ಪಶುವೈದ್ಯರು ದುಡುಕಿದರೆ ಅಷ್ಟೇ, ಅವರ ಪರವಾಗಿ ಯಾವ ಸಾಕ್ಷಿಗಳು ಇರೋಲ್ಲ, ಸಾಕ್ಷಿ ಎಂದರೆ ಮಾಲೀಕರು ಮಾತ್ರ, ಅವರೇ ತಪ್ಪಾಗಿ ಹೇಳಿಬಿಟ್ಟರೆ ಪಶುವೈದ್ಯನ ಕತೆ ಅಷ್ಟೇ. ಹೀಗೊಂದು ಸಣ್ಣ ಘಟನೆ ಕುರಿತು ಪಶುವೈದ್ಯ ಗವಿ ಸ್ವಾಮಿ ಅವರು ಬರೆದ ಅನುಭವದ ಲೇಖನ.ಮುಂದೆ ಓದಿ…
ಪೋಲೀಸರಿಗೆ ಒಂದು ಪ್ರಕರಣವನ್ನು ಭೇದಿಸಲು ನಾನಾ ಮಾರ್ಗಗಳಿವೆ. ವಿಧಿವಿಜ್ಞಾನ ಇದೆ, ಸೈಬರ್ ತಂತ್ರಜ್ಞಾನ ಇದೆ. ಸೀಸಿಟೀವಿ ಸಾಕ್ಷ್ಯಗಳು ಸಿಗುತ್ತವೆ, ಖುದ್ದು ಸಾಕ್ಷಿ ನುಡಿಯುವವರಿದ್ದಾರೆ.
ಆದರೆ ನನ್ನಂಥ ಬಡಪಾಯಿ ಪಶುವೈದ್ಯರಿಗೆ!? ಹಸುವಿನ ಪರವಾಗಿ ಸಾಕ್ಷಿ ನುಡಿಯಬೇಕಾದ ಮಾಲೀಕರೇ ಹಲವು ಸಂದರ್ಭಗಳಲ್ಲಿ ಯಡವಟ್ಟು ಗಿರಾಕಿಗಳಂತೆ ವರ್ತಿಸಿ ನನ್ನನ್ನು ಫಜೀತಿಗೆ ಈಡುಮಾಡಿದ್ದಾರೆ. ಅಂತಹ ಒಂದು ಘಟನೆ ಮೊನ್ನೆ ನಡೆಯಿತು.
“ನಮ್ ಹಸು ಮೊನ್ನೆಯಿಂದ ಕೆಂಪ್ಗೆ ಉಚ್ಚೆ ಹುಯ್ತಾ ಇದೆ, ಬಂದು ನೋಡಿ ಸಾ…” ಪಕ್ಕದೂರಿನ ಮಹಿಳೆಯಿಂದ ಕರೆ ಬಂದಿತ್ತು. ಎಂಟೂವರೆ ತಿಂಗಳ ಗಬ್ಬದ ಹಸು. ಆದ್ಯತೆಯ ಮೇಲೆ ಆ ಕೇಸನ್ನು ಕೈಗೆತ್ತಿಕೊಂಡು ಆಕೆಯ ಊರಿಗೆ ಹೋದೆ. ಒಂದು ದೊಡ್ಡ ಬೇವಿನ ಮರದ ಕೆಳಗೆ ಹಸುವು ವಿಶ್ರಾಂತಿ ಪಡೆಯುತ್ತಿತ್ತು. ಜ್ವರ ಪರೀಕ್ಷೆ ಮಾಡಿದೆ. ಉಷ್ಣಾಂಶ ಸಹಜ ಸ್ಥಿತಿಯಲ್ಲಿತ್ತು.
“ಉಚ್ಚೆ ಹಿಡ್ದಿಟ್ಟಿದೀರಾ?” ಎಂದು ಕೇಳಿದೆ.
“ಇಲ್ಲ ಸಾರ್” ಎಂದು ಜೋಲು ಮೋರೆ ಹಾಕಿದಳು. ಮತ್ತೆ ಕೆಂಪು ಬಣ್ಣದ ಉಚ್ಚೆ ಯಾರ್ ನೋಡಿದ್ದು?
“ನನ್ ಮೊಮ್ಮಗ ಸಾರ್ ?”
“ಕರೀರಿ ಅವನ್ನ”
ಮೊಮ್ಮಗ ಬಂದ . ಹತ್ತನ್ನೆರಡು ವರ್ಷದ ಹುಡುಗ!
“ಏನಪ್ಪಾ ಉಚ್ಚೆ ಕಲರ್ ನೋಡಿದ್ಯಾ?”
“ಹ್ಞೂಂ ಸಾರ್”
“ಯಾವ ಕಲರ್ ಇತ್ತು?”
“ಒಂಥರಾ ಕೆಂಪ್ಗಿತ್ತು ಸಾ”
“ಯಾವಾಗ ನೋಡಿದೆ?”
“ನಿನ್ನೆ ವತಾರೆ ಸಾ”
“ಆಮೇಲೆ ನೋಡೇ ಇಲ್ವಾ!?”
“ಇಲ್ಲಾ ಸಾ”
“ಏನಮ್ಮಾ ನೀವ್ ಗಮನಿಸ್ಲಿಲ್ವಾ?”
“ನಾನು ನೆಂಟ್ರ ಮನೇಗೆ ಹೊಂಟೋಗಿದ್ದೆ ಸಾ , ಇವತ್ತು ಬಂದೆ. ಇದು ನಿನ್ನೆಯಿಂದ್ಲೂ ಉಚ್ಚೆ ಹುಯ್ದಿಲ್ಲ ಸಾ”
“ನಿಮ್ಗೆ ಹೇಗ್ ಗೊತ್ತು ?”
“ಹುಯ್ದಿದ್ ನಾವ್ ನೋಡೇ ಇಲ್ಲ ಸಾ”
“ಆದ್ರೆ ನೀವು ಬಂದಿದ್ದು ಇವತ್ತು ಬೆಳಿಗ್ಗೆ ತಾನೆ?”
“ಹುಯ್ದಿದ್ರೆ ಮನೆಯವ್ರು ಯಾರಾದ್ರೂ ನೋಡಿರ್ತಿದ್ರಲ್ಲ ಸಾ”
ಆಕೆಯ ಮಾತಿನಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು. ಸೂಕ್ಷ್ಮವಾಗಿ ನೋಡಿದರೆ ಹಸು ಬಿದ್ದಿದ್ದ ಗರಿಕೆಯಡಿಯಲ್ಲಿ ನೆಲ ತೇವವಾಗಿದ್ದು ಕಾಣಿಸುತ್ತಿತ್ತು. ಅಜ್ಜಿ ಮೊಮ್ಮಗ, ನನ್ನ ಪಾಲಿಗೆ ಆ ಪ್ರಕರಣವನ್ನು ಜಟಿಲಗೊಳಿಸಲು ಪಣ ತೊಟ್ಟವರಂತೆ ಕಾಣಿಸುತ್ತಿದ್ದರು. ಅವರ ಹೇಳಿಕೆಗಳು, ಹುಣ್ಣೆಗಳಿಂದ ಹಸುಗಳಿಗೆ ಹರಡುವ “ಹುಣ್ಣೆ ಜ್ವರ” ಅಥವಾ “ಬೆಬಿಸಿಯೋಸಿಸ್” ಎಂಬ ಕಾಯಿಲೆಯ ಲಕ್ಷಣಗಳನ್ನು ಹೋಲುತ್ತಿದ್ದವು. ಆದರೆ ಹುಣ್ಣೆ ಜ್ವರದಲ್ಲಿ ಕಂಡು ಬರುವ “ಹೈ ಟೆಂಪರೇಚರ್” ಆ ಕೇಸಿನಲ್ಲಿ ಇರಲಿಲ್ಲ. ಇನ್ನೊಂದು ಗುಣಲಕ್ಷಣ-ರಕ್ತಹೀನತೆ ಕೂಡ ಆ ಹಸುವಿನಲ್ಲಿ ಕಾಣಿಸುತ್ತಿರಲಿಲ್ಲ.
ವಿಷಕಾರಿ ಸಸ್ಯ ಸೇವನೆಯ ಲಕ್ಷಣಗಳೂ ಕಾಣಿಸುತ್ತಿರಲಿಲ್ಲ. ಹಸುಗಳು ಈರುಳ್ಳಿ ಎಲೆಗಳನ್ನು ತಿಂದಾಗ ಮೂತ್ರ ಕೆಂಪಾಗುವುದನ್ನು ಗಮನಿಸಿದ್ದೇನೆ. ಆದರೆ ಆ ಪ್ರಕರಣದಲ್ಲಿ ಈರುಳ್ಳಿಯ ಪಾತ್ರ ಇರಲಿಲ್ಲ.
ನಾನು ದುಡುಕಿ ಹುಣ್ಣೆ ಜ್ವರದ ಇಂಜೆಕ್ಷನ್ ಕೂಡ ಹಾಕುವಂತಿರಲಿಲ್ಲ. ಯಾಕೆಂದರೆ ಹಸುವಿಗೆ ಗರ್ಭಪಾತ ಆಗುವ ಸಾಧ್ಯತೆಯೂ ಇತ್ತು. ಹಾಗಂತ ಆ ಕೇಸನ್ನು ಲಘುವಾಗಿಯೂ ನೋಡುವಂತಿರಲಿಲ್ಲ. ಅದು ಮತ್ತೆ ಮೂತ್ರ ಮಾಡುವ ಘಳಿಗೆ ಬರುವವರೆಗೆ ಕಾದು ನೋಡುವ ತಂತ್ರವನ್ನು ಅನುಸರಿಸುವ ಹಾಗಿರಲಿಲ್ಲ. ನನಗೆ ಆ ಹಸುವಿನ ಮಾಲೀಕಳ ಮೇಲೆ ನಂಬಿಕೆಯೇ ಹೊರಟು ಹೋಗಿತ್ತು.
ಹಸುವನ್ನು ಮತ್ತೊಮ್ಮೆ ಪರಿಶೀಲಿಸಿದೆ. ಗೊತ್ತಿನಲ್ಲಿ ಇದ್ದ ಮೇವನ್ನು ಆಗಾಗ ಎತ್ತಿಕೊಂಡು ಮೇಯುತ್ತಿತ್ತು. ಅದು ಗಂಭೀರ ಪರಿಸ್ಥಿತಿಯಲ್ಲಂತೂ ಇರಲಿಲ್ಲ. ಆದರೂ ಪ್ರಕರಣ ಇತ್ಯರ್ಥ ಆಗುವವರೆಗೆ ನಾನು ಕಾಲೆತ್ತಿ ಕಡೆಯುವಂತಿರಲಿಲ್ಲ. ಕೊನೆಯ ಅಸ್ತ್ರವೆಂಬಂತೆ , ಹಸುವಿನಿಂದಲೇ ಸಾಕ್ಷಿ ನುಡಿಸುವ ಕಸರತ್ತಿಗೆ ಕೈ ಹಾಕಿದೆ. ಏಳೆಂಟು ಬಾರಿ ಅದರ ಯೋನಿ ದ್ವಾರದ ಮಾಂಸಖಂಡಗಳನ್ನು ನೀವುತ್ತಿದ್ದಂತೆ ಹಸುವು ಮೂತ್ರ ವಿಸರ್ಜಿಸಲು ಶುರು ಮಾಡಿತು!
ಹಸುವು “ಸತ್ಯವನ್ನೇ ಹೇಳುತ್ತೇನೆ” ಎಂದು ಅಸಲಿ ಸಾಕ್ಷಿಯನ್ನು ನುಡಿಯಿತು. ಮೂತ್ರ ಮಾಮೂಲಿ ತಿಳಿ ಹಳದಿ ಬಣ್ಣಕ್ಕಿತ್ತು! “ಏನಮ್ಮಾ , ಕೆಂಪೋ ಹಸ್ರೋ ಇನ್ನೊಂದೋ, ಪಾಪ ಆ ಹುಡುಗ್ನಿಗೇನ್ ಗೊತ್ತು, ಗಬ್ದ ಹಸೂನ ಕಣ್ಣೇ ಕಾವ್ಲಾಗಿ ನೋಡ್ಕೋಬೇಕಾದವ್ರು ನೀವಲ್ವ” ಎಂದು ಗದರಿದೆ.
“ಗಾಬ್ರಿಯಾಗ್ಬುಟ್ಟಿತ್ತು ಸಾ” ಎಂದು ಪೆಚ್ಚಾಗಿ ನೋಡಿದಳು.
ಸದ್ಯ ಪ್ರಕರಣ ಸುಖಾಂತ್ಯ ಎಂದು ನಿಟ್ಟುಸಿರು ಬಿಟ್ಟು, ನಾಲ್ಕು ಮಿನರಲ್ ಮಾತ್ರೆಗಳನ್ನು ಕೊಟ್ಟು ಮತ್ತೊಂದು ಕೇಸಿಗೆ ಹೊರಟೆ.
- ಡಾ.ಗವಿಸ್ವಾಮಿ, (ಪಶುವೈದ್ಯಾಧಿಕಾರಿಗಳು, ಲೇಖಕರು ) ಚಾಮರಾಜನಗರ.