ಇಂದು ವ್ಯವಸಾಯ ಅನಾಥವಾಗುತ್ತಿದೆ.ಅನಾದಿಕಾಲದಿಂದ ನಾಗರೀಕತೆಗಳನ್ನು ಬೆಳೆಸಿ, ಪೋಷಿಸಿದ ಬೇಸಾಯ ಇಂದು ದಿಕ್ಕಿಲ್ಲದಂತಾಗುತ್ತಿರುವುದು ನೋವಿನ ಸಂಗತಿ ಎನ್ನುತ್ತಾರೆ ಲೇಖಕರಾದ ಸ್ವರ್ಣಲತಾ ಅವರ ಈ ಲೇಖನವನ್ನು ತಪ್ಪದೆ ಓದಿ…
ನಮ್ಮ ಹಳ್ಳಿಗಳಲ್ಲಿ ನಿಜವಾಗಲೂ ವ್ಯವಸಾಯ ಮುಗಿದು ಹೋಗುವ ಹಂತದಲ್ಲಿದೆ. ಇದು ಖಂಡಿತ ಉತ್ಪ್ರೇಕ್ಷೆಯ ಮಾತಲ್ಲ. ನಮ್ಮ ಊರು ಕುರುಡೀಕೆರೆಯೇ ಆದರೂ ನಮ್ಮ ಜಮೀನು ಕುರುಡೀಕೆರೆ ಕೊಪ್ಪಲಿನಲ್ಲಿ ಇರುವುದರಿಂದ ಇಲ್ಲೆ ಮನೆ ಕಟ್ಟಿಕೊಂಡಿದ್ದೇವೆ. ಇಲ್ಲಿ ಇಪ್ಪತ್ತು ಮನೆಗಳಿವೆ. ಈ ಮನೆಗಳಲ್ಲಿ ಅಪ್ಪ ಅಮ್ಮಂದಿರನ್ನು ಬಿಟ್ಟು ಮಕ್ಕಳೆಲ್ಲಾ ಬೆಂಗಳೂರು ಸೇರಿಕೊಂಡಿದ್ದಾರೆ. ಒಬ್ಬನೇ ಒಬ್ಬ ಮಾತ್ರ ವ್ಯವಸಾಯ ಮಾಡುತ್ತಿದ್ದಾನೆ,ಏಕೆಂದರೆ ಇವನು ಬೆಂಗಳೂರಿಗೆ ಹೋಗಲಿಲ್ಲ,ಅದರಿಂದ ಅಪ್ಪನ ಕಸುಬನ್ನು ಮುಂದುವರಿಸಿದ್ದಾನೆ. ಉಳಿದವರ ಮಕ್ಕಳು ನಿಜವಾಗಿಯೂ ಬೆಂಗಳೂರು ಬಿಟ್ಟುಬಂದು ವ್ಯವಸಾಯ ಮಾಡಿಯಾರೆ. ವ್ಯವಸಾಯ ಮಾಡುವುದಿರಲಿ ಅಪ್ಪ ಅಮ್ಮ ನೆಟ್ಟು ಬೆಳೆಸಿದ ತೆಂಗಿನ ಮರದಲ್ಲಿ ಕಾಯಿ ಕೆಡಗಿದರೆ ಸಾಕಾಗಿದೆ.
ಇದು ಕೇವಲ ಇಪ್ಪತ್ತು ಮನೆಯ ಕತೆಯಲ್ಲ. ನಮ್ಮ ಅಕ್ಕಪಕ್ಕದ ಊರುಗಳಲ್ಲಿ ಇದೇ ರೀತಿಯ ಪರಿಸ್ಥಿತಿ. ನಮ್ಮ ಕುರುಡೀಕೆರೆಯಲ್ಲಿ ಸುಮಾರು ನೂರೈವತ್ತು ಒಕ್ಕಲುಗಳಿವೆ. ನಾನು ಪ್ರತಿ ಮನೆಯ ಪರಿಸ್ಥಿತಿಯನ್ನೂ ಲೆಕ್ಕ ಹಾಕಿ ಹೇಳುತ್ತಿದ್ದೇನೆ. ನಾಲ್ಕೈದು ಮನೆಗಳನ್ನು ಬಿಟ್ಟು ಎಲ್ಲ ಮನೆಗಳಲ್ಲೂ ಅಪ್ಪ ಅಮ್ಮಂದಿರ ತಲೆಗೇ ವ್ಯವಸಾಯ ಮುಗಿದು ಹೋಗುತ್ತದೆ. ಅಂದರೆ ಗ್ರಾಮೀಣ ಭಾರತ ಅದರಲ್ಲೂ ಹಳೆ ಮೈಸೂರಿನ ಹಳ್ಳಿಗಳು ಅಪ್ರಯತ್ನಪೂರ್ವಕವಾಗಿ Urbanization ನತ್ತ ವಾಲುತ್ತಿವೆ. ಅಪ್ರಯತ್ನಪೂರ್ವಕವಾಗಿ ಎನ್ನುವ ಪದವನ್ನು ಯಾಕೆ ಬಳಸಿದ್ದೇನೆ ಎಂದರೆ Imfrastructur, econony ಮತ್ತು life style ಗಳಲ್ಲಿ ಆಗ ಬೇಕಾದ ರೀತಿಯಲ್ಲಿ ಅಭಿವೃದ್ದಿಯಾಗದೇ urbanization ಸದ್ದಿಲ್ಲದೇ ನಡೆಯುತ್ತಿದೆ.
ತಕ್ಷಣಕ್ಕೆ ಗಾಭರಿಪಡುವ ಅವಶ್ಯಕತೆ ಇಲ್ಲ. ಏಕೆಂದರೆ ಈಗಿರುವ ಅಪ್ಪ ಅಮ್ಮಂದಿರೆಲ್ಲಾ ನಲ್ವತೈದರಿಂದ ಅರವತ್ತರ ಆಸುಪಾಸಿನಲ್ಲಿದ್ದಾರೆ. ಇವರು ತಾವು ಗಟ್ಟಿಯಾಗಿರುವತನಕ ಬೇಸಾಯವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ನಮ್ಮ ಮಕ್ಕಳು ಬೇಸಾಯವನ್ನು ಮುಂದುವರಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದೇ ಕಾಡು, ಬೆಟ್ಟ, ಗುಡ್ಡಗಳನ್ನೂ ಚೆನ್ನಾಗಿ ಒತ್ತುವರಿ ಮಾಡುತ್ತಿದ್ದಾರೆ , ಆದರೆ ಮುಂದಿನದು ಕಷ್ಟ.
ಬೇಸಾಯ ಮಾಡುವವರೇ ಇಲ್ಲದಿದ್ದರೆ ಸಾವಿರಾರು ವರ್ಷಗಳ ಒಂದು ಸಂಸ್ಕೃತಿ ನಾಶವಾದಂತಾಗುತ್ತದೆ ಎಂದು ನೋವಾಗುತ್ತದೆ. ನೂರಾರು ತಲೆಮಾರುಗಳು ನಂಬಿಕೊಂಡು ಬಂದ ಕಸುಬು ಈಗ ಮರೆಯಾಗಲು ಕಾರಣಗಳು ನೂರಾರು. ಈ ಕುರಿತು ಬಹಳ ಸಲ ಹೇಳಿದ್ದೇನೆ.
ಕೃಷಿಗೆ ವೃತ್ತಿ ಘನತೆ ಇಲ್ಲದಿರುವುದು ಒಂದು ಮುಖ್ಯ ಕಾರಣ. ಒಬ್ಬ ಅಧಿಕಾರಿಗೆ ಕೊಡುವ ಬೆಲೆಯನ್ನು ಈ ಸಮಾಜ ರೈತನಿಗೆ ಯಾವತ್ತೂ ಕೊಡಲೇ ಇಲ್ಲ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು, ಮಾರುಕಟ್ಟೆಯಲ್ಲಿ ದಳ್ಳಾಳಿಗಳ ಏಕಸ್ವಾಮ್ಯ, ರೈತ ತೆಗೆದುಕೊಂಡು ಹೋದ ತರಕಾರಿಗೆ ಒಂದು ವಾರ ಹದಿನೈದು ದಿನ ಬಿಟ್ಟು ದರ ನಿಗದಿ ಪಡಿಸಿ, ಇವನು ಮತ್ತೊಂದು ಸಲ ಮಾಲು ತೆಗೆದುಕೊಂಡು ಹೋದಾಗ ಮನ ಬಂದಷ್ಟು ಹಣ ಕೊಡುವುದು. ಎಲ್ಲರೂ ಸುಖವಾಗಿರುವಾಗ ನಾನೊಬ್ಬ ಮಾತ್ರ ಯಾಕೆ ಕಷ್ಟಪಡ ಬೇಕು ಎಂಬ ಭಾವನೆ.
ತುಂಡು ಹಿಡುವಳಿಯೂ ಬೇಸಾಯದ ಹಿನ್ನಡೆಗೆ ಮತ್ತೊಂದು ಕಾರಣ. ರೈತನ ಮಕ್ಕಳಿಗೆ ಹೆಣ್ಣು ಸಿಗದಿರುವುದು ಇತ್ತೀಚಿನ ಕಾರಣ.
ಮೇಲೆ ಹೇಳಿದ ಎಲ್ಲ ಕಾರಣಗಳೂ ಸೇರಿಕೊಂಡು ಇಂದು ವ್ಯವಸಾಯ ಅನಾಥವಾಗುತ್ತಿದೆ. ಅನಾದಿಕಾಲದಿಂದ ನಾಗರೀಕತೆಗಳನ್ನು ಬೆಳೆಸಿ, ಪೋಷಿಸಿದ ಬೇಸಾಯ ಇಂದು ದಿಕ್ಕಿಲ್ಲದಂತಾಗುತ್ತಿರುವುದು ನೋವಿನ ಸಂಗತಿ.
- ಸ್ವರ್ಣಲತಾ
