೨೨೮ ಪುಟಗಳ ಉಷಾರವಿ ಅವರ ‘ಅಂತರಪಟ’ ಕಾದಂಬರಿಯ ಕುರಿತು ಲೇಖಕ ಹಿರಿಯೂರು ಪ್ರಕಾಶ್ ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ,ತಪ್ಪದೆ ಮುಂದೆ ಓದಿ…
ಪುಸ್ತಕ : ಅಂತರಪಟ
ಲೇಖಕರು : ಉಷಾರವಿ
ಪ್ರಕಾರ : ಕಾದಂಬರಿ
ಬೆಲೆ :250.00
“ಅಣ್ಣಾ….ನನ್ನ ಚೊಚ್ಚಲ ಕಾದಂಬರಿ ಬಿಡುಗಡೆಗೆ ನೀವು ತುಮಕೂರಿಗೆ ಬರಲೇಬೇಕು” ಎಂಬ ಪ್ರೀತಿಪೂರ್ವಕ ಕರೆ ಸಹೋದರಿ ಸಮಾನರಾದ ಉಷಾರವಿಯವರಿಂದ ಮೂರು ತಿಂಗಳ ಹಿಂದೆ ಬಂದಾಗ ಔಪಚಾರಿಕವಾಗಿ ” ಆಗಲಮ್ಮ ಬರುವೆ ” ಎಂದು ಹೇಳಿದ್ದೆನಾದರೂ ನನಗೆ ಹೋಗುವ ಭರವಸೆಯಿರಲಿಲ್ಲ. ಆದರೆ ಜೀವನದಲ್ಲಿ ಕೆಲ ವ್ಯಕ್ತಿಗಳ ವ್ಯಕ್ತಿತ್ವಕ್ಕೆ ಅವರ ಆತ್ಮೀಯ ಕರೆಗೆ ಅನಾಮತ್ತು ಸೋತುಬಿಡುತ್ತೇವೆ. ಬುದ್ಧಪೂರ್ಣಿಮೆಯಂದು ತುಮಕೂರಿನಲ್ಲಿ ಅನೇಕ ಪ್ರಾಜ್ಞರ, ಸಾಹಿತ್ಯಾಸಕ್ತರ ಹಾಗೂ ಸಾಹಿತಿಗಳ ಸಮ್ಮುಖದಲ್ಲಿ ತುಂಬಾ ಅದ್ದೂರಿಯಾಗಿ ಜರುಗಿದ ಕಾದಂಬರಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಹಾಜರಿದ್ದು ಅವರಿಗೆ ಶುಭಹಾರೈಸಿ ನಾನೂ ಸಹ ಕಾದಂಬರಿಯನ್ನು ಕೊಂಡು ಬಂದೆ.
ಓದಿಗೂ ನನಗೂ ನಡುವೆ ಇರುವ ಎಣ್ಣೆ-ಸೀಗೆಕಾಯಿ ಸಂಬಂಧದಿಂದ ಹಾಗೂ ಮೈಗಂಟಿದ ಸಹಜ ಸೋಂಬೇರಿತನದಿಂದಾಗಿ ಪುಸ್ತಕ ತಂದು ಇಷ್ಟು ದಿನವಾದರೂ ಓದಲಾಗಿರಲಿಲ್ಲ. ಆದರೆ ಮೊನ್ನೆ ಗುರುರಾಯರ ದರ್ಶನಕ್ಕೆಂದು ದಾವಣಗೆರೆಯಿಂದ ಮಂತ್ರಾಲಯಕ್ಕೆ ಹೊರಟಾಗ ಕಣ್ಣಿಗೆ ಬಿದ್ದ “ಅಂತರಪಟ” ವನ್ನು ಕೈಗೆತ್ತಿಕೊಂಡು ಪ್ರಯಾಣದ ಸಮಯದಲ್ಲಿ ಓದಿಬಿಡೋಣವೆಂದು ಶುರುವಚ್ಚಿಕೊಂಡೆ. ಮಧ್ಯೆ ಆಗಾಗ್ಗೆ ಬ್ರೇಕ್ ಕೊಡುತ್ತಾ ಮಂತ್ರಾಲಯ ಬರುವ ಮುನ್ನ ಅಂದರೆ ಬಳ್ಳಾರಿ ಬಿಟ್ಟು ಆದೋನಿಗಿಂತಲೂ ಮುಂಚೆ ೨೨೮ ಪುಟಗಳ ( ನನ್ನ ಪಾಲಿಗೆ ) ಬೃಹತ್ ಕಾದಂಬರಿಯನ್ನು ಓದಿ ಮುಗಿಸಿ ಕನ್ನಡಕವನ್ನು ಪಕ್ಕಕ್ಕೆ ಎತ್ತಿಟ್ಟ ಮೇಲೆ ಮಹಿಳಾ ಲೇಖಕಿಯರೊಬ್ಬರ ಸುಧೀರ್ಘ ಕಾದಂಬರಿಯನ್ನು ಪೂರಾ ಓದಿದ್ದು ಜೀವನದಲ್ಲಿ ಇದೇ ಮೊದಲು ಅನಿಸುವುದರ ಜೊತೆಗೆ ಉಷಾರ ಕಾದಂಬರಿ ಕಟ್ಟುವ ಕಲೆಯ ಬಗೆಗೆ ಅಪಾರ ಮೆಚ್ಚುಗೆಯ ಜೊತೆ ಜೊತೆಗೇ ಒಂದೆರಡು ಕಣ್ಣ ಹನಿಗಳೂ ನನಗರಿವಿಲ್ಲದಂತೆಯೇ ಮೂಡಿದ್ದವು. ಈ ಒಂದು ಸಾಲೇ ಕಾದಂಬರಿ ಓದಿದ ಸಾರ್ಥಕ್ಯವನ್ನು ಸೂಚ್ಯವಾಗಿ ತಿಳಿಸಬಲ್ಲದಲ್ಲವೇ ?

ಆದರೂ ಈ ಕಾದಂಬರಿ ಬಗೆಗೆ ನನ್ನ ನಾಲ್ಕು ಮಾತುಗಳು.
ಮೊದಲೇ ಹೇಳಿಬಿಡುತ್ತೇನೆ, ಇದು ಕಾದಂಬರಿಯ ವಿಮರ್ಶೆ ಅಲ್ಲವೇ ಅಲ್ಲ. ಅಸಲಿಗೆ ಕಾದಂಬರಿಯನ್ನು ವಿಮರ್ಶೆ ಮಾಡುವಷ್ಟು ಅಧ್ಯಯನಶೀಲತೆ ಅಥವಾ ವೃಥಾ ಟೀಕಿಸುವ ಅಧ್ವಾನ ಮನಸ್ಥಿತಿ ಈ ಎರಡೂ ಕ್ವಾಲಿಟಿಗಳೂ ನನ್ನಲ್ಲಿಲ್ಲ. ಹೀಗಾಗಿ ಇದು ಜಸ್ಟ್…..ನನ್ನ ಪ್ರಾಮಾಣಿಕ ವೈಯಕ್ತಿಕ ಅನಿಸಿಕೆಯಷ್ಟೇ !
ಸಾಮಾನ್ಯವಾಗಿ ಸಾಮಾಜಿಕ , ಕೌಟುಂಬಿಕ ಕಾದಂಬರಿಗಳೆಂದರೆ ಅಲ್ಲಿ ಭರಪೂರ ಭಾವುಕತೆ, ನಿತ್ಯ ಬದುಕಿನ ತವಕ ತಲ್ಲಣಗಳು, ಮಾನವ ಸಂಬಂಧೀ ಸ್ವಭಾವಗಳಲ್ಲಿನ ರಾಗ, ದ್ವೇಷ, ಪ್ರೀತಿ, ಪ್ರೇಮ, ಪ್ರಣಯ, ಕಪಟ, ವಂಚನೆ , ಅಸೂಯೆ, ಸ್ವಾರ್ಥ ಮುಂತಾದ ಎಲ್ಲಾ ಪ್ರಕಾರದ ಪಾತ್ರಗಳು ಕಣ್ಮುಂದೆ ಬಂದು ಕತೆ ಹೇಳುತ್ತವೆ. ಅದರಲ್ಲೂ ಮನುಷ್ಯನ ಭಾವನೆಗಳು, ಸಂಬಂಧಗಳ ಮೇಲೆ ಕತೆ ಕಟ್ಟಿ ಗೆದ್ದ ನಮ್ಮ ಸಾಹಿತ್ಯ ಲೋಕದ ಪ್ರಮುಖ ಮಹಿಳಾ ಲೇಖಕಿಯರಾದ ಶ್ರೀಮತಿಯರಾದ ಎಂ.ಕೆ.ಇಂದಿರಾ, ತ್ರಿವೇಣಿ, ಸಾಯಿಸುತೆ, ಉಷಾ ನವರತ್ನರಾಂ, ರಾಧಾದೇವಿ, ಅಶ್ವಿನಿ, ಮುಂತಾದವರ ಅನೇಕ ಕೃತಿಗಳು ಚಲನಚಿತ್ರವಾಗಿ ಗೆದ್ದಿದ್ದು ಅವುಗಳಲ್ಲಿನ ಸತ್ವಯುತ ಕತೆ , ಪಾತ್ರಗಳು ಹಾಗೂ ಮನುಷ್ಯ ಸಂಬಂಧಗಳ ಮೌಲ್ಯಗಳು ಹಾಗೂ ಭಾವುಕತೆಯ ವೈಭವೀಕರಣದಿಂದ. ಬಹುತೇಕ ಓದುಗರು ಅದರಲ್ಲೂ ಮಹಿಳಾ ಓದುಗರು ಈ ತರಹದ ಕಾದಂಬರಿಗಳನ್ನು ಓದುತ್ತಾ ಪಾತ್ರಗಳೇ ತಾವಾಗಿ ಅವುಗಳಲ್ಲೇ ಐಕ್ಯರಾಗಿ ಭಾವನಾಲೋಕದಲ್ಲೇ ಇದ್ದದ್ದೂ ಉಂಟು .
ಈ ಹಿನ್ನೆಲೆಯಲ್ಲಿ ಮನುಷ್ಯ ಸಂಬಂಧಗಳನ್ನು, ಆದರ್ಶ ವ್ಯಕ್ತಿತ್ವಗಳನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಭಾವನಾತ್ಮಕ ನೆಲೆಗಟ್ಟಿನಲ್ಲಿ ಕತೆ ಕಟ್ಟುವ ಉಷಾರವಿಯರವ “ಅಂತರಪಟ”ದಂತಹ ಇದೇ ರೀತಿಯ ಪ್ರಯತ್ನ ನಿರಂತರವಾಗಿ ಮುಂದುವರೆದಲ್ಲಿ, ನನಗನಿಸಿದ ಮಟ್ಟಿಗೆ ಮೇಲೆ ಹೇಳಿದ ಕನ್ನಡದ ಕಾದಂಬರಿಗಾರ್ತಿಯರ ಸಾಲಿಗೆ ಇವರೂ ಸೇರುವ ಕಾಲ ದೂರವಿಲ್ಲವೆಂದರೆ ಅತಿಶಯೋಕ್ತಿಯಲ್ಲ.
‘ಅಂತರಪಟ’ ವನ್ನು ಪೂರ್ತಿ ಓದಿದಾಗ ಇದು ಈ ಲೇಖಕಿಯ ಮೊದಲ ಕಾದಂಬರಿಯಂತೆ ಎಲ್ಲೂ ಅನಿಸದಷ್ಟರ ಮಟ್ಟಿಗೆ ಅವರ ಕತೆ ಕಟ್ಟುವ ಶೈಲಿ, ಸನ್ನಿವೇಶಗಳನ್ನು ಪೋಣಿಸಿದ ರೀತಿ ಬೆಳೆಯುತ್ತಾ ಹೋಗಿದೆ. ಒಂದು ಸಾಮಾಜಿಕ ಕಾದಂಬರಿಗೆ ಬೇಕಾಗುವ ಸಕಲ ಸ್ವಾದಿಷ್ಟ ಹೂರಣಗಳೂ ಈ ಕತೆಯಲ್ಲಿ ಪ್ರೀತಿ, ಪ್ರೇಮ, ಬಂಧ- ಅನುಬಂಧ, ಸಂಬಂಧ ,ಒಳ್ಳೆಯತನ, ವಿರಹ, ಪರಂಪರೆ , ರೂಢಿಗಳು, ತಾತ್ವಿಕ ಚರ್ಚೆ, ಸಂಪ್ರದಾಯ, ಕಟ್ಟುಪಾಡು, ಈ ಎಲ್ಲವೂ ಭಾವುಕತೆಯ ಸಾಗರದಲ್ಲಿ ಅದ್ದಿ ತೆಗೆದಂತಹ ಸನ್ನಿವೇಶಗಳಾಗಿ ಪಾತ್ರಗಳ ಮೂಲಕ ಪ್ರತೀ ಪುಟದಲ್ಲೂ ಸರಾಗವಾಗಿ ಪ್ರವಹಿಸಿವೆ.
ಲೇಖಕರ ಆಂತರ್ಯದಲ್ಲಡಗಿ ಕೂತಿದ್ದ ಸಾಮಾಜಿಕ ಕೌಟುಂಬಿಕ ಸಂಬಂಧಗಳ ಕುರಿತಾದ ನಿಖರವಾದ ಭಾವನೆಗಳ ಅಣೆಕಟ್ಟಿನ ಕ್ರಸ್ಟ್ ಗೇಟು, ಅಂತರಪಟದ ಪಾತ್ರಗಳ ರೂಪದಲ್ಲಿ ಧಾರಾಕಾರವಾಗಿ ಹರಿದು ಪಾತ್ರಗಳ ಜೊತೆಜೊತೆಗೆ ಲೇಖಕಿಯ ಅಂತರಂಗವನ್ನೂ ಹಗುರಗೊಳಿಸಿ ಅಂತಿಮವಾಗಿ ಸಾರ್ಥಕ್ಯ ಮೂಡಿಸಿದೆ.
ಕಾದಂಬರಿಯ ಟ್ಯಾಗ್ ಲೈನೇ ಹೇಳುವಂತೆ ಇದೊಂದು
” ಪ್ರಬುದ್ಧ ಮನಸುಗಳ ಭಾವ ತಲ್ಲಣ”
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ತಮ್ಮ ತಮ್ಮ ಬಾಳ ಸಂಗಾತಿಗಳನ್ನು ಚಿಕ್ಕವಯಸ್ಸಿನಲ್ಲೇ ದುರಂತಗಳಲ್ಲಿ ಕಳೆದುಕೊಂಡ ವಿಶ್ವ ಮತ್ತು ಶಾರ್ವರಿಯರು ಈ ವಿಷಯದಲ್ಲಿ ವೈಯಕ್ತಿಕ ಜೀವನದಲ್ಲಿ ಸಮಾನ ದುಃಖಿಗಳೇ. ಅಪಘಾತದಲ್ಲಿ ಅಗಲಿದ ಪತಿ ಅಭಯ್ ನನ್ನು ಶಾರ್ವರಿ ಹಾಗೂ ಕ್ಯಾನ್ಸರ್ ನಿಂದ ಮರಣಿಸಿದ ಪತ್ನಿ ಪ್ರಿಯಾಳನ್ನು ಕಳೆದುಕೊಂಡ ವಿಶ್ವ ಇಬ್ಬರೂ ತಮ್ಮ ಸಂಗಾತಿಯನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಿದರೆಂದರೆ ಅವರು ಅಗಲಿದ ನಂತರವೂ ಬೇರೆಯವರನ್ನು ಆ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿರದಷ್ಟು , ಪ್ರತೀ ಹೆಜ್ಜೆಯಲ್ಲೂ ಅವರ ನೆರಳೇ ಕಾಣುವಷ್ಟು, ಪ್ರತೀ ಮಾತಲ್ಲೂ ಅವರ ಧ್ವನಿಯೇ ಕೇಳಿಸುವಷ್ಟು.!
ಆದರೆ ಕಾಲಾಂತರದಲ್ಲಿ ಶಾರ್ವರಿ ಕೆಲಸ ಮಾಡುತ್ತಿದ್ದ ಅದೇ ಕಾಲೇಜಿನಲ್ಲಿ ವಿಶ್ವನೂ ಸಹೋದ್ಯೋಗಿಯಾಗಿ ಪರಿಚಯವಾಗಿ, ನಿಧಾನಕ್ಕೆ ಅವರಲ್ಲಿ ಪರಸ್ಪರ ಪವಿತ್ರವಾದ ಸ್ನೇಹ ಆರಂಭವಾಗಿ ಅಲ್ಲಿಂದ ಸಲಿಗೆ, ಗೌರವ, ಅಗಾಧವಾದ ಅಪ್ಯಾಯತೆಯನ್ನು ಹುಟ್ಟುಹಾಕಿ ಕೊನೆಗೆ ಅವರ ಸಂಬಂಧಗಳ ಮೂಲ ಸೆಲೆಗೂ ಅದು ಎಳೆದು ತರುತ್ತದೆ. ಶಾರ್ವರಿಯ ಪ್ರತಿಯೊಂದು ನಡೆಯಲ್ಲೂ ವಿಶ್ವ ತನ್ನ ಹೆಂಡತಿ ಪ್ರಿಯಾಳನ್ನು ಕಂಡರೆ ವಿಶ್ವನ ಒಟ್ಟಾರೆ ವ್ಯಕ್ತಿತ್ವದಲ್ಲಿ ಶಾರ್ವರಿ ಅಗಲಿದ ತನ್ನ ಪತಿ ಅಭಯ್ ನ ಜೀವಂತಿಕೆಯ ಕುರುಹುಗಳನ್ನು ಗಮನಿಸುತ್ತಾ ತನಗರಿಯದ ತಲ್ಲಣಕ್ಕೊಳಗಾಗುತ್ತಾಳೆ.

ವಿಶ್ವ ಮತ್ತು ಶಾರ್ವರಿ ಒಬ್ಬರನ್ನೊಬ್ಬರ ಅಂತರಂಗವನ್ನು ಸ್ಪಷ್ಟವಾಗಿ ಅರಿತುಕೊಂಡೇ ಗುಪ್ತಗಾಮಿನಿಯಾಗಿ ಸಾಗುವ ಈ ಪ್ರಬುದ್ಧ ಮನಸುಗಳ ಭಾವ ತಲ್ಲಣಗಳ ಪಯಣದಲ್ಲಿ ಒಬ್ಬರಲ್ಲಿ ಮತ್ತೊಬ್ಬರು ತಮಗರಿವಿಲ್ಲದಂತೆಯೇ ಮಾನಸಿಕವಾಗಿ, ಭಾವನಾತ್ಮಕವಾಗಿ ಅನುರಕ್ತರಾಗಿ ತಮ್ಮ ಎದೆಯೊಳಗಿನ ನಿರ್ಮಲ ಪ್ರೀತಿಯನ್ನು ಎಲ್ಲಿಯೂ ಯಾರೆದುರೂ ಬಹಿರಂಗವಾಗಿ ಹೇಳಿಕೊಳ್ಳಲಾಗದೇ ಮಾನಸಿಕ ತೊಳಲಾಟದಲ್ಲಿ ಬಳಲುವ, ವೇದನೆಯ ತುಮುಲಗಳಲ್ಲಿ ಪರಿತಪಿಸುವ ಅಂತರಂಗಗಳ ಸ್ವಚ್ಛ ಭಾವನೆಗಳ ಅಚ್ಚ ನಿರೂಪಣೆಯೇ ” ಅಂತರಪಟ ” .
ಅಂತರಪಟದ ಈ ತೆರೆಯನ್ನು ಸಂಪೂರ್ಣವಾಗಿ ಸರಿಸಿ ವಿಶ್ವ- ಶಾರ್ವರಿ ಕೊನೆಗೆ ಒಂದಾದರೇ… ಎಂಬುದಕ್ಕೆ ಉತ್ತರ ರೂಪದಲ್ಲಿ ಈ ಕಾದಂಬರಿಯಿದೆ.
ಪ್ರಧಾನ ಪಾತ್ರಗಳು ವಿಶ್ವ ಹಾಗೂ ಶಾರ್ವರಿಯರದ್ದಾದರೂ ಇಲ್ಲಿ ಬರುವ ಪ್ರತೀ ಪಾತ್ರಕ್ಕೂ ಅದರದ್ದೇ ಆದ ತೂಕ, ಹಿನ್ನೆಲೆ , ವ್ಯಕ್ತಿತ್ವ ಹಾಗೂ ಮಹತ್ವವನ್ನು ಲೇಖಕಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಹಾಗೆ ನೋಡಿದಲ್ಲಿ ಕೇವಲ ನಾಯಕ ನಾಯಕಿಯರ ಪಾತ್ರಗಳಷ್ಟೇ ಇಲ್ಲಿ ಪ್ರಮುಖವೆನಿಸದೇ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ಸಹ ವ್ಯಕ್ತಿಗತವಾಗಿ ಆದರ್ಶ ಪಾತ್ರಗಳಾಗಿ ಸಾಮಾಜಿಕ ಸಂಬಂಧಗಳ ಔನ್ನತ್ಯವನ್ನು ಎತ್ತಿ ಹಿಡಿಯುವಂತಹ ಮೌಲಿಕ ವ್ಯಕ್ತಿತ್ವಗಳಾಗಿ ಉಳಿಯುತ್ತವೆ. ಅದು ತೋಟದಲ್ಲಿ ಕೆಲಸ ಮಾಡುವವರ ಪಾತ್ರಗಳಿಂದ ಅಪ್ಪ ಅಮ್ಮ ಇಲ್ಲದ ನತದೃಷ್ಟ ಎಂಬ ಭಾವನೆ ಬಾರದಂತೆ ಸಾಕಿದ ಅತ್ತೆ ಮಾವನ ಪಾತ್ರಗಳವರೆಗೂ, ಒಡಹುಟ್ಟಿದ ಸಹೋದರಿಗಿಂತ ಗುಣದಲ್ಲಿ, ಸ್ವಾಭಿಮಾನದಲ್ಲಿ ಶ್ರೀಮಂತೆಯಾದ ಅನಾಥೆ ಪ್ರಿಯಾಳನ್ನೇ ಪ್ರಮೋದ್ ತಂಗಿಯಂತೆ ಹೆಚ್ಚಿಗೆ ಇಷ್ಟಪಡುವುದು, ಸಾಮಾಜಿಕ ಸೂಕ್ಷ್ಮಗಳ ಬಗೆಗೆ , ಪುರಾತನ ಕಾಲದಿಂದಲೂ ಬಂದ ಆಚರಣೆ ಸಂಪ್ರದಾಯಗಳ ಬಗೆಗೆ ತಿಳಿವಳಿಕೆ ಹೇಳುವ ಎಲ್ಲಾ ಪಾತ್ರಗಳೂ ಸಹ ಕಾದಂಬರಿಯ ಒಟ್ಟಾರೆ ಮೌಲ್ಯಗಳ ಪ್ರತಿಫಲನಕ್ಕೆ ಸಾಥ್ ಕೊಟ್ಟಿವೆ.
ಕತೆಯ ಓಘಕ್ಕೆ ತೀರಾ ಅಡ್ಡ ಬಾರದಂತೆ ಮಾನವ ಸಂಬಂಧಗಳು, ಒಂಟಿತನ, ಏಕಾಂಗಿತನ, ಸಾವು, ನೋವು, ಕೌಟುಂಬಿಕ ಆಚರಣೆಗಳು, ಪುರಾಣಗಳ ದೃಷ್ಟಾಂತ ಇತ್ಯಾದಿಗಳ ಬಗೆಗೆ ವ್ಯಾಖ್ಯಾನ ಸಹಿತವಾದ ತಾತ್ವಿಕ ವಿಮರ್ಶೆಯೂ ಒಂದಲ್ಲಾ ಒಂದು ಅಧ್ಯಾಯದಲ್ಲಿ ಮಿಳಿತವಾಗಿದೆ. ಅದಲ್ಲದೇ ..
“ನಗುವ ಗುಲಾಬಿ ಹೂವಿನ ಹಿಂದೆ ನೂರಾರು ಮುಳ್ಳುಗಳು ಇರುವಂತೆ ನಗಿಸುವವ ಹೃದಯದಲ್ಲಿ ನಗಲಾರದಷ್ಟು ನೋವಿರುತ್ತೆ”
ಹೂವು ಪೋಣಿಸಿದಷ್ಟು ಸುಲಭವಲ್ಲ ಬಂಧಗಳ ಪೋಣಿಸಿ ಹಿಡಿದಿಟ್ಟುಕೊಳ್ಳುವುದು…
ಈ ರೀತಿಯ ಕೆಲವೊಂದು ಸೊಗಸಾದ ಸಾಲುಗಳಲ್ಲಿಯೂ ಲೇಖಕಿ ಓದುಗರನ್ನು ಬಿಡದೇ ಹಿಡಿದಿಟ್ಟಿರುವುದರ ಹಿಂದೆ ಅವರ ಅಧ್ಯಯನಶೀಲತೆಯ ಶ್ರಮ ಎದ್ದು ಕಾಣುತ್ತದೆ.
ಆಧುನಿಕ ಜೀವನಶೈಲಿಯ ಭರಾಟೆಯಲ್ಲಿ ಮನುಷ್ಯ ಸಂಬಂಧಗಳು ಸತ್ತು ಸುಡುಗಾಡು ಸೇರುತ್ತಿರುವ ಇಂದಿನ ದಿನಗಳಲ್ಲಿ , ಮಾನವ ಸಂಬಂಧಗಳ ಮೌಲ್ಯಗಳ ಮಹತ್ವವನ್ನು ಭಾವುಕತೆಯ ನೆಲೆಗಟ್ಟಿನಲ್ಲಿ, ತಾತ್ವಿಕ ತಳಹದಿಯಲ್ಲಿ, ರಚನಾತ್ಮಕ ಸನ್ನಿವೇಶ ಸಂಭಾಷಣೆಗಳ ಮೂಲಕ ಒತ್ತಿ ಹೇಳುವ ಪ್ರಾಮಾಣಿಕ ಪ್ರಯತ್ನ ‘ಅಂತರಪಟ’ ದಲ್ಲಿ ಬಿಂಬಿತವಾಗಿದೆ. ಲೇಖಕಿ ತುಮಕೂರು ಜಿಲ್ಲೆಯವರೇ ಆಗಿರುವುದರಿಂದ ಆ ಜಿಲ್ಲೆಯ ಹಳ್ಳಿಗಳ ಹಾಗೂ ಅಲ್ಲಿನ ಪ್ರಕೃತಿ ಸೌಂದರ್ಯದ ಮೇಲಿನ ಮಮತೆ ಢಾಳಾಗಿ ಕಂಡಿವೆ. ಹೊಳವನಹಳ್ಳಿ, ತೀತಾ, ಮಧುಗಿರಿ, ಕೊರಟಗೆರೆ, ನಾಗೇನಹಳ್ಳಿ, ಇತ್ಯಾದಿ ಸ್ಥಳಗಳನ್ನೂ ಅಲ್ಲಿನ ಜೀವನ ಶೈಲಿಯನ್ನೂ ಪರಿಚಯಿಸುತ್ತಲೇ ಹೋಗಿರುವುದು ಅವರ ನೆಲದ ಮೇಲಿನ ಪ್ರೀತಿಯನ್ನು ಸಾಕ್ಷೀಕರಿಸುತ್ತದೆ.
ಕೊನೆಯದಾಗಿ, ವಾಸ್ತವತೆಗೆ ದೂರವೆನ್ನಬಹುದಾದ ಕೆಲವೊಂದು ಅಸಂಗತಗಳು, ಅತಿಯಾದ ಆದರ್ಶಮಯ ವ್ಯಕ್ತಿತ್ವಗಳ ಭಾರ, ಆಚರಣೆ, ಸಂಪ್ರದಾಯಗಳ ಕುರಿತಾದ ತಾತ್ವಿಕ ತರ್ಕಕ್ಕೆ ಒರೆಹಚ್ಚುವ ಉದ್ದುದ್ದ ಉಪದೇಶಗಳು, ಭಾಷಾ ಶೈಲಿಯ ಬಳಕೆಯಲ್ಲಿ ಇಣುಕಿರುವ ಅಲ್ಪಸ್ವಲ್ಪ ಗೊಂದಲಗಳು, ಅಲ್ಲಲ್ಲಿ ಅನಗತ್ಯವಾದ ಆಂಗ್ಲ ಪದಗಳ ಧಾರಾಳ ಬಳಕೆ … ಹೈವೇಯಲ್ಲಿ ಆಗಾಗ್ಗೆ ಸಿಗುವ ದೊಡ್ಡ ಹಂಪ್ ಗಳಂತಿರುವ ಈ ತರಹದ ಕೆಲ ಅಂಶಗಳನ್ನು ಹೊರತು ಪಡಿಸಿದರೆ ಉಷಾರವಿ ತಮ್ಮಚೊಚ್ಚಲ ಯತ್ನದಲ್ಲೇ ಗೆದ್ದಿರುವುದಲ್ಲದೇ ಅವರಿಂದ ಕನ್ನಡ ಕಾದಂಬರಿ ಲೋಕಕ್ಕೆ ಮತ್ತಷ್ಟು ಮೌಲಿಕವಾದ ಕೊಡುಗೆಗಳು ಸಿಗಲಿ ಎಂದು ಸೋದರಪ್ರೀತಿಯಿಂದ ಪ್ರಾಮಾಣಿಕವಾಗಿ ಹಾರೈಸುವೆ.
ಮಂತ್ರಾಲಯ ತಲುಪಲು ಇನ್ನು ಅರ್ಧ ಘಂಟೆ ಬಾಕಿಯಿರುವಾಗಲೇ ‘ಅಂತರಪಟ’ ವನ್ನೋದಿದ ಕೂಡಲೇ ಈ ಅನಿಸಿಕೆಗಳನ್ನೂ ಅವಸರಕ್ಕೆ ಬರೆದು ಕಣ್ಣಂಚಿನಲ್ಲಿ ನಿಧಾನಕ್ಕೆ ಜಿನುಗಿದ ಆಪ್ಯಾಯತೆಯ ಬಿಂದುವನ್ನು ಬೆರಳತುದಿಯಿಂದ ಪಕ್ಕಕ್ಕೆ ಸರಿಸಿ , ಮೆಚ್ಚುಗೆಯಿಂದ , ಮನದಲ್ಲಿ ಮೂಡಿದ ಅನಿಸಿಕೆಗಳನ್ನು ಅರುಹಿರುವೆ.
ಅಭಿನಂದನೆಗಳು ಉಷಾಮ್ಮ . ಶುಭವಾಗಲಿ.
* ಮರೆಯುವ ಮುನ್ನ *
ಲೇಖಕನೊಬ್ಬ ತನ್ನೊಳಗಿನ ವೈಯಕ್ತಿಕ ಇಷ್ಟ- ಅನಿಷ್ಟ, ಮೆಚ್ಚುಗೆ- ವಿರೋಧ, ಸಿದ್ದಾಂತ, ವೇದಾಂತ, ನಂಬಿಕೆ …. ಮುಂತಾದವುಗಳನ್ನು ತಾನು ಬರೆಯುವ ಕೃತಿಯಲ್ಲಿನ ಪಾತ್ರಗಳ ಮೂಲಕ ಪ್ರಚುರಪಡಿಸುವ ಕಲೆಯೋ_ ತಂತ್ರಗಾರಿಕೆಯೋ ಅದು ನಮ್ಮಲ್ಲಿ ಎಸ್.ಎಲ್.ಭೈರಪ್ಪ ಸೇರಿದಂತೆ ಕೆಲವೇ ಮಂದಿ ಕಾದಂಬರಿಕಾರರಲ್ಲಿ ಇರಬಹುದಾದ ವಿಶೇಷ ಶೈಲಿಯ ಅಭಿವ್ಯಕ್ತಿ .
ಈ ಶೈಲಿಯ ಬರಹಗಾರರು ಕಾದಂಬರಿಗಳ ಪಾತ್ರಪೋಷಣೆ ಮಾಡುವಾಗ ತಮ್ಮೆಲ್ಲಾ ಅಭೀಪ್ಸೆ, ಅಭಿರುಚಿ, ಅಪೇಕ್ಷೆ, ನಂಬಿಕೆ, ಸ್ವಯಂ ಶಿಸ್ತು , ಬದುಕಿನ ಆದ್ಯತೆ, ಸೈದ್ದಾಂತಿಕ ಬದ್ದತೆ… ಮುಂತಾದವುಗಳನ್ನು ಕತೆಯ ಪಾತ್ರಗಳ ಮುಖೇನ ಹೇಗಾದರೂ ಅನಾವರಣ ಮಾಡಿಸಿಬಿಡುತ್ತಾರೆ. ತಾನು ಏನನ್ನು ಅನುಸರಿಸುತ್ತಿರುವೆ, ಯಾವುದನ್ನು ಮೆಚ್ಚಿಕೊಳ್ಳುತ್ತಿರುವೆ ಎಂಬುವುದರ ಸಮರ್ಥನೆಯನ್ನು ಪಾತ್ರಗಳ ಮೂಲಕ ಕೊಡುತ್ತಲೇ ಹೋಗುತ್ತಾರೆ. ಕತೆ ಕಾದಂಬರಿ ಯಾವುದೇ ಇರಲಿ, ಒಂದೊಮ್ಮೆ ಬೇಕಾದರೆ ಇವರು ಕತೆಯ ಹಾದಿಯನ್ನೇ ಬದಲಾಯಿಸುವರೇ ವಿನಃ ತಮ್ಮ ಈ ಸೈದ್ಧಾಂತಿಕ ಬದ್ದತೆಯನ್ನು ಎಂದಿಗೂ ಬಿಟ್ಟುಕೊಡಲಾರರು. ಹೀಗಾಗಿ ಇದು ಇಂತಹ ಲೇಖಕರ ಕೃತಿ ಎಂದಾಕ್ಷಣ ಅದರ ಸೈದ್ಧಾಂತಿಕ ಹೂರಣ ಹೇಗಿರಬಲ್ಲದೆಂಬುದನ್ನು ಓದುಗರು ಮೊದಲೇ ಊಹಿಸುವಂತಾಗಿ ಬಿಡುತ್ತದೆ.
“ಅಂತರಪಟ” ಓದಿದ ಮೇಲೆ ಹೆಚ್ಚು ಕಡಿಮೆ ಆ ಹಾದಿಯನ್ನೇ ಉಷಾರವಿ ಆರಿಸಿಕೊಂಡಿದ್ದಾರೇನೋ ಎಂದು ಅವರನ್ನು ಹತ್ರಿರದಿಂದ ಬಲ್ಲವರಿಗೆ ಮೇಲ್ನೋಟಕ್ಕೆ ಅನಿಸುವುದುಂಟು . ಉದಾಹರಣೆಗೆ ಪುರಾತನ ಪದ್ದತಿ, ಕೂಡು ಕುಟುಂಬ, ಆಚಾರ ವಿಚಾರಗಳ ಶ್ರೇಷ್ಠತೆ, ಆಧುನಿಕತೆಯೆಡೆಗಿನ ಅಲರ್ಜಿ, ನಗರದ ಅಬ್ಬರಕ್ಕಿಂತ ಹಳ್ಳಿಯ ಸರಳ ಬದುಕು, ಸಂಬಂಧಗಳ ಸೂಕ್ಷ್ಮ ವಿಶ್ಲೇಷಣೆ, ಅರಿಷಿಣದ ಗುಣವನ್ನು ಹೊಗಳುತ್ತಲೇ ಮೇಕಪ್ಪು- ಕಾಸ್ಮೆಟಿಕ್ಕುಗಳನ್ನು ಹೀಗಳೆಯುವ ರೀತಿ, ..ಇತ್ಯಾದಿ.
ಈ ಹಾದಿ ಸರಿಯೋ ತಪ್ಪೋ ಅನ್ನುವುದಕ್ಕಿಂತ ಯಾವುದೇ ಒಬ್ಬ ಸೃಜನಶೀಲ ಕಲಾಕಾರ, ತಾನು ವೈಯಕ್ತಿಕವಾಗಿ ಬಲವಾಗಿ ನಂಬಿ ಅದರಲ್ಲೇ ಬಂಧಿಯಾಗಿರುವ ಸಿದ್ದಾಂತವನ್ನು ತನ್ನ ಕಲಾ ಪ್ರಕಾರದ ಮೂಲಕ ಅಭಿವ್ಯಕ್ತಿಸಲು ಯತ್ನಿಸುವುದು ಅವರ ಸಾಮಾಜಿಕ ಬದ್ದತೆಗೆ, ಸಾರ್ವತ್ರಿಕ ಕಲೋಪಾಸನೆಗೆ ಭಂಗ ತಂದುಕೊಂಡಂತೆ ….ಎಂಬ ಸಾತ್ವಿಕ ಹಾಗೂ ಜವಾಬ್ದಾರಿಯುತ ಎಚ್ಚರಿಕೆಯನ್ನು ಕಾಪಿಟ್ಟುಕೊಳ್ಳುವುದು ಅಪೇಕ್ಷಣೀಯ.
ಮತ್ತೊಮ್ಮೆ ಕನ್ನಡ ಕಾದಂಬರಿ ಲೋಕದ ನವತಾರೆ ಸಹೋದರಿ ಉಷಾರವಿಯವರಿಗೆ ಮೆಚ್ಚುಗೆಯ ಅಭಿನಂದನೆಗಳು.
ಪ್ರೀತಿಯಿಂದ…….
- ಹಿರಿಯೂರು ಪ್ರಕಾಶ್
