‘ದೇಶ ಸುತ್ತು ಕೋಶ ಓದು’ ಎನ್ನುವ ನುಡಿಯಂತೆ ಜ್ಞಾನಾರ್ಜನೆಗೆ ಎರಡೂ ಮುಖ್ಯವಾದರೂ.. ಹಲವು ಕಾರಣಗಳಿಂದ ದೇಶ ಸುತ್ತದೇ ಉಳಿದವರಿಗೆ ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರ ‘ಅಲೆದಾಟದ ಅಂತರಂಗ’ ಚೆಂದದ ಪ್ರವಾಸ ಕಥನಗಳು ವಿಶಿಷ್ಟ ಅನುಭವ ನೀಡುತ್ತವೆ. ಈ ಕೃತಿಯ ಬಗ್ಗೆ ಲೇಖಕಿ ವಿಭಾ ವಿಶ್ವನಾಥ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಅಲೆದಾಟದ ಅಂತರಂಗ
ಲೇಖಕರು : ನವೀನಕೃಷ್ಣ ಎಸ್. ಉಪ್ಪಿನಂಗಡಿ
ಪ್ರಕಾಶನ : ಸ್ನೇಹ ಬುಕ್ ಹೌಸ್
ಬೆಲೆ : ೨೦೦.೦೦
ಪುಸ್ತಕಕ್ಕಾಗಿ ಸಂಪರ್ಕಿಸಿ
• 9845031335 (ಸ್ನೇಹ ಬುಕ್ ಹೌಸ್)
• 8762118946 (ನವೀನಕೃಷ್ಣ ಎಸ್. ಉಪ್ಪಿನಂಗಡಿ)
‘ದೇಶ ಸುತ್ತು ಕೋಶ ಓದು’ ಎನ್ನುವ ನುಡಿಯಂತೆ ಜ್ಞಾನಾರ್ಜನೆಗೆ ಎರಡೂ ಮುಖ್ಯವಾದರೂ.. ಹಲವು ಕಾರಣಗಳಿಂದ ದೇಶ ಸುತ್ತದೇ ಉಳಿದವರಿಗೆ ಇಂತಹಾ ಚೆಂದದ ಪ್ರವಾಸ ಕಥನಗಳು ವಿಶಿಷ್ಟ ಅನುಭವ ನೀಡುತ್ತವೆ. ‘ಅಲೆದಾಟದ ಅಂತರಂಗ’ ಪ್ರವಾಸಕಥನವಂತೂ ಕೇವಲ ಪ್ರವಾಸದ ಅನುಭವ ಮಾತ್ರವಲ್ಲದೇ.. ಸ್ಥಳದ ಭೌಗೋಳಿಕ, ಐತಿಹಾಸಿಕ ಹಾಗೂ ಪೌರಾಣಿಕ ಮಾಹಿತಿಯನ್ನೂ ಜೊತೆಜೊತೆಗೆ ನೀಡುತ್ತಾ.. ನಾವೇ ಅಲ್ಲಿಯ ನೋಟವನ್ನು ನೋಡುವಂತೆ ಮಾಡಿದೆ. ಪ್ರವಾಸದ ನೋಟಗಳು, ಹವಾಮಾನ, ವಾತಾವರಣ ಅಷ್ಟೇ ಅಲ್ಲದೆ, ಅಲ್ಲಿನ ಊಟ-ತಿಂಡಿ, ಬೆಳೆಗಳು, ಕಾಡಿನ ಹಾದಿಯಾದರೆ ಅಲ್ಲಿನ ಪ್ರಯಾಣದ ಅನುಭವ, ಜಲಪಾತಗಳಾದರೆ ಅಲ್ಲಿಗೆ ಹೋಗಲು ಬೇಕಾದಂತಹಾ ಗೈಡೆನ್ಸ್, ಹಾಗೆಯೇ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳು, ಮಕ್ಕಳು,ಹಿರಿಯರು, ವಯಸ್ಕರ ಹೀಗೆ ಪ್ರತಿಯೊಬ್ಬರ ಅನುಭವಗಳು ಇಲ್ಲಿ ಸ್ಪಷ್ಟವಾಗಿ ನಮೂದಾಗಿದೆ. ಅಷ್ಟೇ ಅಲ್ಲದೆ.. ಅವರ ಕ್ಯಾಮರಾ ಕಣ್ಣಿನಲ್ಲಿ ಕಂಡ ಹಲವಾರು ಛಾಯಾಚಿತ್ರಗಳು ಮನಸೆಳೆಯುತ್ತವೆ. ಕ್ಯಾಮೆರಾ ಕಣ್ಣಿಗೆ ಕಾಣದ ನೋಟವನ್ನು ಸಹಾ ನವೀನ್ ಅವರ ಚಂದದ ನಿರೂಪಣೆ ಕಣ್ಮುಂದೆ ತರುತ್ತದೆ.
ನಮ್ಮ ರಾಜ್ಯದ ಪ್ರವಾಸ ಕೈಗೊಂಡಾಗಲೇ ಇಷ್ಟಿಷ್ಟು ದೂರಕ್ಕೆ ಊಟ-ತಿಂಡಿ, ಆಡುವ ಭಾಷೆ, ಪರಿಸರ ಎಲ್ಲವೂ ವಿಭಿನ್ನ. ಆದರೆ, ಇದು ಮತ್ತೊಂದು ರಾಜ್ಯ. ಕೇರಳದಲ್ಲಿನ ಪ್ರವಾಸದಲ್ಲಿ ಅಲ್ಲಿನ ಮಲಯಾಳಂ ಹೆಸರುಗಳು ತೀರಾ ಕ್ಲಿಷ್ಟವೆನಿಸದಂತೆ, ದೇವರ ನಾಡಿನ ಪಯಣವನ್ನು ಕಟ್ಟಿಕೊಟ್ಟಿದ್ದಾರೆ.

ಚಿಕ್ಕಪ್ಪನ ಮನೆಯವರು ಹಾಗೂ ಉತ್ತರ ಭಾರತದ ಭರತ್ ರಾಥೋಡ್ ಕುಟುಂಬದವರ ಜೊತೆಗೆ ಕೇರಳದಲ್ಲಿ ಪ್ರವಾಸ ಹೋಗಲು ಉತ್ಸಾಹದಿಂದ ಹೊರಡುವ ಲೇಖಕರು ಮೊದಲಿಗೆ ರೈಲಿನ ಪ್ರಯಾಣದಲ್ಲಿ ನಮ್ಮನ್ನು ಕೇರಳದ ಸಮೃದ್ಧ ಜಿಲ್ಲೆ ಪಾಲಕ್ಕಾಡಿಗೆ ಕರೆದೊಯ್ಯುತ್ತಾರೆ. ಪಾಲಕ್ಕಾಡ್ ಜಿಲ್ಲೆಯ ಪ್ರಾಕೃತಿಕ ಸೌಂದರ್ಯ, ಧಾರ್ಮಿಕ ಆಚರಣೆ ಹಾಗೂ ಸಂಪ್ರದಾಯದ ಹಿನ್ನೆಲೆಯೊಂದಿಗೆ ಅಲ್ಲಿನ ಮಲಂಪುಳ ಅಣೆಕಟ್ಟನ್ನು ಕಾಣಬಹುದು. ನಮ್ಮ ಪೀಳಿಗೆಯವರು ಸಿನಿಮಾಗಳಲ್ಲಿ ಕಾಣುವಂತಹಾ ದೃಶ್ಯಗಳನ್ನು ಅವರು ಅನುಭವಿಸಿರುವ ಹಾಗೂ ನಮಗೂ ತೋರಿರುವ ಪರಿ ಈ ಪ್ರವಾಸ ಕಥನವನ್ನು ಮತ್ತಷ್ಟು ಸೊಗಸಾಗಿಸಿದೆ.
ಕೇರಳದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾದ ಹಾಗೂ ಕೇರಳದ ಎರಡನೇ ಅತಿ ದೊಡ್ಡ ನದಿ ಭಾರತಪ್ಪುಳಕ್ಕೆ ಉಪನದಿಯಾದ ಮಲಂಪುಳ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟಿನ ಜೊತೆಗೆ ಕೇರಳದ ವೃಂದಾವನವನ್ನು ತೋರುತ್ತಾರೆ. ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಆರಂಭವಾದ ಪ್ಯಾಸೆಂಜರ್ ರೋಪ್-ವೇಯ ನೋಟವನ್ನು ಕಟ್ಟಿಕೊಟ್ಟಿದ್ದಾರೆ. ಅಲ್ಲಿನ ಸುಂದರ ವ್ಯೂವ್ ಪಾಯಿಂಟ್ ಇನ್ನೂ ಸೊಗಸು.
ಕೇರಳದಲ್ಲಿ ಪಾಲಕ್ಕಾಡಿನಿಂದ ಆರಂಭವಾಗುವ ಪ್ರವಾಸ ಚಿಕ್ಕಪ್ಪ-ಚಿಕ್ಕಮ್ಮ ಹಾಗೂ ಅಣ್ಣನೊಂದಿಗೆ ರಾಥೋಡ್ ಅಂಕಲ್, ಆಂಟಿ ಹಾಗೂ ಅವರ ಇಬ್ಬರು ಮಕ್ಕಳು ಪ್ರೇರಿತ ಹಾಗೂ ಭವ್ಯರೊಂದಿಗೆ ತ್ರಿಶ್ಶೂರಿಗೆ ಸಾಗುತ್ತದೆ. ಪ್ರವಾಸದಲ್ಲಿ ಶಿವನ್ ಚೇಟನ್ ಅವರ ಡ್ರೈವಿಂಗ್ ನ ಅನುಭವ ಕೇಳಿದಾಗ ನಮಗೂ ಇಂತಹ ತಾಳ್ಮೆಯ ಡ್ರೈವರ್ ಸಿಕ್ಕರೆ ಪ್ರವಾಸ ಎಷ್ಟು ಸೊಗಸಾಗಿರುತ್ತದೆ ಅಲ್ಲವಾ ಎನಿಸುವಂತೆ ಮಾಡುತ್ತದೆ.
ಕಾಟುಶ್ಶೇರಿಯ ತ್ರಿಕ್ಕಣ್ಣದೇವನ್ ದೇವಸ್ಥಾನ ಹಾಗೂ ತ್ರಿಶೂರಿನ ವಡಕ್ಕುಂನಾಥನ್ ಕ್ಷೇತ್ರ ದರ್ಶನವನ್ನು ಮಾಡಿಸುತ್ತಲೇ ದೇವಾಲಯದ ಇತಿಹಾಸವನ್ನು ಬಿಚ್ಚಿಡುತ್ತಾ.. ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶ್ಶೂರಿನ ಇತಿಹಾಸವನ್ನು ತೆರೆದಿಡುತ್ತಾರೆ. ಅಲ್ಲಿನ ರಾಜವಂಶ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಮಾಹಿತಿಗಳ ಜೊತೆಗೆ ಕಲೆಯ ಕುರಿತ ಅಡಿಷನಲ್ ಮಾಹಿತಿಗಳನ್ನು ನೀಡುತ್ತಾರೆ. ದೇವರ ನಾಡಿನಲ್ಲಿ ಅತ್ಯಂತ ಅದ್ದೂರಿಯಾಗಿ ಆಚರಿಸುವ ದೊಡ್ಡ ಹಬ್ಬ ತ್ರಿಶೂರ್ ಪೂರಂ ಕುರಿತು ಓದಿಯೇ ಅರಿಯಬೇಕು.
ಭಾರತದ ನಯಾಗರ ಎಂದೇ ಖ್ಯಾತಿಯಾಗಿರುವ ಆದಿರಪ್ಪಳ್ಳಿ ಜಲಪಾತದ ಕುರಿತು ಹೇಳುವಾಗ ಡಾ|| ಬಿ.ಜಿ.ಎಲ್ ಸ್ವಾಮಿ ಅವರ ‘ಹಸಿರು ಹೊನ್ನು’ ಕೃತಿಯನ್ನು ನೆನಪಿಸಿಕೊಳ್ಳುತ್ತಲೇ ಜಲಪಾತದ ರುದ್ರರಮಣೀಯ ದೃಶ್ಯವನ್ನು ಕಟ್ಟಿಕೊಡುತ್ತಾರೆ. ಇದನ್ನು ಭಾರತದ ನಯಾಗರ ಎಂದು ಏಕೆ ಕರೆಯುತ್ತಾರೆ ಇಂದು ಓದಿಯೇ ತಿಳಿಯಿರಿ. ಬಾಹುಬಲಿ ಸಿನಿಮಾದಲ್ಲಿ ಕಾಣಿಸಿಕೊಂಡ ಈ ಜಲಪಾತದ ಜನಪ್ರಿಯತೆ ಹಾಗೂ ಹಿಂದೆಯೂ ಇದು ಕಾಣಿಸಿಕೊಂಡ ಹಲವಾರು ಸಿನಿಮಾಗಳ ಕುರಿತು ಪ್ರಸ್ತಾಪಿಸಿದ್ದಾರೆ. ಈ ಜಲಪಾತಕ್ಕೆ ಭೇಟಿ ನೀಡಲು ಯೋಗ್ಯ ಸಮಯ ಯಾವುದು ಎಂಬುದನ್ನು ಹೇಳುತ್ತಾ.. ನಮಗೂ ಮಾರ್ಗದರ್ಶನ ನೀಡುತ್ತಾರೆ. ಇಲ್ಲಿಂದ ಮುಂದೆ ಚಾರ್ಪಾ ಜಲಪಾತ, ಹಾಗೂ ವಳಾಚಲ್ ಜಲಪಾತದ ಕುರಿತು ಹೇಳಿದ್ದಾರೆ.
ಕೇರಳದ ನಂಬರ್ ಒನ್ ಸ್ನೋ ಪಾರ್ಕ್ ‘ಸ್ನೋ ಸ್ಟಾರ್’ ಅನ್ನು ಹೊಕ್ಕು ಅಲ್ಲಿ ಕಂಡುಕೊಂಡ ಅನುಭವವೇ ವಿಭಿನ್ನ. ಕೇರಳದ ಮೊದಲ ಒಳಾಂಗಣ ಸ್ನೋ ಪಾರ್ಕ್ ನ ರೋಮಾಂಚಕಾರಿ ಅನುಭವಗಳನ್ನು ಹೇಳುತ್ತಾರೆ.

ಇಲ್ಲಿಂದ ಮುಂದೆ ನಮಗೆ ಕಾಣುವುದು ತೆಂಗಿನ ರಾಜಧಾನಿ ಎಂದೇ ಖ್ಯಾತಿಯಾದ ಪೊಳ್ಳಾಚಿ. ಪೊಳ್ಳಚಿ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪಟ್ಟಣ. ಇವರು ಪ್ರವಾಸದಲ್ಲಿ ಪಾಲಕ್ಕಾಡಿನಿಂದ ಮುನ್ನಾರ್ ವರೆಗಿನ ಪಯಣದಲ್ಲಿ ಸಿಗುವ ಈ ಜಾಗದ ಪ್ರಾಧಾನ್ಯತೆಯಾಗಿರುವ ಕೃಷಿಯ ಕುರಿತು ನೋಟವನ್ನು ಕಟ್ಟಿಕೊಡುತ್ತಾರೆ. ಶಿವನ್ ಚೇಟನ್ ನೀಡುವ ಮಾಹಿತಿಯ ಜೊತೆಗೆ ಅಣ್ಣಾಮಲೈ ಹುಲಿ ಸಂರಕ್ಷಿತ ಅರಣ್ಯದ ದೃಶ್ಯವನ್ನು ಕಾಣುತ್ತಿದ್ದಂತೆಯೇ.. ಮುಂದೆ ಚಿನ್ನಾರ್ ವನ್ಯಜೀವಿ ಅಭಯಾರಣ್ಯವನ್ನು ತೋರುತ್ತಾರೆ. ನಕ್ಷತ್ರ ಆಮೆಗಳಿಗೆ ಪುನರ್ವಸತಿ ಕೇಂದ್ರ ಒದಗಿಸಿರುವ ಭಾರತದ ಏಕೈಕ ಅಭಯಾರಣ್ಯವಿದು.
ಇಲ್ಲಿಂದ ಮುಂದಿನ ನೋಟವನ್ನು ಮುನ್ನಾರ್ ಹಾಗೂ ಕಾರ್ಮೆಲಗಿರಿ ಬೊಟಾನಿಕಲ್ ಉದ್ಯಾನವನದಲ್ಲಿ ಕಾಣುತ್ತೇವೆ. ಇದು ಉದ್ಯಾನ ಮಾತ್ರವಲ್ಲದೆ, ಟ್ರಕ್ಕಿಂಗ್ ಹಾಗೂ ಜಾಗಿಂಗ್ ಗೂ ಜನಪ್ರಿಯವಾಗಿದೆ. ಮಟ್ಟುಪೆಟ್ಟಿ ಟೀ ಫ್ಯಾಕ್ಟರಿ ಹಾಗೂ ಅಲ್ಲಿನ ಹಾದಿಯ ರಮ್ಯತೆಯನ್ನು ಕಾಣಬಹುದು. ಮಟ್ಟುಪೆಟ್ಟಿ ಅಣೆಕಟ್ಟು, ಕಾರ್ಮೆಲಗಿರಿ ಆನೆ ಉದ್ಯಾನವನದ ಮೂಲಕ ಸಾಗುತ್ತೇವೆ.
ಸುತ್ತಲೂ ಹಿನ್ನೀರಿನಿಂದ ಆವೃತವಾದ ಅಲೆಪ್ಪಿ ಅಥವಾ ಆಲಪ್ಪುಳ ಕೇರಳದ ಅತಿ ಸಣ್ಣ ಜಿಲ್ಲೆ. ‘ಪೂರ್ವದ ವೆನಿಸ್’ ಎಂದು ಕರೆಯಲಾಗುವ ಈ ಆಲಪ್ಪುಳದ ನೋಟ ರಮಣೀಯ. ಕೇರಳದ ಅನ್ನದ ಬಟ್ಟಲು ಎಂದು ಕರೆಸಿಕೊಳ್ಳುವ ಇಲ್ಲಿ ಶ್ರೀ ಕೃಷ್ಣ ಸ್ವಾಮಿ ದೇವಸ್ಥಾನದ ಜೊತೆಗೆ ಅಲ್ಲಿನ ದಂತಕಥೆ ಹಾಗೂ ಕೃಷ್ಣನ ವಿಗ್ರಹದ ಕುರಿತು ಹೇಳುತ್ತಾರೆ. ಹೌಸ್ ಬೋಟ್ ಎಂಬುವ ಅದ್ಭುತ ಅನುಭವ ಹಾಗೂ ಛಾಯಾಚಿತ್ರಗಳು ನಮ್ಮನ್ನು ಅಲ್ಲಿಗೆ ಹೋಗುವಂತೆ ಮತ್ತಷ್ಟು ಪ್ರೇರೇಪಿಸುತ್ತವೆ. ಹೌಸ್ ಬೋಟ್ ನಿಂದ ಕಂಡ ನೋಟಗಳಂತೂ ಓದಿಯೇ ಸವಿಯಬೇಕು.
ಈ ಪ್ರವಾಸದ ಕೊನೆಯ ಸ್ಥಳವೆಂದರೆ ಕೊಯಮತ್ತೂರಿನ ಆದಿಯೋಗಿ ಶಿವನ ಪ್ರತಿಮೆ ಇರುವ ಈಶಾ ಫೌಂಡೇಶನ್. ಆದಿಯೋಗಿ ಶಿವನ ದೈವಿಕತೆಯ ದರ್ಶನ ಮಾಡಿಸುತ್ತಾರೆ.
ಇದೆಲ್ಲದರ ಜೊತೆಗೆ ಕೇರಳ ಶೈಲಿಯ ಹಲವಾರು ಊಟ-ತಿಂಡಿ ಜೊತೆಗೆ ಉತ್ತರ ಭಾರತದ ಊಟ-ತಿಂಡಿಗಳ ಸೊಗಸನ್ನು, ಸವಿಯನ್ನು ಉಣಬಡಿಸುತ್ತಾರೆ. ಇದಿಷ್ಟೇ ಅಲ್ಲದೆ, ಹಲವಾರು ಮಾಹಿತಿಗಳು ಈ ‘ಅಲೆದಾಟದ ಅಂತರಂಗ’ದಲ್ಲಿವೆ. ಅಷ್ಟಕ್ಕೂ ಲೇಖಕರಿಗೆ ಈ ಪ್ರವಾಸದ ಬೀಳ್ಕೊಡುಗೆ ಅಷ್ಟು ಸುಲಭವಾಗಿರಲಿಲ್ಲ. ಹಾಗೆಯೇ ಅಲ್ಲವಾ, ಅಲೆದಾಟದಲ್ಲಿ ಎಷ್ಟೋ ಅಂತರಂಗಗಳು ಜೊತೆಯಾಗುತ್ತವೆ. ಅಂತರಂಗಗಳು ಒಂದಾಗುತ್ತವೆ. ಅಲೆದಾಟದ ಸಮಾನ ಮನಸ್ಥಿತಿ ಎಲ್ಲರನ್ನೂ ಒಂದೆಡೆ ಸೇರಿಸಿದ ಸೋಜಿಗವೇ ಬಹಳ ಚಂದ. ಅಷ್ಟಕ್ಕೂ ತಮ್ಮ ಕಾಲು ನೋವಿನ ನಡುವಲ್ಲಿಯೇ ಪ್ರವಾಸವನ್ನು ಇಷ್ಟೆಲ್ಲಾ ಸವಿದು ನಾವೂ ಸವಿಯುವಂತೆ ಮಾಡಿರುವ ನವೀನ್ ಅವರಿಗೆ ಮುಂದಿನ ಪ್ರವಾಸಗಳು ಸುಖಮಯವಾಗಿರಲಿ ಹಾಗೂ ಇಂತಹಾ ಇನ್ನಷ್ಟು ಅದ್ಭುತ ಕೃತಿಗಳು ಹೊರ ಬರಲಿ ಎಂಬ ಹಾರೈಕೆ ನನ್ನದು. ಇಲ್ಲಿನ ನನ್ನ ನೋಟಕ್ಕಿಂತಲೂ ವಿಶಿಷ್ಟ ಪ್ರವಾಸ ಕಥನದ ಓದಂತೂ ನಿಮ್ಮದಾಗುತ್ತದೆ. ಓದಿಯೇ ಸವಿಯಿರಿ.
- ವಿಭಾ ವಿಶ್ವನಾಥ್
