ಹೆಣ್ಣು ಮಕ್ಕಳು ಹಗ್ಗದ ಮೇಲೆ ಕೋಲು ಹಿಡಿದು ಬ್ಯಾಲೆನ್ಸ್ ಮಾಡಿ ನಡೆಯುವುದು, ನನ್ನ ಗಮನ ಸೆಳೆಯಿತು. ಅದರಲ್ಲಿಯೂ ಅಂದು ಹಗ್ಗದ ಮೇಲೆ ನಡೆಯುತ್ತಿದ್ದ ಹದಿನಾಲ್ಕು ಹದಿನೈದು ವರ್ಷದ ಆ ಹುಡುಗಿ ಪೆಟ್ರೋಮ್ಯಾಕ್ಸ್ ಲೈಟಿನ ಬೆಳಕಲ್ಲಿ ಅಪೂರ್ವ ಸುಂದರಿಯಂತೆ ಕಂಗೊಳಿಸಿದಳು. ಮುಂದೆ ಓದಿ ಖ್ಯಾತ ಕತೆಗಾರ ಕೇಶವ ರೆಡ್ಡಿ ಅವರ ನೆನಪಿನ ಸುರಳಿಯಲ್ಲಿ…
ನಮ್ಮ ಚಿಕ್ಕಂದಿನ #ಬಯಲು_ಸೀಮೆಯ ಹಳ್ಳಿಗಾಡಿನ ಬದುಕನ್ನು ಮಕ್ಕಳಿಂದ ಮುದುಕರಾದಿಯಾಗಿ ಲವಲವಿಕೆಯಿಂದ , ಕುತೂಹಲದಿಂದ , ಚೈತನ್ಯದಿಂದ ಮುದಗೊಳಿಸುತ್ತಿದ್ದವರಲ್ಲಿ ಹಳ್ಳಿಹಳ್ಳಿಗಳನ್ಧು ಸುತ್ತಿ ಜೀವನ ನಡೆಸುತ್ತಿದ್ದ ಶಿಳ್ಳೆಕ್ಯಾತರು , ಮಂಡರು, ಗಂಗೆತ್ತಿನವರು, ಬುಡುಬುಡುಕೆಯವರು, ಕರಡಿ ಆಡಿಸುವವರು, ದಾಸಯ್ಯಗಳು, ಕೋತಿ ಆಡಿಸುವವರು, ತಂಬೂರಿಯವರು, ಪಾತ್ರೆ ಕಲಾಯಿಮಾಡುತ್ತಿದ್ದವರು, ಕೋಳಿ ಮೊಟ್ಟೆಯವರು, ಬಳೆಗಾರ ಶೆಟ್ಟರು… ಹೇಳುತ್ತಾ ಹೋದರೆ, ಈಗಲೂ ಮೈ ರೋಮಾಂಚನವಾಗುತ್ತದೆ ನನಗೆ.

ಫೋಟೋ ಕೃಪೆ : down to earth
ಸಾಮಾನ್ಯವಾಗಿ ಇವರು ಪಕ್ಕದ ಆಂಧ್ರದಿಂದ ಬರುತ್ತಿದ್ದರು. ಇವರು ಬಂದಾಗ ಊರಿನ ಹುಡುಗರೆಲ್ಲ ಅವರು ಊರು ಬಿಟ್ಟು ಹೋಗುವವರೆಗೂ ಅವರ ಹಿಂದೆಯೇ ಓಡಾಡುತ್ತಿದ್ದೆವು. ಅವರು ಹೋದ ನಂತರ ಏನೋ ಖಾಲಿಯಾದಂಥ ಅನುಭವವಾಗುತ್ತಿತ್ತು ! ಈಗಲೂ ಊರಿಗೆ ಹೋದಾಗಲೆಲ್ಲ ಇವರ ಬಗ್ಗೆ ವಿಚಾರಿಸುತ್ತೇನೆ. “ಹೇ ಯಾರೂ ತಲೆ ಇಕ್ತಾ ಇಲ್ವಲೇ ಕೇಶ್ವ…” ಎನ್ನುತ್ತಾರೆ ನಮ್ಮಣ್ಣನಿಂದಿಡಿದು ಅಂದಿನ ತಲೆಮಾರಿನವರು.
ನನಗಿನ್ನೂ ಚನ್ನಾಗಿ ನೆನಪಿದೆ. ನಾನು ಎರಡನೆಯ ಬಿಎ ಓದುವಾಗ ಬೇಸಿಗೆ ರಜಕ್ಕೆಂದು ಊರಿಗೆ ಹೋದಾಗ ನಮ್ಮ ಪ್ರೈಮರಿ ಸ್ಕೂಲಿನ ಮುಂದಿನ ಬಯಲಿನಲ್ಲಿ #ಶಿಳ್ಳೆಕ್ಯಾತರು ಟೆಂಟುಗಳನ್ನಾಕಿಕೊಂಡಿದ್ದರು. ಗಂಡಸರು ಮೊಲ, ಇಲಿ, ಗವುಜಗಲಕ್ಕಿ ಮುಂತಾದವುಗಳ ಬೇಟೆಗಳನ್ನಾಡುತ್ತಿದ್ದರು. ಹೆಂಗಸರು, ಮಕ್ಕಳು ಊರಿನಲ್ಲಿ ಭಿಕ್ಷೆ ಬೇಡುತ್ತಿದ್ದರು. ಸಂಜೆಗತ್ತಲಾಗುತ್ತಿದ್ದಂತೆ ಕಂಬಿಯಲ್ಲಿ ನುಸುಳುವುದು, ಬೆಂಕಿಯ ರಿಂಗ್ ನಲ್ಲಿ ನೆಗೆಯುವುದು, ಹಗ್ಗದ ಮೇಲೆ ನಡೆಯುವುದು, ಪಲ್ಟಿಲಗಾ ಹಾಕುವುದು ಮುಂತಾದ ಮನೋರಂಜನೆಯ ಆಟಗಳನ್ನು ಆಡುತ್ತಿದ್ದರು. ನನಗೆ ತುಂಬಾ ಅಚ್ಚರಿ ಮೂಡಿಸುತ್ತಿದ್ದದ್ದು ಹೆಣ್ಣು ಮಕ್ಕಳು ಹಗ್ಗದ ಮೇಲೆ ಕೋಲು ಹಿಡಿದು ಬ್ಯಾಲೆನ್ಸ್ ಮಾಡುತ್ತಾ ನಡೆಯುತ್ತಿದ್ದದ್ದು.

ಫೋಟೋ ಕೃಪೆ : shutterstock
ಆ ಸಾರಿ ಹಗ್ಗದ ಮೇಲೆ ನಡೆಯುತ್ತಿದ್ದ ಹುಡುಗಿಗೆ ಹದಿನಾಲ್ಕು ಹದಿನೈದು ವರ್ಷಗಳಿರಬಹುದು. ಪೆಟ್ರೋಮ್ಯಾಕ್ಸ್ ಲೈಟಿನ ಬೆಳಕಲ್ಲಿ ಅಪೂರ್ವ ಸುಂದರಿಯಂತೆ ಕಂಗೊಳಿಸುತ್ತಿದ್ದಳು. ಈಗಿನ ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಮುಂತಾದ ಸುಂದರಿಯರು ಅವಳ ಮುಂದೆ ಏನೇನೂ ಇಲ್ಲವೆನಿಸುತ್ತದೆ ನನಗೀಗ. ಅವಳು ಬ್ಯಾಲೆನ್ಸ್ಮಾಡುತ್ತಾ ನಡೆಯುತ್ತಿದ್ದರೆ ನನ್ನೆದೆಯಲ್ಲಿ ವಿಚಿತ್ರ ಸಂಭ್ರಮ , ತಳಮಳಗಳನ್ನು ಉತ್ಪಾದನೆ ಮಾಡುತ್ತಿತ್ತು. ಅವೊತ್ತು ರಾತ್ರಿ ನಿದ್ದೆಯಿಲ್ಲದೆ ಒದ್ದಾಡಿದ್ದೆನಲ್ಲದೆ ಆ ಹುಡುಗಿ ಕನಸಿನಲ್ಲಿ ವಿಪರೀತವಾಗಿ ಕಾಡಿದ್ದಳು . ಮಾರನೆಯ ದಿನ ಬೆಳಿಗ್ಗೆಯೇ ಟೆಂಟುಗಳ ಕಡೆ ಓಡಿಹೋಗಿದ್ದೆ. ಶಿಳ್ಳೆಕ್ಯಾತರು ಮತ್ತೊಂದು ಊರಿಗೆ ಹೋಗಲು ಟೆಂಟುಗಳನ್ನು ಕೀಳುತ್ತಿದ್ದರು. ನನಗೆ ವಿಪರೀತ ಸಂಕಟವಾಗತೊಡಗಿತ್ತು . ಮುಂದೆ ಮದುವೆಯಾಗಬಹುದಾದರೆ ಆ ಹುಡುಗಿಯನ್ನು ಮದುವೆಯಾಗಬಹುದೆ..? ಅವರ ಅಡ್ರೆಸ್… ಕ್ಷಣ ನಗು ಬಂದಿತ್ತು ನನಗೆ, ರಜ ಕಳೆದು ಬೆಂಗಳೂರಿಗೆ ಬಂದರೂ ಶಿಳ್ಳೆಕ್ಯಾತರ ಆ ಹುಡುಗಿ ಕಾಡುತ್ತಲೇ ಇದ್ದಳು. ಈಗಲೂ ಆ ಘಟನೆ, ದೃಶ್ಯ ನೆನಪಾದರೆ ಒಂಥರಾ..
ಮೂನ್ನೆ ಪ್ರೆಸ್ ಕ್ಲಬ್ಬಿನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಗೆಳೆಯ ಮಂಜುನಾಥ್ ಅದ್ದೆ ಅವರಿಗೂ ಮತ್ತು ಅವರಿಗಿಂತ ಹಿರಿಯ ಸ್ನೇಹಿತರಿಗೆ ಸಂಬಂಧಿಸಿದಂತೆ ಬಹಳ ಹಿಂದೆ ನಡೆದ ಇಂಥದ್ದೇ ಘಟನೆಯನ್ನು ಹೇಳಿದಾಗ ಪುಳಕಗೊಂಡಿದ್ದೆ .ಅದರ ಪರಿಣಾಮವೇ ಈ ನೆನಪಿನ ಬರಹ.
- ಕೇಶವ ರೆಡ್ಡಿ ಹಂದ್ರಾಳ (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ)
