ರಾಷ್ಟ್ರ ಪ್ರಶಸ್ತಿಯನ್ನು ಪಡೆದ, ನೇತ್ರದಾನದ ಅರಿವನ್ನು ಮೂಡಿಸುವ ಚಿತ್ರವೇ “ಅಕ್ಷಿ “. “ಅಕ್ಷಿ ” ಎಂದರೆ ನೇತ್ರ.ಕಣ್ಣಿನ ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಜವಾಬ್ದಾರಿಯು ನಮ್ಮೆಲ್ಲರದ್ದು. “ಅಕ್ಷಿ ” ಚಿತ್ರದ ಕುರಿತು ಎಚ್ ವಿ ಮೀನಾ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಚಲನಚಿತ್ರ : ಅಕ್ಷಿ (2021) (ಕಲಾದೇಗುಲ ಸ್ಟುಡಿಯೋ )
ಕಥೆ ಹಾಗೂ ನಿರ್ದೇಶನ : ಶ್ರೀ ಮನೋಜ್ ಕುಮಾರ್
ನಿರ್ಮಾಪಕರು : ಶ್ರೀ ಶ್ರೀನಿವಾಸ್. ವಿ, ಶ್ರೀ ಏನ್.ರಮೇಶ್, ಶ್ರೀ ರವಿ .ಹೆಚ್. ಎಸ್
ಛಾಯಾಗ್ರಾಹಕರು : ಶ್ರೀ ಮುಕುಲ್ ಗೌಡ
ಸಂಗೀತ : ಶ್ರೀ ಕಲಾದೇಗುಲ ಶ್ರೀನಿವಾಸ್
The institute of world culture, ಬಸವನಗುಡಿಯಲ್ಲಿ “ಅಕ್ಷಿ” ಚಿತ್ರದ ಪ್ರದರ್ಶನ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದವರು ನಟ ಹಾಗೂ ನಿರ್ದೇಶಕರಾದ ಶ್ರೀ ಓಂ ಸಾಯಿ ಪ್ರಕಾಶ್ ಹಾಗೂ ನಟ ನಿರ್ದೇಶಕರಾದ ಶ್ರೀ ಸುಚೇಂದ್ರ ಪ್ರಸಾದ್ ಅವರು.
ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ, ನಾಲಿಗೆ, ಮೂಗು ಮತ್ತು ಚರ್ಮವು ರೂಪ, ಶಬ್ಧ, ರಸ, ಗಂಧ, ಸ್ವರ್ಶದ ಅರಿವುಗಳು. ಬಾಹ್ಯ ಜಗತ್ತಿನಲ್ಲಿ ಅರಿವನ್ನು ಮಿದುಳಿಗೆ ತಲುಪಿಸುವ ಕಾರ್ಯವು ಈ ಜ್ಞಾನೇಂದ್ರಿಯಗಳದ್ದು. ಈ ಜ್ಞಾನೇಂದ್ರಿಯಗಳಲ್ಲಿ ಮುಖ್ಯವಾದದ್ದು ಕಣ್ಣುಗಳು. ಕಣ್ಣಿಗೆ ಬಿದ್ದ ದೃಶ್ಯ ಮಿದುಳಿಗೆ ತಲುಪಲು15 ಮಿಲಿ ಸೆಕೆಂಡ್ ಕಾಲ ಹಿಡಿಯುತ್ತದೆ ಎಂದು ತಿಳಿಸಲಾಗಿದೆ. ಕಣ್ಣಿನ ದೃಷ್ಟಿಯು “ನೋಟ”ವನ್ನು ಸೂಚಿಸುತ್ತದೆ. ಕಣ್ಣುಗಳ ನೋಟವು ಭಾವನೆಗಳನ್ನು ಹಾಗೂ ಪ್ರಕೃತಿಯ ವಿಸ್ಮಯಗಳನ್ನು ಗುರುತಿಸುತ್ತದೆ. ಒಂದು ವೇಳೆ ಈ ದೃಷ್ಟಿ ಎಂಬ “ನೋಟ”ವು ಜೀವವನ್ನು ಕಳೆದುಕೊಂಡರೆ!!!

“The face is a picture of the mind with the eyes as its interpreter” ಎಂದು ಹೇಳುವಂತೆ ಮುಖವು ಮನಸ್ಸಿನ ಭಾವನೆಗಳ ಕನ್ನಡಿ ಆಗಿದ್ದರೆ ನಮ್ಮ ಕಣ್ಣುಗಳು ನಮ್ಮ ಮನದಲ್ಲಿ ಬಚ್ಚಿಟ್ಟ ಭಾವನೆಗಳ ವ್ಯಾಖ್ಯಾನಕಾರನಾಗಿರುತ್ತದೆ. ಮನುಷ್ಯನಿಗೆ ಕಣ್ಣುಗಳ ದೃಷ್ಟಿಯು ಮಹತ್ವದ್ದು. ಅನೇಕರು ದೃಷ್ಟಿ ಇದ್ದರೂ ಬೆಳಕಲ್ಲಿ ಕತ್ತಲನ್ನು ಹುಡುಕುತ್ತಾರೆ. ಆದರೇ ದೃಷ್ಟಿ ಹೀನರು ಕಪ್ಪನೆಯ ಕತ್ತಲಲ್ಲೂ ಬೆಳಕನ್ನು ಕಾಣುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
“ಅಕ್ಷಿ ” ಎಂದರೆ ನೇತ್ರ. ಈ “ಅಕ್ಷಿ” ಚಿತ್ರದಲ್ಲಿ ಲಕ್ಷ್ಮಿ ಎಂಬ ಐದು ವರುಷದ ಹೆಣ್ಣು ಮಗುವು ಹುಟ್ಟಿನಿಂದಲೇ ತನ್ನ ದೃಷ್ಟಿಯನ್ನು ಕಳೆದುಕೊಂಡಿರುತ್ತದೆ. ಮಗುವಿನ ಪೋಷಕರಿಗೆ ಕಣ್ಣಿನ ಕಸಿಯ ಬಗ್ಗೆ ಯಾವುದೇ ಅರಿವು ಇರಲಿಲ್ಲವಾದ್ದರಿಂದ ತಮ್ಮ ಮಗಳನ್ನು ಸರಿಯಾದ ವೈದ್ಯರ ಬಳಿ ಕರೆದೊಯ್ದು, ದೃಷ್ಟಿಯ ತಪಾಸಣೆಯನ್ನು ಮಾಡಿಸದೆ ಸುಮ್ಮನಾಗಿಬಿಡುತ್ತಾರೆ. ಲಕ್ಷ್ಮಿಯ ಅಣ್ಣ ರಾಮು ತನ್ನ 5 ವರುಷದ ಪುಟ್ಟ ತಂಗಿಯನ್ನು ಅತೀ ಕಾಳಜಿಯಿಂದ ನೋಡಿಕೊಳ್ಳುತ್ತಿರುತ್ತಾನೆ. ವಯಸ್ಸಿನಲ್ಲಿ ತನ್ನ ತಂಗಿಗಿಂತ ಕೇವಲ ಒಂದೆರಡು ವರುಷ ದೊಡ್ಡವನಾದ ರಾಮು ತಂಗಿಯ ಬಾಳಿನಲ್ಲಿ ಬೆಳಕಾಗಿ, ಅವಳ ಬೇಕು ಬೇಡಗಳನ್ನು ಅರಿತು ಅವಳ ಪ್ರೀತಿಯ ಅಣ್ಣನಾಗಿರುತ್ತಾನೆ.
ಒಮ್ಮೆ ಲಕ್ಷ್ಮಿಯ ತಾಯಿ ಭಾಗ್ಯಮ್ಮಳ ಆರೋಗ್ಯದಲ್ಲಿ ಏರು ಪೇರಾದಾಗ ಲಕ್ಷ್ಮಿಯ ತಂದೆ ಗೋವಿಂದ ಭಾಗ್ಯಮ್ಮಳನ್ನು ಊರಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಆ ಸರಕಾರಿ ಆಸ್ಪತ್ರೆಗೆ ಕಾರ್ಯನಿರ್ವಹಿಸಲು ಬಂದಂತಹ ಹೊಸ ವೈದ್ಯರು ಭಾಗ್ಯಮ್ಮಳ ಮಗಳು ಲಕ್ಷ್ಮಿಯನ್ನು ನೋಡಿ, ಅವಳು ಹುಟ್ಟಿನಿಂದಲೇ ಅಂಧೆ ಎಂದು ಭಾಗ್ಯಮ್ಮಳಿಂದ ತಿಳಿದು, ಲಕ್ಷ್ಮಿಯ ಕಣ್ಣುಗಳನ್ನು ಪರೀಕ್ಷಿಸಿ, ಕಣ್ಣುಗಳ ಕಸಿ ಮಾಡಿದರೆ ದೃಷ್ಟಿ ಬರುವ ಸಾಧ್ಯತೆ ಇದೆ ಎಂದು ಅರಿತು ಅವಳನ್ನು ತನಗೆ ಪರಿಚಿತರಾದ ಕಣ್ಣಿನ ವೈದ್ಯರ ಬಳಿಗೆ ಕಳುಹಿಸುತ್ತಾರೆ. ಒಂದೆರಡು ದಿನಗಳ ನಂತರ ಲಕ್ಷ್ಮಿಯ ಕಣ್ಣಿನ ಪರೀಕ್ಷೆಯ ರಿಪೋರ್ಟ್ ಬರುತ್ತದೆ. ಆ ರಿಪೋರ್ಟ್ ಪ್ರಕಾರ ಲಕ್ಷ್ಮಿಗೆ ಕಣ್ಣಿನ ಕಸಿ ಮಾಡಿದರೆ ದೃಷ್ಟಿ ಬರುತ್ತದೆ ಎಂದು ತಿಳಿಯುತ್ತದೆ. ಆಗ ವೈದ್ಯರು, ಪೋಷಕರು ಹಾಗೂ ಲಕ್ಷ್ಮಿಯ ಅಣ್ಣ ರಾಮು ಬಹಳ ಸಂತೋಷವನ್ನು ಪಡುತ್ತಾರೆ. ತನ್ನ ತಂಗಿ ತನ್ನಂತೆ ಲೋಕದ ಬಣ್ಣಗಳನ್ನು ನೋಡಬಲ್ಲಳು ಎಂದು ಆನಂದದಿಂದ ಈ ವಿಷಯವನ್ನು ತನ್ನ ಸ್ನೇಹಿತರಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾನೆ. ಅಂದಿನಿಂದ ಅವನು ಪ್ರತೀ ದಿನ ಶಾಲೆಗೆ ಹೋಗುವ ಮುನ್ನ ವೈದ್ಯರ ಬಳಿಗೆ ಹೋಗಿ “ಡಾಕ್ಟರ್ ಕಣ್ಣುಗಳು ಬಂದಿವಿಯೇ! “ಎಂದು ಕುತೂಹಲದಿಂದ ಕಣ್ಣಿನ ಕಸಿಯ ಬಗ್ಗೆ ಹಾಗೂ ಕಣ್ಣಿನ ಸಮಸ್ಯೆಗಳ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳುತ್ತಾನೆ.

“ಪುಟ್ಟ ಬಾಲಕ ರಾಮು ತನ್ನ ತಂಗಿ ಲಕ್ಷಿಗೆ ಕಣ್ಣಿನ ಕಸಿ ಮಾಡಿಸಿ, ಲಕ್ಷ್ಮಿಗೆ ದೃಷ್ಟಿಯನ್ನು ಪಡೆಯುವಂತೆ ಮಾಡುವಲ್ಲಿ ಯಶಸ್ವಿಗೊಂಡನೇ!!! “ಅಕ್ಷಿ” ಚಿತ್ರವನ್ನು ನೋಡಲೇ ಬೇಕು.
ಅಂಧಳಾದ ಲಕ್ಷ್ಮಿಯ ಪಾತ್ರದಲ್ಲಿ ಕುಮಾರಿ ಸೌಮ್ಯ ಪ್ರಭು ಅವರ ನಟನೆ ಹಾಗೂ ರಾಮುವಿನ ಪಾತ್ರದಲ್ಲಿ ಮಾಸ್ಟರ್ ಮಿಥುನ್ ಅವರ ಮುಗ್ಧ ನಟನೆಯು ವೀಕ್ಷಕರ ಹೃದಯವನ್ನು ಗೆದ್ದು,ಇಬ್ಬರೂ ಬಾಲ ನಟರಾಗಿ ಯಶಸ್ವಿಯಾಗಿದ್ದಾರೆ. ಮಾಸ್ಟರ್ ಮಿಥುನ್ ರವರ ಅದ್ಭುತ ನಟನೆಯು ಅವರ ಮುಂದಿನ ದಿನಗಳಲ್ಲಿ ಓರ್ವ ಶ್ರೇಷ್ಠ
ನಟ ಎಂದು ಹೆಸರುಗಳಿಸಲು ಯಾವುದೇ ಸಂಶಯವಿಲ್ಲ. ತಾಯಿಯ ಪಾತ್ರದಲ್ಲಿ ಇಳಾ ವಿಟ್ಲಾ ಹಾಗೂ ತಂದೆಯಾಗಿ ಗೋವಿಂದ ಗೌಡ ಅವರು ಕೂಡ ಉತ್ತಮ ನಟನೆಯಿಂದ ಪಾತ್ರಕ್ಕೆ ಜೀವವನ್ನು ತುಂಬಿದ್ದಾರೆ.
ಇಂತಹ ಉತ್ತಮ ಸಂದೇಶಗಳುಳ್ಳ ಚಿತ್ರಗಳು ಪ್ರಶಸ್ತಿಗಳನ್ನು ಪಡೆದರೆ ಸಾಲದು. ಜನಸಾಮಾನ್ಯರಿಗೆ ತಲುಪಬೇಕು. ಕೇವಲ ಮನೋರಂಜನೆಯುಳ್ಳ ಕಮರ್ಷಿಯಲ್ ಸಿನಿಮಾಗಳನ್ನು ಮಾತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆ ಗೊಳಿಸುತ್ತಾರೆ. 2021 ರಲ್ಲಿ ಬಿಡುಗಡೆ ಗೊಂಡು, ರಾಷ್ಟ್ರ ಪ್ರಶಸ್ತಿಯನ್ನು ಪಡೆದ, ನೇತ್ರದಾನದ ಅರಿವನ್ನು ಮೂಡಿಸುವ ಈ “ಅಕ್ಷಿ “ಚಿತ್ರದ ಬಗ್ಗೆ ಯಾರಿಗೂ ಗೊತ್ತೇ ಇಲ್ಲ… ಇದಕ್ಕೆ ಕಾರಣ ಈ ಚಿತ್ರಕ್ಕೆ ಸರಿಯಾದ ಪಬ್ಲಿಸಿಟಿ ಸಿಗುತ್ತಿಲ್ಲ. ವಿಪರ್ಯಾಸವೇನೆಂದರೆ ಈ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶನ ಮಾಡಲು ಸರಕಾರದಿಂದ ಅನುಮತಿಯನ್ನು ಪಡೆದಿದ್ದರೂ ಕೂಡ ಯಾವುದೇ ಶಾಲೆಗಳಲ್ಲಿ ಪ್ರದರ್ಶನಗೊಳ್ಳುತ್ತಿಲ್ಲ. ಇಂತಹ ಪರಿಸ್ಥಿತಿಗೆ ಜವಬ್ದಾರರು ನಾವು.

ವೈದ್ಯರು ಹೇಳುವಂತೆ ಭ್ರೂಣದಲ್ಲಿ ಇರುವಾಗಲೇ ಮಗುವಿನ ಕಣ್ಣಿನ ದೃಷ್ಟಿಯು ಬೆಳೆಯಲು ಆರಂಭವಾಗುತ್ತದೆ. ಆದರೇ ದೃಷ್ಟಿಯು ಸಂಪೂರ್ಣವಾಗಿ ಬೆಳೆಯಲು ಎರಡು ವರುಷಗಳು ಬೇಕಾಗುವುದು. ಹಾಗಾಗಿ ಕಣ್ಣಿನ ರಕ್ಷಣೆಯ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು. ಈ ನಿಟ್ಟಿನಲ್ಲಿ ಕಣ್ಣಿನ ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಜವಾಬ್ದಾರಿಯು ನಮ್ಮೆಲ್ಲರದ್ದು.
ಭಗವದ್ಗೀತೆಯಲ್ಲಿ ತಿಳಿಸಿರುವಂತೆ ಹಳೇ ಬಟ್ಟೆಯನ್ನು ತೊರೆದು ಹೊಸ ಬಟ್ಟೆಯನ್ನು ತೊಡುವಂತೆ ನಮ್ಮ ಆತ್ಮವು ಕೂಡ ಹೊಸ ದೇಹಗಳ ಭಾಗಗಳನ್ನು ಸ್ವೀಕರಿಸುತ್ತದೆ. ಹಾಗಾಗಿ ನಾವು ಸತ್ತ ನಂತರ 6 ತಾಸುಗಳ ಒಳಗೆ ನೇತ್ರದಾನವನ್ನು ಮಾಡಿದರೆ ಅನೇಕ ಅಂಧರ ಬಾಳಿಗೆ ಬೆಳಕಾಗುತ್ತೇವೆ. ಇಂತಹ ಜವಾಬ್ದಾರಿಯನ್ನು ನಿರ್ದೇಶಕರಾದ ಶ್ರೀ ಮನೋಜ್ ಕುಮಾರ್ ಅವರು ತಮ್ಮ ಚೊಚ್ಚಲ “ಅಕ್ಷಿ” ಕನ್ನಡ ಚಲನಚಿತ್ರದಲ್ಲಿ “ನೇತ್ರ ದಾನ”ದ ಬಗ್ಗೆ ಎಲ್ಲರ ಕಣ್ಣನ್ನು ತೆರೆಸಿದ್ದಾರೆ. ಶ್ರೀ ಮನೋಜ್ ಕುಮಾರ್ ಮತ್ತು ಅಕ್ಷಿ ಚಿತ್ರ ತಂಡದವರಿಗೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಾ ಇಂತಹ ಉತ್ತಮ ಸಂದೇಶಗಳುಳ್ಳ ಚಿತ್ರಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿ ಎಂದು ಆಶಿಸುತ್ತೇನೆ.
ಸ್ನೇಹಿತರೆ ನಿಮ್ಮೆಲ್ಲರಲ್ಲಿ ನನ್ನ ವಿನಂತಿ ದಯವಿಟ್ಟು “ಅಕ್ಷಿ” ಚಲನಚಿತ್ರವನ್ನು ನಿಮ್ಮ ಬಡಾವಣೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಸಂಗೀತ ಸಂಸ್ಥೆಗಳಲ್ಲಿ, ಲಯನ್ಸ್ , ರೋಟರಿ ಸಂಸ್ಥೆಗಳು ಹಾಗೂ ಇತರೆ ಸಾಹಿತ್ಯ ಸಂಘ ಸಂಸ್ಥೆಗಳಲ್ಲಿ ಪ್ರದರ್ಶನಗೊಳಿಸಲು ಚಿತ್ರ ತಂಡದವರೊಂದಿಗೆ ನೀವೆಲ್ಲರೂ ಕೈ ಜೋಡಿಸಿ ನೇತ್ರದಾನದ ಬಗ್ಗೆ ಸಮಾಜದಲ್ಲಿ ಅರಿವನ್ನು ಮೂಡಿಸಿ. ನೀವು ಕೂಡ ನೇತ್ರದಾನವನ್ನು ಮಾಡಲು ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಅಂಧರ ಬಾಳಿಗೆ ಬೆಳಕಾಗಿ.
- ಎಚ್ ವಿ ಮೀನಾ
