ಅಮೃತ ನಾಯ್ಡು ಹಾಗೂ ಅವರ ಮಗಳು ಸಾನ್ವಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಲಾರಿಯೊಂದು ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ, ಸಾನ್ವಿ ಸ್ಥಳದಲ್ಲೇ ಮೃತಪಟ್ಟಿದ್ದು, ಅಮೃತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮುಂದೆ ಓದಿ…
‘ನನ್ನಮ್ಮ ಸೂಪರ್ ಸ್ಟಾರ್’ ನಲ್ಲಿ ಕಾರ್ಯಕ್ರಮದಲ್ಲಿ ಮುದ್ದು ಮಕ್ಕಳನ್ನ ನೋಡುವುದರ ಜೊತೆಗೆ ಅವರ ಮುದ್ದು ಮುದ್ದಾದ ಮಾತು ಕೇಳುವುದಕ್ಕೆ ಸಂತೋಷವಾಗುತ್ತಿತ್ತು. ಒಬ್ಬರಿಗಿಂತ ಒಬ್ಬರು ಚೂಟಿ ಮಕ್ಕಳಿದ್ದರು. ಆ ಕಾರ್ಯಕ್ರಮ ‘ನಮ್ಮಮ್ಮ ಸೂಪರ್ ಸ್ಟಾರ್’ ಎನ್ನುವ ಬದಲು, ‘ನನ್ನ ಮಕ್ಳು ಸೂಪರ್ ಸ್ಟಾರ್’ ಆಗಬೇಕಿತ್ತು, ಮಕ್ಕಳಿಂದಲೇ ಆ ಕಾರ್ಯಕ್ರಮಕ್ಕೆ ಒಂದು ಶೋಭೆ ತಂದಿತ್ತು.
ಈ ಕಾರ್ಯಕ್ರಮದ ಸ್ಪರ್ಧಿ ಸಾನ್ವಿ ಕಂದಮ್ಮನ ಸಾವು ಕೇಳಿ, ದೇವರ ಮೇಲೆ ನಂಬಿಕೆಯೇ ಹೋಯಿತು. ಏಕೆಂದರೆ ನಿನ್ನೆ ವೈಕುಂಠ ಏಕಾದಶಿಯ ದಿನ. ವೆಂಕಟರಮಣನ ದರ್ಶನ ಪಡೆದವರು ಸತ್ತಾಗ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎನ್ನುವ ನಂಬಿಕೆಯಿದೆ. ಬೆಳೆದು ಉಜ್ವಲ ಭವಿಷ್ಯ ಕಟ್ಟಿಕೊಳ್ಳಬೇಕಾಗಿದ್ದ ಮಗುಗೆ ಈ ಸಾವು ನ್ಯಾಯವೇ ? ಎಂದು ಮನಸ್ಸು ದುಃಖಿಸಿತು.
ಖ್ಯಾತ ಹರಿಕಥೆ ದಾಸ ಗುರುರಾಜ್ ನಾಯ್ಡು ಅವರ ಮೊಮ್ಮೊಗಳಾದ ಅಮೃತ ನಾಯ್ಡು ಅವರು ಕೂಡಾ ಹರಿಕತೆಗಳನ್ನು ಸೊಗಸಾಗಿ ವೇದಿಕೆಯ ಮೇಲೆ ಹೇಳುತ್ತಿದ್ದರು. ಅಷ್ಟೇ ಅಲ್ಲ ಅವರ ಮಗಳು ಸಾನ್ವಿಗೂ ಹರಿಕತೆಯ ಗಂಧ ಸೋಕಿಸಿದ್ದರು.

ಈ ಹಿಂದೆ ಕಾರ್ಯಕ್ರಮದಲ್ಲಿ ಅಮೃತ ಅವರು ಮೊದಲು ಗರ್ಭಿಣಿಯಾದಾಗ ಹುಟ್ಟಿದ ಹೆಣ್ಣು ಮಗು ೬೦ ದಿನದಲ್ಲಿ ಸತ್ತು ಹೋಯಿತು. ಆಗ ಪೇಪರ್ ನಿಂದ ಆ ಮಗು ಸುತ್ತಿ ಮಗುವ ಶವ ಕೊಟ್ಟರು ಎಂದು ಅಮೃತ ಕಣ್ಣಲ್ಲಿ ನೀರು ಹಾಕಿಕೊಂಡು ವೇದಿಕೆಯ ಮೇಲೆ ಹೇಳುವಾಗ ಕಾರ್ಯಕ್ರಮದ ತೀರ್ಪುಗಾರರಾದ ಸೃಜನ್ ಲೋಕೇಶ್ ಅವರು ಆ ಮಗುವೇ ಸಾನ್ವಿಯಾಗಿ ಹುಟ್ಟಿ ಬಂದಿದ್ದಾಳೆ, ದುಃಖಿಸಬೇಡಿ ಎಂದು ಸಮಾಧಾನ ಮಾಡಿದ್ದು ಇನ್ನು ಕಣ್ಣಿಗೆ ಕಟ್ಟಿದಂತಿದೆ.
ಆ ತಾಯಿ ಒಂದಾದ ಮೇಲೊಂದು ಮಗುವಿನ ಅಗಲಿಕೆ ಹೇಗೆ ತಡೆದುಕೊಳ್ಳುತ್ತಾರೋ ಎನ್ನುವ ಸಂಕಟ ನೆನೆದು ಮನ ನೊಂದಿದೆ. ಜೊತೆಗೆ ಅಮೃತ ಅವರು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿಕೂಡಾ ಇದೆ. ಇಂತಹ ಪರಿಸ್ಥಿಯಲ್ಲಿ ಆ ಭಗವಂತನೇ ಅವರಿಗೆ ಧೈರ್ಯಕೊಡಬೇಕು.
ಮನವಿ : ದಯವಿಟ್ಟು ದ್ವಿಚಕ್ರ ವಾಹನದಲ್ಲಿ ತೆರಳುವಾಗ ಮಕ್ಕಳಿಗೂ ಹೆಲ್ಮೆಟ್ ಬಳಸಿ, ಪ್ರತಿಯೊಬ್ಬರೂ ತಾಳ್ಮೆಯಿಂದ ನಿಯಮ ಪಾಲಿಸಿ, ಶಾರ್ಟ್ ಕಟ್ ದಾರಿಯಿಂದ ಜೀವನ ಅಂತ್ಯ ಮಾಡಿಕೊಳ್ಳಬೇಡಿ. ಲಾರಿ, ಬಸ್ ದೊಡ್ಡ ವಾಹನದ ಚಾಲಕರು ಕುಡಿದು ಗಾಡಿಯನ್ನು ಓಡಿಸಬೇಡಿ. ವಾಹನಗಳ ಮಧ್ಯೆ ಅಂತರ ಕಾಯ್ದುಕೊಳ್ಳಿ. ಹೋದ ಜೀವ ಮತ್ತೆ ಬಾರದು ಎನ್ನುವುದು ಎಲ್ಲರ ತಲೆಯಲ್ಲಿರಲಿ…
- ಆಕೃತಿನ್ಯೂಸ್