ಲೇಖಕಿ ಶುಭಲಕ್ಷ್ಮಿ ನಾಯಕ್ ಅವರ ‘ಅನುಭವ ದೀಪ್ತಿ’ ಕೃತಿಯಲ್ಲಿ ಸುಂದರವಾದ ಲಿಪಿ, ಚಂದದ ನುಡಿ ಇದರಲ್ಲಿದೆ. ಲೇಖಕರಾದ ದತ್ತಾತ್ರೇಯ ಹೆಗಡೆ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ: ಅನುಭವ ದೀಪ್ತಿ
ಪ್ರಕಾರ: ಮುಕ್ತಕಗಳು
ಲೇಖಕಿ: ಶುಭಲಕ್ಷ್ಮಿ ನಾಯಕ್
ವಿಮರ್ಶೆ: ದತ್ತಾತ್ರೇಯ ಹೆಗಡೆ
ಚಿರಕಾಲ ಉಳಿಯುವಂತಹ
‘ಅನುಭವ ದೀಪ್ತಿ’
ಮುಕ್ತಕಗಳು ಅನುಭವದ ಅಣಿಮುತ್ತುಗಳು, ಸರಳ ಮತ್ತು ಸುಂದರವಾಗಿ, ಎಲ್ಲರಿಗೂ ಅರ್ಥವಾಗುವಂತಹವು. ಇದು ಕನ್ನಡ ಸಾಹಿತ್ಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿಕೊಂಡಿದೆ. ಮುಕ್ತಕಕ್ಕೆ ಡಿವಿಜಿಯವರ ‘ಮಂಕುತಿಮ್ಮನ ಕಗ್ಗ’ ಮತ್ತು ‘ಮರುಳ ಮುನಿಯನ ಕಗ್ಗ’ ಹಾಗೂ ದಿನಕರ ದೇಸಾಯಿ ಅವರ ‘ದಿನಕರನ ಚೌಪದಿಗಳು’ ಉದಾಹರಣೆಗಳು. ನಾಲ್ಕೇ ಸಾಲುಗಳಲ್ಲಿ ಒಂದು ವಿಷಯವನ್ನು ಪ್ರಸ್ತಾಪಿಸಿ ತಿಳಿಸುವ ರೀತಿ ಅದ್ಭುತ. ಯಾವುದೇ ಮುಕ್ತಕ ತೆಗೆದುಕೊಂಡರೂ ಸ್ವತಂತ್ರವಾಗಿ ಅದು ಅರ್ಥವಾಗುತ್ತದೆ. ನೆನಪಿಗೆ ಸುಲಭವಾದ ಇಂತಹ ಮುಕ್ತಕಗಳನ್ನು ಅನುಭವ ಗೀತೆಯಲ್ಲಿ ಉಪನ್ಯಾಸಕಿ ಶುಭಲಕ್ಷ್ಮಿ ನಾಯಕ್ ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಇಲ್ಲಿನ ಮುಕ್ತಕಗಳಲ್ಲಿ ಇಲ್ಲದ ವಿಷಯಗಳೇ ಇಲ್ಲ. ಸೈನಿಕರು, ಪರಿಸರ, ಅಹಮಿಕೆ, ಮೋಕ್ಷ, ನಡೆ-ನುಡಿ, ತಾಯ್ನಾಡು, ಹಬ್ಬ, ಭಾಷೆ, ಕಾಡು, ಲಂಚ, ಸಾಲ, ಶಿಕ್ಷಣ, ಓದು, ವಂಚನೆ, ಮೋಸ, ಯೋಗ, ಜೀವನ, ಮಳೆ, ಹಳ್ಳಿ, ಹೆಣ್ಣು, ಹಣ, ಶಾಲೆ… ಮೊದಲಾದ ನೂರಾರು ವಿಷಯಗಳು ತುಂಬಿಕೊಂಡಿವೆ. ಕವಯಿತ್ರಿಯ ಸಾಮಾಜಿಕ ಕಾಳಜಿ, ಜಗತ್ತಿನ ಭವಿಷ್ಯದ ಬಗೆಗಿನ ಕಳಕಳಿ, ಸಕಾರಾತ್ಮಕ ಧೋರಣೆ ಮತ್ತು ಆಶಾವಾದ ಇಲ್ಲಿ ವ್ಯಕ್ತವಾಗುವುದರೊಂದಿಗೆ ಅವರ ಸೃಜನಶೀಲತೆ, ಚಿಕಿತ್ಸಕ ಬುದ್ಧಿಮತ್ತೆ ವೇದ್ಯವಾಗುತ್ತದೆ. ಇಲ್ಲಿ ಬಳಸಿದ ಹಲವು ಬಗೆಯ ರೂಪಕಗಳು, ಉಪಮೇಯಗಳು, ಮುಕ್ತಕದ ಒಳತಿರುಳಿಗೆ ಮೆರುಗನ್ನು ನೀಡಿವೆ. ತಮ್ಮ ಅನುಭವ ದ್ರವ್ಯದ ಮೂಲಕ ಆದಿಪ್ರಾಸವುಳ್ಳ ಚೌಪದಿಗಳನ್ನು ಹೆಣೆದು ನಮ್ಮ ಮುಂದಿಟ್ಟಿರುವುದು ಗಮನಾರ್ಹವಾಗಿದೆ.

ಕವಯಿತ್ರಿಯ ಚೌಪದಿ ಆರಂಭವಾಗುವುದು ಹೀಗೆ- ಅನುದಿನದ ಘಟನೆಗಳ ಮುಕ್ತಪದ ರೂಪದಲಿ/ ಅನುಭವದ ಬೆಳಕಂತೆ ಚೆಲ್ಲಿರುವೆ ಇಲ್ಲಿ/ ಅನುನಯದಿ ಓದೆನುವ ಅನುಭವದ ದೀಪ್ತಿಯನು/ ಅನವರತ ಹರಸೆಂಬೆ- ಗೌರಿತನಯ/ ಅದೇ ರೀತಿ ಇನ್ನೊಂದು ಚೌಪದಿ- ಅನುಭವದ ಸಾರದಲಿ ಹೊರಬಂದ ಭಾವಗಳು/ ದಿನವೊಂದು ಮುಕ್ತಕದ ರೂಪವನು ಪಡೆದು/ ಹನಿಯೆಲ್ಲ ಒಟ್ಟಾಗಿ ತಂಪನ್ನು ಉಣಿಸುತಿರೆ/ ಮನಕಿದುವೇ ಸಂತಸವು- ಗೌರಿತನಯ/ ಹೀಗೆ ಚುಟುಕುಗಳ ಮಹತ್ವವನ್ನು ಸಾರುತ್ತಾರೆ.
ಓದು ಮತ್ತು ಜ್ಞಾನ ಎಷ್ಟು ಮುಖ್ಯ ಎನ್ನುವುದನ್ನು ಹೀಗೆ ವಿವರಿಸುತ್ತಾರೆ- ಪುಸ್ತಕವನ್ನು ಓದುತ್ತಾ ಜ್ಞಾನವನ್ನು ಗಳಿಸಿದರೆ ನಮ್ಮ ಸುತ್ತಲು ಕವಿದಿರುವ ತಮ ಕಳೆಯುತ್ತದೆ. ಬುದ್ಧಿಗೆ ಒಂದಷ್ಟು ಅರಿವನ್ನು ತುಂಬುತ್ತದೆ. ಜೊತೆಗೆ ಮನಸ್ಸು ಸಹ ನೆಮ್ಮದಿಯಾಗಿರುತ್ತದೆ. ಶಾಂತಿಯನ್ನು ನೀಡುತ್ತಾ ಮನಸ್ಸಿನ ಬಾಧೆಗಳನ್ನು ನೀಗುತ್ತದೆ. ಆದ್ದರಿಂದ ಸಂತಸದಿಂದ ಪುಸ್ತಕಗಳನ್ನು ಪಠಿಸಬೇಕು, ಓದುತ್ತ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಓದಿದ್ದನ್ನು ಮನನ ಮಾಡಿಕೊಳ್ಳಬೇಕು. ಏಕಾಗ್ರತೆಯಿಂದ ಇಷ್ಟವಾಗಿ, ಸತತವಾಗಿ ಓದು ಮುಂದುವರೆಸಬೇಕು ಎಂದು ಓದಿನ ಕುರಿತಾದ ಮುಕ್ತಕದಲ್ಲಿ ವಿವರಿಸುತ್ತಾರೆ.
ಬದುಕಿನ ಕಷ್ಟಗಳನ್ನು, ನೋವುಗಳನ್ನು ಅನುಭವಿಸಿದಾಗ ಹಿತವಾದ ಪರಿಜ್ಞಾನ ದೊರೆಯುತ್ತದೆ. ಇಂತಹ ಅನುಭವದಿಂದ ದೊರೆಯುವ ಜ್ಞಾನ ಬದುಕಿಗೆ ದಾರಿದೀಪ ಎನ್ನುವುದನ್ನು ಒಳಿತನ್ನು ಕೊಡುವುದಕ್ಕೆ ಕಷ್ಟಗಳು ಬಂದಾವು/ ಹಳಿಯದಿರು ನೋವುಂಡ ಬದುಕಿನಾ ಕಥೆಯ/ ಹೊಳೆಯುವುದು ಬಂಗಾರ ಪುಟಕಿಟ್ಟು ತಿಕ್ಕಿದೊಡೆ/ ಕಳೆಯುವುದು ದುಃಖವ – ಗೌರಿತನಯ/ ಎಂದು ವಿವರಿಸುತ್ತಾರೆ.
ಪೋಷಕರಿಗೆ ಎಚ್ಚರಿಕೆಯನ್ನು ನೀಡುವ ಮುಕ್ತಕ ಹೀಗಿದೆ- ಮಕ್ಕಳನು ಕುರುಡಾದ ಮಮತೆಯಲಿ ಬೆಳೆಸದಿರಿ/ ಅಕ್ಕರೆಯ ಒಲವೇ ಹಿತಮಿತದಿ ಇರಲಿ/ ಸಕ್ಕರೆಯ ಸವಿಯೆಂದು ಅತಿಯಾಗಿ ಸವಿಯದಿರಿ/ ಅಕ್ಕರೆಗೆ ಮಿತಿ ಇರಲಿ -ಗೌರಿತನಯ ಎನ್ನುತ್ತಾರೆ. ಜ್ಞಾನ ಕುರಿತಾಗಿ ವಿವರಿಸುತ್ತಾ, ಪುಸ್ತಕಗಳನ್ನು ಓದಿ ಅಂಕಗಳಿಸುವುದರಿಂದ ಯಾವುದೇ ರೀತಿಯ ಜ್ಞಾನ ಸಿಗುವುದಿಲ್ಲ. ಅದು ಬದುಕಿಗೆ ಅನುಭವವನ್ನು ಕೊಡುವುದಿಲ್ಲ. ಜೀವನದ ಕಷ್ಟ -ಸುಖ ಎರಡನ್ನು ಅನುಭವಿಸಿ ಇದನ್ನು ಕಲಿಯಬೇಕು. ಅದರಿಂದ ದೊರೆಯುವ ಅನುಭವ ಎನ್ನುವ ಹಾಲನ್ನು ವಿಚಾರವೆಂಬ ಕಡಗೋಲಿನಿಂದ ಕಡೆದಾಗಲೇ ಸುಜ್ಞಾನವೆಂಬ ನವನೀತ ದೊರೆಯುತ್ತದೆ ಎನ್ನುತ್ತಾರೆ.
ಹೆಣ್ಣು ಕುರಿತಾದ ಮುಕ್ತಕಗಳಲ್ಲಿ ಹೆಣ್ಣಿಗೆ ಸಲ್ಲಬೇಕಾದ ಗೌರವವನ್ನು ಮತ್ತು ಆಕೆಯನ್ನು ರಕ್ಷಿಸುವ, ಗೌರವದಿಂದ ಕಾಪಾಡುವ ಬಗ್ಗೆ ವಿವರಿಸುತ್ತಾರೆ- ಹೆಣ್ಣಿಂದ ಮೂಲೋಕ ಸುಖವನ್ನು ಹೊಂದುವುದು/ ಕಣ್ಣಂತೆ ಪೊರೆಯುತ್ತ ಸಲುಹುವಳು ತಾಯಿ/ ಮಣ್ಣಂಥ ಸಾರವನ್ನು ಸುಡಬೇಡಿ ಹಿಂಸಿಸುತ/ ಎನ್ನುತ್ತ ಹೆಣ್ಣನ್ನು ಕೀಳಾಗಿ ಕಾಣಬಾರದು, ಅವಳಿಗೆ ಅನಗತ್ಯವಾಗಿ ಗೋಳು ಕೊಡಬಾರದು, ಬಾಳಿನಲ್ಲಿ ಸಂತಸವನ್ನು ಹೊಂದುವಂತೆ ಮಾಡಬೇಕು. ಹೆಣ್ಣಿಂದಲೇ ಈ ಲೋಕ ಬೆಳಕನ್ನು ಕಾಣುತ್ತಿದೆ. ಹೆಣ್ಣು- ಗಂಡು ಎನ್ನುವ ಭೇದವನು ಮಾಡದೆ ಹೆಣ್ಣು ಕುಲವನ್ನು ಸಲುಹಬೇಕು. ಮಗಳನ್ನು ಮನೆಯ ಹಣತೆಯೆಂದು ಮುಕ್ತಕದಲ್ಲಿ ವರ್ಣಿಸುತ್ತಾರೆ.
ಮನೆಯಲ್ಲ ಝಗಮುಗಿಸಲು ಬೆಳಕು ಬೇಕು. ಈ ಮನೆಗೆ ನಗು ತುಂಬಲು ಮಗಳು ಬೇಕು. ಜಗತ್ತಿನಲ್ಲಿ ಹೆಣ್ಣನ್ನು ಮಗಳಾಗಿ ಕಾಣಬೇಕು. ಆಗಲೇ ಈ ಭೂಮಿಯಲ್ಲಿ ಒಂದು ಸೊಗಸು, ಸೌಂದರ್ಯ ಇರುತ್ತದೆ ಎನ್ನುತ್ತಾ, ಹೆಣ್ಣೆಂಬ ಹೂವನು ಹಿಚುಕದಿರಿ ನಶೆಯಲ್ಲಿ/ ಕಣ್ಣಂತೆ ದಾರಿಯನ್ನು ತೋರುವಳು ಈಕೆ/ ಮಣ್ಣಂತೆ ಬೇಕಿವಳು ಸೃಷ್ಟಿಯಲಿ ಮುನ್ನಡೆಗೆ/ ಹೆಣ್ಣನ್ನು ಗೌರವಿಸಿ- ಗೌರಿತನಯ/ ಎನ್ನುವ ಮೂಲಕ ಹೆಣ್ಣು ಮಕ್ಕಳನ್ನು ಅಥವಾ ಹೆಣ್ಣು ಕುಲವನ್ನು ಗೌರವಿಸಿ ಎಂದು ಕರೆ ಕೊಡುತ್ತಾರೆ. ಭಾರತದ ವಿವಿಧ ಹಬ್ಬದ ಕುರಿತಾಗಿ ವಿವರಿಸುತ್ತಾ, ಹಬ್ಬಗಳ ಆಚರಣೆ ಹರುಷದಿಂದ ಕೂಡಿರಬೇಕು. ಇದರಿಂದ ಯಾರಿಗೂ ಕಿರಿಕಿರಿಯಾಗಬಾರದು. ದೀಪಾವಳಿಯನ್ನು ದೀಪ ಬೆಳಗಿಸುತ್ತ ಆಚರಿಸಬೇಕು ಎನ್ನುವ ಮೂಲಕ ಜಗದ ಕತ್ತಲೆಯನ್ನು ಹೊರದೂಡಿ ಬದುಕಲು ದೀಪಾವಳಿಯನ್ನು ಆಚರಿಸಬೇಕು. ಹಬ್ಬದ ಸಂಭ್ರಮವನ್ನು ಮೆರೆಯಬೇಕು. ಕಾಳಜಿಯನ್ನು ವಹಿಸಿ ಪರಿಸರವನ್ನು ಕಾಪಾಡಬೇಕು. ಹಬ್ಬ ಎನ್ನುತ್ತಾ ಸಂಭ್ರಮವನ್ನು ಮರೆಯುವಂತೆ ಮಾಡಬಾರದು ಎಂದು ವಿವರಿಸುತ್ತಾರೆ.

ಅಧಿಕಾರದ ಬಗ್ಗೆ ಒಂದು ಮುಕ್ತಕ ಹೀಗಿದೆ- ಅಧಿಕಾರ ಇರುವುದೆಂದು ಮದದಲ್ಲಿ ಕುಳಿತುಕೊಳ್ಳಬಾರದು. ಬದುಕಲ್ಲಿ ಅಹಮಿಕೆಯು ತರವಲ್ಲ. ಕುದಿಯುತ್ತಿರುವ ಬೇಗೆಯನ್ನು ಹೆಚ್ಚಿಸಬಾರದು. ಅಧಿಕಾರವಿದೆ ಎಂದು ಜನರ ಕಷ್ಟ ಕೆದಕಬಾರದು. ಜನರಿಗೆ ತೊಂದರೆಯನ್ನು ಕೊಡದೆ ಜನರ ಗೌರವವನ್ನು ಹೆಚ್ಚಿಸುವ ಕೆಲಸವನ್ನು ಮಾಡಬೇಕು ಎನ್ನುತ್ತಾರೆ. ನಮ್ಮವರು ಎಂದು ಹಲವರನ್ನು ಕರೆಯುತ್ತೇವೆ. ಆದರೆ ನಿಜವಾಗಿ ಯಾರು ನಮ್ಮವರು ಎಂದು ಕೇಳುವ ಕವಯಿತ್ರಿ, ನಮ್ಮವರನ್ನು ಇಂದು ಹುಡುಕಬೇಕಾಗಿದೆ. ಚಿನ್ನದಂತೆ ಪಳಪಳನೆ ಹೊಳೆಯುವವರನ್ನು ನಮ್ಮವರು ಎಂದುಕೊಳ್ಳುತ್ತೇವೆ. ನಮ್ಮ ಅಹವಾಲನ್ನು ಕೇಳಿದವರು ನಮ್ಮವರು ಎಂದುಕೊಳ್ಳುತ್ತೇವೆ. ಆದರೆ ಇವರೆಲ್ಲ ನಮ್ಮವರಂತೆ ಕೇವಲ ನಟಿಸುವವರೇ ವಿನಃ ನಮ್ಮ ಒಳಿತನ್ನು ಅರಿಯದವರು ಎಂದು ಎಚ್ಚರಿಸುತ್ತಾರೆ. ಪ್ರಶಸ್ತಿ ಪುರಸ್ಕಾರಗಳು ಬಂತೆಂದು ಮೆರೆಯುವವರನ್ನು ಕುರಿತು ಬರೆಯುತ್ತಾ, ಬೀಗದಿರು ಮನದಲ್ಲಿ ಬಹುಮಾನ ಫಲಕಕ್ಕೆ/ ಸಾಗದಿರು ಅಹಮಿಕೆಯ ಹೊಂಡಕ್ಕೆ/ ನೀನು ಸಾಗುತಿರು ಮೌನದಲ್ಲಿ ಗುರಿ ತಲುಪಿ/ ಅನುನಯದಿ ಬಿಗುವಿಕೆ ತರವಲ್ಲ -ಗೌರಿತನಯ/ ಪ್ರಶಸ್ತಿ ಬಹುಮಾನ ಪಡೆದು ಬೀಗಬಾರದು. ಮೌನದಲ್ಲಿ ನಮ್ಮ ಸಾಧನೆಯನ್ನು ಮಾಡುತ್ತ ಹೆಸರು ಗಳಿಸಬೇಕು ಎಂದು ಹೇಳುತ್ತಾರೆ.
ಇಂದಿನ ಕಾಲದಲ್ಲಿ ಮಕ್ಕಳನ್ನು ಹೇಗೆ ಬೆಳೆಸಬೇಕು. ಅವರಲ್ಲಿ ಯಾವ ರೀತಿಯ ಶಿಸ್ತನ್ನು ಕಲಿಸಬೇಕು ಎನ್ನುವುದಕ್ಕೆ ಹೀಗೆ ಹೇಳುತ್ತಾರೆ -ಮಕ್ಕಳಿಗೆ ಶಿಸ್ತಿನಲ್ಲಿ ನಡೆನುಡಿಯನ್ನು ಕಲಿಸಬೇಕು. ಛಲದಲ್ಲಿ ಬದುಕುವ ಧೈರ್ಯವನ್ನು ತುಂಬಬೇಕು. ಸೂಕ್ಷ್ಮದಲ್ಲಿ ಬೆಳೆಯುವುದನ್ನು ಕಲಿಸಬೇಕು. ವಿಷಯವನ್ನು ಅರ್ಥೈಸಬೇಕು ಎಂದು ಹೇಳುತ್ತಾರೆ.
ಹಣದಿಂದ ಸಂಬಂಧ ಮರೆಯುತ್ತಿದ್ದೇವೆ, ಗುಣವನ್ನು ಕಡೆಗಣಿಸುತ್ತಿದ್ದೇವೆ. ಹಳ್ಳಿಗಳಲ್ಲಿ ಸರಕಾರಿ ಶಾಲೆಗಳು ಅಳಿಯುತ್ತಿವೆ, ಎಲ್ಲರೂ ನಗರದ ಶಾಲೆಗಳತ್ತ ಮುಖ ಹಾಕುತ್ತಿದ್ದಾರೆ. ಹಳ್ಳಿಯ ಬದುಕಲ್ಲಿ ಹಸಿರಿದೆ. ಹಳ್ಳಿಯನ್ನು ನಗರವನ್ನಾಗಿ ಮಾಡಬಾರದು, ಹಳ್ಳಿಯ ಸಂಸ್ಕೃತಿಯನ್ನು ಉಳಿಸಬೇಕೆಂದು ಕರೆಕೊಡುತ್ತ, ಕನ್ನಡಿಗರು ಒಂದಾಗಿ ಕನ್ನಡವನ್ನು ಉಳಿಸಬೇಕು. ಸುಂದರವಾದ ಲಿಪಿ, ಚಂದದ ನುಡಿ ಇದರಲ್ಲಿದೆ. ಕನ್ನಡದ ಹಣತೆ ಆರದೆ ಉರಿಯುವಂತೆ ಮಾಡಬೇಕಿದೆ. ನಾಡಲ್ಲಿ ಅದರ ದೀಪ ಹರಡಬೇಕು ಎನ್ನುತ್ತಾರೆ.
ಹೀಗೆ ಇಲ್ಲಿರುವ ಎಲ್ಲಾ ೬೨೯ ಮುಕ್ತಗಳು ಒಂದೊಂದು ವಿಷಯದತ್ತ ಬೆಳಕನ್ನು ಚೆಲ್ಲುತ್ತವೆ. ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಅನಾಚಾರವನ್ನು ಎತ್ತಿತೋರಿಸುತ್ತಾ, ಒಳ್ಳೆಯತನ ಬೆಳೆಸಿಕೊಳ್ಳಿ, ಸಮಾಜ, ಸಂಸ್ಕೃತಿ, ದೇಶ, ಭಾಷೆ ಉಳಿಸಿ, ಉತ್ತಮ ನಡೆ-ನುಡಿ ರೂಢಿಸಿಕೊಳ್ಳಿ, ಲಂಚ, ವಂಚನೆ ಬಿಡಿ, ಸಚ್ಚಾರಿತ್ರ್ಯ ರೂಢಿಸಿಕೊಂಡು ಪರಿಸರ ಕಾಪಾಡಿ ಎಂಬ ಸಂದೇಶ ಕೊಡುತ್ತಾರೆ. ಸದಾ ಜನತೆಗೆ ಒಳಿತನ್ನು ಬಯಸುವ ಹೃದಯ ಶ್ರೀಮಂತಿಕೆಯ ಅಣಿಮುತ್ತುಗಳು ಅರ್ಥಾತ್ ಜ್ಞಾನದೀಪ ಈ ಕೃತಿಯಲ್ಲಿವೆ.
- ದತ್ತಾತ್ರೇಯ ಹೆಗಡೆ
