ಅಂಡಮಾನ್ ಟೂರ್ ಹೋಗಿದ್ದೆ. ಸಂಜೆ ಸೆಲ್ಯುಲರ್ ಜೈಲ್ ನೋಡಿ ಬಂದ ಮೇಲೆ ಗೈಡ್ ಹೇಳಿದ್ದ ‘ ನಾಳೆ ಬೆಳಗ್ಗೆ ಆರು ಘಂಟೆಗೆ ರೆಡಿ ಆಗಿ. ರೋಸ್ ಐಲ್ಯಾಂಡ್, ವೈಪರ್ ಐಲ್ಯಾಂಡ್ ಮತ್ತು ನಾರ್ತ್ ಬೇ ದ್ವೀಪಗಳನ್ನು ನೋಡಿ ಸಂಜೆ ಹಿಂದೆ ಬರೋದು ‘ ಅಂತಾ. ಮುಂದೇನಾಯಿತು ಓದಿ…

ಫೋಟೋ ಕೃಪೆ : picnincwale
ಬೆಳಗ್ಗೆ ಅಲಾರ್ಮ್ ಎಚ್ಚರಿಸಿದಾಗ ಎದ್ದು ಹೊರಗೆ ಬಂದು ನೋಡಿದರೆ ಆಗಲೇ ಆಗಸದ ಅಂಚಿನಲ್ಲಿ ಕೆಂಪು ಮೂಡಿತ್ತು. ಛೇ.. ಲೇಟ್ ಆಯ್ತೆನೋ ಎಂದು ವಾಚ್ ನೋಡಿದರೆ ಮುಂಜಾವಿನ ನಾಲ್ಕೂವರೆ ತೋರಿಸುತಿತ್ತು. ಆಮೇಲೆ ಹೊಳೆಯಿತು. ಇಲ್ಲಿನ ರೇಖಾಂಶಕ್ಕೂ, ನಮ್ಮಲ್ಲಿನ ರೇಖಾಂಶಕ್ಕೂ ಹೋಲಿಸಿದರೆ ಸುಮಾರು ಎರಡು ಘಂಟೆಗಳ ಮುಂಚೆಯೇ ಇಲ್ಲಿ ರವಿ ಉದಯಿಸಿ, ಸಂಜೆ ಅಷ್ಟೇ ಬೇಗ ಮುಳುಗಿ ಬಿಡುತಿದ್ದ.
ಅಂತೂ ಹೇಳಿದ ಸಮಯಕ್ಕೆ ಸರಿಯಾಗಿ ರಾಜೀವ್ ಗಾಂಧೀ ವಾಟರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗೆ ಬಂದಾಗ ಆಗಲೇ ಸುಮಾರು ಇಪ್ಪತ್ತು ಇಪ್ಪತೈದು ಜನ ಅಲ್ಲಿ ಸೇರಿದ್ದರು. ಸ್ವಲ್ಪವೇ ಹೊತ್ತು. ಆಮೇಲೆ ಸಾಲಾಗಿ ನಿಂತು ಡಬಲ್ ಡೆಕ್ಕರ್ ಬೋಟ್ ಏರಿದೆವು. ಟೇಬಲ್ – ಚೇರ್ ಗಳು ಇದ್ದವು. ಎಲ್ಲಿ ಬೇಕೋ ಅಲ್ಲಿ ಕುಳಿತುಕೊಳ್ಳಬಹುದಿತ್ತು. ರೋಸ್ ದ್ವೀಪಕ್ಕೆ ಪಯಣ ಆರಂಭ ಆಯ್ತು. ಏನೋ.. ನಮ್ಮೂರಿನ ಪಕ್ಕದಲ್ಲಿದ್ದ ಸೇಯಿಂಟ್ ಮೇರಿಸ್ ದ್ವೀಪ ತರ ಇರಬಹುದು ಎಂದುಕೊಂಡಿದ್ದೆ. ಅದಾದರೋ ನಿರ್ಜನ ದ್ವೀಪ. ಆದರೆ ಇಲ್ಲಿ ಒಂದಷ್ಟು ಹಳೆಯ ಬಿಲ್ಡಿಂಗ್ ಗಳು ಇವೆ ಎಂದು ಗೂಗಲ್ ತಡಕಾಡಿ ತಿಳಿದುಕೊಂಡಿದ್ದೆ.

ಫೋಟೋ ಕೃಪೆ : shuva.aminus
ಸುಮಾರು ಮುಕ್ಕಾಲು ಘಂಟೆ ಪಯಣ. ದೂರದಲ್ಲಿ R O S S ಎಂದು ಬರೆದದ್ದು ಕಾಣಿಸುತಿತ್ತು. ನಿಧಾನಕ್ಕೆ ಬೋಟ್ ಇಳಿದು ಹೋದಾಗ ಎದುರಾಗಿದ್ದು ಜಪಾನೀಸ್ ಬಂಕರ್ಸ್. ಎರಡನೇ ಮಹಾಯುದ್ಧ ಕಾಲದಲ್ಲಿ ಜಪಾನೀಯರು ಇದನ್ನು ಬ್ರಿಟಿಷರ ಕೈಯಿಂದ ವಶಪಡಿಸಿಕೊಂಡ್ದಿದರಂತೆ. ಆಗ, ಸುತ್ತ ಮುತ್ತಲಿನ ಹಡಗುಗಳ ಚಲನವಲನಗಳನ್ನು ಗಮನಿಸಲು ಈ ಬಂಕರ್ಸ್ ಗಳನ್ನು ನಿರ್ಮಿಸಿದ್ದರಂತೆ. ಗೇಟ್ ದಾಟಿ ಒಳಗೆ ಹೋದೆವು.
ನಾನು ಎಣಿಸಿಕೊಂಡದ್ದಕ್ಕಿಂತಲೂ ದ್ವೀಪ ಚೆನ್ನಾಗಿತ್ತು. ಕಸ ಕಡ್ಡಿಗಳು ಇಲ್ಲದ ಸ್ವಚ್ಛ ಪರಿಸರ. ಸಮುದ್ರದ ಮೇಲಿನಿಂದ ಬೀಸಿ ಬರುತಿದ್ದ ಗಾಳಿ, ಹಿತ ಮಿತವಾದ ಸೂರ್ಯನ ಬೆಳಕಿನ ತೀಕ್ಷಣತೆ. ಅಲ್ಲಲ್ಲಿ ಎತ್ತರದ ಮರಗಳು, ಹಸಿರು ನಲಿದಾಡುತಿತ್ತು. ಒಟ್ಟಿನಲ್ಲಿ ಆಹ್ಲಾದಕರ ವಾತಾವರಣ. ನಾವು ಬಂದು ಇಳಿದದ್ದು ಸುಮಾರು ಅರುವತ್ತು ಜನ ಅಷ್ಟೇ. ಎಲ್ಲರೂ ಎಲ್ಲೆಲ್ಲೋ ಚೆದುರಿ ಹೋದರು. ಗೈಡ್ ನಲ್ವತ್ತೈದು ನಿಮಿಷ ಕಾಲಾವಕಾಶ ಕೊಟ್ಟಿದ್ದ.
ಒಂದಷ್ಟು ಅಲ್ಲಲ್ಲಿ ಚದುರಿದಂತೆ ಪಾಳು ಬಿದ್ದಿದ್ದ ಮನೆಗಳು, ಆಫೀಸ್ ಗಳು. ಗೋಡೆಗಳ ಮೇಲೆಲ್ಲಾ ಯಾವುದೋ ಮರದ ಬಿಳಲುಗಳು, ಬೇರುಗಳು. ಒಂದೊಮ್ಮೆ ಹುಣ್ಣಿಮೆಯ ರಾತ್ರಿ ಬಂದಿದ್ದರೇ ಭೂತ ಬಂಗಲೆಗಳೋ ಎನ್ನುವಂತೆ ಭಾಸವಾಗುವಂತಹ ಆಕೃತಿಗಳು. ಪ್ರಿಂಟಿಂಗ್ ಪ್ರೆಸ್, ವಾಟರ್ ಸಪ್ಲೈ ಕೇಂದ್ರ, ಇನ್ಯಾವುದೋ ಸರ್ಕಾರಿ ಆಫೀಸ್ ಇತ್ಯಾದಿ ಇತ್ಯಾದಿ ನಾಮಫಲಕಗಳು ಅಲ್ಲಲ್ಲಿ ಪಳೆಯುಳಿಕೆಗಳ ಮುಂಭಾಗದಲ್ಲಿ ನೆಟ್ಟಿದ್ದವು. ಅಲ್ಲೊಂದು ಚರ್ಚ್ ಕೂಡಾ ಇತ್ತು. ಇದಿದ್ದುರ ಪೈಕಿ ಇದುವೇ ಗಟ್ಟಿ ಮುಟ್ಟಾದ ಬಿಲ್ಡಿಂಗ್. ಸೂರು ಇರಲಿಲ್ಲಾ. ಫೋಟೋ ತೆಗೆಸಿಕೊಳ್ಳಲು ಒಳ್ಳೆಯ ಲೊಕೇಶನ್. ನೆರಳು ಬೆಳಕುಗಳ ಲಾಸ್ಯ ಮನಸ್ಸಿಗೆ ಮುದ ನೀಡುವಂತಿತ್ತು. ಮುಂದೆ ಸ್ವಲ್ಪ ಏರಾದ ಜಾಗ. ಅಲ್ಲಿಂದ ನೋಡಿದರೆ ಅಲ್ಲೇ ಕೆಳಗೆ ಕಾಣಿಸುತಿತ್ತು ಸಮುದ್ರದ ತೀರ. ಒಂದಷ್ಟು ತೆಂಗಿನ ಮರಗಳು ಬಾಗಿ, ಬಳುಕಿ ಪುನಃ ಆಕಾಶಕ್ಕೆ ಮುಖ ಮಾಡಿ ನಿಂತಿದ್ದವು.

ಫೋಟೋ ಕೃಪೆ : India Today
ಹಾಗೆಯೇ ಮುಂದುವರೆದರೆ ಒಂದು ಸ್ಮಶಾನ. ಒಂದಷ್ಟು ಸಮಾಧಿಗಳು. ಯಾರು ಯಾರದ್ದೋ ಹೆಸರು ಆ ಗೋರಿಗಳ ಮೇಲೆ. ಒಂದು ಕಾಲದಲ್ಲಿ ನಮ್ಮ ಮೇಲೆ ದರ್ಪ ತೋರಿ, ಅಲ್ಲಿಗೆ ಬಂಧಿಸಿ ತಂದ ಸ್ವಾತಂತ್ರ್ಯ ಚಳುವಳಿಗಾರರಿಗೆ ತರತರಹದ ಶಿಕ್ಷೆ ವಿಧಿಸಿ ಮೆರೆದಾಡಿದ್ದವರು, ಇಂದು ಅಲ್ಲೇ ತಣ್ಣಗೆ, ಒಂದಷ್ಟು ಆಳದಲ್ಲಿ ಮಲಗಿಕೊಂಡಿದ್ದರು. ಮುಂದುವರೆದು ಬಂದೆವು. ಗಾಳಿ ಮರಗಳ ತೋಪು. ಒಂದಷ್ಟು ಜಿಂಕೆಗಳು, ಕಡವೆಗಳು ಯಾವುದೇ ಬಂಧನ, ಬೇಲಿಯ ಹಂಗಿಲ್ಲದೆ ಅಲ್ಲಲ್ಲಿ ಓಡಾಡಿಕೊಂಡಿದ್ದವು. ಅಲ್ಲೇ ಒಬ್ಬ ಟೀ, ಕಾಫಿ , ಬಿಸ್ಕುಟ್ಸ್ ಮಾರುತಿದ್ದ. ಅದು ಬಿಟ್ಟರೆ ಬೇರೇನೂ ಇಲ್ಲಾ.
ಯಾವನೋ ಬ್ರಿಟಿಷ್ ಅಧಿಕಾರಿಯ ಹೆಸರು ಏನೋ ರೋಸ್ ಅಂತೇ. ಅದಕ್ಕೆ ಈ ದ್ವೀಪ ರೋಸ್ ಐಲ್ಯಾಂಡ್. ಬ್ರಿಟಿಷ್ ವಸಾಹತು ಆಗಿತ್ತು ಈ ದ್ವೀಪ. ಭಾರತದಲ್ಲಿನ ಸ್ವಾತಂತ್ರ್ಯ ಚಳುವಳಿಯನ್ನು ಹತ್ತಿಕ್ಕಲು, ಆ ಹೋರಾಟಗಾರನ್ನು ಹಡಗಿನ ಮೂಲಕ ಇಲ್ಲಿಗೆ ತರಲಾಗುತ್ತಿತ್ತು. ಅವರ ಅಪರಾಧಗಳನ್ನು ಚರ್ಚಿಸಿ ಶಿಕ್ಷೆಯ ಪ್ರಮಾಣ ನಿರ್ಧರಿಸಲಾಗುತಿತ್ತು. ಹೋರಾಟಗಾರರ ಸಂಖ್ಯೆ ಜಾಸ್ತಿ ಆದಾಗ ಪೋರ್ಟ್ ಬ್ಲೇರ್ ನಲ್ಲಿ ವಿಶಾಲವಾದ, ನೂರಾರು ಜೈಲುಗಳುಳ್ಳ ಸೆರೆಮನೆ ನಿರ್ಮಾಣ ಆಯಿತಂತೆ. ಅದುವೇ ಈಗಿನ ಹೆಸರಾಂತ ಸೆಲ್ಯುಲಾರ್ ಜೈಲ್. ಆದರೆ 1941 ರಲ್ಲಿ ಆದ ಭೂಕಂಪ ಇಲ್ಲಿನ ಎಲ್ಲವನ್ನೂ ಹಾಳುಗೆಡವಿತು. ಮುಂದೆ ಎರಡನೆಯ ಮಹಾಯುದ್ಧದಲ್ಲಿ ಜಪಾನೀಯರ ಮೇಲುಗೈ ಆದಾಗ ನೇತಾಜಿ ಸುಭಾಷ್ ಚಂದ್ರ ಬೋಸ್ ಇಲ್ಲಿ ತಂಗಿದ್ದು ಭಾರತೀಯ ಧ್ವಜ ಹಾರಿಸಿದ್ದರಂತೆ. ಇದು ಇಲ್ಲಿನ ಇತಿಹಾಸ.
ಯಾಕೋ, ಏಕ್ ದಮ್ ಇಷ್ಟ ಆಯ್ತು ಈ ದ್ವೀಪ. ಪಟಪಟನೆ ಇನ್ನೊಂದು ಸುತ್ತು ಹಾಕಿ, ಅಲ್ಲಲ್ಲಿ ಕುಳಿತು ಆನಂದಿಸಿ ತಿರುಗಿ ಬಂದಾಗ ಗೈಡ್ ವಿಸಿಲ್ ಊದಿ ಎಲ್ಲರನ್ನೂ ಒಟ್ಟು ಸೇರಿಸುತಿದ್ದ. ಪುನಃ ಬೋಟ್ ಏರಿ ಕುಳಿತದ್ದಾಯ್ತು. ಬಂದ ದಾರಿಯಲ್ಲೇ ಹಿಂತಿರುಗಿ ಬರುವಾಗ ಅಲ್ಲೆಲ್ಲೋ ಪಥ ಬದಲಿಸಿದ. ಮುಂದಿನ ಗಮ್ಯ ವೈಪರ್ ಐಲ್ಯಾಂಡ್. ಕೊಂಚ ದೀರ್ಘ ಎನಿಸಿದರೂ ಹೋಗುವಾಗ ಪೋರ್ಟ್ ಬ್ಲೇರ್ ಬಂದರು, ಅಲ್ಲಿ ನಿಂತಿದ್ದ ಹಡಗುಗಳು, ಊರಿನೊಳಗಿದ್ದ ಎತ್ತರದ ಹೋಟೆಲ್ ಗಳು ಹಾಗೂ ಇತರ ಎತ್ತರದ ಬಿಲ್ಡಿಂಗ್ ಗಳ ದರ್ಶನ ಚೇತೋಹಾರಿಯಾಗಿತ್ತು.

ಫೋಟೋ ಕೃಪೆ : India wild
ವೈಪರ್ ಎನ್ನುವುದು ಒಂದು ವಿಷಯುಕ್ತ ಹಾವು. ಗೂಗಲ್ ನೋಡಿದ ಮೇಲೆಯೇ ಗೊತ್ತಾಗಿದ್ದು ಆ ವೈಪರ್ ಗೂ .. ಈ ಹೆಸರಿಗೂ ಏನೇನೂ ಸಂಬಂಧ ಇಲ್ಲಾ ಅಂತಾ.. ಈ ವೈಪರ್ ಕೂಡಾ ಯಾವುದೋ ಒಬ್ಬ ಬ್ರಿಟಿಷ್ ಅಧಿಕಾರಿಯ ಹೆಸರು ಅಷ್ಟೇ. ಬೋಟ್ ಇಳಿದು ದ್ವೀಪದೊಳಕ್ಕೆ ಹೆಜ್ಜೆ ಹಾಕಿದೆವು. ಆರಂಭದಲ್ಲಿ ಒಂದು ತಡೆಗೋಡೆಯ ಸಣ್ಣ ಆವರಣ ಬಿಟ್ಟರೆ ಬೇರೇನೂ ನಾಗರಿಕತೆಯ ಕುರುಹು ಇರಲಿಲ್ಲಾ. ಕಾಡಿನ ವಾತಾವರಣ. ನೋಡಿದಲ್ಲೆಲ್ಲಾ ಹಸಿರೋ ಹಸಿರು. ದೊಡ್ಡ ದೊಡ್ಡ ಗಿಡ ಮರಗಳು. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ರಹಿತ ಪರಿಸರ.
ಸುಮಾರು ಹದಿನೈದು ನಿಮಿಷಗಳ ಕಾಲು ನಡಿಗೆ. ಒಂದಸ್ತಿನ ವಿಶಾಲವಾದ ಹಳೆಯದಾದ ಕಟ್ಟಡವೊಂದು ಕಾಣಿಸಿತು. ಮೆಟ್ಟಿಲು ಏರಿದೆವು. ಕೆಂಪು ಕಲ್ಲಿನಿಂದ ಮಾಡಿದ ಕಟ್ಟಡ. ನಡುವೆ ಒಂದು ದಪ್ಪನೆಯ ಮರದ ಕಂಭ. ಅಡ್ಡಲಾಗಿ, ಗೋಡೆಯಿಂದ ಗೋಡೆಗೆ ಹಾದುಹೋಗಿತ್ತು. ಗೈಡ್ ಹೇಳಿದ ‘ ಇದುವೇ ಮೊದಲ ಜೈಲ್. ಸ್ವಾತಂತ್ರ್ಯ ಹೋರಾಟಗಾರರಿಗೆ ಅಲ್ಲಿ ರೋಸ್ ಐಲ್ಯಾಂಡ್ ನಲ್ಲಿ ಶಿಕ್ಷೆ ಪ್ರಕಟಪಡಿಸಿದ ಬಳಿಕ ಇಲ್ಲಿ ತಂದು ಬಿಡುತ್ತಿದ್ದರು. ರಾತ್ರಿ ಹೊತ್ತು ಎಲ್ಲರ ಕಾಲುಗಳಿಗೆ ದಪ್ಪ ಬಳೆಯ ತರದ ಸರಪಣಿ ಬಿಗಿಯುತಿದ್ದರು. ಕೆಲವರಿಗೆ ಇಲ್ಲೇ, ಇದೇ ಮರದ ತೊಲೆಗೆ ಬಿಗಿದ ನೇಣಿಗೆ ಕುತ್ತಿಗೆ ಒಡ್ಡಿ ಮರಣದಂಡನೆ ನೀಡುತ್ತಿದ್ದರು.’ ಆತ ಹೇಳುತಿದ್ದರೆ ಕೇಳುತಿದ್ದವರ ಮನದಲ್ಲಿ ಏನೇನೋ ಭಾವನೆಗಳು.
ಛೇ. ಯಾರೋ ಏನೋ. ಪಾಪ. ಅವರ ಮನೆ, ಬಂಧು, ಬಳಗ ಎಲ್ಲ ಬಿಟ್ಟು ತಮ್ಮದಲ್ಲದ ಕಾರಣಕ್ಕಾಗಿ ಹೋರಾಡಿ ಜೀವನವನ್ನೇ ಮೂರಾಬಟ್ಟೆ ಮಾಡಿಕೊಂಡ ಆ ಮಹಾನುಭಾವರೆಲ್ಲಿ ? ಈಗ ಸ್ವಾತಂತ್ರ್ಯ ಇದೇ ಎಂದು ಏನೇನೋ ಗಂಟಲು ಹರಿಯುವಂತೆ ಕಿರುಚಾಡಿ, ಅವರಿವರು ಕಿತ್ತಾಡುವಂತೆ ಮಾಡಿ, ದೇಶದ ಬಗ್ಗೆಯೇ ಕೀಳಾಗಿ ಮಾತಾಡುವ ಆಷಾಢಭೂತಿಗಳೆಲ್ಲಿ ? ನಮಗೆ ಬಳುವಳಿಯಾಗಿ ದೊರೆತ ಈ ರೀತಿಯ ಸ್ವಾತಂತ್ರ್ಯ, ಸ್ವೇಚ್ಛೆಗಾಗಿ ಮನೆ, ಮಠ, ಪ್ರಾಣ ಎಲ್ಲಕ್ಕೂ ಎರವಾದ ಈ ಹೋರಾಟಗಾರರು ಈಗ ಜೀವ ಇದ್ದಿದ್ದರೆ .. ಪಾಪ .. ಏನು ಮಾಡುತ್ತಿದ್ದರೋ !! ಅಷ್ಟರಲ್ಲೇ ಯಾರೋ, ಒಬ್ಬರು .. ಗಟ್ಟಿಯಾಗಿ .. ‘ ಭೋಲೋ ಭಾರತ್ ಮಾತಾ ಕೀ …’ ಎಂದು ಘೋಷಣೆ ಮಾಡಿದಾಗ… ಸಹಜವಾಗಿಯೇ ಎಲ್ಲರೂ ಒಟ್ಟಾಗಿ ಜೈ ಕಾರ ಹಾಕಿದೆವು. ವಂದೇ ಮಾತರಂ ಹಾಡಿದಾಗ ದನಿಗೂಡಿಸಿದೆವು. ಕೋರಸ್ ನಲ್ಲಿ ಜನ ಗಣ ಮನ ಕೂಡಾ ಹಾಡಿ. ಒಂದೆರಡು ನಿಮಿಷಗಳ ಮೌನ ಕೂಡಾ ಆಚರಿಸಿದೆವು. ಇದಕ್ಕಿಂತ ಜಾಸ್ತಿ ನಮಗೇನೂ ಹೊಳೆಯಲಿಲ್ಲ.
ಹಿಂದಿರುಗಿ ಬರುವಾಗಲೂ ಅಷ್ಟೇ. ಪಿನ್ ಡ್ರಾಪ್ ಸೈಲೆನ್ಸ್. ವಾಪಸ್ ಬೋಟ್ ಹತ್ತಿ ಕುಳಿತಾಗಲೂ ಅದೇನೋ ಹ್ಯಾಂಗ್ ಓವರ್. ಪುನಃ ಮೊದಲಿನ ಮೂಡ್ ಗೆ ಬರಲು ಒಂದಷ್ಟು ಹೊತ್ತೇ ಬೇಕಾಯ್ತು.
- ಕುಮಾರ್ ಕೆ.ವಿ.