ಶ್ವೇತಾ ಭಿಡೆ ಅವರ ‘ಚಿಂತೆ ಬಿಡಿ chill ಮಾಡಿ’ ಕೃತಿಯ ಕುರಿತು ರಮ್ಯಾ ರಾಜ್ ಅವರು ವಿಮರ್ಶೆ ಬರೆದಿದ್ದಾರೆ. ಗುರಿಯನ್ನು ತಲುಪುವಾಗ ಉಂಟಾಗುವ ಅಡೆತಡೆಗಳನ್ನು ತಡೆದು ದಾರಿ ಬದಲಾಯಿಸಿ ಹೋಗುವುದು ಹೇಗೆ?ಸಣ್ಣ ಸಣ್ಣ ಪ್ರಯತ್ನಗಳಿಂದ ದೊಡ್ಡ ದೊಡ್ಡ ಫಲಿತಾಂಶಗಳು ಹೇಗೆ ಸಾಧ್ಯವಾಗುತ್ತವೆ ಎಂಬ ವಿಶೇಷ ಬರಹಗಳನ್ನು ಈ ಕೃತಿಯಲ್ಲಿ ಓದಬಹುದು.
ಪುಸ್ತಕದ ಹೆಸರು – ಚಿಂತೆ ಬಿಡಿ chill ಮಾಡಿ
ಲೇಖಕರು – ಶ್ವೇತಾ ಭಿಡೆ
ಪ್ರಕಾಶಕರು – ಸಾವಣ್ಣ ಎಂಟರ್ಪ್ರೈಸಸ್ ಬೆಂಗಳೂರು
ಖರೀದಿಗಾಗಿ : 9036312786
ಮೊದಲನೇ ಮುದ್ರಣ – ಸೆಪ್ಟಂಬರ್ 2024
ಪುಟಗಳ ಸಂಖ್ಯೆ – 160
ಬೆಲೆ – 18೦
ಪಟ ಪಟನೆ ಪುಟಗಳನ್ನು ತಿರುಗಿಸುವಂತಹ ಪುಟ್ಟ ಪುಟ್ಟ ಲೇಖನಗಳನ್ನು ಓದುಗರು ಪುಟಿದೇಳುವಂತೆ ಅಷ್ಟೇ ಪರಿಣಾಮಕಾರಿಯಾಗಿ ಬರೆದಿದ್ದಾರೆ ಲೇಖಕಿಯವರು. ಈ ಪುಸ್ತಕ ಒಟ್ಟಾರೆ 60 ಕಿರು ಲೇಖನಗಳನ್ನು ಹೊಂದಿದ್ದು, ಪ್ರತಿಯೊಂದು ಲೇಖನವೂ ಎರಡು ಪುಟಗಳಲ್ಲಿ ಮುಗಿದಿರುವುದು ಈ ಪುಸ್ತಕದ ವಿಶೇಷವಾಗಿದೆ. ಆಗಂದ ತಕ್ಷಣ ಒಮ್ಮೆ ಹಿಡಿದರೆ ಮುಗಿಸಿ ಎದ್ದೇಳುವ ಪುಸ್ತಕವಿದಲ್ಲ. ಹಾಗೆ ಮಾಡಲು ಕೂಡದು.
ಒಂದು 10 ಲೇಖನಗಳನ್ನು ಓದುತ್ತಿದ್ದ ಹಾಗೆ ಹೊಟ್ಟೆ ಮೃಷ್ಟಾನ್ನ ಭೋಜನದಿಂದ ತುಂಬಿದ ಅನುಭವವಾಗುತ್ತದೆ. ಹಾಗಾದಾಗ ಪುಸ್ತಕವನ್ನು ಮುಚ್ಚಿಟ್ಟು ಜೀರ್ಣಿಸಿಕೊಳ್ಳಲು ಸಮಯ ನೀಡಿ ವಿರಾಮದ ನಂತರ ಮತ್ತೇ ಪುಸ್ತಕವನ್ನು ಓದಬೇಕಂಬ ಹಸಿವು ಉಂಟಾಗುತ್ತದೆ.ಹೀಗೆ ಇದು ಪುನರಾವರ್ತನೆಗೊಳ್ಳುತ್ತಿರುತ್ತದೆ.

ಇದು ಯಾವ ಬಗೆಯ ಪುಸ್ತಕವೆಂದರೆ;
ಮನೆಯ ಹಿರಿಯಕ್ಕ ತನ್ನ ಒಡಹುಟ್ಟಿದವರನ್ನೆಲ್ಲಾ ತನ್ನ ಸುತ್ತಲೂ ಕೂರಿಸಿಕೊಂಡು ಪ್ರೀತಿಯಿಂದ, ಆಲಂಗಿಸುತ್ತಾ ಬುದ್ಧಿ ಮಾತನ್ನು ಹೇಳುತ್ತಿರುವಂತೆ ಭಾಸವಾಗುತ್ತದೆ. ಜೀವನದಲ್ಲಿ ಯಾವುದೇ ಏರುಪೇರುಗಳಿದ್ದರೂ ಅದನ್ನು ಸರಿ ಮಾಡಿಕೊಂಡು ಹೇಗೆ ಮುನ್ನಡೆಯಬಹುದು ಎಂಬುದನ್ನು ಇಲ್ಲಿನ ಲೇಖನಗಳನ್ನು ಓದಿ ಕಲಿಯಬಹುದು.
ಚಿಂತೆ ಮಾಡದಿದ್ದರೆ ಗೊತ್ತು ಗುರಿ ಇಲ್ಲದ ಜೀವನ ನಮ್ಮದಾಗುತ್ತದೆ, ಚಿಂತೆಯ ಪ್ರಮಾಣ ಎಷ್ಟು ಮಟ್ಟಗಿದ್ದರೆ ಒಳ್ಳೆಯದು ಎಂಬ ಪವರ್ ಫುಲ್ ಕಿವಿಮಾತು ಇಲ್ಲಿದೆ. ನಮ್ಮ ಶಕ್ತಿ ಏನು?? ನಮ್ಮಯ ಸಂತೋಷಕ್ಕಾಗಿ ಏನೆಲ್ಲ ಮಾಡಲೇಬೇಕು?? ಎಂಬ ಚೇತೋಹಾರಿ ಬರಹಗಳಿವೆ.
ವಿರಾಮದಲ್ಲೂ ಆರಾಮವಾಗಿರುವುದು ಹೇಗೆ, ಗುರಿಯನ್ನು ತಲುಪುವಾಗ ಉಂಟಾಗುವ ಅಡೆತಡೆಗಳನ್ನು ತಡೆದು ದಾರಿ ಬದಲಾಯಿಸಿ ಹೋಗುವುದು ಹೇಗೆ ಹಾಗೂ ಸಣ್ಣ ಸಣ್ಣ ಪ್ರಯತ್ನಗಳಿಂದ ದೊಡ್ಡ ದೊಡ್ಡ ಫಲಿತಾಂಶಗಳು ಹೇಗೆ ಸಾಧ್ಯವಾಗುತ್ತವೆ ಎಂಬ ವಿಶೇಷ ಬರಹಗಳನ್ನು ಇಲ್ಲಿ ಓದಬಹುದು.

ಅವರು ಅವರವರಂತೆಯೇ ಇರಲಿ ಬಿಡಿ, ನಾವು ನಮ್ಮಂತೆ!ಇರೋಣ, ನನಗೆ ನೋವು ಮಾಡುವ ಅಧಿಕಾರ ನಾನ್ಯಾರಿಗೂ ಕೊಟ್ಟಿಲ್ಲ! ಇವುಗಳನ್ನಂತೂ ಓದಲೇಬೇಕು.
ನನ್ನನ್ಯಾರೂ ಮೆಚ್ಚದೆ ಹೇಗಿರಲಿ ನಾನು?
ಬೇಡವೆಂದರು ಅವಳೇ ಕಾಡುತ್ತಾಳೆ, ನಾನೇನು ಮಾಡಲಿ?
ನಾನೇನೇ ಮಾಡಿದರು ಏನು ಸಾಧ್ಯವಾಗುತ್ತಿಲ್ಲ, ಸ್ಪೂರ್ತಿ ಎಲ್ಲಿ ಸಿಗುತ್ತದೆ?
ಇವುಗಳಿಗೆಲ್ಲ ಈ ಪುಸ್ತಕದಲ್ಲಿ ಉತ್ತರ ಸಿಗುತ್ತದೆ.ರಮ್ಯ ರಾಜ್
ಕೊನೆಯಲ್ಲಿ ಒಂದು ಮಾತು:
ಈ ಪುಸ್ತಕವನ್ನು ಓದೀ ಮುಗಿಸಿದಾಗ ನನಗನಿಸಿದ್ದು ಇಷ್ಟೊಂದು ವಿಚಾರಗಳನ್ನು ಲೇಖಕರು ಹೇಗೆ ಒಟ್ಟು ಗೂಡಿಸಿದರು ಇಷ್ಟು ಚಿಕ್ಕ ವಯಸ್ಸಿನಲ್ಲೇ ಎಂಬ ಪ್ರಶ್ನೆ ಮೂಡತೊಡಗಿತು. ಅಷ್ಟು ಚಂದವಾದ ಮೂಡಿಬಂದಿದೆ ಈ ಹೊತ್ತಿಗೆ ಎನ್ನಬಹುದು.
- ರಮ್ಯಾ ರಾಜ್
