ದೂರದಿಂದಲೇ ಸಂಭ್ರಮಿಸೋಣ ಮೆರವಣಿಗೆ…ಯಾರು ಬರುವುದಿಲ್ಲ ನಮ್ಮೊಂದಿಗೆ ಕೊನೆಗಳಿಗೆ…ಕವಿ ನಾಗರಾಜ ಜಿ. ಎನ್. ಬಾಡ ಅವರು ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಇರಬೇಕು ಅಭಿಮಾನ ಮನಸ್ಸಿನೊಳಗೆ
ಕುಣಿದುಕುಪ್ಪಳಿಸಿ ಮನೆ ಮನದೊಳಗೆ
ಹೇಗಿರಬೇಕು ಹಾಗಿದ್ದರೆ ಚಂದ ಹೊರಗೆ
ಮಿತಿಮೀರಿದರೆ ಅನಾಹುತ ಈ ಬಾಳಿಗೆ
ಜಾಗೃತವಾಗಿರಬೇಕು ನಮ್ಮೊಳಗೆ ವಿವೇಕ
ಹುಚ್ಚು ಆವೇಶಕ್ಕೆ ಬಿದ್ದು ಮಾಡಬಾರದು ಅತಿರೇಕ
ನಿರ್ದಿಷ್ಟ ಗೆರೆಯೊಳಗೆ ಇದ್ದರಷ್ಟೇನೇ ಚಂದ
ಇಲ್ಲದೇ ಹೋದರೆ ತಪ್ಪಿಸಿಕೊಳ್ಳಲಾಗದು ದುರಂತದಿಂದ
ಈ ಜಗದೊಳಗೆ ಯಾರಿಗಿಲ್ಲಿ ಯಾರು ಇಲ್ಲ
ಒಂದು ಕ್ಷಣ ಬಂದು ಹೋಗುವವರೆಲ್ಲ
ನಮ್ಮವರ ಪಾಲಿಗೆ ಮಾತ್ರ ನಾವೇ ಎಲ್ಲ
ಅವರ ಕಣ್ಣೀರಿಗೆ ಕಾರಣ ನಾವಾಗಬಾರದಲ್ಲ
ಅವರವರ ಪಾಲಿನ ಜವಾಬ್ದಾರಿ ಅವರವರಿಗೆ
ಮಾಡಿಕೊಳ್ಳಬೇಕು ನಾವು ನಮ್ಮದೇ ಬೆಳವಣಿಗೆ
ದೂರದಿಂದಲೇ ಸಂಭ್ರಮಿಸೋಣ ಮೆರವಣಿಗೆ
ಯಾರು ಬರುವುದಿಲ್ಲ ನಮ್ಮೊಂದಿಗೆ ಕೊನೆಗಳಿಗೆ
ಅತಿರೇಕ ಆಗಬಾರದು ಯಾವುದು ಈ ಜಗದೊಳಗೆ
ಜವಾಬ್ದಾರಿಯುತ ವರ್ತನೆ ಇರಬೇಕು ನಮ್ಮೊಳಗೆ
ವಿಶ್ಲೇಷಣೆಯನ್ನು ಮಾಡಿಕೊಳ್ಳಬೇಕು ಅರೆಗಳಿಗೆ
ಹಾಕಿಕೊಳ್ಳಬೇಕು ಕಡಿವಾಣ ನಮ್ಮ ವರ್ತನೆಗಳಿಗೆ
- ನಾಗರಾಜ ಜಿ. ಎನ್. ಬಾಡ – ಕುಮಟ, ಉತ್ತರ ಕನ್ನಡ.
