ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ಅವರ ‘ಅಂತರಂಗದ ಪ್ರಣತಿ’ ಕೃತಿಯ ಕುರಿತು ಲೇಖಕರಾದ ಬಸವರಾಜ ಹೊನಗೌಡರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಅಂತರಂಗದ ಪ್ರಣತಿ
ಲೇಖಕರು : ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ
ಪ್ರಥಮ ಮುದ್ರಣ : 2025
ಪುಟಗಳು : 82
ಬೆಲೆ : 150
***
ಡಾ.ಮಲ್ಲಿಕಾರ್ಜುನ ಎಸ್.ಆಲಮೇಲರವರು ಬರೆದ “ಅಂತರಂಗದ ಪ್ರಣತಿ” ಯು “ತನಗ” ಎಂಬ ಸಾಹಿತ್ಯ ಪ್ರಕಾರದಲ್ಲಿ ರಚಿತವಾಗಿದೆ. ಕನ್ನಡದಲ್ಲಿ ತನಗ ರಚನೆಯಲ್ಲಿ ತೊಡಗಿರುವ ಕೆಲವೇ ಕವಿಗಳಲ್ಲಿ ಇವರು ಒಬ್ಬರು. ಇದು ಫಿಲಿಫೈನ್ಸ್ ದೇಶದ ಸಾಹಿತ್ಯದ ಪ್ರಕಾರ.
“ತನಗಾ” ಪದ್ಯವು ನಾಲ್ಕು ಸಾಲುಗಳಿಂದ ಕೂಡಿದೆ. ಪ್ರತಿ ಸಾಲಿಗೆ 7-7-7-7 ಉಚ್ಛಾರಾಂಶಗಳು ಇರುತ್ತವೆ. ಇದೂ ಸಹ ಪ್ರಾಸಬದ್ಧ ಕವಿತೆಯಾಗಿದೆ. ಇವುಗಳಿಗೆ ಯಾವುದೇ ಶೀರ್ಷಿಕೆಗಳು ಇರುವುದಿಲ್ಲ.

“ಅಂತರಂಗದ ಪ್ರಣತಿ” ಕೃತಿಯ ಮೊದಲ ತನಗಾ,
” ಮುಂಜಾನೆ ಮಂಜಲ್ಲಿ
ನನ್ನ ಹೃದಯದಲ್ಲಿ
ನೀ ನೆಲೆಸಿದೆಯಲ್ಲಿ
ಪ್ರೇಮಾನುರಾಗದಲ್ಲಿ”
ಕೇವಲ ಕೆಲವೇ ಶಬ್ಧಗಳಲ್ಲಿ ಹೃದಯದ ಬಯಕೆಯನ್ನು ಕವಿ ವ್ಯಕ್ತ ಪಡಿಸುತ್ತಾನೆ.
“ಭಕ್ತಿಯಿಲ್ಲದ ಪೂಜೆ
ಗುರುವಿಲ್ಲದ ಗುರಿ
ಅಂಬಿಗನು ಇಲ್ಲದ
ಖಾಲಿ ದೋಣಿಯೇ ಸರಿ”
ಈ ತನಗಾದಲ್ಲಿ ಮನಸ್ಸಿಲ್ಲದೇ ಮಾಡುವ ಕೆಲಸವನ್ನು ಖಾಲಿ ದಿಕ್ಕಿಲ್ಲದ ದೋಣಿಗೆ ಹೋಲಿಸಿದ್ದಾರೆ.
“ದೂರದ ಬೆಟ್ಟವದು
ಬಲು ಸುಂದರವದು
ಹತ್ತಿದವನೇ ಬಲ್ಲ
ಅದರ ಕಠೋರತೆಯು”
ಮೇಲಿನ ತನಗಾದಲ್ಲಿ “ದೂರದ ಬೆಟ್ಟ ನುಣ್ಣಗೆ” ಗಾದೆ ಮಾತನ್ನು ನೆನಪಿಸುತ್ತದೆ.
“ಮಲೆನಾಡ ಮಡಿಲು
ಭೂ ದೇವಿಯ ಒಡಲು
ಮಾಡದಿರು ಮನುಜ
ದುರಾಸೆಗೆ ಬರಡು”
ಇಲ್ಲಿ ಕವಿಯ ನಿಸರ್ಗದ ಮೇಲಿನ ಪ್ರೀತಿ ಎದ್ದು ಕಾಣುತ್ತದೆ. ಮನುಷ್ಯನ ದುರಾಸೆಗೆ ಕಾಡು ಕಡಿದು ಭೂತಾಯಿಯ ಒಡಿಲನ್ನು ನಾಶ ಮಾಡಬೇಡವೆಂದು ಕವಿಯ ಕಳಕಳಿ.
“ನಲ್ಲೆಯ ಮಡಿಲಲ್ಲಿ
ನಾನು ಮಗುವಾಗಲು
ಮುಕ್ಕೋಟಿ ಚಿಂತೆಗಳು
ಮರೆಯಾಗಿ ಹೋದವು”

ತನ್ನ ನಲ್ಲೆಯ ಹಿರಿಮೆ ಈ ತನಗದಲ್ಲಿ ಜಾನಪದ ಸಾಹಿತ್ಯವನ್ನು ನೆನಪಿಸುತ್ತದೆ. ಹೆಂಡತಿಯ ಸೆರಗಿನಲ್ಲಿ ಮುಕ್ಕೋಟಿ ಚಿಂತೆಗಳಿಗೆ ಪರಿಹಾರವಿದೆ ಎಂಬುದು ಕವಿಯ ವಾದ. ಇಂತಹದೇ ಇನ್ನೊಂದು ತನಗಾವನ್ನು ನೋಡಬಹುದು,
“ಮುಂಗಾರು ಮಳೆಯಲ್ಲಿ
ಹಿಂಗಾರು ಬೆಳೆಯಲ್ಲಿ
ನನ್ನವಳು ನಡೆದು
ಬಂದಳು ಚಳಿಯಲ್ಲಿ”
ಇಂತಹ ನಲ್ಲೆಯ ಮುನಿಸು ಒಮ್ಮೊಮ್ಮೆ ಆಗುವುದುಂಟು ಆಗ ಕವಿಯಲ್ಲಿ ಮೂಡಿದ ತನಗಾಗಳು,
“ಮುತ್ತಿನ ಮೂಗುತಿಯು
ನಿನಗಾಗಿ ನಾತಂದೆ
ಪ್ರಯತಮೆ ನೀನೇಕೆ
ಮೂಗು ಮುರಿಯುವೇ?”
“ಮೈಸೂರು ಮಲ್ಲಿಗೆಯ
ಮುಡಿಗೆ ಮುಡಿಸಲು
ಪ್ರೀತಿಯಿಂದ ನಾ ತಂದ್ರೆ
ಮುನಿಸೇತಕೆ ಸಖಿ”
ಕೆಲವೊಂದು ತನಗಾಗಳಲ್ಲಿ ಸಂಸಾರದ ಬಗ್ಗೆ ಅನುಭವಗಳನ್ನು ತುಂಬಿ ಕೊಟ್ಟಿದ್ದಾರೆ.
“ಸಂಸಾರದ ಬಂಡಿಗೆ
ಕಷ್ಟಗಳ ಸರಳು
ಸುತ್ತಿದರು, ಮುನ್ನುಗ್ಗಿ
ಸಾಧಿಸೋನೆ ಮನುಜ”
“ಜೀವನದ ಯಾನಕ್ಕೆ
ಸಂತಸ ತುಂಬಿರಲು
ಸ್ವರ್ಗವೇ ಬೇಡೆಂದಿತು
ಮನುಜನ ಮನವು”
ಇವರಿಂದ ಇಂದಿನ ರಾಜಕೀಯವು ಕೂಡ ತಪ್ಪಿಸಿಕೊಂಡಿಲ್ಲ. ಕೆಲವೊಂದು ತನಗಾಗಳಲ್ಲಿ ಪ್ರಸ್ತುತ ರಾಜಕೀಯದ ಬಗ್ಗೆ ಹೇಳಿದ್ದಾರೆ.
“ಅಧಿಕಾರದ ಆಸೆಗೆ
ಕೊಟ್ಟರು ಬಿಟ್ಟಿ ಭಾಗ್ಯ
ನಾಡಿಗೆ ಆರ್ಥಿಕತೆ
ದಿವಾಳಿಯ ಭಾಗ್ಯ”
“ಮಹಿಳೆಗೆ ಉಚಿತ
ಪ್ರಮಾಣದ ಭಾಗ್ಯವು
ಗಂಡಸರಿಗೆಲ್ಲವೂ
ಪಾಕಶಾಲೆ ವರವು”
ಕೆಲವೇ ಪದಗಳಲ್ಲಿ ಶ್ರೀಕೃಷ್ಣನನ್ನು ದರ್ಶನ ಮಾಡಿಸಿದ್ದಾರೆ ಕವಿಗಳು.
“ವಾಸುದೇವ ದೇವಕಿ
ಗರ್ಭಸಂಜಾತನಾಗಿ
ಕಾರ್ಗತ್ತಲಲ್ಲಿ ಹುಟ್ಟಿ
ಧರೆಗೆ ಬೆಳಕಾದೆ”
“ಯಶೋದೆ ಕಂದನಾಗಿ
ನಂದನ ನಂದನಾಗಿ
ಆನಂದದಿ ಬೆಳೆದೆ
ರಾಧೆ ಮನವ ಕದ್ದೆ”
“ಅಂತರಂಗದ ಪ್ರಣತಿ” ಯಲ್ಲಿ ಎಲ್ಲಾ ವಿಷಯಗಳು ಬಂದಿವೆ. “ಆಡ ಮುಟ್ಟದ ಸೊಪ್ಪಿಲ್ಲ” ಎನ್ನುವಂತೆ ಕವಿ ಇಲ್ಲಿ ತನಗಗಳ ಮುಖಾಂತರ ಸಮಾಜದ ಓರೆಕೋರೆಗಳನ್ನು ಎತ್ತಿ ತೋರಿಸಿದ್ದಾರೆ. ಭಯೋತ್ಪಾದನೆ, ಧರ್ಮ, ಜಾತಿ, ನಿಸರ್ಗ, ರಾಜಕಾರಣ, ಬಸವಣ್ಣ, ವೆಂಕಟರಮಣ, ಮಲ್ಲಯ್ಯ, ರೈತ, ಪ್ರಕೃತಿ, ಚಂದಿರ, ಕಡಲು, ಹೋಳಿಹಬ್ಬ ಹೀಗೆ ಎಲ್ಲದರ ಬಗ್ಗೆ ಬರೆದಿದ್ದಾರೆ.
ಡಾ. ಮಲ್ಲಿಕಾರ್ಜುನ ಆಲಮೇಲರವರು ಕನ್ನಡ ಸಾಹಿತ್ಯಕ್ಕೆ ಇನ್ನಷ್ಟು ಕೊಡುಗೆ ಕೊಡಲೆಂದು ಆಶಿಸುತ್ತೇನೆ.
- ಬಸವರಾಜ ಹೊನಗೌಡರ – ಚಿಕ್ಕೋಡಿ ಜಿ, ಬೆಳಗಾವಿ.
