ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ‘ಆಲ್ಬರ್ಟ್ ಕಮೂ ನ ಪ್ಲೇಗ್’ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರ ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಆಲ್ಬರ್ಟ್ ಕಮೂ ನ ಪ್ಲೇಗ್
ಮೂಲ ಲೇಖಕರು : ಆಲ್ಬರ್ಟ್ ಕಮೂ
ಕನ್ನಡಕ್ಕೆ :ಎಸ್. ರಾಘವೇಂದ್ರರಾವ್
ನಾಲ್ಕು ದಶಕಗಳ ಹಿಂದೆ ನಾನು ಎಂ.ಎ.ವಿದ್ಯಾರ್ಥಿಯಾಗಿದ್ದಾಗ , ಪಾಶ್ಚಾತ್ಯ ಸಾಹಿತ್ಯ ಐಚ್ಛಿಕವಾಗಿತ್ತು. ಆಗ ಓದಿದ ಅನೇಕ ಶ್ರೇಷ್ಠ ಕೃತಿಗಳಲ್ಲಿ ಆಲ್ಬರ್ಟ್ ಕಮೂ ನ ಪ್ಲೇಗ್ ಉಂಟು ಮಾಡಿದ ಭಯ ತಲ್ಲಣಗಳು ಇಂದಿಗೂ ಹಸಿಯಾಗಿಯೆ ಇವೆ. ಕಳೆದ ವರ್ಷ ಎಚ್. ಎಸ್ ಆರ್ ಅದನ್ನು ಕನ್ನಡಕ್ಕೆ ಅನನ್ಯವಾಗಿ ತಂದು ಹಸ್ತಪ್ರತಿ ಯಲ್ಲೆ ಅದನ್ನು ಓದುವ ಭಾಗ್ಯವನ್ನು ನಮಗೆ ಒದಗಿಸಿಕೊಟ್ಟರು.
ಕೆಲವು ಸಲಹೆಗಳನ್ನು ನಾವು ನೀಡಿದ ನೆನಪು. ಅವುಗಳ ಪೈಕಿ ಅವರಿಗೆ ಸರಿಯೆನಿಸಿದವನ್ನು ಅಳವಡಿಸಿ ಈಗ ಮುದ್ರಿತ ರೂಪದಲ್ಲಿ ಅದನ್ನು ಹೊರತಂದು ನಮಗೆ ಕಳಿಸಿ ಮತ್ತೊಂದು ಸಲ ಓದುವ ಅವಕಾಶವನ್ನು ನಮಗೆ ಒದಗಿಸಿದ್ದಾರೆ. ಅದನ್ನು ಓದುತ್ತಿದ್ದಂತೆ ಇಂದಿನ ಸಂನಿವೇಶಕ್ಕೆ ಹಿಡಿದ ಗತಿಬಿಂಬ ಈ ಕೃತಿ ಅನಿಸಿ ಇದರ ಕೆಲವು ಭಾಗಗಳನ್ನು ಇಲ್ಲಿ ಹಂಚಿಕೊಳ್ಳಬೇಕೆಂದು ಅವರ ಅನುಮತಿಯನ್ನು ಕೋರಿದಾಗ ” ನನ್ನ ಅಭ್ಯಂತರವೇನೂ ಇಲ್ಲ” ಎಂದು ಬರೆದಿದ್ದಾರೆ. ಅವರ ಈ ಸೌಜನ್ಯಕ್ಕೆ ಬರಿಯ ಕೃತಜ್ಞತೆ ಹೇಳಿದರೆ ಸಾಕೆ? ನಮ್ಮ ಸಂವೇದನಾ ಶೀಲ ಕವಿ, ಅನುವಾದಕಿ ನಾಲ್ಕು ದಶಕಗಳ ಸಹಪಾಠಿ ಸಿ.ಎಚ್ ಭಾಗ್ಯ: “ಮತ್ತೆ ಮತ್ತೆ ಪ್ಲೇಗ್ ನೆನಪಾಗುತ್ತದೆ. ಕವಿಯನ್ನು ಇದಕ್ಕೇ ದ್ರಷ್ಟಾರ ಎಂದಿರಬೇಕು” ಎಂದು ಅದರ ಮಹತ್ವವನ್ನು ಸರಿಯಾಗಿ ನಿರ್ದೇಶಿಸಿದ್ದಾರೆ :

ಭಾಗ ೧: ವಾಸ್ತವವಾಗಿ ಪ್ಲೇಗಿನಂತಹ ಪಿಡುಗು ಅಪರೂಪವೇನಲ್ಲ .ಅದು ಬಹಳ ಸಾಮಾನ್ಯ. ಆದರೆ ಅಂತಹ ಪಿಡುಗು ಅನಿರೀಕ್ಷಿತವಾಗಿ ಬಂದು ಎರಗಿದಾಗ ಅದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ಈ ಜಗತ್ತಿನಲ್ಲಿ ಎಷ್ಟು ಬಾರಿ ಯುದ್ಧಗಳು ನಡೆದಿವೆಯೋ ಅಷ್ಟೇ ಬಾರಿ ” ಪ್ಲೇಗು” ಗಳೂ ಬಂದಿವೆ. ಆದರೂ ಯುದ್ಧ ಮತ್ತು ಪ್ಲೇಗು ಬಂದಾಗ ನಾವು ಸನ್ನದ್ದರಾಗಿರುವುದಿಲ್ಲ.

ಅವು ಆಗಮಿಸಿದಾಗ ಆಶ್ಚರ್ಯ ಚಕಿತರಾಗುತ್ತೇವೆ. ಡಾ.ರಿಯು ಅದನ್ನು ಎದುರಿಸಲು ಸಿದ್ದವಾಗಿರಲಿಲ್ಲ.ಊರಿನ ಜನತೆಯು ಹಾಗೆಯೇ. ಅವರ ಅನುಮಾನ ಮತ್ತು ಅನಿಶ್ಚಯಗಳನ್ನು ಈ ಹಿನ್ನೆಲೆಯಲ್ಲಿಯೇ ನೋಡಬೇಕು. ಅವರ ಮನಸ್ಸು ಆತ್ಮವಿಶ್ವಾಸ ಮತ್ತು ಆತಂಕಗಳ ನಡುವೆ ಹಂಚಿಹೋಗಿತ್ತೆನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಯುದ್ಧ ಪ್ರಾರಂಭವಾದಾಗ ಜನ ” ಇದು ಎಂಥಾ ಮೂರ್ಖತನ ಈ ಯುದ್ಧ ಬಹಳ ದಿನ ನಡೆಯುವುದಿಲ್ಲ ” ಎನ್ನುತ್ತಾರೆ.ಹೌದು, ಯುದ್ಧ ನಿಜವಾಗಿಯೂ ” ಮೂರ್ಖತನವೆ” .ಆದರೆ, ಅ ಸತ್ಯವು ಯುದ್ಧವು ಬಹಳ ಕಾಲ ಮುಂದುವರೆಯಲು ಅಡ್ಡಿಯಾಗುವುದಿಲ್ಲ.ಈ ಜಗತ್ತಿನಲ್ಲಿ ಮೂರ್ಖತನವು ಬಹಳ ಕಾಲ ಮುಂದುವರೆಯುತ್ತದೆ. ಸ್ವಂತದ ಜಂಜಡಗಳಲ್ಲಿ ಮುಳುಗಿ ಹೋಗದಿದ್ದರೆ ಈ ಸಂಗತಿ ನಮಗೂ ಗೊತ್ತಾಗುತ್ತದೆ. ಈ ವಿಷಯದಲ್ಲಿ ಓರಾನ್ ಪಟ್ಟಣದ ನಾಗರಿಕರು ಲೋಕದ ಇತರ ಜನರಂತೆಯೆ ಇದ್ದರು. ಅವರು ತಮ್ಮ ಬಗ್ಗೆ ಮಾತ್ರ ಆಲೋಚನೆ ಮಾಡುತ್ತಿದ್ದರು. ಬೇರೆ ಮಾತುಗಳಲ್ಲಿ ಹೇಳುವುದಾದರೆ ಅವರು ಮನುಷ್ಯಾಸಕ್ತರಾಗಿದ್ದರು. ಎಂದರೆ ಅವರು ಪಿಡುಗುಗಳನ್ನು ನಂಬುತ್ತಿರಲಿಲ್ಲ. ಯಾವುದೇ ಪಿಡುಗು ಮನುಷ್ಯರ ಕಲ್ಪನೆಗೆ ನಿಲುಕುವ ಇಂದ್ರಿಯ ಗ್ರಾಹ್ಯ ಪ್ರಮಾಣದಲ್ಲಿ ಇರುವುದಿಲ್ಲ. ಆದುದರಿಂದ ಜನ ” ಇದು ನಿಜವಲ್ಲ, ಇದು ಸಾಧ್ಯವಿಲ್ಲ ” ಎಂದು ತಮಗೆ ತಾವೇ ಹೇಳಿಕೊಳ್ಳುತ್ತಾರೆ. ಅದು ಬಹಳ ಬೇಗ ಮುಗಿದು ಹೋಗುವ ಕೆಟ್ಟ ಕನಸು ಎಂದುಕೊಳ್ಳುತ್ತಾರೆ.ಆದರೆ, ಪಿಡುಗು ಹಾಗೆ ಕೊನೆಗಾಣುವುದಿಲ್ಲ. ಒಂದು ಕೆಟ್ಟ ಕನಸಿನಿಂದ ಇನ್ನೊಂದು ಕೆಟ್ಟ ಕನಸಿಗೆ ಮಾಡುವ ಪಯಣದಲ್ಲಿ ಪಿಡುಗು ಸಾಯುವುದಿಲ್ಲ.

ಸತ್ತುಹೋಗುವವರು ಮನುಷ್ಯರು ಮಾತ್ರವೇ. ಅದರಲ್ಲೂ ಎಲ್ಲರಿಗಿಂತ ಮೊದಲು ಮನುಷ್ಯ ಕೇಂದ್ರಿತವಾಗಿ ಯೋಚನೆ ಮಾಡುವವರು ಸಾಯುತ್ತಾರೆ. ಯಾಕೆಂದರೆ ಅವರು ಸೂಕ್ತವಾಗಿ ಮುನ್ನೆಚ್ಚರಿಕೆ ವಹಿಸುವುದಿಲ್ಲ.
( ಪ್ಲೇಗ್. ಪು ೪೩.ಎಚ್.ಎಸ್ ಆರ್).
ಕೈಗನ್ನಡಿಗೆ ವ್ಯಾಖ್ಯಾನವೇಕೆ?
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು, ಬೆಂಗಳೂರು
