‘ವಿವೇಕವಾಣಿ’ ಪ್ರಬಂಧ – ಅಮೃತ ಎಂ ಡಿ



ಸಾಮಾನ್ಯ ಬಾಲಕ ಅಸಾಮಾನ್ಯ ನಾಯಕನಾಗಿ ಬೆಳೆದು ಬಂದಂತಹ ಪರಿ ,ಆ ದಿವ್ಯ ಕಂಠದ ಧ್ವನಿಯೇ  ಪ್ರಚಾರಕವಾಗಿ ಪ್ರಬುದ್ಧತೆಯ ಪ್ರತಿರೂಪವಾಗಿ ಹೊರಟ ಮಾತುಗಳೇ ವಿವೇಕವಾಣಿ.  ಕಷಾಯವಸ್ತ್ರಧಾರಿಯಾಗಿದ್ದು ಕೊಂಡೆ ರಾಜನಂತೆ ಕಂಡಂತಹ ವಜ್ರಶರೀರವುಳ್ಳ ದುರ್ದಮ್ಯ ಸನ್ಯಾಸಿ. ಅಮೃತ ಎಂ ಡಿ ಅವರ ಲೇಖನಿಯಲ್ಲಿ ಒಂದು ಸುಂದರ ಪ್ರಬಂಧ,ಮುಂದೆ ಓದಿ…

ಪರಿವ್ರಾಜಕನ ಅಭಿಸಾರಿಕೆ.

ಪ್ರಸ್ತಾವನೆ

ನರೇಂದ್ರನ ಪ್ರತಿ ನಡವಳಿಕೆಯ ಅರವಳಿಕೆಯಲ್ಲೂ ನಮ್ಮ ಹಿಂದಿನ-ಇಂದಿನ ಬದುಕಿನ ಸ್ಥಿತಿಗತಿಯನ್ನು ದರ್ಪಣದ ಬಿಂಬದಂತೆ ಕಾಣಬಹುದಾಗಿದೆ.

ವಿವರಣೆ:
ಸನಾತನ ಧರ್ಮದ ಪುನರುಜ್ಜೀವನವನ್ನ, ಆರ್ಯ ಸಂಸ್ಕೃತಿಯ ಪುನರುತ್ಥಾನವನ್ನೆ ತನ್ನ ಜೀವನ ಧ್ಯೇಯವಾಗಿಸಿಕೊಂಡ ಮನುಷ್ಯ,ಸುತ್ತಣ ಜಗದ ತುಂಬಾ ರಿಂಗಣಿಸುವ ಹಾಗೆ, ಮೆಚ್ಚಿ ಕೊಂಡಾಡುವ ಹಾಗೆ, ಹಿಂದೂ ಧರ್ಮದ ಲವಶೇಷವು ಅರಿವಿಲ್ಲದವರ ದಮನಿ-ದಮನಿಯಲ್ಲು ಭಾರತಾಂಬೆ ಎಂದರೆ ಧರ್ಮದ ಪ್ರತೀಕ ಎನಿಸುವಷ್ಟು,ಹಿಮಾಲಯದ ಆಧ್ಯಾತ್ಮದ ಬೆಳಕು ವಿಶ್ವದೆಲ್ಲೆಡೆ ಪಸರಿಸಲು ಕಾರಣೀಭೂತನಾದ ಮಹಾನ್ ಶಕ್ತಿಯೇ ವಿವೇಕಾನಂದ,ಅವರಿಂದಲೇ ನಿರ್ಮಿತವಾದುದ್ದೆ ವಿವೇಕ ಭಾರತ.

ವಿವೇಕವಾಣಿ ಎಂದರೆ ಆತನ ಕಂಚಿನ ಕಂಠದಲ್ಲಿ ಹೊರಟ ಮಾತಿನ ಕಚಗುಳಿಯಂತು  ಅಲ್ಲವೇ ಅಲ್ಲ, ಆತನ ಪ್ರತಿ ನಡೆ-ನುಡಿಯಲ್ಲೂ ಇಂದಿನ ನಮ್ಮ ಇರುಹನ್ನು  ಕಾಣುವ ಒಂದು ಸಣ್ಣ ಝಲಕ್.

೧೮೬೩, ಜನವರಿ ೧೨ನೇಯ ತೇದಿಯಂದು, ಅದ್ಭುತವೊಂದು ಕಲ್ಕತ್ತಾ ಮಹಾನಗರದಲ್ಲಿ ವಿಶ್ವನಾಥದತ್ತ, ಭುವನೇಶ್ವರಿ ದೇವಿಯ ಮಡಿಲ ನಗುವಾಗಿ, ಭಾರತಾಂಬೆಯ ಮುನ್ನಡೆಸುವ ಸಾರೋಟಿನ ಸಾರಥಿಯಾಗಿ ಜನ್ಮತೆತ್ತನು.

ಫೋಟೋ ಕೃಪೆ : hindu american foundation

ಬಡವರ ಕಂಡರೆ ಮರುಕ, ತಮ್ಮ ತಂದೆಯಿಂದ ಹಣ ಸಹಾಯ ಪಡೆದವರನ್ನು ದುಡಿಯಲು ಮಾರ್ಗ ತೋರುವುದು ಬಿಟ್ಟು, ಪುಕ್ಕಟೆಯಾಗಿ ಹಣ ನೀಡಿ ಭಿಕ್ಷುಕರನ್ನಾಗಿ ಯಾಕೆ ಮಾಡುವಿರಿ ಎಂದು ಪ್ರಶ್ನಿಸುವ ಧೈರ್ಯ,ಬೆಳೆಯುವ ಸಿರಿ ಮೊಳಕೆಯಲ್ಲಿ ಎದ್ದು ಕಾಣುತ್ತಲಿತ್ತು.

ಆಗಾಗ ದಕ್ಷಿಣಕ್ಕೇಶ್ವರಕ್ಕೆ  ಹೋಗಿಬರುತ್ತಿದ್ದ ಸ್ವಾಮಿ ವಿವೇಕಾನಂದ ಗುರುವನ್ನು ಕೂಡ ಪರೀಕ್ಷಿಸದೆ ಒಪ್ಪಿಕೊಳ್ಳಲಿಲ್ಲ‌. ಗುರು ಕೂಡ ಶಿಷ್ಯನನ್ನು ಪರೀಕ್ಷಿಸದೆ ಒಪ್ಪಿಕೊಳ್ಳಲಿಲ್ಲ. ಅದಕ್ಕೊಂದು ನಿದರ್ಶನವಿದೆ, ದಕ್ಷಿಣೇಶ್ವರಕ್ಕೆ ಬಂದು ಪರಮಹಂಸರ ದರ್ಶನ ಮಾಡುವುದು ನರೇಂದ್ರನಲ್ಲಿ ಒಂದು ಹವ್ಯಾಸವಾಗಿತ್ತು, ಪರೀಕ್ಷಿಸಲೆಂದೇ ಪರಮಹಂಸರು #ನರೇಂದ್ರನ ಕಡೆ ಕಿರುನೋಟ ಹರಿಸದಿದ್ದರೆ ,ನರೇಂದ್ರ ದರ್ಶನ ಪಡೆಯುವುದನ್ನು ಮಾತ್ರ ನಿಲ್ಲಿಸಲಿಲ್ಲ.

ಈ ತೆರನಾದ ಬಾಂಧವ್ಯವೇ ಗುರು-ಶಿಷ್ಯರ ನಡುವೆ ಒಂದು ಮೈಲಿಗಲ್ಲಾಗಿ ನಿಂತಿತ್ತು. “ಗುರುವಿನ ಗುಲಾಮನಾಗುವತನಕ ಮುಕುತಿ ದೊರೆಯದಣ್ಣ” ಎಂಬಂತೆ ಶಿಷ್ಯನು ಗುರುವಿಗೆ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿಕೊಂಡ ಹೊಸದೊಂದು ಮರುಕ್ಷಣ ಅದ್ಭುತವೊಂದನ್ನು ನಿರೀಕ್ಷಿಸಲಾಗುತ್ತದೆ ಎಂಬುದನ್ನು ಇಲ್ಲಿ ಕಾಣಬಹುದಾಗಿದೆ.

“ಐಶ್ವರ್ಯವು ಭೋಗ ಪ್ರೇರಕವಾದರೆ ದಾರಿದ್ರ್ಯವು ತ್ಯಾಗ ಪ್ರೇರಕವಾಗುತ್ತದೆ”. ಈ ನುಡಿಯಲ್ಲಿನ ತತ್ವವನ್ನು ನಾವು ಒಂಚೂರು ವಿಮರ್ಶಿಸಿ ನೋಡೋಣ ನರೇಂದ್ರ ತಂದೆಯ ಸಾವಿನ ನಂತರ ಬದುಕಿನಲ್ಲಿ ಬಂದೊದಗಿದ ಕಷ್ಟ-ಕಾರ್ಪಣ್ಯಗಳು ನರೇಂದ್ರ ಕುಗ್ಗಿಸಿ ಜೀವನದ ಮೇಲೆ ಜಿಗುಪ್ಸೆ ತಂದು ಜೀವನವೆಂದರೆ ನರಕ ಎನಿಸಿದರೂ ಅವನೆಂದು ಅಡ್ಡ ದಾರಿ ಹಿಡಿದವನ್ನಲ್ಲ.ತನ್ನ ಸ್ಥಿತಿಗೆ ಕಣ್ಣೀರು ಹಾಕಿದರು ಸ್ಥೈರ್ಯ ಕಳೆದು ಕೊಂದವನಲ್ಲ.

ಮಹತ್ಕಾರ್ಯಗಳನ್ನು  ಸಾಧಿಸಬೇಕೆಂದರೆ ಬರುವ ಕಷ್ಟಗಳನ್ನು ಮೆಟ್ಟಿಲಾಗಿ, ಅವಮಾನಗಳನ್ನು  ಆಯುಧವಾಗಿ ಮಾರ್ಪಡಿಸಿಕೊಳ್ಳಬೇಕು, ಹಣದಿಂದ ಎಲ್ಲವೂ ಎಂದು ಎನಿಸಿದರೂ, ಹಣ ಇಲ್ಲದಿರೆ ಬದುಕು ನಶ್ವರ ಎಂದು ಎಂದು ನಂಬಿದವನಲ್ಲ. ಕಷ್ಟವ ನೋಡಿ ದೇವರೇ ಇಲ್ಲವೆಂದರೂ ಅಂತರಂಗದ ಆಂತರ್ಯದಲ್ಲಿ ಆರಾಧಿಸಿದವನು.

ಪಾಶ್ಚಿಮಾತ್ಯಕ್ಕೆ  ಮರುಳಾಗಿ ನಮ್ಮ ಗತಕಾಲದ ವೈಭವವನ್ನು ಮರೆತು ಅವಮಾನ ಮಾಡುವವರ ಮುಂದೆ, ಭಾರತದ ತತ್ವವನ್ನು, ಹಿಂದೂ ಧರ್ಮದ ಮಹತ್ವವನ್ನು ಸಾರಿದ ಏಕೈಕ ವ್ಯಕ್ತಿ ಸ್ವಾಮಿ ವಿವೇಕಾನಂದ.

ಫೋಟೋ ಕೃಪೆ : google

“ಭರತಖಂಡದ ಬಾಳಿನಲ್ಲಿ ಧರ್ಮ ಕ್ರಾಂತಿಯಾಗದೆ, ಉಳಿದ ಸುಧಾರಣೆ ಆಗದು. ಇಂಡಿಯಾ ದೇಶದಲ್ಲಿ ರಾಜಕೀಯ ಸಮತೆ ಅಥವಾ ಸೌಮ್ಯವಾದದ ಬೀಜಗಳನ್ನು ಬಿತ್ತ ಬೇಕಾದರೆ ಧರ್ಮದ ನದಿಯನ್ನು ಹೊನಲಾಗಿ ಹಾಯಿಸಬೇಕು.” ಪ್ರಸ್ತುತ ಸನ್ನಿವೇಶಕ್ಕೂ ಸಂದರ್ಭಕ್ಕೂ ಸೂಚಿತವಾದ ಉಪದೇಶವಿದು. ನಾನು ನಾನು ಎಂದು ಮೆರೆಯುವ ಜನರ ನಡುವೆ ಧರ್ಮದ ಮೂಲ ತತ್ವ ತಿಳಿದಿದ್ದರೆ ನಾವೆಲ್ಲಾ ಒಂದೇ ಎಂಬ ವಿಶಾಲ ಮನೋಭಾವ ಕುಡಿಯೊಡೆಯುವುದೂ ಎಂಬುದರ ತಾತ್ಪರ್ಯ.

“ನಾನು ಕಾಸಿಲ್ಲದೆ ಕಡಲನ್ನು ದಾಟುತ್ತಿದ್ದೇನೆ ಭಿಕಾರಿಯಾಗಿ ಭೂಪ್ರದಕ್ಷಿಣೆ ಮಾಡುತ್ತಿದ್ದೇನೆ” ಹೀಗೊಂದು ಆತ್ಮವಿಶ್ವಾಸವೇ ಕೈಯಲ್ಲಿ ಕಾಸಿಲ್ಲದಿದ್ದರೂ, ಹೀಯಾಳಿಸುವರ ನಡುವೆ ಧೀರನಾಗಿ, ಕೆಡವುವರ ಮುಂದೆ ಕೊಡವಿ ನಿಂತು ವಿಶ್ವದ ಗಮನವನ್ನು ತನ್ನೆಡೆಗೆ ಸೆಳೆದು ನಾನೋರ್ವ ಸನ್ಯಾಸಿ ಎಂದೇ ಅಜರಾಮರವಾಗಿ ಉಳಿದ ಏಕೈಕ ವ್ಯಕ್ತಿ.ಸ್ಪೂರ್ತಿ ಸೆಲೆಗೆ ರಾಯಬಾರಿಯದವ.

ಭೇದ-ಭಾವದ ಕಿಂಚಿತ್ತು ಪರಿಚಯವಿರಲಿಲ್ಲ ಈ ಸನ್ಯಾಸಿಗೆ, ತಿರುಕರೊಡನೆ ತಿರುಕನಾಗಿ,ಶ್ರೀಮಂತರೊಡನೆ ಅವರ ಗೌರವಕ್ಕೂ, ಪೂಜೆಗೂ, ಪಾತ್ರನಾಗಿ ಬಡವರ ಗುಡಿಸಿನಲ್ಲಿ ಬಡವನಾಗಿ ಮಲಗಿ,ರಾಜರ ಮನೆಗಳಲ್ಲಿ ದೊರೆಗೆ ದೊರೆಯಾಗಿ ,ಪಂಡಿತರೊಡನೆ ಕಲಿತು ಪಾಮರರೊಡನೆ ಮಿಳಿತು ಭಾರತ ಮಾತೆಯ ಮಹಾ ಆತ್ಮದ ಅವತಾರ ಪುರುಷನಾಗಿ ಉಳಿದನು. ಅವನಲ್ಲಿನ ವಿನಯ,ಸಂಯಮ, ಎಂದು ಎಲ್ಲೂ ಸೋಲದ, ಮಣಿಯದ ಆತ್ಮವಿಶ್ವಾಸ, ನಾವೆಲ್ಲ ಈ ಸದ್ಗುಣಗಳ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲೇಬೇಕು. ದೀನನಿಗೂ ದಲಿತನಿಗೂ ಇರುವ ವ್ಯತ್ಯಾಸ ಬಡವನಿಗೂ ಶ್ರೀಮಂತನಿಗೂ ತಂದಂತಹ ಅಂತರದ ಸರಮಾಲೆಯನ್ನು ನಾವಿಂದು ಹೋಗಲಾಡಿಸಬೇಕು.

ವಿಗ್ರಹ ಪೂಜೆಗೂ ಹೊಸದೊಂದು ರೂಪುರೇಷೆ ಕೊಟ್ಟಂತಹ ಸನ್ನಿವೇಶ:
ಒಮ್ಮೆ ಮಂಗಳ ಸಿಂಗ ಎಂಬ ವ್ಯಕ್ತಿ ಮೂರ್ತಿ ಪೂಜೆಯಲ್ಲಿ ನಂಬಿಕೆ ಇಲ್ಲ ಎಂದ, ಅದೇ ಸಂದರ್ಭದಲ್ಲಿ ಆಸ್ಥಾನದ ಫೋಟೋ ತೋರಿಸಿ ಉಗುಳಲು ಸೂಚಿಸಿದರು. ಇದು ರಾಜರ ಚಿತ್ರ ನನ್ನಿಂದಾಗದು ಎಂಬ ಉತ್ತರಕ್ಕೆ ಪ್ರತ್ಯುತ್ತರವಾಗಿ ಭಕ್ತರಿಗೆ ವಿಗ್ರಹವನ್ನು ನೋಡಿದಾಗ ಪರಮಾತ್ಮನ ನೆನಪಾಗುವುದು, ವಿಗ್ರಹ ಸೂಚಿಸುವ ಈಶ್ವರನನ್ನು ಪೂಜಿಸುವವರು ವಿಗ್ರಹವನ್ನು ಪೂಜಿಸುವುದಿಲ್ಲ ಎಂದು ಹೇಳಿದರು. ಯಾವ ಭಕ್ತನು ಎಲೈ ಕಲ್ಲೇ, ಎಲೈ ಕಬ್ಬಿಣವೆ ನನ್ನನ್ನು ಪೊರೆ ಎಂದು ಬೇಡುವುದಿಲ್ಲ ಅವರವರ ಭಾವದಂತೆ ಅನಂತತೆಯ ಕಡಲು ಈ ಭಕ್ತಿ. ಇಂದಿನ ಪ್ರಸ್ತುತ ಪರಿಸ್ಥಿತಿಗೆ ಬೇಕಾದದ್ದು ಕೂಡ ಇಂತಹದೇ ಗಟ್ಟಿತನ ಅಲ್ಲವೇ..? ಇಂದಿನ ಮಕ್ಕಳು ಹಿರಿಯರಿಗೆ, ಗುರುಗಳಿಗೆ ಗೌರವ ಕೊಡದೆ ಉಳಿಯುತ್ತಿರುವಾಗ ಅನನ್ಯತೆಯ ಭಕ್ತಿಯ ರಸಭಾವವ ನಾವು ಸವಿಯಲೆ ಬೇಕಲ್ಲವೇ .?

ವೇದಾಂತವು ಕೆಲವು ಮತ-ವಾದಗಳ ಸಮಷ್ಟಿ ಮಾತ್ರವಲ್ಲ ಅದು ಸಾಧಕ ಜೀವನದ ವಿಭಿನ್ನ ಅವಸ್ಥೆಗಳಿಂದ ಅನೂಭೂತವಾದ ಸತ್ಯ ಸಮೂಹ. ಆದ್ದರಿಂದ ಅವುಗಳು ಪರಸ್ಪರ ವಿರೋಧಿಗಳಲ್ಲ ಪರಸ್ಪರ ಪೂರಕಗಳು, ನಿಜವಾದ ತತ್ವಜ್ಞಾನಿ ಬರಿಯ ಸಿದ್ಧಾಂತಗಳ ಮಂದೆಯಲ್ಲ ಸುವ್ಯವಸ್ಥಿತವಾದ ಅನುಭವಗಳ ಶ್ರೇಣಿಯ ಧಣಿ. ಇಲ್ಲಿ ಯಾವುದೇ ಮತ ಜಾತಿಗೆ ಆಸ್ಪದ ಕೊಡದೆ ಅನುಭವವೇ ಸರ್ವ ಶ್ರೇಷ್ಠ ಎಂದು ಸಾರುವಲ್ಲಿ ನಿರತನಾದನು ಈ ದುರ್ದಮ್ಯ ಸಂನ್ಯಾಸಿ.

ಸರ್ವಧರ್ಮ ಮತ ಸಮ್ಮೇಳನ ಎಲ್ಲಿ ನಡೆಯುತ್ತಿದೆ ಯಾವಾಗ ನಡೆಯುತ್ತಿದೆ ಅದಕ್ಕೆ ಪ್ರತಿನಿಧಿಯಾಗಿ ಹೋಗಬೇಕಾದರೆ ನಿಯತ ವಿಧಾನವಿದೆಯಾ..?  ಯಾವುದರ ಪೂರ್ವಗ್ರಹ ಮಾಹಿತಿ ಇಲ್ಲದೆ ಖಾಲಿ ಕೈಯಲ್ಲಿ ಹೊರಟವನು, ಇಡೀ ವಿಶ್ವದ ಗಮನವನ್ನು ತನ್ನೆಡೆಗೆ ಸೆಳೆಯಲು ತನ್ನ ಬತ್ತಳಿಕೆಯಲ್ಲಿದ್ದಿದ್ದು, ಕೇವಲ ಎದೆಯಲ್ಲಿನ ಆತ್ಮವಿಶ್ವಾಸ. ಪರಮಹಂಸರು ಕಲಿಸಿ ಕೊಟ್ಟಂತಹ ವಿದ್ಯೆ ,ವಿನಯ ,ಆಳವಾದ ಪಾಂಡಿತ್ಯ, ಇಷ್ಟರಿಂದಲೇ ಭಾರತವೆಂದರೆ ಅಂಧಕಾರದಿಂದ ಬಳಲಿದ ದೇಶವಲ್ಲ ಸನಾತನ ಧರ್ಮವನ್ನು ಎತ್ತಿಡಿದ, ಹಿಂದೂ ಧರ್ಮ ಕಟ್ಟಳೆಗಳಲ್ಲ ,ಮಾನವನ ಜೀವನಕ್ಕೆ ಬೇಕಾದ  ಅವಶ್ಯಕತೆಯುಳ್ಳ ಧಾರ್ಮಿಕ ಪಾಠ-ಪ್ರವಚನಗಳು. ಆರ್ಥಿಕವಾಗಿ ಕಡುಬಡತನ, ಧಾರ್ಮಿಕವಾಗಿ ಅತಿ ಶ್ರೀಮಂತ ದೇಶ ಎಂದು ೧೮೯೩ ಸೆಪ್ಟೆಂಬರ್ ೧೧ ದೂರದ ಚಿಕಾಗೋದಲ್ಲಿ  ಸಾರಿದಂತಹ ಮಹಾನ್ ವ್ಯಕ್ತಿ.

ಫೋಟೋ ಕೃಪೆ : The new learn

ವೇದಗಳ ಬೋಧಿಸುವುದು, ಪರಸ್ಪರ ವಿರುದ್ಧವಾದ ಪ್ರಕೃತಿ ನಿಯಮಗಳು ಸಮುಚ್ಚಯ ಮಾತ್ರವಲ್ಲ ಕಾರ್ಯಕಾರಣಗಳ ಕೊನೆಗಾಣದ ಸೆರೆಮನೆಯನ್ನಲ್ಲ ಆದರೆ ಸಮಸ್ತ ಜಡ ಚೇತನಗಳಲ್ಲಿ ಅಂತರ್ಯಾಮಿಯಾಗಿರುವ ಏಕಮಾತ್ರ ಸತ್ವ ಪದ ಈ ವೇದಗಳು.

ಚಿಕಾಗೋದಲ್ಲಿ ನಡೆದ ಸಮ್ಮೇಳನ ಕುರಿತು ಮುಖ್ಯ ಪತ್ರಿಕೆಯಲ್ಲಿ  ಒಂದು ವರದಿ ಪ್ರಕಟವಾಗಿತ್ತು. ಸರ್ವಧರ್ಮ ಮತಸಮ್ಮೇಳನದಲ್ಲಿ ವಿವೇಕಾನಂದರು ಶ್ರೇಷ್ಠ ವ್ಯಕ್ತಿ ಅವರ ಭಾಷಣವನ್ನು ಕೇಳಿದ ಮೇಲೆ ಇಂತಹ ಸುಸಂಸ್ಕೃತ ಜನಾಂಗಕ್ಕೆ ನಾವು ಧರ್ಮ ಪ್ರಚಾರಕರನ್ನು ಕಳಿಸುವುದು ಶುದ್ಧ ಮೂರ್ಖತನ. ಎಂಬ ವರದಿಯ ನಾವು ಇರುವ ತನಕ ಮರೆಯುವ ಹಾಗೆ ಇಲ್ಲ.. ಇಂದಿನ ಪಾಶ್ಚಿಮತ್ಯ ಸೆಳೆತಕ್ಕೆ ಒಳಗಾದ ಯುವಜನಾಂಗ ಭಾರತದ ಸಂಸ್ಕೃತಿಯನ್ನು ಅಲ್ಲಗಳೆದು, ಅವಮಾನಿಸಿ ತಮಗೂ, ತಾವು ಬೆಳೆದ ನಾಡಿಗೂ,ದೇಶಕ್ಕೂ ಸಂಬಂಧವಿಲ್ಲ ಎಂದು ,ದೂರದ ದೇಶದಲ್ಲಿ ಎಲ್ಲೋ ಕುಳಿತು ಅಲ್ಲಗಳೆಯುವ ಇಂದಿನ ಜನಾಂಗಕ್ಕೆ ಅಂದು #ಸ್ವಾಮಿ_ವಿವೇಕಾನಂದರು ಕಟ್ಟಿಕೊಟ್ಟ  ಭಾರತಾಂಬೆ ಕೀರ್ತಿಯ ಕಿಂಚಿತ್ತು ಪರಿಚಯವಾದರೂ ಆಗಲೇಬೇಕಿದೆ.  ಚಿತೆಯಲ್ಲಿ ಬೇಯುವ ಕೊನೆ ಕ್ಷಣದ ತನಕ ಹೊತ್ತ ನಾಡು, ಹೆತ್ತ ತಾಯಿ, ಮೆಟ್ಟಿದ ನೆಲ, ಕೊಟ್ಟಂತಹ ತಾತ್ವಿಕತೆಯ ಸತ್ವವನ್ನು ಅರಿಯಬೇಕಿದೆ.

ಆಡಂಬರದ ಜೀವನ ಸಾಗಿಸುವಾಗ ಬೆಳೆದು ಬಂದ ರೀತಿಯನ್ನು ಅಲ್ಲಗಳೆಯಬಾರದು. ಎಲ್ಲೋ ನೆಲೆಸಿ ಆಡಂಬರದ ಜೀವನ ಸಾಗಿಸಿದರು ಬೌದ್ಧಿಕವಾಗಿ ಬೆಳೆಯಲು ಸುಸಂಸ್ಕೃತರಾಗಲು ನಾಗರೀಕತೆಯ ಪಾಟಕೊಟ್ಟ ಭಾರತಾಂಬೆಯ, ಭುವನೇಶ್ವರಿ ಆಶೀರ್ವಾದ ಮರೆಯಬಾರದು..ವಿದೇಶ ಸುತ್ತುವ ಕೆಲಸ ಮುಗಿದ ಬಳಿಕ ನಾಲ್ಕು ವರ್ಷದ ತರುವಾಯ ಭಾರತದ ಮಡಿಲಿಗೆ ಮತ್ತೆ ಬರುವಾಗ ವಿವೇಕಾನಂದರು ಹೇಳಿದಂತಹ ಮಾತುಗಳಿವು.

ಫೋಟೋ ಕೃಪೆ : tour my india

ಮೊದಲು ಭಾರತ ಭೂಮಿಯನ್ನು ಪ್ರೀತಿಸುತ್ತಿದ್ದೆ, ಈಗಲಾದರೆ ಆ ಪುಣ್ಯಭೂಮಿಯ ಮಣ್ಣಿನ ಹುಡಿ ಕೂಡ ನನಗೆ ಪವಿತ್ರವಾಗಿದೆ, ಬೀಸುವ ಗಾಳಿ ಪಾವನಕರವಾಗಿದೆ ,ಈಗ ನನಗದು ನಿಜವಾದ ಪುಣ್ಯ ಭೂಮಿಯಾಗಿದೆ, ಯಾತ್ರಸ್ಥಳವಾಗಿದೆ ,ತೀರ್ಥಕ್ಷೇತ್ರವಾಗಿದೆ.ದೇಶದ ಮೇಲೆ ಈ ರೀತಿಯ ಒಲವೊಂದಿದ್ದರೆ ನಾವು ಆಗಸದೆತ್ತರಕ್ಕೆ  ಬೆಳೆದುನಿಂತರು ಭೂಮಿಯ ಋಣ ತೀರಿಸಲು ಇಷ್ಟೊಂದು ವಿನಯತೆ ನಮ್ರತೆ ಬೇಕಾಗುತ್ತದೆ.ಅಷ್ಟು ಸುಲಭವಲ್ಲ ಹೆತ್ತ ತಾಯಿ ಹೊತ್ತ ನಾಡು ನಮಗೆ ಕೊಟ್ಟಂತಹ ಸಹಾಯದ ಬಳುವಳಿಯ ಋಣಭಾರ ತೀರಿಸುವುದು.ಅವಕಾಶ ಸಿಕ್ಕರೆ ಪ್ರಾಣ ಹೋಗುವ ಸಮಯದಲ್ಲಾದರೂ ಸರಿಯೇ ಋಣಭಾರ ಕಡಿಮೆ ಮಾಡಿಕೊಳ್ಳೋಣ.

ಸಾವಿಗೆ ಹೆದರಿದವನಲ್ಲ, ಧೈರ್ಯಕ್ಕೆ ಹೊಸ ಅರ್ಥ ಕೊಟ್ಟವ.ಅಂಜಿಕೆ ಎಂಬುದೇ ಇರಲಿಲ್ಲ,

#ಧೈರ್ಯ  ಅವನ ಅಸ್ತ್ರ ,
ವಿನಯತೆ ಒಂದೇ ಅವನ ಶಕ್ತಿ ,
ಆತ್ಮವಿಶ್ವಾಸ ಅವನ ಆಸ್ತಿ ,

ಹುರಿದುಂಬಿಸಲು ನಿಂತರೆ ಭೋರ್ಗರೆಯುವ ಕಡಲು ಕೂಡ ಶಾಂತವಾಗಿ ಈತನ ಮಾತುಗಳ ಆಲಿಸಬೇಕು, ಕಾಯಕಕ್ಕೆ ನಿಂತರೆ ಹಿಡಿದ ಕೆಲಸ ಮುಗಿಯುವ ತನಕ ವಿರಮಿಸುವ ಗುಣವೇ ಇಲ್ಲ, ಧ್ಯಾನಸ್ಥನಾಗಿ ಉಳಿದರೆ ಸುತ್ತಣ  ಜಗವು ತೃಣಕ್ಕೆ ಸಮ.

ತಪ್ಪು ಕಂಡರೆ ಹಿರಿಯರನ್ನು ಬಿಟ್ಟವನಲ್ಲ, ಮೇಧಾವಿಯನ್ನು ಕ್ಷಮಿಸಿದನಲ್ಲ, ಭೂಪ್ರದಕ್ಷಿಣೆ ಮಾಡಿಬಂದರು ಗರ್ವವಿಲ್ಲ.ಪ್ರತಿಕ್ಷಣ ತನ್ನನ್ನು ತಾನು ಹರವಿಕೊಂಡು ಕಲಿಸಿಕೊಡುವ ಮೂರ್ತಿ, ಸೋತರು  ಧೃತಿಗೆಟ್ಟರು, ಎದೆಯಲ್ಲಿನ ಆತ್ಮವಿಶ್ವಾಸ ಕಣ್ಣಲ್ಲಿನ ಮಿಂಚು ,ಮಾತಲ್ಲಿನ ಸತ್ಯ ,ನಡೆಯಲ್ಲಿನ ನುಡಿ ,ನುಡಿದಂತೆ ನಡೆಯುವ ಗುಣ ,ಎಂದು ಎಲ್ಲಿಯೂ ಎಡವಿದ್ದು ಇಲ್ಲ ಬಿತ್ತಿಕೊಟ್ಟಿದ್ದು ಇಲ್ಲ.

“ನಾನು ಪಾಪಿ ಎಂದೂ  ಕುಗ್ಗುವುದಕ್ಕಿಂತಲೂ ಮಹಾಪಾಪವು ಮತ್ತೊಂದಿಲ್ಲ”
ಎದೆಯೊಳಗಿನ ಆತ್ಮ ವಿಶ್ವಾಸಕ್ಕೆ, ಆತ್ಮಸ್ಥೈರ್ಯಕ್ಕೆ ನವಿರಾದ ಹೊಳಪು ನೀಡಿದ ಸುಂದರ ವದನದವನು ಆತ,

ಇನ್ನೊಂದು ಶತಮಾನ ಕಳೆದರೂ ಯುವಕರಿಗೆ, ಉತ್ಸಾಹ ಹೀನರಿಗೆ,ನನ್ನಿಂದ ಆಗದು ಎಂದು ಸೊರಗುವ ಜನಕ್ಕೆ ಮಾದರಿ , ರಾಯಬಾರಿ ಎಲ್ಲವೂ ಈತನೊಬ್ಬ ಎಂದು ಹೇಳಲು ಮನ ಹರ್ಷಿಸುತ್ತದೆ.

“ದುರಾಲೋಚನೆ ದುರಾಚಾರದಷ್ಟೆ ಕೆಟ್ಟದ್ದು. ಕಾಮ ಶಕ್ತಿಯನ್ನು ಧರ್ಮ ಶಕ್ತಿಯನ್ನಾಗಿ ಪರಿವರ್ತಿಸಿದರೆ ಸಿದ್ಧಿಯಾಗದೆ ತಪ್ಪದು” ಎಂತಹ ಅದ್ಭುತ ಸಾಲಿದೆ ದೂರದೃಷ್ಟಿ ಒಮ್ಮೊಮ್ಮೆ ದೂರದ ಆಲೋಚನೆ ದುರಾಚಾರ ವಾಗಿ ಬದಲಾಗಿಬಿಡುತ್ತದೆ ಇಂದಿನ ಯುವ ಜನಾಂಗ ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಮೋಜು ಮಸ್ತಿ ಮತ್ತೆ ಇನ್ನಿತರ ಕೆಲಸದಲ್ಲಿ ತೊಡಗಿಸಿ ಕೊಂಡು ಜಿವಾಮಾಂದಾ ಅತ್ಯುತ್ತಮ ಕ್ಷಣಗಳ ಕೇವಲ ಅನಗತ್ಯ ಸಂದೇಶಗಳ ಗುಂಗಲ್ಲಿ, ಅವರು ಇವರನ್ನು ಮೆಚ್ಚಿಸುವುದರಲ್ಲೆ ಕಳೆದು ಬಿಡುತ್ತಾರೋ ವಿನಃ ಹೊಸದೊಂದು ಸಾಧನೆಯ, ಹೊಸದೊಂದು ಅನ್ವೇಷಣೆ ಬಗ್ಗೆ ಯೋಚಿಸುವುದಿಲ್ಲ.

ಇತ್ತೀಚೆಗೆ ಬಂದ ವರದಿ ಪ್ರಕಾರ, ಭಾರತ ದೇಶದಲ್ಲಿಯೇ ಅತಿ ಹೆಚ್ಚು ಜನರು ಇಂಟರ್ನೆಟ್ ಬ್ರೌಸಿಂಗ್ ಮತ್ತು ಅಶ್ಲೀಲತೆಯ ಗುಂಗಲ್ಲೇ ಜೀವನ ಕಳೆದು ಬಿಡುತ್ತಾರೆ . ತಂತ್ರಜ್ಞಾನದ ಉಪಯೋಗದ ಬದಲು ದುರುಪಯೋಗ ಪಡಿಸಿಕೊಂಡು , ಲೈಂಗಿಕ ಶಕ್ತಿಯನ್ನು ಅತಿಯಾದ ತೆವಲು ಇಂದು ಸಾಲು ಸಾಲು ಅತ್ಯಾಚಾರಕ್ಕೆ ಸಾಕ್ಷಿಯಾಗಿ ನಿಂತಿದೆ. ಆ ಕಂಚಿನ ಕಂಠದಲ್ಲಿ ಶಂಕದಂತೆ ಬಂದ ವಾಣಿಯನ್ನು ಓದುವುದು ಅಷ್ಟೇ ಅಲ್ಲ, ಜೀವನದ ಹಾದಿಯಲ್ಲಿ, ಅನುಸರಿಸಬೇಕು, ಅಳವಡಿಸಿಕೊಳ್ಳಬೇಕು..

“ನಿರ್ಭಯತೆ ಜೀವನದ ರಹಸ್ಯ ಮುಕ್ತಿ ಎಂದರೆ ಭಯದ ವಿನಾಶ”ನಿರ್ವಾಣ ಹೊಂದುವುದೇ ಮುಕ್ತಿ ಎಂದು ಭಾವಿಸಿದ ಕಾಲಘಟ್ಟವದು ,ಅಂತಹ ಸಮಯದಲ್ಲಿ ಧೈರ್ಯದಿಂದ ಬಾಳುವವನು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೈಚೆಲ್ಲಿ ಕೂರುವುದಿಲ್ಲ. ಧೈರ್ಯವಿದ್ದರೆ ಭಯ ನಾಶವಾಗುವುದು ಭಯ ತೊಲಗಿದರೆ ಮುಕ್ತಿ ಲಭಿಸುವುದು. ಸತ್ಯ ಅಲ್ಲವೇ,..?ಅದೆಷ್ಟೋ ಜನರಿಗೆ ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯದ ಸ್ವ ಅರಿವು ಕೂಡ ಇರುವುದಿಲ್ಲ, ಆ ಶಕ್ತಿಗೆ ಪಾದರಸದ ಲೇಪದಂತೆ ಭಯ,ಹಿಂಜರಿಕೆ ಮನೋಭಾವ ಆವರಿಸಿ ಬಿಟ್ಟಿರುತ್ತದೆ .

“ಒಂದರಲ್ಲಿಯೇ ಚೆನ್ನಾಗಿ ಮುಂದುವರಿ ಎಂಬುದು ಹಿಂದಿನವರ ಮತ, ಎಲ್ಲದರಲ್ಲಿಯೂ ಸಮತೆ ಇರಲಿ ಎಂಬುದು ಇಂದಿನವರ ಮತ”ಹೌದು ಹಿಂದಿನ 21ನೇ ಶತಮಾನಕ್ಕೆ ಒಗ್ಗಿಕೊಂಡ ತಕ್ಕುದಾದ ನುಡಿ ,ಇಂದೆಲ್ಲ ಎಲ್ಲಾ ಕಡೆಯೂ ಮಲ್ಟಿಟಾಸ್ಕಿಂಗ್ ಕೇಳುತ್ತಾರೆ ಒಂದರಲ್ಲಿ ಮುಂದುವರೆದರೆ ಬದುಕುವುದು ತುಂಬಾ ಕಷ್ಟವೆಂದು 19ನೇ ಶತಮಾನದಲ್ಲಿ ನುಡಿದ ಧೀಮಂತ ನಾಯಕ.

ಫೋಟೋ ಕೃಪೆ : hindu american fundation

ಕಳೆದ ಶತಮಾನಗಳಲ್ಲಿ ನಮ್ಮ ದೇಶದ ಮಕ್ಕಳು ಪಡೆಯುವ, ಸಾಮ್ರಾಜ್ಯಶಾಹಿಗಳು ರೂಪಿಸಿದ ಶಿಕ್ಷಣವನ್ನು ಕುರಿತು ಸ್ವಾಮಿ ವಿವೇಕಾನಂದರು ಹೀಗೆಂದರು: ನೀವು ಪಡೆಯುವ ಶಿಕ್ಷಣದಲ್ಲಿ ಕೆಲವೊಂದು ಗುಣಗಳಿವೆ, ಆದರೆ ಅದರಿಂದ ಆಗುವ ಅಪಕಾರದ ಪ್ರಮಾಣ ಎಷ್ಟು ಹೆಚ್ಚಿದೆ ಎಂದರೆ ತಕ್ಕಡಿಯ ಒಂದು ತಟ್ಟೆಯಲ್ಲಿ ಒಳ್ಳೆಯ ಅಂಶದ ಭಾರವೇ ಇಲ್ಲ ಎನ್ನುವಂತಾಗಿದೆ. ಮಗುವನ್ನು ಶಾಲೆಗೆ ಕರೆದೊಯ್ದಾಗ ಮೊದಲು ಕಲಿಯುವುದು, ತನ್ನ ತಂದೆ ಒಬ್ಬ ಮೂರ್ಖನೆಂದು, ಎರಡನೇಯದು ತನ್ನ ಅಜ್ಜ ಹುಚ್ಚನೆಂದು, ಮೂರನೆಯದು ತನ್ನ ಗುರುಗಳೆಲ್ಲ ಮೋಸಗಾರರೆಂದು, ನಾಲ್ಕನೆಯದು ತನ್ನ ದೇಶದ ಪವಿತ್ರಗ್ರಂಥಗಳಲ್ಲಿ ಸುಳ್ಳು ಮೂಡನಂಬಿಕೆಗಳ ಅಂತೆ-ಕಂತೆಯೆಂದು, ನಾವೆಲ್ಲ ಕೆಲಸಕ್ಕೆ ಬಾರದವರು ತಮ್ಮ ದೇಶದಲ್ಲಿ ಮಹಾನ್ ವ್ಯಕ್ತಿಗಳ ಹುಟ್ಟಿಲ್ಲ ಎಂದು ಹೀಗೆ ಬೆಳೆದ ಹುಡುಗನೊಬ್ಬ 16ನೇ ವಯಸ್ಸಿನ ಹೊತ್ತಿಗೆ ಉತ್ಸಾಹ,‌ಶಕ್ತಿಗಳಿಲ್ಲದೆ ನಿಷೇಧಾತ್ಮಕ ಭಾವನೆಗಳ ಮುದ್ದೆ ಆಗುತ್ತಾನೆ. ನಿಷೇಧಾತ್ಮಕ ವಿದ್ಯಾಭ್ಯಾಸ ಅಥವಾ ನಿಷೇಧ ಮಯ ಭಾವನೆಗಳ ಮೇಲೆ ನಿಂತ ಯಾವುದೇ ತರಬೇತಿ ಸಾವಿಗಿಂತಲೂ ಭಯಾನಕ.



ಹೌದು ಇಂದಿನ ಶಿಕ್ಷಣ ಗುಣಮಟ್ಟಕ್ಕಿಂತ ಅಂಕ ಗಳಿಕೆಯ ಸಾಧನವಾಗಿದೆ, ಸಾಲು ಸಾಲು ಪದವಿ ಪಡೆದವನಿಗೆ ಕಿಂಚಿತ್ತು ಮಾನವೀಯತೆಯ ಪರಿಚಯವಿಲ್ಲ, ತಿಳಿಸಿ ಕೊಡುವ ಸಾಧ್ಯತೆಗಳು ಕೂಡ ಕಡಿಮೆ, ಈ 22 ವರುಷದಲ್ಲೀ, 17 ವರುಷದ ವಿದ್ಯಾಭ್ಯಾಸದಲ್ಲಿ ಪಠ್ಯ ಪುಸ್ತಕ ಓದುವುದು ಇರಲಿ ನೋಟ್ಸ್ ಬಿಟ್ಟು ಬೇರೆ ಕಡೆ ಗಮನ ಹರಿಸಿದ್ದು ಕೂಡ ಇಲ್ಲ ನನ್ನಯ ಸ್ನೇಹಿತರು, ಆದ್ರೆ ನನಗೆ ಯಾಕೆ ಈ ಓದುವ ಬರೆಯುವ ಹುಚ್ಚು ಎಂದು ಇಂದಿಗೂ ತಿಳಿಯಲಿಲ್ಲ, ಪಠ್ಯ ಪುಸ್ತಕದ ಹೊರಗಡೆ ಒಂದು ಗುಣಮಟ್ಟ ಭಾವಗಳ ಸಂಗಡವಿದೆ ಎಂದು ಅರಿತೆ, ಇದುವರೆಗೂ ಮೂಢನಂಬಿಕೆ ಎಂಬುದು ಯಾವುದು ಇಲ್ಲ , ಅದಕ್ಕೆ ವೈಜ್ಞಾನಿಕ ಕಾರಣವಿದೆ ಎಂಬುದನ್ನು ಸ್ವತಃ ಅರಿತುಕೊಂಡ ನಿದರ್ಶನ ಹೇಳ ಬಯಸುವೆ, ಬಹಳ ವೈಯಕ್ತಿಕ ಎನಿಸಬಹುದು ಆದ್ರೂ ಹೆಣ್ಣಿಗೆ ಗೌರವ ಕೊಟ್ಟ ನಾಡಿದು ಎಂಬುದನ್ನು ನಾ ಒಪ್ಪುತ್ತೇನೆ, ಋತುಮತಿಯಾದ ನಂತರ ತಿಂಗಳ ರಜೆಯಲ್ಲಿ ನರಕ ಯಾತ್ರೆಯನ್ನು ಅನುಭವಿಸುವ ಹೆಣ್ಣಿನ ಕಷ್ಟಕ್ಕೆ ಕೊನೆ ಇಲ್ಲವೇ ಇಲ್ಲ ಅದನ್ನು ನಾನು ಕೂಡ ನಂಬಿದ್ದೆ, ಪ್ರತಿ ತಿಂಗಳ ಕೊನೆಯಲ್ಲಿ ನರಳಾಟ, ಆ ರೌರವ ಕೂಗಾಟ, ಎಲ್ಲವನ್ನೂ ಕಳೆದ ನಾಲ್ಕು ತಿಂಗಳ ಹಿಂದೆ ಎಡಮೂಗಿಗೆ ಮೂಗುತಿ ಬಿದ್ದ ಮೇಲೆ ಕಿಂಚಿತ್ತು ನೋವಿಲ್ಲ, ಎಡ ಭಾಗದ ಮೂಗಿಗೆ ಗರ್ಭ ಕೋಶದ ನರಗಳು ಸಂಧಿಸಿರುವುದರಿಂದ ನೋವಿನ ಬೇಗೆ ಕಣ್ಣಿಗೆ ಕಾಣುವುದಿಲ್ಲ, ಆದ್ರೆ ಹಿರಿಯರಿಗೆ ಇದೆಲ್ಲ  ತಿಳಿದಿಲ್ಲವೋ ಅಥವಾ ನಮಗೆ ತಿಳಿಸುವ ಪರಿ ತಿಳಿದಿಲ್ಲವೋ ಗೊತ್ತಿಲ್ಲ, ಹೆಣ್ಣು ಮಕ್ಕಳಿಗೆ ಎಡ ಪಾಸರೆ ಅದೃಷ್ಟ ಎಂದು ಹೇಳಿದ ನೆನಪು. ಇನ್ನು ಪಠ್ಯ ಪುಸ್ತಕ, ಕರ್ನಾಟಕದಲ್ಲಿರುವ ನಮಗೆ ಕರ್ನಾಟಕದ ರಾಜ್ಯಭಾರ ತಿಳಿಸಿದಕ್ಕಿಂತ ಪ್ರಪಂಚ ಮತ್ತು ಭಾರತದ ಆಡಳಿತ ಹೇಳಿದ್ದೆ ಹೆಚ್ಚು ನಿಂತ ನೆಲದ ಮೇಲೆ ಅಭಿಮಾನ ಮೂಡಿಸದ, ಹೊತ್ತ ತಾಯಿ ನಾಡ ಮೇಲೆ ಹೇಗೆ ಅಭಿಮಾನ ಬರುವುದು, ಬಿತ್ತುವ ಭಾವಾಗಳೇನಿದ್ದರು ಬಾಲ್ಯದಲ್ಲಿ ಬಿತ್ತಿ ಬೆಳೆ ಬೆಳೆಯುತ್ತಾ ಬಲವಾಗಿ ಧೃಡವಾಗಿಸಬೇಕು, ಇಂತಹ ಏರುಪೇರುಗಳನ್ನು 19ನೇ ಶತಮಾನದಲ್ಲಿಯೇ ನುಡಿದಿದ್ದರು. ಹೀಗೆ ಸಾವಿರ ಉದಾಹರಣೆಗಳು ನಮಗೆ ಲಭ್ಯವಾಗುತ್ತದೆ, ಇಣುಕಿ ಕೆದುಕಿ ನಾವು ನೋಡಿ ಕಲಿಯಬೇಕಷ್ಟೆ.

ಆ ಮಹಾನ್ ಚೇತನ ನನ್ನ #ಉತ್ಸಾಹದ ಚಿಲುಮೆ,ಅವನ ಕಂಠದಿಂದ ಹೊರಟ ಪ್ರತಿ ಮಾತು ನನ್ನ ದಿನಚರಿಯ ಸುಪ್ರಭಾತ. ಆ ಮನುಕುಲದ  ಪ್ರಭುವಿನ ಕಳೆ ಇನ್ನೂ ಸಾಸಿರ ವರುಷದ ದಾಟಿದರೂ ನನ್ನಂತಹವರಿಗೆ ಮಾರ್ಗದರ್ಶಿಯಾಗಿ ನೆಲೆಸಿರುತ್ತಾನೆ.. ನಿಮ್ಮ ಪದಕಮಲಗಳಿಗೆ ಶರಣು ನರೇಂದ್ರ..

ಉಪಸಂಹಾರ: ನೆಚ್ಚು ಕೆಟ್ಟವರಿಗೆ ಎದೆಗೆಚ್ಚಾಗಿ, ಕಂಗೆಟ್ಟವರಿಗೆ ಕಣ್ಬೆಳಕಾಗಿ,ಕುಗ್ಗಿದವರಿಗೆ ಸಿಡಿಲ ಬಡಿತವಾಗಿ,ಅಂಧಕಾರದ ನೆರಳಿಗೆ ಪ್ರಕಾಶಮಾನವಾಗಿ, ಹಿಂದೂ ಧರ್ಮದ ಪರಿವ್ರಾಜಕನಾಗಿ ,ಮತ್ತೆ ಮತ್ತೆ ಹುಟ್ಟುವನು ನರೇಂದ್ರ ಭೂಮಿಯ ಅಂತ್ಯದ ತನಕ ನಿಸ್ವಾರ್ಥ ಮನದ ನುಡಿಯಲ್ಲಿ, ಸಾಧಿಸುವ ಎದೆಗೆಚ್ಚು ಉಳ್ಳವರ ಗಟ್ಟಿತನದಲ್ಲಿ…


  • ಅಮೃತ ಎಂ ಡಿ (ಗಣಿತ ಶಾಸ್ತ್ರ ವಿಭಾಗ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ)ಮಾಗನಹಳ್ಳಿ ಮಂಡ್ಯ ಜಿಲ್ಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading