‘ಯಾವ ಮೋಹನ ಮುರಳಿ ಕರೆಯಿತು… ದೂರ ತೀರಕೆ ನಿನ್ನನು…ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..!’ .. ಈ ಕತೆ ಬರೆಯುವಾಗ ಅತ್ಯಂತವಾಗಿ ಕಾಡಿದ ಸಾಲುಗಳಿವು….ಶಾಲಿನಿ ಹೂಲಿ ಪ್ರದೀಪ್ ಅವರ ಕತೆಯನ್ನು ತಪ್ಪದೆ ಮುಂದೆ ಓದಿ…
ಮೇಘಿನಿ ಮದುವೆ ಆಗಿ ಅಮೇರಿಕಾಕ್ಕೆ ಹಾರಿದ ಮೇಲೆ ಐದಾರು ವರ್ಷ ನನ್ನ ಮತ್ತು ಅವಳ ಸ್ನೇಹಕ್ಕೆ ಬ್ರೇಕ್ ಬಿದ್ದಿತ್ತು. ಕಾಲೇಜ್ ಗೆಳತಿಯರೆಲ್ಲ ಅಲ್ಲಿ ಇಲ್ಲಿ ಹೋದ್ಮೇಲೆ ಒಬ್ಬರನೊಬ್ಬರು ನೋಡೇ ಇರಲಿಲ್ಲ. ಆದರೆ ಅದೊಂದು ದಿನ ಮೇಘಿನಿ ಕರೆ ಬಂತು.
“ಹಲೋ ಶಾಲಿನಿ…ಇದೆ ಜನೆವರಿ 20ಕ್ಕೆ ನನ್ನ ಮನೆಯ ಗೃಹಪ್ರವೇಶ. ಅಡ್ರೆಸ್ ಎಲ್ಲ ಕಳಸ್ತೀನಿ, ತಪ್ಪದೆ ಬಾ. ನಿನ್ನನ್ನು ನೋಡದೆ ತುಂಬಾ ವರ್ಷ ಆಯ್ತು. ಎಲ್ಲ ಕಾಲೇಜ್ ಫ್ರೆಂಡ್ಸ್ ಭೇಟಿಯಾಗೋಣ” ಅಂದ್ಲು.
ತುಂಬಾ ವರ್ಷದ ನಂತರ ಮೇಘಿನಿ ಧ್ವನಿ ಕೇಳಿ ಮನಸ್ಸು ಹಿಗ್ಗಿತು. ಅವಳ ಮನೆಯ ಗೃಹಪ್ರವೇಶಕ್ಕೆ ಹೋಗೋದೇ ಅಂತ ನಾನು ಮೊದಲೇ ಫಿಕ್ಸ್ ಆಗಿದ್ದೆ. ಅದರಂತೆ ಎಷ್ಟೋ ವರ್ಷದ ನಂತರ ಮೇಘಿನಿ ನೋಡಲು ಗೃಹಪ್ರವೇಶಕ್ಕೆ ಹೊರಟೆ. ಚನ್ನಾಗಿಯೇ ಅಲಂಕಾರ ಮಾಡಿಕೊಂಡಿದ್ದೆ . ಮೇಘಿನಿ ನನ್ನ ನೋಡಿ so beautiful just like a wow ಅಂತಾಳೆ ಅಂದುಕೊಂಡೆ. ಆದರೆ ಅಲ್ಲಿ ಹೋದ ಮೇಲೆ ಅವಳ ವರಸೆ ಬೇರೇನೇ ಇತ್ತು. ನಾನು ಅವಳನ್ನು ನೋಡಲು ಬನ್ನೇರಘಟ್ಟ ದಿಂದ ಹೆಬ್ಬಾಳದಲ್ಲಿದ್ದ ಅವಳ ಹೊಸ ಬ್ರಾಂಡೆಡ್ ಅಪಾರ್ಟ್ಮೆಂಟ್ ಹೋಗಿದ್ದೆ. ಅವಳು ನನ್ನನ್ನು ನೋಡಿ ಬಾಲ್ಯದ ಗೆಳತಿ ಎಂದು ಸಿನಿಮೀಯ ರೀತಿ ಓಡಿ ಬಂದು ತಬ್ಬಿಕೊಳ್ಳುತ್ತಾಳೆ. ಬಾಲ್ಯದ ಕತೆಗಳನ್ನು ಮೆಲಕು ಹಾಕುತ್ತಾಳೆ, ತುಂಬಾನೇ ಖುಷಿ ಪಡುತ್ತಾಳೆ ಅಂತೆಲ್ಲಾ ಸಿಕ್ಕಾಪಟ್ಟೆ ಭ್ರಮೆಯಲ್ಲಿದ್ದೆ.
ಆದರೆ ಮೇಘಿನಿ ಅಮೇರಿಕಾ ಹಾರಿದ ಮೇಲೆ ತನ್ನ ಹಳೆ ನೆನಪುಗಳನ್ನು ಭಾರತದಲ್ಲಿಯೇ ಬಿಸಾಕಿ ಹಾರಿದ್ದು ಅವಳನ್ನು ಅಲ್ಲಿ ನೋಡಿದ ಮೇಲೆ ಗೊತ್ತಾಯಿತು. ಸಾಕಷ್ಟು ಬದಲಾಗಿದ್ದಳು. ಅವಳಲ್ಲಿ ಬಾಲ್ಯದ ನೆನಪುಗಳಿರಲಿ, ಕನ್ನಡವೇ ಮರೆತು ಹೋಗಿದ್ದಳು. ಅವರ ಸಂಸಾರ ಪೂರ್ತಿ ಆಂಗ್ಲಮಯವಾಗಿತ್ತು. ಗಂಡ, ಮಕ್ಕಳು ಎಲ್ಲರ ಆಡುಭಾಷೆ ಇಂಗ್ಲಿಷ್ ಆಗಿಯೇ ಹೋಗಿತ್ತು.
ಅವಳನ್ನು ನೋಡಿದ ಮೇಲೆ ಮೊದಲಿನ ಆತ್ಮೀಯತೆ ಬರಲೇ ಇಲ್ಲಾ, ಮೆತ್ತಗೆ
“ಹೇಗಿದ್ದೀಯೇ ಮೇಘಿನಿ”…ಎಂದೇ.
“Oh… I am fine… ಅಂತ ಇಂಗ್ಲೀಷ್ ನಲ್ಲಿ ಕಚೋಕೆ ಶುರು ಮಾಡಿದ್ಲು. ಅವಳ ಮಾತಿನ ಮಧ್ಯೆ ಅವಳ ಎರಡು ಪಿಳ್ಳೆಗಳು ಮಧ್ಯೆ ಮಧ್ಯೆ ಬಂದು ಇಂಗ್ಲೀಷ್ ನಲ್ಲಿ ಒಂದೊಂದು ರೀಲ್ ಬಿಟ್ಟು ಹೋಗುತ್ತಿದ್ದವು.
ಮೇಘಿನಿ ತನ್ನ ಆಡಂಬರದ ಮನೆಯನ್ನು ತೋರಿಸಲು ಒಬ್ಬಳನ್ನು ನೇಮಕ ಮಾಡಿ ನನ್ನ ಜೊತೆಗೆ ಕಳುಹಿಸಿ ಕೊಟ್ಟಳು. ನಾಲ್ಕು ಬೆಡ್ ರೂಮ್ ಅಪಾರ್ಟ್ಮೆಂಟ್ ದೊಡ್ಡದಾಗಿ ಚಂದವಾಗಿಯೇ ಇತ್ತು. ಮನೆ ಇಂಟರಿಯರ್ ನಿಂದ ಜಗಮಗಿಸುತ್ತಿತ್ತು. ಕಣ್ಣುಗಳು ಮೇಲ್ನೋಟಕ್ಕೆ ಅವಳ ಮನೆ ಅಂದ ಚಂದದ ಮೇಲಿದ್ದರೆ, ಮನಸ್ಸು ಮಾತ್ರ ಮೇಘಿನಿ ಸುತ್ತ ಸುತ್ತುತ್ತಿತ್ತು. ಮನೆ ನೋಡಿ, ಮೇಘಿನಿ ಮುಂದೆ ಬಂದು ನಿಂತೆ.
” ಮನೆ ನೋಡಿದ್ಯಾ ಶಾಲಿನಿ … ಹೊರಗೆ ಕ್ಲಬ್ ಹೌಸ್, ಸ್ವಿಮ್ಮಿಂಗ್ ಪೂಲ್ ಎಲ್ಲಾ ಇದೆ. ಹೊರಗೆ ಹೋಗೋದು ಅವಶ್ಯಕತೆಯೇ ಇಲ್ಲಾ”… ಅಂದಳು. ಅವಳು ಕೇವಲ ಅಪಾರ್ಟ್ಮೆಂಟ್ ಬಗ್ಗೆ ಹೇಳುತ್ತಿರಲಿಲ್ಲ, ಅದರ ಜೊತೆಗೆ ತನ್ನ ದೊಡ್ಡಸ್ಥಿಕೆಯನ್ನು ತೋರಿಸುತ್ತಿದ್ದದ್ದು ನನ್ನ ಒಳ ಮನಸ್ಸಿಗೆ ಅರ್ಥವಾಗಲು ತಡವಾಗಲಿಲ್ಲ.
ಅವಳ ಆಡಂಬರ, ತೋರಿಕೆ ಮಾತುಗಳು ನನಗೆ ಉಸಿರುಗಟ್ಟಿಸಿತು. ನನ್ನ ಬಾಲ್ಯದ ಜೀವದ ಗೆಳತಿ ಇವಳಲ್ಲ. ಅಲ್ಲಿಂದ ಯಾವಾಗ ಹೊರಗೆ ಬೀಳುತ್ತೇನೆ ಎಂದು ಕಾಯುತ್ತಿದ್ದೆ. ಬಂದವರ ಮುಂದೆಲ್ಲ, ಮೇಘಿನಿ 1 ಕೋಟಿ 60 ಲಕ್ಷ ರೂಪಾಯಿಯ ಅಪಾರ್ಟ್ಮೆಂಟ್ ಎಂದು ಬಿಗುತ್ತಿದ್ದಳು. ಆಂಗ್ಲ ಭಾಷೆಯ ಜೊತೆಗೆ ದುಡ್ಡಿನ ಗಮ್ಮತ್ ಮೇಘಿನಿಯಲ್ಲಿ ಎದ್ದು ಕಾಣಿಸಿತು.
“ನೋಡು ಶಾಲಿನಿ.. ಇಂಡಿಯಾದಲ್ಲಿ ದುಡ್ಡು ಮಾಡೋಕೆ ಆಗೋಲ್ಲ, ಏನೂ ಸಾಧಿಸೋಕು ಆಗೋಲ್ಲ. ಈಗ ನನ್ನ ಹತ್ರ ಬೆಂಗಳೂರಲ್ಲಿ ಮೂರ ನಾಲ್ಕು ಸೈಟ್ ಇದೆ. ಯಾವುದು ಸಾಲ ಮಾಡಿಲ್ಲ. ಕ್ಯಾಶ್ ಕೊಟ್ಟಿ ತಗೊಂಡಿದ್ದು”…ಎಂದು ತನ್ನ ಅಸ್ತಿಯ ವಿವರ ಕೊಟ್ಟಳು.
ಮೇಘಿನಿಯ ಬೆಳವಣಿಗೆ ನನಗೆ ಆತ್ಮೀಯ ಗೆಳತಿಯಾಗಿ ಸಂತೋಷವಿತ್ತು. ಆದರೆ ದುಡ್ಡಿನ ಹಿಂದೆ ಪ್ಯಾಕೇಜ್ ತರ ಅಹಂಕಾರ ಬಂದಿದ್ದು ನನಗೆ ತುಂಬಾನೇ ಬೇಸರವಾಯಿತು.
ಕಾಲೇಜ್ ದಿನಗಳಲ್ಲಿ ಮೇಘಿನಿ, ನಾನು ಒಂದೇ ತಟ್ಟೆಯಲ್ಲಿ ಇಡ್ಲಿ, ಸಾಂಬಾರ್ ತಿನ್ನುತ್ತಿದ್ದದ್ದು ನೆನಪಿಗೆ ಬಂತು. ಈಗ ನೋಡುತ್ತಿದ್ದ ಕೋಟ್ಯಧಿಪತಿ ಮೇಘಿನಿ ಬೇರೆಯೇ ಕಾಣುತ್ತಿದ್ದಳು.
ಆಸೆ ಹೊತ್ತು ದೂರದಿಂದ ಅವಳನ್ನು ನೋಡಲು ಓಡೋಡಿ ಬಂದಿದ್ದ ನನ್ನನ್ನು ನಾನು ಸಂತೈಸಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯಿತು.
ಅವಳಿಗಾಗಿ ನನ್ನ ಕೈಯಾರೆ terracotta ನಲ್ಲಿ ಮಾಡಿದ್ದ ಸರಾ, ಜುಮುಕಿಯನ್ನು ಬ್ಯಾಗ್ ನಿಂದ ಹೊರಗೆ ತಗೆಯಲಿಲ್ಲ. ಕೋಟ್ಯಧಿಪತಿ ಮೇಘಿನಿ ಮುಂದೆ ನನ್ನ ಪುಟ್ಟ ಉಡುಗೊರೆ ನಗೆ ಪಾಟಲಾಗಬಹುದೆಂದನಿಸಿತು.
” ಮೇಘಿನಿ, ನಾನು ಹೊರಡ್ತೀನಿ…ಮನೆ ತುಂಬಾ ಚನ್ನಾಗಿದೆ… ಒಳ್ಳೇದಾಗ್ಲಿ”…ಎಂದು ಶುಭ ಹಾರೈಸಿ ಹೊರಟೆ.
ಮೇಘಿನಿ ಹೊರಡುವಾಗ ತನ್ನ ದೊಡ್ಡಸ್ಥಿಕೆಯ ಸೂಚಕವಾಗಿ ನಾನು ಎಷ್ಟೇ ಬೇಡವೆಂದರೂ ಬೆಳ್ಳಿಯ ಪುಟ್ಟದಾದ ಗಣೇಶವನ್ನು ರಿಟರ್ನ್ ಗಿಫ್ಟ್ ಆಗಿ ನನ್ನ ಕೈಯಲ್ಲಿಟ್ಟಳು.
ಕಾರ್ ಲ್ಲಿ ಕೂತು ಆ ಪುಟ್ಟ ಬೆಳ್ಳಿ ಗಣೇಶನನ್ನು ನೋಡುತ್ತಾ ಮೇಘಿನಿ ಅಮೇರಿಕಾ ಹಾರಿದ್ಮೇಲೆ ಉಡುಗೆ ತೊಡುಗೆಯಲ್ಲಿ, ಭಾಷೆಯಲ್ಲಿ , ನಡುವಳಿಕೆಯಲ್ಲಿ ಸಾಕಷ್ಟು ಬದಲಾಗಿದ್ದಳು. ಭಾರತದಲ್ಲಿ 25 ವರ್ಷ, ಸಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿ ಬೆಳೆದ ಮೇಘಿನಿಯನ್ನು ಬದಲಾಯಿಸಲು ಅಮೇರಿಕಾ ಕೇವಲ ನಾಲ್ಕೇ ವರ್ಷ ತಗೆದುಕೊಂಡಿತ್ತಲ್ಲ!…ಎಂದು ನನ್ನ ಮನಸ್ಸು ವ್ಯಂಗ್ಯ ಮಾಡಿತು. ಬಾಲ್ಯದ ಗೆಳತಿ ಮೇಘಿನಿ ಅಮೇರಿಕಾ ಪಾಲಾಗಿದ್ದಳು.
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ, ಸಂಪಾದಕಿ
