ಪ್ರಾಣಿಗಳ ಕನಸು : ಡಾ.ಎನ್.ಬಿ.ಶ್ರೀಧರ

ಪ್ರಾಣಿಗಳ ಕನಸಿನ ಅಧ್ಯಯನದ ಪ್ರಕಾರ ಬಹುತೇಕ ಪ್ರಾಣಿಗಳು ಕನಸನ್ನು ಕಾಣುತ್ತವೆ ಎಂದು ತಿಳಿದುಬಂದಿದೆ. ಅನೇಕ ಬೆಕ್ಕುಗಳು ನಿದ್ರೆಗಣ್ಣಿನಲ್ಲಿಯೇ ಎಲ್ಲೆಲ್ಲೋ ನಡೆದರೆ, ನಾಯಿಗಳು ನಿದ್ರೆಯಲ್ಲಿಯೇ ಬೊಗಳುತ್ತವೆ. ಪಶುವೈದ್ಯರಾದ ಡಾ.ಎನ್.ಬಿ.ಶ್ರೀಧರ ಅವರ ಪ್ರಾಣಿಗಳ ಕನಸು ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಕನಸು ಕಾಣದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುವವರೇ. ಇಂಥ ಕನಸುಗಳೂ ಭವಿಷ್ಯದ ಸಂಕೇತಗಳೇ… ಎಂಬ ಪ್ರಶ್ನೆ ಜ್ಯೋತಿಷಿಗಳಿಂದ ಹಿಡಿದು ವಿಜ್ಞಾನಿಗಳವರೆಗೂ ಕಾಡಿದ್ದಿದೆ. ಮನಃಶಾಸ್ತ್ರದಲ್ಲೂ ಕನಸಿನ ಲೋಕದ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ತೀವ್ರ ಮಾನಸಿಕ ತೊಂದರೆಯ ಸಂದರ್ಭದಲ್ಲಿ ಹೊರತುಪಡಿಸಿ, ಪ್ರತಿಯೊಬ್ಬ ಮನುಷ್ಯನು ಕನಸನ್ನು ಕಾಣುತ್ತಾನೆ.

ಒಂದು ಸಾಮಾನ್ಯ ಲೆಕ್ಕಾಚಾರದ ಪ್ರಕಾರ, ಮನುಷ್ಯರು ಪ್ರತಿ ವರ್ಷ ಸುಮಾರು 121 ದಿನವನ್ನು ನಿದ್ರೆಯಲ್ಲೇ ಕಳೆಯುತ್ತಾರೆ. ಅಂದರೆ, 75 ವರ್ಷ ವಯಸ್ಸಿನ ಮನುಷ್ಯ ಸುಮಾರು 25 ವರ್ಷಗಳಷ್ಟು ನಿದ್ದೆಯಲ್ಲಿಯೇ ಕಳೆದಿರುತ್ತಾನೆ. ಈ ಅವಧಿಯಲ್ಲಿ ಎಷ್ಟೊಂದು ಕನಸು ಕಂಡಿರಬಹುದು ಎಂಬುದನ್ನು ನೀವೇ ಊಹಿಸಿ. ಪ್ರಾಚೀನ ನಾಗರಿಕತೆಯಲ್ಲಿ ಕನಸುಗಳನ್ನು ದೇವರ ಸಂದೇಶ ಅಥವಾ ಕೆಲವು ರೀತಿಯ ಭವಿಷ್ಯವಾಣಿಗಳು ಎಂದು ಭಾವಿಸಲಾಗಿತ್ತು. ಕನಸಿನಲ್ಲಿ ಕಂಡದ್ದು ನಿಜವಾಗುತ್ತದೆ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನವರು ಕನಸನ್ನು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ.

ಫೋಟೋ ಕೃಪೆ : ಅಂತರ್ಜಾಲ

ಜನನದ ನಂತರ ಕುರುಡರಾದ ಜನರು ತಮ್ಮ ಕನಸಿನಲ್ಲಿ ಚಿತ್ರಗಳನ್ನು ನೋಡಬಹುದು. ಕುರುಡರಾಗಿ ಜನಿಸಿದ ಜನರು ಯಾವುದೇ ದೃಶ್ಯಗಳನ್ನು ನೋಡುವುದಿಲ್ಲ. ಒಬ್ಬ ಮಹಿಳೆ, ಪುರುಷ ಪ್ರಾಣಿ, ಹೂವು ಇವೆಲ್ಲ ಸುಂದರ ಎಂಬುದು ಹುಟ್ಟುಕುರುಡರಿಗೆ ಒಂದು ಕಲ್ಪನೆ ಅಷ್ಟೆ. ಧ್ವನಿ, ವಾಸನೆ, ಸ್ಪರ್ಶ ಮತ್ತು ಭಾವನೆಯ ಇತರ ಇಂದ್ರಿಯಗಳನ್ನು ಒಳಗೊಂಡ ವಸ್ತುಗಳ ಕಲ್ಪನೆಯ ಕನಸುಗಳನ್ನು ಇತರರಂತೆ ಅವರು ಕಾಣುತ್ತಾರಂತೆ. ಆಶ್ಚರ್ಯವೆಂದರೆ ಹೆಣ್ಣಿಗಾಗಿ ಸದಾ ಹಂಬಲಿಸುವ ಕನಸುಗಾರ ಪುರುಷರ ಕನಸಿನ 70% ಪಾತ್ರಗಳು ಪುರುಷರೇ ಆಗಿರುತ್ತಿದ್ದು ಅವರ ಕನಸಿನಲ್ಲಿ ಸುಂದರ ಸ್ತ್ರೀಯರು ಬರುವುದು ಬಲು ಅಪರೂಪವಂತೆ. ಅದೇ ಮಹಿಳೆಯರ ಕನಸಿನಲ್ಲಿ ಸಮಾನ ಸಂಖ್ಯೆಯ ಮಹಿಳೆಯರು ಮತ್ತು ಪುರುಷರು ಇರುತ್ತಾರಂತೆ. ಈಗ ನಿಮ್ಮ ಇತ್ತೀಚಿನ ಕನಸಿನಲ್ಲಿ ಯಾರು ಬಂದಿದ್ದಾರೆ ಎಂಬುದನ್ನು ಗಮನಿಸಿಕೊಂಡು ತಾಳೆ ಮಾಡಿಕೊಳ್ಳಿ.

ಪ್ರಾಣಿಗಳ ಕನಸಿನ ಅಧ್ಯಯನದ ಪ್ರಕಾರ ಬಹುತೇಕ ಪ್ರಾಣಿಗಳು ಕನಸನ್ನು ಕಾಣುತ್ತವೆ ಎಂದು ತಿಳಿದುಬಂದಿದೆ. ನಾಯಿ ಸ್ವಲ್ಪ ಸಮಯ ಮಲಗುವುದನ್ನು ನೋಡಿ, ಅದು ಕನಸಿನಲ್ಲಿ ಯಾರನ್ನೋ ಬೆನ್ನಟ್ಟುತ್ತಿರುವಂತೆ ತನ್ನ ಪಂಜುಗಳನ್ನು ಚಲಿಸುತ್ತಿರುತ್ತವೆ. ಇದಲ್ಲದೇ ಇನ್ನೂ ಅನೇಕ ಪ್ರಾಣಿಗಳು ಸಹ ಕನಸು ಕಾಣುತ್ತವೆ. ಬೆಕ್ಕು ಬಹಳ ಕನಸು ಕಾಣುತ್ತದಂತೆ. 1960 ನೇ ಸಾಲಿನಲ್ಲೇ ಜೊವೆಟ್ ಎಂಬಾತ ಬೆಕ್ಕುಗಳಲ್ಲಿ ಕನಸಿನ ಅಧ್ಯಯನ ಮಾಡಿದ. ಬೆಕ್ಕಿನ ಚರ್ಯೆಯಿಂದ ಅದು ಏನು ಕನಸು ಕಾಣಬಹುದೆಂದು ಊಹಿಸಿದ.

ಫೋಟೋ ಕೃಪೆ : ಅಂತರ್ಜಾಲ

ಗೋಲ್ಡ್ಮ್ಯಾನ್ ಎಂಬಾತ ಹೇಳಿದಂತೆ “ಬಹುತೇಕ ಎಲ್ಲಾ ಭೂಚರ, ಜಲಚರ ಮತ್ತು ವಾಯುಚರ ಪ್ರಾಣಿಗಳು ಕನಸು ಕಾಣುತ್ತವೆ. ಅವುಗಳು ಗಾಢ ನಿದ್ರೆಯಲ್ಲಿದ್ದಾಗ ಅವುಗಳ ವರ್ತನೆಯನ್ನು ನೋಡಿ ಇದನ್ನು ಅಳೆಯಬಹುದು” ಎಂದ. ಮೆದುಳಿನ ತರಂಗಗಳನ್ನು ಮಾಪನ ಮಾಡುವ ಅನೇಕ ಉಪಕರಣಗಳು ಬಳಸಿ ಪ್ರಾಣಿಗಳ ಸ್ವಪ್ನದ ವಿವಿಧ ಬಗೆಗಳನ್ನು ಅಳೆಯಲಾಯಿತು. ಮನುಷ್ಯನಲ್ಲಿರುವಂತೆ ಅವುಗಳಲ್ಲಿಯೂ ಸಹ “ತ್ವರಿತ ಕಣ್ಣಿನ ಚಲನೆ”ಯ ನಿದ್ರೆ ಬರುತ್ತಿದ್ದು ಈ ಸ್ಥಿತಿಯಲ್ಲಿ ಅವು ಕನಸು ಕಾಣುತ್ತವೆ. ಅನೇಕ ಬೆಕ್ಕುಗಳು ನಿದ್ರೆಗಣ್ಣಿನಲ್ಲಿಯೇ ಎಲ್ಲೆಲ್ಲೋ ನಡೆದರೆ, ಕುದುರೆಗಳು ಕೆನೆಯುತ್ತವೆ ಮತ್ತು ನಾಯಿಗಳು ನಿದ್ರೆಯಲ್ಲಿಯೇ ಬೊಗಳುತ್ತವೆ. ಅನೇಕ ಬೆಕ್ಕುಗಳು ಕನಸಿನಲ್ಲಿ ಇಲಿಗಳನ್ನು ಅಟ್ಟಿಸಿಕೊಂಡು ಹೋಗಿ ಬೇಟೆಯಾಡಿದಂತೆ ವರ್ತಿಸುತ್ತವೆ ಮತ್ತು ಇದೇ ಗುಂಗಿನಲ್ಲಿ ಎತ್ತರದಿಂದ ದಪಕ್ ಎಂದು ಬೀಳುತ್ತವೆ. ಈ ಕುರಿತು ಇಲಿಗಳ ಮೇಲೆ ಆದ ಅನೇಕ ಸಂಶೋಧನೆಗಳ ಪ್ರಕಾರ ಮೆದುಳಿನ ಹಿಪ್ಪೊಕ್ಯಾಂಪಸ್ ಭಾಗವು ಕನಸುಗಳಿಗೆ ಕಾರಣವಾಗಿದ್ದು ಇದರ ಕೆಲವು ವಿಶೇಷ ನರಕೋಶಗಳು ಕನಸಿನ ಬಗೆಯನ್ನು ನಿರ್ಧರಿಸುತ್ತವೆ.

ಮನುಷ್ಯನ ಹಾಗೆ ಕುದುರೆ, ದನ, ಎಮ್ಮೆ, ಆಡು ಮತ್ತು ಕುರಿಗಳು ಕನಸಿನಲ್ಲಿಯೇ ಬೆಚ್ಚುತ್ತವೆ. ನಿಜ ಜೀವನದಲ್ಲಿ ಆದ ಘಟನೆ ಅವುಗಳ ಕನಸಿನಲ್ಲಿಯೂ ಸಹ ಪುನರಾವರ್ತನೆಯಾಗುತ್ತದೆ.
ಕನಸು ಕಾಣುವಲ್ಲಿ ಪಕ್ಷಿಗಳೂ ಸಹ ಹಿಂದೆ ಬಿದ್ದಿಲ್ಲ. ಅಷ್ಟೇನೂ ಕಿವಿಗೆ ಇಂಪಾದ ಸ್ವರ ಹೊರಡಿಸದ ಜಿಬ್ರಾ ಪಿಂಚ್ ಪಕ್ಷಿಗಳು ಕನಸಿನಲ್ಲಿ ಇಂಪಾದ ಸ್ವರ ಹೊರಡಿಸುತ್ತವೆ. ಆದರೆ ಪ್ರಾಣಿಗಳ ವಿಚಾರದಲ್ಲಿ ಇನ್ನೂ ಅನೇಕ ವಿಷಯಗಳು ತಿಳಿದಿಲ್ಲ. ಮನುಷ್ಯನ ಹಾಗೆ ಅವು ಎಚ್ಚರಗೊಂಡ ನಂತರವೂ ಸಹ ಕನಸನ್ನು ನೆನಪಿಸಿಕೊಳ್ಳುತ್ತವೆಯೇ? ಅವುಗಳಿಗೂ ಸಹ ಕೆಟ್ಟ ಮತ್ತು ಒಳ್ಳೆಯ ಕನಸುಗಳಿವೆಯೇ? ಕನಸಿನಲ್ಲಿ ಅವು ಬೆಚ್ಚಿಬೀಳುತ್ತವೆಯೇ? ಎಂಬೆಲ್ಲಾ ವಿಷಯಗಳಿಗೆ ಸಧ್ಯಕ್ಕೆ ಉತ್ತರವಿಲ್ಲ. ಸಂಶೋಧನೆ ಮುಂದುವರೆದಿದೆ. ಇನ್ನೂ ಬಹಳ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಇದ್ದೇ ಇದೆ.


  • ಡಾ. ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW