದೃವ. ಅರ್ಥ ಮಾಡ್ಕೋ ”
ಧೃವ : ” ಒಬ್ಬ ನಿಜವಾದ ಪ್ರೇಮಿಗೆ ತಾನು ಪ್ರೀತಿಸ್ತಾ ಇರೊ ಹುಡುಗಿ ಸುಖ ಮುಖ್ಯನೇ ಹೊರತು ಅವಳು ನನ್ನವಳು ಆಗಬೇಕೆಂಬ ಹಂಬಲವಲ್ಲ. ”
ತಿಂಡಿ ಮುಗಿತು ವೈಭವಿಯ ಕಣ್ಣು ಇನ್ನೂ ಹಸಿಯಾಗಿತ್ತು. ದೃವ ಮೌನವಾಗಿದ್ದ.
ವೈಭವಿ : “ಸರಿ ನಾನಿನ್ನು ಹೊರಡ್ತೇನಿ. ಖರ್ಚಿಗೆ ಈ ದುಡ್ಡು ಇಟ್ಕೋ. ಪಚ್ಚು ಅಣ್ಣನಿಗೆ ಕೇಳ್ದೆ ಅಂತ ಹೇಳು ”
ಧೃವ : ” ನನಗೆ ದುಡ್ಡಿನ ಅವಶ್ಯಕತೆಯಿಲ್ಲ ”
ವೈಭವಿ : ” ಅವಶ್ಯಕತೆಯಿದೆ ಅಂತ ಕೊಡ್ತಾ ಇಲ್ಲ. ಪ್ರೀತಿಯಿಂದ ಕೊಡ್ತಾ ಇದೇನಿ ”
ಧೃವ : “ಬೇಡ. ನೀನು ಹಾನಗೇರಿಗೆ ಹೋದ ಕುಡ್ಲೆ ಪಚ್ಚುವಿಗೆ ಕರೆ ಮಾಡು. ಅವನು ನಿನ್ನ ಊರಿಗೆ ಬಿಟ್ಟು ಬರ್ತಾನೆ. ಹುಷಾರು ಬೇಜಾರ್ ಆಗ್ಬೇಡ ಎಲ್ಲಾ ಸರಿಯಾಗುತ್ತೆ ”
ವೈಭವಿ : ” ಸರಿ ನಾನು ಹೋರಡುತ್ತೀನಿ ”
ಹೊರಡೋ ಮುಂಚೆ ವೈಭವಿ ಧೃವನನ್ನು ತಬ್ಬಿಕೊಂಡು ಮುತ್ತು ಕೊಟ್ಟಳು. ಅವಳಿಗೆ ಅವನನ್ನು ಬಿಟ್ಟು ಹೋಗುವ ಮನಸ್ಸಿರಲಿಲ್ಲ.
ವೈಭವಿ ಮತ್ತು ದೃವ ಚಿಕ್ಕ ವಯಸ್ಸಿನಿಂದ ಚಿರಪರಿಚಿತರು. ಕಾಲೇಜು ಮೆಟ್ಟಿಲು ಹತ್ತುವಷ್ಟರಲ್ಲಿ ಅವರಿಬ್ಬರ ಗೆಳೆತನ ಪ್ರೀತಿಯಾಗಿ ಬದಲಾಗಿತ್ತು. ವೈಭವಿಯ ತಂದೆ ಅಗರ್ಭ ಶ್ರೀಮಂತ. ಆದರೆ ದೃವ ಕಡು ಬಡವ. ಡಿಗ್ರಿ ಮುಗಿಯುವಷ್ಟರಲ್ಲಿ ಇವರಿಬ್ಬರ ಪ್ರೀತಿ ಮನೆಯವರಿಗೆ ಗೊತ್ತಾಗಿತ್ತು. ವೈಭವಿಯ ತಂದೆಗೆ ತನ್ನ ಮಗಳು ಬಡವನನ್ನು ಪ್ರೀತಿಸಿದ್ದಾನೆ ಎಂಬುದಕ್ಕಿಂತ ಕೀಳು ಜಾತಿಯವನನ್ನು ಪ್ರೀತಿಸಿದ್ದಾನೆ ಎಂಬುದು ಕೋಪ ತರಿಸಿತ್ತು. ವೈಭವಿ ಲಿಂಗಾಯತ ಮನೆಯ ಹುಡುಗಿ. ದೃವ ತಳವಾರ ಮನೆಯ ಹುಡುಗ. ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡ ಬಂದಿತ್ತು. ವೈಭವಿಯ ತಂದೆ ಒಂದೆರಡು ಸಾರಿ ಹುಡುಗರನ್ನು ಚು ಬಿಟ್ಟು ದೃವನಿಗೆ ಹೊಡೆಸಿದ್ದ. ಆದರೆ ದೃವ ವೈಭವಿಯನ್ನ ಬಿಟ್ಟಿರಲಿಲ್ಲ. ಅವರಿಬ್ಬರ ಪ್ರೀತಿ ಹಾಗಿತ್ತು.
ವೈಭವಿ ಮನೆ ಬಿಟ್ಟು ಬರಲು ಸಿದ್ದವಾಗಿದ್ದಳು. ಆದರೆ ದೃವ ಮನೆಯವರನ್ನೆಲ್ಲ ಒಪ್ಪಿಸೋಣ ಅಂತ ಹಠ ಹಿಡಿದಿದ್ದ.
ಮುಂದುವರೆಯುವುದು
ಹಿಂದಿನ ಸಂಚಿಕೆಗಳು :
- ‘ಆ ರಾತ್ರಿ’ ಕತೆ – ಭಾಗ ೧
- ‘ಆ ರಾತ್ರಿ’ ಕತೆ – ಭಾಗ ೨
- ‘ಆ ರಾತ್ರಿ’ ಕತೆ – ಭಾಗ ೩
- ‘ಆ ರಾತ್ರಿ’ ಕತೆ – ಭಾಗ ೪
- ‘ಆ ರಾತ್ರಿ’ ಕತೆ – ಭಾಗ ೫
- ‘ಆ ರಾತ್ರಿ’ ಕತೆ – ಭಾಗ ೬
- ವಿಕಾಸ್. ಫ್. ಮಡಿವಾಳರ
