ಅಕ್ಟೋಬರ್ 19 ನನ್ನ ಮಗಳ ಹುಟ್ಟುಹಬ್ಬದ ದಿನ ತಂದೆ ನಿರ್ಗಮಿಸಿದ ದಿನ. ಅಪ್ಪ ಕಣ್ಮುಂದೆ ಒದ್ದಾಡಿ ಪ್ರಾಣ ತ್ಯಾಗ ಮಾಡುವಾಗ ಅಸಹಾಯಕನಾಗಿ ನಿಲ್ಲುವ ಶಿಕ್ಷೆ ಅದು ಜೀವನ ಪರ್ಯಂತ ನನ್ನ ಬಿಡಲಾರದು. – ರೂಪೇಶ್ ಪುತ್ತೂರು, ತಪ್ಪದೆ ಮುಂದೆ ಓದಿ ಭಾವನಾತ್ಮಕ ಬರಹ…
ಅಳಬೇಡ ಓ ನಗುವೆ…
ನಿರಂತರ ಸಾಕಾಗುವಷ್ಟು..
ಮಿತಿ ಮೀರಬಾರದು ಮನವೇ
ಸುಖವಾದರೂ ನೋವಾದರೂ….
ಎಲ್ಲಿಂದಲೋ ಅನುಗಣವಾಗಿ
ಸಮೀಪ್ಯದಿ ಅನುಗುಣವಾಗಿ
ಹಾರಿ ಬಂದಬೆಳ್ಳಿಬಿಸಿಲುಗಳೇ
ಅದರೊಳಗೆ
ನನ್ನ
ಅಪ್ಪನೆಂಬ
ಚುಂಬನವನ್ನ ಕಸಿದ ಸಾಯಂಕಾಲಗಳೇ…
ಎಂದೂ ಸೇರದ
ಮುಂಜಾವು ಸಂಜೆಗಳ
ಕಿರಣಗಳಂತೆ ನನ್ನ…
ದೂರಮಾಡಿದೆಯಾ ತಂದೆಯಿಂದ…
ಜುಲೈ 4 //2023 ಅಪ್ಪ ರಸ್ತೆ ಸಂಪೂರ್ಣ ದಾಟಿ ಬದಿಯಲ್ಲಿ ನಡೆದುಕೊಂಡು ಹೋಗುವಾಗ , ತದ್ವಿರುದ್ಧ ದಿಕ್ಕು(wrong side) ಚಾಲನೆ ಮಾಡುತ್ತ ದ್ವಿಚಕ್ರ ಸವಾರ ಅಪ್ಪನ ಮೇಲೆ ಎರಗಿದ. 78ವಯಸ್ಸಿನ ನನ್ನ ತಂದೆ ಮುಖ ಮಣ್ಣಿಗೆ ಹೊಡೆದು ಬಿದ್ದು, ಹಾಕಿದ ಕನ್ನಡಕ ನಜ್ಜುಗುಜ್ಜಾಗಿ ಬಿದ್ದ ತಕ್ಷಣ ಮರಳಿ ಪುನಃ ಅಪ್ಪಳಿಸಿ ದೇಹ ತಿರುಗಿ ಮೇಲ್ಮುಖ ಬಿದ್ದು ತಲೆಯ ಹಿಂಭಾಗದಲ್ಲಿ ಎಟಾಗಿ ಮೂರ್ಛೆ ತಪ್ಪಿದರು. ಅಪಘಾತದ ಸಂಧರ್ಭದಲ್ಲಿ ಎದೆಗೆ ಏಟಾಗಿತ್ತು, ಸೈಲೆನ್ಸರ್ ತಾಗಿ ತೊಡೆ ಸುಟ್ಟು ಹೋಗಿತ್ತು. ತಂದೆಯಚಪ್ಪಲಿ ಹರಿದು ಹೋಗಿತ್ತು, ಕೈಯಲ್ಲಿದ್ದ ಚತ್ರಿ ಮುರಿದಿತ್ತು. ಅಂದರೆ ಆ ಅಫಘಾತ ಎಷ್ಟು ಸುಖಕರವಾಗಿತ್ತು !!!!!!
ಮೂರ್ಛೆ ಹೋಗಿದ್ದ ಅಪ್ಪನನ್ನು ಊರಿನ ಜನ ಮಹಾವೀರ ಎಂಬ ಆಸ್ಪತ್ರೆಗೆ ಸೇರಿಸಿದರು. ಅಲ್ಲಿಯ ವೈದ್ಯರು ಕೆಲವು ಹೊತ್ತು ಸುಷ್ರೀಸಿಸಿದ ನಂತರ ಅಪ್ಪನಿಗೆ ಭೋದ ಬಂತು. ಅಮ್ಮನಿಗೆ ಸಂದೇಶ ಬಂದಾಗ ಅಲ್ಲಿಗೆ ಧಾವಿಸಿದರು, ನನ್ನ ತಂದೆಯ ಪರಿಚಯ ಹಾಗೂ ದೂರದ ಸಂಬಂಧಿಯೂ ಆಸ್ಪತ್ರೆಗೆ ಬಂದರು. ಬೆಂಗಳೂರಿನಲ್ಲಿದ್ದ ನನಗೆ ಮಧ್ಯಾಹ್ನ ಹೊತ್ತಿಗೆ ಸುಮಾರು 11.30 ಗೆ ಸಂಬಂಧಿ ಕರೆ ಮಾಡಿ “ಗಾಬರಿ ಪಡಬೇಕಾಗಿಲ್ಲ… ಏನೂ ಆಗಿಲ್ಲ… ಸಂಜೆ ಡಿಸ್ಚಾರ್ಜ್ ಮಾಡುತ್ತಿದ್ದಾರೆ ಬರಬೇಡಿ” ಅಂದ್ರು. ಅಮ್ಮನೂ ಆಸ್ಪತ್ರೆಯಿಂದ ಕರೆ ಮಾಡಿ “ಬರುವುದು ಬೇಡ ಡಿಸ್ಚಾರ್ಜ್ ಮಾಡುತ್ತಿದ್ದಾರೆ “ ಎಂದರು.

ಆದರೆ ಸಂಜೆ ಡಿಸ್ಚಾರ್ಜ್ ಆಗುವ ಮೊದಲು ಅಪ್ಪ ವಾಂತಿ ಮಾಡತೊಡಗಿದರು ಎಂದಾಗ ಅಮ್ಮ ಅಪ್ಪನನ್ನು ಎರಡ್ಮೂರು ದಿನಗಳವರೆಗೆ ಡಿಸ್ಚಾರ್ಜ್ ಮಾಡುವುದು ಬೇಡ ಎಂದು ವೈದ್ಯರಲ್ಲಿ ಕಾಡಿ ಬೇಡಿ ಕೇಳಿಕೊಂಡರು. ವೈದ್ಯರು ಏನೂ ಆಗಿಲ್ಲ ಹೋಗಿ ಎಂದರೂ ಅಮ್ಮ ಅವರ ಮಾತು ಕೇಳದೆ ಅಲ್ಲೇ ಉಳಿದರು.
ಮೂರನೇ ದಿನ ವೈದ್ಯರು ಡಿಸ್ಚಾರ್ಜ್ ಮಾಡಿದರು. ಅಪ್ಪನಿಗೆ ವೇಗವಾಗಿ ನಡೆಯಲು ಅಸಾಧ್ಯ ಎಂದು ಹಲವು ದಿನಗಳು ಎಲ್ಲೂ ಹೋಗದೆ ಮನೆಯಲ್ಲೇ ಉಳಿದರು. ನಾನೂ ಆ ವಾರದ ಕೊನೆಯ ದಿನ ಪುತ್ತೂರು ಮನೆ ತಲುಪಿದೆ. ಅಪ್ಪನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೂ ಕರೆದುಕೊಂಡು ಹೋದೆ. ಅಫಘಾತ ಮಾಡಿದ ಹುಡುಗ ಎಲ್ಲಿ ನಾಪತ್ತೆಯಾದ?” ಎಂದು ಕೇಳಿದಾಗ, ದಾರಿಯಲ್ಲಿ ಅಪ್ಪ ನುಡಿದರು “ ಅವನು ವಿದೇಶ ಹೋಗಬೇಕಂತೆ, ಕಂಪ್ಲೇಂಟ್ ಮಾಡಬೇಡಿ ಎಂದು ನನ್ನ ಬೇಡಿದ. ಆದರೆ ಹಿಂತಿರುಗಿ ನೋಡಲೇ ಇಲ್ಲ. ನನಗೆ ಎದೆ ತುಂಬಾ ನೋವಾಗುತ್ತಿದೆ. ಸುಟ್ಟ ಗಾಯದಿಂದ ಪ್ಯಾಂಟು ಹಾಕಲು ನಡೆಯಲೂ ಕಷ್ಟ…” ನೋವು ತೋಡಿಕೊಂಡರು.
ತಂದೆಯ ಹಲವಾರು ಮಿತ್ರರು ಅವರನ್ನು ಕಾಣಲು ಮನೆಗೆ ಬಂದಾಗ “ಒಂದು ಕಂಪ್ಲೇಂಟ್ ಕೊಡಲೇ ಬೇಕು. ಇನ್ನೊಬ್ಬ ಹಿರಿಯನನ್ನು ಕಿರಿಯರು ಈ ರೀತಿ ಕೈ ಬಿಡಬಾರದು” ಎಂದು ಒತ್ತಾಯಿಸಿದರು. ಅವರ ಮಾತಿಗೆ ಬೆಲೆ ಕೊಟ್ಟು, ತಂದೆಯ ಜೊತೆ ಪುತ್ತೂರು ಸಂಚಾರಿ ಪೋಲೀಸು ಠಾಣೆಗೆ ಹೋಗಿ ತಾ : 14-07-2023 ಕಂಪ್ಲೇಂಟ್ ಕೊಟ್ಟೆವು. ….
ಪೋಲಿಸರು ಗಾಡಿಯ ನಂಬರ್ ಮುಖಾಂತರ ಹುಡುಗನ ದೂರವಾಣಿಗೆ ಕರೆ ಮಾಡಿದಾಗ , ಆ ಹುಡುಗನ ಮನೆಯ ಸಂಬಂಧಿಕ, ಒಬ್ಬ ವ್ಯಾಪಾರಿ ಠಾಣೆಗೆ ಬಂದ. ನನ್ನ ತಂದೆಯ ಮುಖ ನೋಡಿ, ಪೋಲೀಸರ ಮುಂದೆಯೇ “ ಏನಾಗಿದೆ ನಿಮಗೆ ? ಏನೂ ಆಗಿಲ್ಲ… ನಿಮ್ಮ ಸಂಬಂಧಿ ನಮ್ಮ ವರ್ತಕರ ಸಂಘದ ಮಿತ್ರ . ಆ ನಿಮ್ಮ ಸಂಬಂಧಿ ಹೇಳಿದರು ಜುಜುಬಿ ಖರ್ಚಾಗಿದೆ, ಅದು ಅವರೇ ಕೊಟ್ಟಿದ್ದರಂತೆ” ಈ ಮಾತು ನನಗೆ ತುಂಬಾ ಆಘಾತವಾಯಿತು.
ಪೋಲಿಸರು ಆ ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡು ಹಿರಿಯರಲ್ಲಿ ಮಾತನಾಡುವ ಸಭ್ಯತೆ ತೋರಬೇಕು ಅಂದ್ರು. ಅಪ್ಪ ಇದನ್ನು ಕೇಳಿ ಏನೂ ಮಾತನಾಡದಾದರು. ಒಬ್ಬ ಸಂಬಂಧಿ ತನ್ನ ದೇಹಕ್ಕಾದ ನೋವನ್ನು ತಾನು ಕಟ್ಟಿದ ದುಡ್ಡಿನಿಂದ ಅಳತೆ ಮಾಡುವಷ್ಟು ಸಾಮಿಪ್ಯನಾದನೇ? ಎಂದು ನೊಂದರು. ಅಲ್ಲೇ ನನಗೆ ಹೇಳಿದರು ಆ ಸಂಬಂಧಿ ಕಟ್ಟಿದ ದುಡ್ಡು ತಕ್ಷಣ ಕೊಡು. ನಾನು ಅಲ್ಲೇ ಅವರಿಗೆ ಫೋನ್ ಪೇ ಮಾಡಿ ಕಳುಹಿಸಿದೆ. ಸ್ಟೇಷನಿನಿಂದ ಹೊರ ನಡೆಯುವಾಗ ಅಪ್ಪ “ ನಮ್ಮ ಸಂಬಂಧಿ ಈ ರೀತಿ ಮಾಡಬಾರದಾಗಿತ್ತು. ಅವನನ್ನು ನಾನು ತುಂಬಾ ಇಷ್ಟ ಪಟ್ಟಿದ್ದೆ. ಅವನು ಹೇಳದೆ ಈ ವ್ಯಾಪಾರಿ ಆ ದುಡ್ಡನ್ನು ಇಷ್ಟು ಖರೆಯಾಗಿ ಹೇಳಲು ಹೇಗೆ ಸಾಧ್ಯ?”

ಆ ಕಂಪ್ಲೇಂಟ್ ಯಾವ ಹಂತದಲ್ಲಿದೆಯೋ ಗೊತ್ತಿಲ್ಲ, ಆದರೆ ಅಪ್ಪ ಹಂತ ಹಂತವಾಗಿ, ಮಹಾವೀರ ಆಸ್ಪತ್ರೆಯ ವೈದ್ಯರು ಏನೂ ಆಗಿಲ್ಲ ಎಂದು ನೋವಿನ ಗುಳಿಗೆ ಕೊಡುತ್ತಿದ್ದರು. ವೈದ್ಯರನ್ನು ಅಪ್ಪಟವಾಗಿ ನಂಬುತ್ತಿದ್ದ ಅಪ್ಪ ನನಗೂ ಕುಟುಂಬ ಸದಸ್ಯರಿಗೂ “ ಏನೂ ಆಗಿಲ್ಲ ಅಂತ ಡಾಕ್ಟರ್ ಹೇಳಿದ್ದಾರೆ. ಸ್ವಲ್ಪ ದಿನಗಳಲ್ಲಿ ಸರಿ ಆಗುತ್ತೇನಂತೆ” ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ…ಅಗಸ್ಟ್ ತಿಂಗಳಿನ ಪ್ರಥಮ ವಾರದಲ್ಲಿ ತಂದೆಗೆ ಬಾಯಿಗೆ ರುಚಿ ಇಲ್ಲದಾಯಿತು. ಅದರ ಜೊತೆ ಮುಂದಿನ ದಿನಗಳಲ್ಲಿ ಮೂಗಿಗೆ ಯಾವುದೇ ವಾಸನೆ ಘ್ರಾಣಿಸುವ ಶಕ್ತಿ ಕುಂದ ತೊಡಗಿದಾಗ ಅದೇ ಮಹಾವೀರ ಆಸ್ಪತ್ರೆಗೆ ಅಪ್ಪ ಹೋದರು. ಅವರು “ತಲೆಯಲ್ಲಿ ಕಫ ತುಂಬಿದೆ” ಎಂದು ಮಾತ್ರೆಗಳ ಸುರಿಮಳೆ ಕೊಟ್ಟರು.
ಸೆಪ್ಟೆಂಬರ್ ತಿಂಗಳಲ್ಲಿ ತಂದೆಗೆ ಬಾಯಿಯ ರುಚಿ ಇಲ್ಲದಿರುವಿಕೆ, ಮೂಗಿನ ಘ್ರಾಣಶಕ್ತಿ ಕುಂದುವುದರ ಜೊತೆ ಸರಿಯಾಗಿ ಹೆಜ್ಜೆ ಇಡುವುದು ಕಷ್ಟವಾಗತೊಡಗಿತು. ಆದರೂ ದಿನ ನಿತ್ಯ ಅವರು ಬೆಳಿಗ್ಗೆ 5ಗಂಟೆಗೆ ಎದ್ದು ವ್ಯಾಯಾಮ ಮಾಡುವುದು, 6 ಗಂಟೆಗೆ ರೇಡಿಯೋ ಆಕಾಶವಾಣಿ ಮಂಗಳೂರು ಇಟ್ಟು, ದೈನಂದಿನ ಚಟುವಟಿಕೆ ನಂತರ, ಮರ ಗಿಡಗಳಿಗೆ ನೀರು ಹಾಕುವುದು, ಮನೆಯ ಸುತ್ತ ಮುತ್ತಲು ಶುಚಿ ಗೊಳಿಸುವುದು. 9ಗಂಟೆಯ ತಿಂಡಿ, 9.30ಗೆ ನ್ಯೂಸ್ ಪೇಪರಿಗೆ ಪುತ್ತೂರಿಗೆ ಹೋಗುವುದು. ಮನೆಗೆ ಬೇಕಾದ ಸಾಮಾನು ತರುವುದು, ಹಿರಿಯ ನಾಗರಿಕ ವೇದಿಕೆಯ ಆಫೀಸು ಹೋಗುವುದು, ಪಂಚಾಯತು ಮೀಟಿಂಗ್ ಇದ್ದರೆ ಹೋಗುವುದು….. ಹೀಗೆ ಸುಮಾರು 12.30ವರೆಗೆ ನಿರತರಾಗಿ, ಮಧ್ಯಾಹ್ನ 1.00ಗಂಟೆಗೆ ಮನೆಗೆ ಬಂದು ಕೈ ಕಾಲು ತೊಳೆದು ಊಟ ಮಾಡಿ, ಪೇಪರನ್ನು ಸಂಪೂರ್ಣ ಓದುವುದು, ನಂತರ ಟೀವಿಯಲ್ಲಿನ ಕನ್ನಡ, ಮಲೆಯಾಳಂ , ಹಿಂದಿ , ಇಂಗ್ಲೀಷ್ ವಾರ್ತೆ ವೀಕ್ಷಿಸುವುದು. ಸಂಜೆ 4ಗಂಟೆಗೆ ಒಂದು ಚಹಾ. ನಂತರ ವಾಟ್ಸಾಪ್ ನಿಂದ ನನಗೆ ಅಥವಾ ತಂಗಿಗೆ ಕರೆ ಮಾಡಿ ಮೊಮ್ಮಕ್ಕಳೊಂದಿಗೆ ಮಾತು. ಸಂಜೆ 6ರಿಂದ ರಾತ್ರಿ 9 ವಾರ್ತೆ /ಅಥವಾ ಕ್ರಿಕೆಟ್ /ಅಥವಾ ಆಟೋಟ ವೀಕ್ಷಣೆ. 9.15ಊಟ. ರಾತ್ರಿ 9.30–10.00 ಅಂದು ನಡೆದುದನ್ನು ಡೈರಿಯಲ್ಲಿ ಬರೆದು ನಿದ್ರೆ.
13-09-2023 ರಾತ್ರಿ ಅವರು ಕೊನೆಗೆ ಬರೆದ ಡೈರಿಯ ಪುಟವಾಗಿತ್ತು. ಅವರು ವೈದ್ಯರನ್ನು ಸಂಪೂರ್ಣ ನಂಬಿದ್ದರು, ತಾನು ಹಿಂದಿನಂತೆ ಪಾದರಸದಂತೆ ಓಡಾಡುವೆ ಎಂಬ ಧೃಢನಿಶ್ಚಯ ಅವರಲ್ಲಿ ಬೇರೂರಿತ್ತು.
14-09-2023 ಸ್ನಾನ ಮುಗಿಸಿ ನಡೆಯುತ್ತಿದ್ದಂತೆ ಎಡಗಾಲು ಸ್ತಗ್ದವಾಯಿತು. ಅಲ್ಲಿಂದ ಅಮ್ಮ ಹಾಗೂ ನೆರೆಕರೆಯವರು ಸೇರಿ ತುರ್ತಾಗಿ ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಮ್ಮ ಮನೆಯಲ್ಲಿದ್ದ ಅಪ್ಪನ ಎಲ್ಲಾ ಆರೋಗ್ಯ ತಪಾಸಣಾ ದಾಖಲೆಯನ್ನು ತೆಗೆದುಕೊಂಡು ಹೋಗಿದ್ದರು. ಅಲ್ಲಿಯ ವೈದ್ಯರು ಅಪ್ಪನನ್ನು ನೋಡಿ, ದಾಖಲೆಯನ್ನು ನೋಡುತ್ತಾ ಹೇಳಿದರು “ಏನಮ್ಮಾ ತಲೆಗೆ ಈ ಏಟು ಯಾವಾಗ ಆಯಿತು?” ಅಮ್ಮ ಜುಲೈ 4ನೇ ತಾರೀಖಿನ ವಿಷಯ ಹೇಳಿದರು.
ಅದಕ್ಕೆ ವೈದ್ಯರು “ ಯಾಕೆ ಅದಕ್ಕೆ ಜರೂರು ಚಿಕಿತ್ಸೆ ಮಾಡಿಲ್ಲ? ..ನೋಡಿ ಆದಷ್ಟು ಬೇಗ ಮಂಗಳೂರು ಎ ಜೆ ಆಸ್ಪತ್ರೆ ಕರೆದುಕೊಂಡು ಹೋಗಿ , ಆಪರೇಷನ್ ಮಾಡ್ಸಿ , ಇಲ್ಲಾಂದ್ರೆ ಜೀವಕ್ಕೆ ಅಪಾಯ “ ಎಂದರು. ನಾನು ತಾಯಿಯ ಕರೆಗೆ ಕೂಡಲೇ ಸಿಕ್ಕ ಬಸ್ಸಿನಲ್ಲಿ ಮಂಗಳೂರಿಗೆ ಹೊರಟೆ. ಬಸ್ಸಿನಲ್ಲಿ ನಾನು ಆಗಾಗ್ಗೆ ಅಮ್ಮನನ್ನು ಕರೆ ಮಾಡಿ ವಿಚಾರಿಸುತ್ತಿದ್ದಾಗ… ಬಸ್ಸಿನಲ್ಲಿದ್ದ ಮಂಗಳೂರು ಕಡೆ ಹೋಗುವ ಪ್ರಯಾಣಿಕರಲ್ಲಿ ಹಲವರು “A J Hospital ಸೇರಿಸಬೇಡಿ ..ಕೊಯ್ಯುವುದು ಕೊಲ್ಲುವುದು ಅಲ್ಲಿಯ ನೈಜ ನಡವಳಿಕೆ” ಎಂದರು. ನಾನು ಅದಾವುದಕ್ಕೂ ಕಿವಿಗೊಡಲಿಲ್ಲ.
ಮಿತ್ರರು ಕಾರಿನಲ್ಲಿ ಅಪ್ಪನನ್ನು ಅದೇ ರಾತ್ರಿ 8ಗಂಟೆಗೆ ಮಂಗಳೂರು ಎ ಜೆ ಆಸ್ಪತ್ರೆ ತಲುಪಿಸಿದರು. ನಾನು ಹತ್ತು ಗಂಟೆಗೆ ತಲುಪಿದೆ. ವೈದ್ಯರು, ನಾನು, ತಾಯಿ ಹಾಗೂ ತಂದೆ ಸಮಾಲೋಚಿಸಿದೆವು. ವೈದ್ಯರು “ ನೋಡಿ , ಆಪರೇಷನ್ ಮಾಡುವುದಿಲ್ಲವಾದರೆ ಈಗಲೇ ಡಿಸ್ಚಾರ್ಜ್ ಆಗಿ ಹೋಗಿ. ಎರಡ್ಮೂರು ದಿನ ನಿಮ್ಮ ತಂದೆ ಜೀವಂತ ಇರುತ್ತಾರೆ. ಆಪರೇಷನ್ ಮಾಡಿಸಿದರೆ ಏಳೆಂಟು ವರುಷ ಇರುತ್ತಾರೆ …” ಎಂಬ ಚೆಂಡು ಎಸೆದರು. ನಾನು “ ನನಗೆ ಅಪ್ಪ ಬೇಕೇ ಬೇಕು ಆಪರೇಷನ್ ಮಾಡಿ “ ಎಂದೆ. ಅವರು ಹೇಳಿದ ಮೊತ್ತವನ್ನು ಕಟ್ಟದೆ ಆಪರೇಷನ್ ಮಾಡಲ್ಲ ಎಂದಾಗ ನಾನು ದುಡ್ಡನ್ನೂ ಕಟ್ಟಿದೆ.ರಾತ್ರಿ 11ಗಂಟೆಗೆ ಅಪ್ಪನನ್ನು ಆಪರೇಷನ್ ಗೆ ಕರೆದುಕೊಂಡು ಹೋದರು.
ಆದರೆ ಆಸ್ಪತ್ರೆ ಒಳಗೆ ತಂದೆಯ ಬೆಡ್ಡಿಗೆ ಕಾವಲಾಗಿ ಜೊತೆ ಒಬ್ಬರು ಮಾತ್ರ ಇರಬಹುದು. ಎರಡು ಜನ ನಿಲ್ಲಲು ಸಾಧ್ಯವಿಲ್ಲ–ಎಂದರು. ವಯಸ್ಸಾದ ತಾಯಿಯನ್ನು ಆಸ್ಪತ್ರೆಯಲ್ಲಿ ಒಂಟಿ ಬಿಡಲು ನನಗೆ ಮನಸ್ಸಾಗುತ್ತಿರಲಿಲ್ಲ. ಆಸ್ಪತ್ರೆಯ ಸ್ವಾಗತ reception ನಲ್ಲಿ ನಾನು ಕುಳಿತುಕೊಂಡೆ. ಬೇಕಾದಾಗ ಅಮ್ಮ ಏಳನೇ ಮಹಡಿಯಿಂದ ಇಳಿದು ಬರುತ್ತಿದ್ದರು. ಅಪ್ಪನ ಆಪರೇಶನ್ ನಂತ್ರ ಅಮ್ಮ ಆಪರೇಶನ್ ಥೀಯೆಟರಿನ ICU ಮುಂದೆ ಎರಡು ದಿನ ಕಾದರೂ ಅಪ್ಪನನ್ನು ನೋಡಲು ಬಿಡಲಿಲ್ಲ.
ನಮ್ಮೂರಿನ ಹಿರಿಯ ವೈದ್ಯ, ತಂದೆಯ ಮಿತ್ರರಾದ ಡಾ ಎನ್ಕೆ ಶೆಟ್ಟಿಯವರು “ ಒಂದು ಔಷಧಿಯ ಜೊತೆ ಒಳ್ಳೆಯ ಒಡನಾಟ ಹಾಗೂ ಮಾತು,, – ರೋಗವು ಒಬ್ಬ ರೋಗಿಯಿಂದ ದೂರವಾಗಲು ತುಂಬಾ ಸಹಾಯ ಮಾಡುತ್ತದೆ. ರೋಗಿಗೆ ಏಕಾಂಗಿತನ ಕೊಡುವುದು ವಿಷ ಉಣಿಸುವುದಕ್ಕೆ ಸಮ” ನುಡಿಗಳು ಎ ಜೆ ಆಸ್ಪತ್ರೆಯ ಆ ಸ್ವಾಗತ ಅಂಗಣದಲ್ಲಿ ಕೂತು ನನಗೆ ಯಾಕೋ ನೆನಪಾಗುತ್ತಿತ್ತು.

ತಾ16-10-2023 ತಂದೆಯನ್ನು ICU ನಿಂದ ಹೊರತಂದರು.ಮೊದ ಮೊದಲು ಅಪ್ಪ ತನ್ನ ಮಿತ್ರ ಗೋಪಾಲರ ಬಗ್ಗೆ , ನಂತರ ತಮ್ಮ ವೇಣುವಿನ ಬಗ್ಗೆ, ಏನೇನೋ ಮಾತನಾಡುತ್ತಿದ್ದರು. ನಂತರ ತಂದೆ ಚೆನ್ನಾಗಿ ಮಾತನಾಡತೊಡಗಿದರು. ಹಾಸ್ಯ ಚಟಾಕಿಗಳು ಎಂದಿನಂತೆ ಬರ ತೊಡಗಿದವು. ಆದರೆ ಬಾಯಿಗೆ ರುಚಿ ಇಲ್ಲದಿರುವಿಕೆ, ಘ್ರಾಣ ಶಕ್ತಿ ಇಲ್ಲದಿರುವಿಕೆ, ಹೆಜ್ಜೆ ಇಡುವುದು ಸಾಮಾನ್ಯ ಆಗಿಲ್ಲದಿರುವಿಕೆ… ಹಾಗೇ ಇತ್ತು. ಅದರ ಜೊತೆ ಅಪ್ಪ ನಡೆಯುವಾಗ ನಾವು ಯಾರಾದರೂ ಅಕ್ಕ ಪಕ್ಕ ಇರಬೇಕಾಗಿ ಬಂತು.
ಇದನ್ನು ನೋಡಿದ ಅಮ್ಮ ಅಲ್ಲಿನ ನರ್ಸ್ – ವೈದ್ಯರಲ್ಲಿ “ ಆಪರೇಷನ್ ತಲೆಗೆ ಮಾಡಿದ್ದೀರಿ. ಆದರೆ ಯಾವುದೇ ಔಷಧಿ ಇಲ್ಲವೇ? ಒಂದು ಕೈಗೋ,ಕಾಲಿಗೋ , ದೇಹದ ಯಾವುದೇ ಭಾಗಕ್ಕೆ ಆಪರೇಷನ್ ಆದರೆ, ವಾಸಿಯಾಗಲು ಔಷಧಿ ಕೊಡುವಿರಲ್ವೇ? ದೇಹದ ಪ್ರಮುಖ ಭಾಗಕ್ಕೆ ಈ ರೀತಿ ಆಪರೇಷನ್ ಮಾಡಿ ಯಾವುದೇ ಔಷಧಿ ಇಲ್ಲವೆಂದರೆ? “ ಎಂಬ ಕಾರುಣ್ಯ ಕೂಗಿಗೆ ಏನೂ ಉತ್ತರವಿರಲಿಲ್ಲ.
“ ನೀನು ಹೋಗಿ ಸೊಸೆಯನ್ನು ಮಗಳನ್ನು ಕರೆದುಕೊಂಡು ಬಾ, ನಾನು ನಿನ್ನ ತಂದೆಯನ್ನು ಹೇಗಾದರೂ ನೋಡಿಕೊಳ್ಳುವೆ. ಮೊಮ್ಮಗಳು ಬರಲಿ” ಎಂದು ಹಠ ಹಿಡಿದರು. ನಾನು ಬೆಂಗಳೂರಿಗೆ ಹೋಗಿ ತಾಯಿಯ ಮಾತಿನಂತೆ ಹೆಂಡತಿಯನ್ನು ಮಗಳನ್ನೂ ಬೆಂಗಳೂರಿನಿಂದ ತಾ::19-11-2023ರಂದು ಮುಂಜಾನೆ 3ಗಂಟೆಗೆ ಹೊರಟು 11ಗಂಟೆಗೆ ತಲುಪಿ, ಎಜೆ ಆಸ್ಪತ್ರೆಯ ಮುಂದಿನ ಸನ್ ರಾಯಲ್ ರೆಸಿಡೆನ್ಸಿ ಹೋಟೆಲಿನಲ್ಲಿ ರೂಂ ಮಾಡಿ, ಅಮ್ಮನನ್ನು ಆಸ್ಪತ್ರೆಯಿಂದ ಕರೆಸಿ , ನಾನೂ ಮಗಳೂ ಅಪ್ಪನ ಪಕ್ಕ ಕುಳಿತೆವು.
ಅಪ್ಪ ಅದ್ಯಾಕೋ ಎದ್ದೇಳುತ್ತಲೇ ಇರಲಿಲ್ಲ. ಮಗ್ಗಲು ಬದಲಿಸಿ ನಿದ್ರೆ ಮುಂದುವರಿಸುತ್ತಿದ್ದರು. ಊಟಕ್ಕೆ ಎದ್ದೇಳಲು ಮೊಮ್ಮಗಳು ಕೇಳಿಕೊಂಡಾಗ ನಗುನಗುತ್ತಾ ಎದ್ದು ಅವಳಿಗೊಂದು ಮುತ್ತು ಕೊಟ್ಟರು. “ ಹ್ಯಾಪಿ ಬರ್ತ್ಡೇ ಬಟ್ಟಫ್ಲೈ” ಎಂದರು. ಅಂದು ಅಕ್ಟೋಬರ್ 19 ನನ್ನ ಮಗಳ ಹುಟ್ಟು ಹಬ್ಬವಾಗಿತ್ತು.” ಅಜ್ಜ ಡಿಸ್ಚಾರ್ಜ್ ಆದಕೂಡಲೇ ಪುತ್ತೂರು ಅಜ್ಜನ ಮನೆಯಲ್ಲಿ ಹುಟ್ಟು ಹಬ್ಬ ಮಾಡೋಣ” ಅಂದಳು. ಇಬ್ಬರೂ ಒಬ್ಬರಿಗೊಬ್ಬರು ಉಣಿಸಿ ಊಟ ಮಾಡಿದರು.
ಎರಡು ಗಂಟೆಗೆ ಮಗಳು ತೆರಳಿ , ನನ್ನಾಕೆ ನನ್ನ ಜೊತೆ ತಂದೆಯ ಅಕ್ಕ ಪಕ್ಕ ಕುಳಿತೆವು. ಮೊಮ್ಮಗಳು ಹೋದ ಕೂಡಲೇ ಅಪ್ಪ ಪುನಃ ಮಲಗಿದರು. ನಾಲ್ಕು ಘಂಟೆಗೆ ಅಪ್ಪನನ್ನು ಕರೆದರೂ ಸುಮ್ಮನೇ ಇದ್ದರು. ಅವರು ಆ ರೀತಿ ಎಂದೂ ಮಲಗಿದವರಲ್ಲ. ಅವರು ಊರ್ಜತೆ (energy) ಅಂದರೆ ರೇಡಿಯೋ, ವಾರ್ತಾ ಪತ್ರಿಕೆ, ಟಿವಿ ನ್ಯೂಸ್ ಹಾಗೂ ಮುಹಮ್ಮದ್ ರಫಿ ಹಾಡು.
ನಾನು ಮೊಬೈಲಿನಲ್ಲಿ ಮೊಹಮದ್ ರಫಿ ಯ ಹಾಡು
“ದಿಲ್ ಕೆ ಜರೊಂಕೆ ಮೆಂ ತುಜ್ಕೋ ಬಿಟಾಕರ್….”
“ಆನೆ ಕೆ ಉಸ್ಕೆ ಆಯಿ ಬಾಹಾರ್…”
****
ಪ್ರತೀ ಹಾಡಿಗೂ ಮಲಗಿದಲ್ಲೇ , ಕಣ್ಣು ಮುಚ್ಚಿ, ಕೈ ಅಲುಗಾಡಿಸಿ ತಾಳ ಹಾಕ ತೊಡಗಿದಾಗ, ನನಗೆ ನಾನು ಗೆದ್ದೆ ಎಂಬಂತಾಯಿತು.
“ಆಜಾ ತುಜ್ಕೋ ಪುಕಾರೇ ಮೇರೆ ಮೀತ್ ರೇ….” ಈ ಹಾಡು ಬಂದಾಗ ಅಪ್ಪ ಎದ್ದರು. ಹಾಡು ನಿಲ್ಲಿಸಿದೆ. 4.13pm. “ನನ್ನ ಕನ್ನಡಕ ಕೊಡು ಹಾಕುವೆ, ಚಪ್ಪಲಿ… ನಾನು ಟಾಯ್ಲೆಟ್ ಹೋಗಬೇಕು. ನಂತರ ಡಾಕ್ಟರ್ ಹೇಳಿದಂತೆ ಈ ಕಾರಿಡಾರ್ ನಲ್ಲಿ ವಾಕ್, ಒಂದು ಜಬರ್ದಸ್ತ್ ಕಾಫಿ, ನಂತರ ಸ್ನಾನ. ನಾಳೇನೇ ಡಿಸ್ಚಾರ್ಜ್ ಆಗಿ ಮೊಮ್ಮಗಳಿಗೆ ಕೇಕ್ ತರಬೇಕು”
ಅಪ್ಪನ ಅಕ್ಕ ಪಕ್ಕ ನಾವಿಬ್ಬರೂ ಇದ್ದರೂ ಅವರಷ್ಟಕ್ಕೆ ನಿಧನಿಧಾನಕ್ಕೆ ನಡೆದು ಹೋಗಿ ಟಾಯ್ಲೇಟಿನಿಂದ ಹೊರಬಂದು, ನಡೆಯ ತೊಡಗಿದರು. ಸ್ವಲ್ಪ ದೂರ ಹೋದಂತೆ, ನಮ್ಮಿಬ್ಬರನ್ನು ಹಿಡಿದು ನಡೆಯತೊಡಗಿದರು. ನರ್ಸ್
‘ ಅಜ್ಜಾ … ಏನು ಅಕ್ಕ ಪಕ್ಕ ಸಹಾಯದಿಂದ ನಡೆಸುತ್ತಿದ್ದೀರಾ?”.
ಅಪ್ಪ” ಇವನಿಗೆ ನಡೆಯಲು ಕಲಿಸಿದ್ದೇ ನಾನು, ಜೀವನದಲ್ಲಿ ನಡೆಯಲು ಅವನನ್ನು ಇವಳಿಗೆ ಮದುವೆ ಮಾಡಿಸಿದೆ….” ಎಂದು ಉತ್ತರಿಸಿದರು.
4.24am ಒಮ್ಮೆಲೇ” ಮಗು…ತಿರುಗಿ ಹೋಗುವ ಯಾಕೋ ನನಗೆ ….” ಎಂದು ಹೇಳುತ್ತಿದ್ದಂತೆ ಅಪ್ಪನ ಕಣ್ಗಳು ಮೇಲೆ ನೋಡುವಂತಾಗಿ, ಕಣ್ಣಿನ ಬಿಳಿ ಭಾಗ ಮಾತ್ರ ಕಾಣತೊಡಗಿತು, ತುಟಿಗಳು ಜೋತು ಬೀಳತೊಡಗಿತು. ನಾನೂ ನನ್ನವಳು ಅಪ್ಪನನ್ನು ಅಲ್ಲೇ ಇದ್ದ ವೀಲ್ ಚೇರ್ ಪಲ್ಲಟಿಸಿ, ಪಕ್ಕದ ಖಾಲಿ ವಾರ್ಡಿನ ಮಂಚದಲ್ಲಿ ಮಲಗಿಸಿ “ “ನರ್ಸ್ ಡಾಕ್ಟರ್ “ಎಂದು ಎಲ್ಲಾ ಶಕ್ತಿ ಮೀರಿ ಕಿರುಚಿದೆವು. ನರ್ಸುಗಳು ಬಂದರು. ಆದರೆ ಒಬ್ಬನೇ ಒಬ್ಬ ಡಾಕ್ಟರ್ ಬರಲೇ ಇಲ್ಲ. ಅಪ್ಪ ನನ್ನ ಕಣ್ಣ ಮುಂದೆ.
ಕುತ್ತಿಗೆ ಕೊಯ್ದ ಕೋಳಿ…ನೀರಿನಿಂದ ಹೊರತೆಗೆದ ಮೀನು….ವಿಲ ವಿಲನೆ ಒದ್ದಾಡುವಂತೆ, ಮಂಚದಲ್ಲಿ ಪಟಪಟ ವಿಲಯುತ್ತಿದ್ದರು. ನರ್ಸ್ ಗಳು ಅಸಹಾಯಕರಾಗಿ ನಿಂತು “ ಏನಾಗ್ತಿದೆ? ಏನಾಗ್ತಿದೆ?..” ಎಂದು ಕೇಳುವಾಗ ನಾನು ಅಪ್ಪನ ಕೈಗಳನ್ನು ಒರೆಸುತ್ತಾ ಹಿಡಿಯುತ್ತಾ “ ಅಪ್ಪಾ ಎಲ್ಲಾ ಸರಿಯುಗತ್ತೆ..” ಅಂದರೆ ಅಪ್ಪ “ ಎಸ್ ಎಸ್” ಅನ್ನುತ್ತಿದ್ದರು. ಒಮ್ಮೆಲೆ ಆ ಮಾತು ನಿಂತಿತು. ಅದೇಕೋ ನಾನು ಹೇಳಿದೆ.
“ಅಪ್ಪ …” ಪ್ರಪ್ರಥಮವಾಗಿ ನನ್ನ ತಂದೆ ನನ್ನ ಸ್ವರ ಕೇಳದ ಘಳಿಗೆ……
ಅಪ್ಪನನ್ನು ನನ್ನ ಕೈಗೆ ಕೊಟ್ಟು ಹೋದ ಅಮ್ಮನಲ್ಲಿ ನಾನೇನು ಹೇಳಲಿ? ಎಂದು ನನ್ನಾಕೆಯಲ್ಲಿ ಕೇಳಿದೆ ಅವಳು ನಿಯಂತ್ರಣ ತಪ್ಪಿ ಅಳುತ್ತಿದ್ದಳು. ಆಗಲೂ ಯಾವುದೇ ಡಾಕ್ಟರ್ ಅಲ್ಲಿರಲಿಲ್ಲ.
ಅಷ್ಟೊತ್ತಿಗೆ ಅಲ್ಲಿ ಯಾರೋ ಮ್ಯಾನೇಜರ್ ಎಂಬಾಕೆ “ ಹೆದರಬೇಡಿ ನಿಮ್ಮ ತಂದೆಗೆ ಕೃತಕ ಶ್ವಾಸ ಕೊಟ್ಟು ಟ್ರೈ ಮಾಡುತ್ತಿದ್ದೇವೆ “ ಎನ್ನುತ್ತಾ ಅಲ್ಲಿದ್ದ ನರ್ಸ್ ಗಳೊಂದಿಗೆ ಪ್ರಹಸನ ಶುರು ಮಾಡಿದಾಗ, ಒಬ್ಬಳು ನರ್ಸ್ “ ಇದೆಲ್ಲಾ ದುಡ್ಡಿಗಾಗಿ ನಾಟಕ.
ಅಜ್ಜ ಇನ್ನಿಲ್ಲ. ಇವರ ನಾಟಕಕ್ಕೆ ಬಲಿಯಾಗಬೇಡಿ” ಎಂದು ಪಿಸುಮಾತು ಹೇಳಿದಳು.
ಅಪ್ಪ ಕಣ್ಣ ಮುಂದೆ ಒದ್ದಾಡಿ ಪ್ರಾಣ ತ್ಯಾಗ ಮಾಡುವಾಗ ಅಸಹಾಯಕನಾಗಿ ನಿಲ್ಲುವ ಶಿಕ್ಷೆ ಅದು ಜೀವನ ಪರ್ಯಂತ ನನ್ನ ಬಿಡಲಾರದು. ನನ್ನ ಜೀವನದ ಅತೀ ಅಮೂಲ್ಯವಾದ ಕೊಹಿನೂರ್ ವಜ್ರ ಅದು ನನ್ನ ತಂದೆ ತಾಯಿ. ಈಗ ಒಂದು ಕೊಹಿನೂರು ವಜ್ರ ಕಳೆದುಕೊಂಡ….
ಅಕ್ಟೋಬರ್ 19 ನನ್ನ ಮಗಳ ಹುಟ್ಟು ಹಬ್ಬದ ದಿನ ತಂದೆ ನಿರ್ಗಮಿಸಿದ ದಿನ….
ಅಳಬೇಡ ಓ ನಗುವೆ…
ನಿರಂತರ ಸಾಕಾಗುವಷ್ಟು..
ಮಿತಿ ಮೀರಬಾರದು ಮನವೇ
ಸುಖವಾದರೂ ನೋವಾದರೂ….
ನಿಮ್ಮವ ನಲ್ಲ
ರೂಪು
(ಏನೂ ಬರೆಯಲು ಆಗದೇ ಇದ್ದಾಗ ಹಲವಾರು ಮುಗ್ದ ಓದುಗರು ನನಗೆ ಕೊಟ್ಟ ಸಲಹೆ “ಅಪ್ಪನ ಕುರಿತು ಬರೆಯಿರಿ, ಮನವನ್ನು ಹಗುರ ಮಾಡಿ. ನಮಗೆ ನಿಮ್ಮ ಬರವಣಿಗೆ ಬೇಕು” -ಈ ಸಲಹೆಗೆ ಬಾಗಿ ಬರೆದೆ)
- ರೂಪೇಶ್ ಪುತ್ತೂರು
