ಅಮರಗೋಳದಲ್ಲಿ ಮಹಾಮಹಿಮನ ಜಾತ್ರೆಯ ಕುರಿತು ರಾಘವೇಂದ್ರ ಅಪರಂಜಿ ಅವರು ತಮ್ಮ ಅನುಭವವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಅಪ್ಪ ನಂಗ ಬಾಲ್ ಬೇಕು, ಅಮ್ಮ ನಂಗ ಭಜಿ ಕೊಡಸು, ಅಜ್ಜ ನಂಗ ಹೆಗಲ ಮ್ಯಾಲೆ ಕೂಡಸಗೋ, ಅಮ್ಮ ನಾ ದುಂಡಗ ತಿರಗತದಲ್ಲ ಅದರಾಗ ಕುತಗೋತಿನಿ, ಅಪ್ಪಾರು ಎಷ್ಟು ಚಂದ ಪ್ರವಚನ ಹೇಳ್ಲಿಕತ್ತಾರಲ್ಲ. ಒಬ್ಬರಕಿನ ಒಬ್ಬರು ಚಂದನ ಬಟ್ಟೆ ಹಾಕ್ಕೊಂಡು ಕುಲು ಕುಲು ನಕ್ಕೊಂತ, ಹರಟಿ ಹೊಡಕೊಂತ ಗೆಳೆಯ-ಗೆಳತಿಯರೆಲ್ಲ ಹೆಗಲ ಮ್ಯಾಲೆ ಕೈ ಹಕ್ಕೊಂಡು ಬಾಲೇ…ಅನ್ನಕೊಂತ ಓಡಾಡೋ ದೃಶ್ಯ ಕಣ್ಣ ತುಂಬಕೋಬೇಕು ಅಂದ್ರ ಅದು ಜಾತ್ರೆ ಒಳಗ ಸಾಧ್ಯ. ಅಂತ ಜಾತ್ರೆ ಈಗ ಹುಬ್ಬಳ್ಳಿಯ ಅಮರಗೋಳದಲ್ಲಿ ನಡಿಲಿಕತ್ತದ.

ಅಮರಗೋಳವನ್ನು ಕ್ಷೇತ್ರವನ್ನಾಗಿಸಿ ಸತತ ೧೨ ವರ್ಷಗಳಿಂದ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಯುವಂತೆ ಮಾಡಿದ ಮಹಾಮಹಿಮ ಉಣಕಲ್ ಸಿದ್ಧಪ್ಪಜ್ಜ. ಇವರು ಶ್ರೀ ಸಿದ್ಧಾರೂಢರ ಸಮಕಾಲೀನರು. ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಆಲೂರ ತಾಲೂಕಿನ ಒಳಗುಂದಿ ಎನ್ನುವಲ್ಲಿ ಶಿವಪ್ಪ ಮತ್ತು ಪಾರ್ವತೆಮ್ಮ ಎನ್ನುವರ ಉದರದಲ್ಲಿ ೨೦-೧೨-೧೮೫೯ರಲ್ಲಿ ಜನ್ಮ ತಾಳಿದ್ರೂ ವೈರಾಗ್ಯ ಹೊಂದಿ ಕುಕನೂರು, ದ್ಯಾಮಾಪುರ, ವೆಂಕಟಾಪುರ, ಲಿಂಗದಾಳ, ಸವದತ್ತಿ, ಹಿರೇಕೊಂಬಿ, ಕೊಪ್ಪಳ, ಇಂಬ್ರಾಹಿಂಪುರ ಎಲ್ಲೆಡೆ ಸಂಚರಿಸಿ, ಇಬ್ರಾಹಿಂಪುರದಲ್ಲಿ ೧೨ವರ್ಷ ಕಾಲ ಘೋರ ತಪಸ್ಸು ಮಾಡಿ ಹುಬ್ಬಳ್ಳಿ ಉಣಕಲ್ ನಲ್ಲಿ ನೆಲೆಯೂರಿ, ಅಮರಗೋಳಕ್ಕೂ ತಮ್ಮ ಪಾದಸ್ಪರ್ಶ ಮಾಡಿದ ಮಹಾಮಹಿಮರು.
ಅವರು ಸೂಳೆತಮ್ಮ ಘಟದಿಂದಲೇ ಮಠ ಎಂದು ಶಿಷ್ಯರಿಗೆ ಹೇಳುತ್ತಿದ್ದರಂತೆ. ಅವರ ಪವಾಡಗಳು ಅನೇಕ. ಅಂತ ಮಹಾಮಹಿಮರು ಧಾರವಾಡ ಜಿಲ್ಲೆಯ ಅಬ್ಬಿಗೇರಿಯ ಶಾಸ್ತ್ರೀಯ ಬ್ರಹ್ಮನಿಷ್ಠರಾದ ಫಕ್ಕಿರಪ್ಪ ಅವರ ಬಳಿ ಶಾಸ್ತ್ರ ಅಧ್ಯಯನ ಮಾಡಿದ್ದರು. ೩೧-೧-೧೯೨೧ರಲ್ಲಿ ಬ್ರಹ್ಮಲೀನರಾದರು. ಇವರನ್ನ ಅಲ್ಲಮಪ್ರಭುಗಳ ಅವತಾರವೆಂದೇ ಭಕ್ತರು ಕರೆಯುತ್ತಿದ್ದರು. ಇಂತಹ ಮಹಾಮಹಿಮನ ಜಾತ್ರೆ ಅಮರಗೋಳದಲ್ಲಿ ನಡೆಯುತ್ತಿದೆ.
ಸೋಮವಾರ ನಾನು ಜಾತ್ರೆಯಲ್ಲಿ ಪಾಲ್ಗೊಂಡಿದ್ದೆ. ಇಂಚಗೇರಿ ಮಠದ ಶ್ರೀಗಳು ಪ್ರವಚನ ಮಾಡತಿದ್ದರು. ಜಾತ್ರಿಗೆ ಸಾವಿರಾರು ಜನ ಬಂದಾರ. ಹೊರಗ ಚಂದನ ಬಟ್ಟಿ ಹಕ್ಕೊಂಡು ಓಡಾಡ್ಲಿಕತ್ತಾರ. ಆದರ ಒಳಗ ತಾಪ ಅದ. ಎಷ್ಟೋ ಜನಕ್ಕ ಹೆಂಡತಿ ಕಂಡರ ಆಗಲ್ಲ, ಕೆಲವರಿಗೆ ತಂದಿ-ತಾಯಿ ಕಂಡರ ಆಗಂಗಿಲ್ಲ, ಇನ್ನ ಕೆಲವರಿಗೆ ಒಬ್ಬರನ್ನ ಕಂಡರ ಇನ್ನೊಬ್ಬರಿಗೆ ಆಗಂಗಿಲ್ಲ. ಆದರೂ ಮನ್ಯಾಗಿನ ಕಲಬತ್ತ ಒಳಗ ಬಿಸಿ ಪದಾರ್ಥ ಹಾಕಿದರೂ ಹೊರಗ ತಂಪಗ ಹತ್ತಕೊಂತ ಇರೋಹಂಗ ಇದ್ದೀವಿ. ಒಳಗಿನ ತಾಪ ಕಡಿಮಿ ಆಗಬೇಕಾದರ ಧ್ಯಾನ ಲೋಕಕ್ಕ ಬರ್ರೀ ಅಂತ ಹೇಳಿದರು.

ಈ ನುಡಿಯ ಕಡೆಗೆ ಒಂದಿಷ್ಟು ಜನರ ಲಕ್ಷ್ಯವಿದ್ದರೆ ಇನ್ನು ಕೆಲವರು ಜಾತ್ರೆಯ ಲೋಕದಲ್ಲಿ ವಿಹರಿಸುತ್ತಿದ್ದರು. ತಮಗೆ ಬೇಕಾದ ಕಿವಿಯೋಲೆ, ಸರ, ಮಕ್ಕಳಿಗೆ ಬೇಕಾದ ಆಟದ ಸಾಮಾನು ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಮತ್ತೆ ಕೆಲವರು ಮಳಿಗೆಗಳಲ್ಲಿ ತಯಾರು ಮಾಡುತ್ತಿದ್ದ ಬದನಿಕಾಯಿ ಬಜಿ, ಮಿರ್ಚಿ ಬಜಿ, ಗಿರಮಿಟ್ ಸವಿಯುತ್ತಿದ್ದರು. ಮತ್ತೆ ಕೆಲವರು ಮಕ್ಕಳೊಂದಿಗೆ ತಾವು ಟ್ರೇನ್, ಹಡಗು, ಸುತ್ತು ಹೊಡೆಯುವ, ಜಾರುಬಂಡಿ, ಕುಣಿಯುವ ಆಟಗಳಲ್ಲಿ ನಿರತರಾಗಿದ್ದರು. ನನ್ನ ಮಗಳು, ನಾನು, ಧರ್ಮಪತ್ನಿ, ಅಳಿಯನ ಕುಟುಂಬ, ವರ್ಷದ ಮಗು ವಲ್ಲಭ, ನನ್ನ ಅತ್ತೆ ಎಲ್ಲರೂ ಸೇರಿ ಜಾತ್ರೆಯ ಸಂಭ್ರಮ ಕಣ್ತುಂಬಿಕೊಂಡು, ಕುಂಬಳಕಾಯಿ ಪಾಯಸ, ಅನ್ನ-ಸಾರು ಪ್ರಸಾದವನ್ನು ಕಿಕ್ಕಿರಿದು ತುಂಬಿದ ಭಕ್ತ ಸಮೂಹದ ಮಧ್ಯೆ ತಿಂದು ಸಿದ್ದಪ್ಪಜ್ಜನ ಸ್ಮರಿಸುತ್ತಾ ಮನೆಯತ್ತ ಹೆಜ್ಜೆ ಹಾಕಿದೆವು. ಇವತ್ತು ನಾಳೆ ಜಾತ್ರೆ, ರಥೋತ್ಸವ ಅದ ಬರ್ರೀ ಮತ್ತ ನೀವು, ಸಂಭ್ರಮನ ಕಣ್ತುಂಬಿಕೊಳ್ಳೋವಂತ್ರಿ!
- ರಾಘವೇಂದ್ರ ಅಪರಂಜಿ
