ಪೌರಾಣಿಕ ಕಾದಂಬರಿಗಳ ರಚನೆಯಲ್ಲಿ ಡಾ. ಕೆ.ಎಸ್ ನಾರಾಯಣಾಚಾರ್ಯ ಅವರದು ಪ್ರಮುಖ ಹೆಸರು. ಮಹತ್ವದ ಕಾದಂಬರಿಗಳನ್ನೊಳಗೊಂಡಂತೆ ಸುಮಾರು ೧೫೦ ಕೃತಿಗಳನ್ನು ಬರೆದಿದ್ದಾರೆ. ಅವರ ಅಗಸ್ತ್ಯ ಕೃತಿಯ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಅಗಸ್ತ್ಯ
ಲೇಖಕರು: ಕೆ.ಎಸ್.ನಾರಾಯಣಾಚಾರ್ಯ
ಪ್ರಕಾಶನ : ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ.
ಮುದ್ರಣದ ವರ್ಷ: ೧೯೯೭ ರಿಂದ ೨೦೧೫.(೪ ಮುದ್ರಣ)
ಪುಟಗಳು: ೨೫೬.
ಬೆಲೆ: ರೂ. ೧೮೦.
ಪೌರಾಣಿಕ ಕಾದಂಬರಿಗಳ ರಚನೆಯಲ್ಲಿ ಡಾ. ಕೆ.ಎಸ್ ನಾರಾಯಣಾಚಾರ್ಯ ಅವರದು ಪ್ರಮುಖ ಹೆಸರು. ಧಾರವಾಡದ ಕೆ.ಸಿ.ಡಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾದ ಇವರು ಶ್ರೀ ರಾಮಾಯಣ/ಮಹಾಭಾರತ ಪಾತ್ರ ಪ್ರಪಂಚ, ನಳ- ದಮಯಂತಿ, ಮಹಾಮಾತೆ ಕುನ್ತಿ ಕಂದೆರೆದಾಗ, ಅಗಸ್ತ್ಯ, ಆಚಾರ್ಯ ಚಾಣಕ್ಯ ಮುಂತಾದ ಮಹತ್ವದ ಕಾದಂಬರಿಗಳನ್ನೊಳಗೊಂಡಂತೆ ಸುಮಾರು ೧೫೦ ಕೃತಿಗಳನ್ನು ಬರೆದಿದ್ದಾರೆ.
ನಲವತ್ತು ವರ್ಷಗಳ ವೇದೋಪಾಸನೆ, ಪುರಾಣಗಳ ಅಭ್ಯಾಸ ಹಾಗೂ ಸಂಶೋಧನೆಯ ಫಲವಾಗಿ ಇಂತಹ ಮಹತ್ವದ ಕೃತಿಗಳನ್ನು ರಚಿಸಿರುವ ಇವರಿಗೆ ಒಲಿದ ಪ್ರಶಸ್ತಿ ಪುರಸ್ಕಾರಗಳು ಅಸಂಖ್ಯ . ಭಾರತೀಯ ಸಂಸ್ಕ್ರತಿ ಪ್ರಸಾರ, ಸಂಶೋಧನೆ ಇವುಗಳನ್ನು ಉಸಿರಾಗಿಸಿ ಕೊಂಡ ಆಚಾರ್ಯರು ವಿವಿಧ ಭಾಷೆಯಲ್ಲಿ ಪ್ರಸ್ತುತ ಪಡಿಸಿರುವ ಸಾವಿರಾರು ಪ್ರವಚನಗಳು ದೇಶದಾದ್ಯಂತ ಜನಪ್ರಿಯತೆ ಗಳಿಸಿವೆ.
ಸಪ್ತರ್ಷಿಗಳಲ್ಲಿ ಒಬ್ಬರಾದ ಮಹರ್ಷಿ ಅಗಸ್ತ್ಯರ ಈ ಚರಿತ್ರೆಯಲ್ಲಿ ಹಿರಿಯ ಅಗಸ್ತ್ಯರು ಪುರಾಣ ಪುರುಷರಾದರೆ, ಕಿರಿಯ ಅಗಸ್ತ್ಯರು ಐತಿಹಾಸಿಕ ದೃಷ್ಟಿಯಿಂದ ಪ್ರಮುಖರು. ಈ ಅಪೂರ್ವವಾದ ಕಾದಂಬರಿಯಲ್ಲಿ ೨೬ ಅಧ್ಯಾಯಗಳಿವೆ.

ವೇದಕಾಲೀನ ಚಿತ್ರಣವಿರುವ ವಿಂಧ್ಯಾಟವಿಯಲ್ಲಿ ಯುವಕರಿಬ್ಬರೂ ಆಶ್ರಮದಿಂದ ಮಾಯವಾಗಿದ್ದ ಹಿರಿಯ ಕುಲಪತಿ ಪ್ರಗಾಥ ಕಣ್ವ ಮತ್ತು ಸತ್ಯಶ್ರವರನ್ನು ಹುಡುಕಿಕೊಂಡು ಬರುತ್ತಾರೆ. ಗೋದಾವರಿ ತೀರದಿಂದ ವಿಂಧ್ಯಾಟವಿಯ ಈಚೆಗೆ ಯಾರೇ ಬಂದರೂ , ತಡೆದು ಹಿಂಸೆ ಕೊಟ್ಟು ಹೊಡೆದು ಸಾಯಿಸುವಂತೆ ತನ್ನ ಭಟರಿಗೆ ಅಲ್ಲಿನ ದುಷ್ಟ ಅರಸ ಇಲ್ವಲನ ಆದೇಶವಿತ್ತು. !!
ಅದೇ ಸಮಯದಲ್ಲಿ ಆರ್ಯಾವರ್ತದಲ್ಲಿ ಅನಾಯಕತ್ವದಿಂದ ಕ್ಷತ್ರೀಯರ ಬಲವು ಕ್ಷೀಣಿಸುತ್ತಿತ್ತು. ಇಲ್ವಲ ಮತ್ತು ವಾತಾಪಿ ಎಂಬ ಮಾಯಾವಿದ್ಯೆಯನ್ನು ಸಿದ್ಧಿಸಿ ಕೊಂಡ ಸಹೋದರರು ಭರತ ಖಂಡದಲ್ಲಿ ತಮ್ಮ ಚಕ್ರಾಧಿಪತ್ಯ ಸ್ಥಾಪಿಸಲು ಬಯಸಿದ್ದರು. ಒಮ್ಮೆಇಲ್ವಲ ತನ್ನ ಅಪುತ್ರತ್ವ ನೀಗಿಸಲು ಭೃಗುಋಷಿಯನ್ನು ಪ್ರಾರ್ಥಿಸಿದಾಗ ಅವರು ನಿರಾಕರಿಸಿದ್ದರಿಂದ ಅವಮಾನಿತನಾದವನು ಅಂದಿನಿಂದ ಆತ ಬ್ರಾಹ್ಮಣ ದ್ವೇಷಿಯಾಗಿದ್ದ.
ಹಿರಿಯ ಅಗಸ್ತ್ಯರ ಮುತ್ಸದ್ಧಿತನದಿಂದ ಕ್ಷತ್ರೀಯ ವಂಶ ಉಳಿದಿತ್ತು. ಆದರೆ ಅವರು ಮರಣ ಶಯ್ಯೆಯಲ್ಲಿದ್ದರು. ಅವರ ಏಕೈಕ ಪುತ್ರ ವಿಷ್ಣು ಶರ್ಮ ಅಗಸ್ತ್ಯರಿಗೆ ಆಗ ಕೇವಲ ಎಂಟು ವರ್ಷ. ಹಿರಿಯ ಅಗಸ್ತ್ಯರು ಅಸ್ತಮಾನರಾದಂತರ ಮುಂದೇನು ಎಂಬ ಪ್ರಶ್ನೆಗೆ ದೇವರಹಸ್ಯವೊಂದನ್ನು ಹೇಳಿದ್ದು ‘ಲೋಪಾಮುದ್ರೆ’. ಅವಳ ಕಥೆಯೂ ರೋಚಕವಾಗಿದೆ.
ಸಂತಾನವಿಲ್ಲದ ವಿದರ್ಭ ದೊರೆಗೆ ದೇವತೆಗಳ ವರದಿಂದ ‘ಲೋಪಾಮುದ್ರೆ’ ಎಂಬ ಸೌಂದರ್ಯದ ಗಣಿಯಾದ ಸುಪುತ್ರಿ ಜನಿಸಿದ್ದಳು. ಆಕೆ ಬಾಲ್ಯದಿಂದಲೂ ಸಪ್ತರ್ಷಿ ಮಂಡಲದ ಆಶ್ರಮಕ್ಕೆ ಬರುತ್ತಿದ್ದು, ಕಿರಿಯಅಗಸ್ತ್ಯರಿಗೆ ಆಪ್ತಳೇ ಆಗಿದ್ದಳು. ರಾಜ ಭೋಗದಲ್ಲಿ ಬೆಳೆದ ಆಕೆ ಮುಂದೆ ಕಠಿಣವ್ರತನಾದ ತಾಪಸಿ ಅಗಸ್ತ್ಯನನ್ನು ರಹಸ್ಯವಾಗಿ ವಿವಾಹವಾಗಿ, ಹದಿನೇಳು ವರ್ಷ ಅವರಿಂದ ದೂರವಿದ್ದು ಅಗ್ನಿಹೋತ್ರ ಸಂದೇಶದ ಮೂಲಕ ಸಂಪರ್ಕದಲ್ಲಿದ್ದಳು.
ಭಾರತ ವರ್ಷದಲ್ಲಿ ಆರ್ಯರ ಉನ್ನತಿಗಾಗಿ ದೇಶ ಸಂಚಾರ ಹೊರಟ ಅಗಸ್ತ್ಯರ ಪಯಣ ಕಾಲದಲ್ಲಿ ಸಂಭವಿಸುವ ಅನೇಕ ಘಟನೆಗಳನ್ನು ಇಲ್ಲಿ ಉಪಕಥೆಯ ರೂಪದಲ್ಲಿ ನೀಡಲಾಗಿದೆ. ಸಹಸ್ರಾರ್ಜುನನವಧೆ , ಅಗಸ್ತ್ಯರಿಗೆ ವಿಷ್ಣುದರ್ಶನವಾಗುವುದು ಹಾಗೂ ಇಲ್ವಲನ ಸಂಚುಗಳನ್ನು ಓದಿಯೇ ಅರಿಯ ಬೇಕು.
ವಿದರ್ಭಕ್ಕೆ ಮುತ್ತಿಗೆ ಹಾಕಿದ್ದ ಇಲ್ವಲನ ಸೈನ್ಯ ಪರಾಭವ ಗೊಂಡಿತ್ತು. ಲೋಪಾಮುದ್ರೆಗೆ ವಿವಾಹವಾಗಿದ್ದರೂ ಬರಿಯ ತ್ಯಾಗದಲ್ಲೇ ಆ ಮಹಾ ಮಹಿಮಳು ಕಾಲ ಕಳೆಯು ವಂತಾಗಿತ್ತು. ಇದೀಗ ಅಗಸ್ತ್ಯರು ದೇಶ ಸಂಚಾರ ಮುಗಿಸಿ ಆಗಮಿಸುತ್ತಿದ್ದರಿಂದ ಪರಶುರಾಮರೊಂದಿಗೆ ಆಶ್ರಮದಲ್ಲಿ ಅನೇಕ ಮುನಿಗಳು ಸ್ವಾಗತಕ್ಕಾಗಿ ಕಾದಿದ್ದರು. ಅವರೊಂದಿಗೆ ತನ್ನ ಪ್ರತಿನಿಧಿಗಳನ್ನು ಕಳಿಸಿದ್ದ ಇಲ್ವಲನ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.ಈ ಕುರಿತು ಪರಶುರಾಮ ಹಾಗೂ ಅಗಸ್ತ್ಯರ ನಡುವಿನ ಮಹತ್ವದ ಸಂಭಾಷಣೆ ಇಲ್ಲಿ ಬಲು ಸೊಗಸಾಗಿದೆ.
ಉಪಾಯದಿಂದ ಸಮರ್ಥ ರಾಯಭಾರದ ಮೂಲಕ ಕಾಲಕೇಯ, ವಾತಾಪಿ- ಇಲ್ವಲರ ಸಂಹಾರವಾದ ನಂತರ ಅಗಸ್ತ್ಯರು ಹಾಗೂ ಲೋಪಾಮುದ್ರೆಗೆ ಪುತ್ರ ಸಂತಾನ ವಾಗುತ್ತದೆ. ಪರಶುರಾಮರು ತಾವು ಉತ್ಥಾನಗೊಳಿಸಿದ ಕರಾವಳಿಯತ್ತ ಪಯಣ ಹೊರಟ ಮೇಲೆ ಅಗಸ್ತ್ಯರು ಪತ್ನಿಯೊಂದಿಗೆ ದಕ್ಷಿಣದ ಸಹ್ಯಾದ್ರಿ ಶ್ರೇಣಿಗಳತ್ತ ಯಾತ್ರೆ ಪ್ರಾರಂಭಿಸಿ ಕೊಡಗಿಗೆ ಬಂದರು. ಆಗ ಅನಾರೋಗ್ಯಕ್ಕೊಳಗಾದ ಲೋಪಾಮುದ್ರೆ ಸಾಯುತ್ತಾಳೆ. ಅವಳು ಬಂಧನ ಮತ್ತು ಮೋಕ್ಷ ಎರಡರಲ್ಲಿ ಯಾವುದು ಸುಖ ?ಎಂದು ಕೇಳುವ ಪ್ರಶ್ನೆಗೆ ಅಗಸ್ತ್ಯರು ನೀಡುವ ಉತ್ತರ ಸರ್ವಕಾಲಿಕ ಸತ್ಯ!.

ಮುಂದೆ ಅವಳು ಕಾವೇರಿ ನೀರಾಗಿ ಹರಿಯುತ್ತಾಳೆ. ಲೋಪಾಮುದ್ರೆಯ ಇನ್ನೊಂದು ಅವತಾರವಾದ ಕಾವೇರಿಯನ್ನು ಅಗಸ್ತ್ಯರು ಮರು ಮದುವೆಯಾಗು ತ್ತಾರೆಯೇ?.. ಪುರಾಣ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮನೋಜ್ಞವಾದ ಈ ಕಾದಂಬರಿಯಲ್ಲಿ ಸಾಧ್ವಿ ಲೋಪಾಮುದ್ರೆಯ ಪತಿ ಭಕ್ತಿ, ತ್ಯಾಗ, ತಾಳ್ಮೆ ಇವು ಬಹಳ ಮೆಚ್ಚುಗೆಯಾಗುತ್ತದೆ. ಅಗಸ್ತ್ಯರ ಬುದ್ಧಿವಂತಿಕೆ, ಸಂಕಷ್ಟದಲ್ಲೂ ಸಮಚಿತ್ತರಾಗಿ ಅವರು ನಡೆದು ಕೊಳ್ಳುವ ರೀತಿ ಇವು ಸಹ ಕಾದಂಬರಿಯ ಘನತೆ ಹೆಚ್ಚಿಸಿದೆ.
‘ಶ್ರೀರಾಮ ಸೇವೆಯಲ್ಲಿ ಅಗಸ್ತ್ಯರು’ ಎಂಬ ಕೊನೆಯ ಅಧ್ಯಾಯದಲ್ಲಿ ವನವಾಸದ ಕಾಲದಲ್ಲಿ ಶ್ರೀರಾಮಚಂದ್ರ ಅಗಸ್ತ್ಯರ ಭೇಟಿಯಾಗುತ್ತದೆ. ಆಗ ಅವರಿಬ್ಬರ ನಡುವಿನ ಸಂವಾದ, ರಾಮನಿಗೆ ‘ಆದಿತ್ಯಹೃದಯ ಮಂತ್ರ’ ವನ್ನು ಬೋಧಿಸುವುದರ ಮೂಲಕ ಲಂಕೆಯ ದುಷ್ಟ ರಾವಣನನ್ನು ಸಂಹಾರ ಮಾಡಲು ಪರೋಕ್ಷವಾಗಿ ಸಹಾಯ ಮಾಡುತ್ತಾರೆ .
ಇಂದಿಗೂ ನೀಚರನ್ನು ಸಹಿಸುತ್ತಾ, ಶಿಷ್ಟರು ನಿರುಪಾಯ , ನಿಸ್ಸಹಾಯಕರಾಗಿರುವುದೇ ಅಸಂಘಟಿತ ಸಾಮಾಜಿಕ ಸ್ಥಿತಿಗೆ ಕಾರಣವಾಗಿದೆ. ಅವು ಕೊನೆಗಾಣ ಬೇಕೆಂದರೆ ಈಗಲೂ ಅಗಸ್ತ್ಯ- ಚಾಣಕ್ಯನಂತವರು ರಾಜನೀತಿ ರೂಪಿಸ ಬೇಕಾಗಿದೆ ಎಂದಿದ್ದಾರೆ. ಇಲ್ಲಿನ ಪಾತ್ರ ಪೋಷಣೆ, ಸಂವಾದ, ಭಾಷಾ ಶೈಲಿ, ಆಚಾರ್ಯರ ವೇದಾಧ್ಯಯನದ ಅಪಾರ ಜ್ಞಾನದ ಪದ ಪುಂಜಗಳ ಪ್ರಯೋಗ ಎಲ್ಲವೂ ಉನ್ನತ ಮಟ್ಟದ್ದಾಗಿದ್ದು ಓದುಗನಿಗೆ ಅಲೌಕಿಕ ಅನುಭವವನ್ನುಂಟು ಮಾಡುತ್ತವೆ.
ಇಲ್ಲಿ ಮನ ಸೆಳೆದ ಸಾಲುಗಳು :
*ಮೂರ್ಖರು ಮಹೂರ್ತ ನೋಡಿಯಾರು! ಆದರೆ, ಮನಸ್ಸಿಗೆ ಜಯವೆಂದು ತೋರಿದ ಸಿದ್ಧಗಳಿಗೆಯೇ ಶುಭಮುಹೂರ್ತ.
*ಈ ಭೂಮಿಯ ಮೇಲೆ ವಾಸಿಸುವ ಎಲ್ಲ ಮಾನವರೂ ಒಂದೇ ಕುಲದವರು. ಎಲ್ಲರೂ ಸಹಬಾಳ್ವೆ ನಡೆಸೋಣ.
* ಧರ್ಮವನ್ನು ಎತ್ತಿ ಹಿಡಿದು ನ್ಯಾಯವಾಗಿ ನಡೆ ಯುವವನಿಗೆ ಜೀವನದ ದಾರಿ ಸುಗಮವಾಗಿರುವುದಿಲ್ಲ.
* ಮನುಷ್ಯನಿಗೇ ತಿನ್ನಲು ಆಹಾರವಿಲ್ಲದಿರುವಾಗ, ಯಜ್ಞದಲ್ಲಿ ಎಷ್ಟೊಂದು ತುಪ್ಪ ಹಾಳು ಮಾಡುತ್ತೀರಿ?
ಇನ್ನಷ್ಟು ಉತ್ತಮ ಸಾಲುಗಳಿದ್ದು ಕೆಲವು ನನ್ನ ಗ್ರಹಿಕೆಗೆ ನಿಲುಕಿದಷ್ಟನ್ನು ಮಾತ್ರ ಬರೆದಿರುವೆ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
