ಹಳ್ಳಿಯ ಹಸುಗೂಸಿನ ಹೊಟ್ಟೆ ತಂಪು!

ನಮ್ಮ ಹಳ್ಳಿಯ ಹಸುಗೂಸುಗಳ ಹೊಟ್ಟೆ ತಂಪು ಮಾಡಲು `ಅರಾರೂಟ್ ಮಣ್ಣಿ’ ಬಹು ಬಳಕೆಯಲ್ಲಿದ್ದ ಆಹಾರ. ಸಣ್ಣ ಮಕ್ಕಳಿದ್ದ ಮನೆಯಲ್ಲಿ ಅರಾರೂಟು ಪುಡಿ ಇರಲೇಬೇಕು, ಅದರಿಂದ ಮಣ್ಣಿ ಮಾಡಿಸಿ ಪುಟಾಣಿಗಳಿಗೆ ತಿನ್ನಿಸಲೇಬೇಕು ಎಂಬ ಪದ್ಧತಿ ಇದ್ದ ಕಾಲವದು.ಏನಿದು ಅರಾರೂಟ್ ಮಣ್ಣಿ, ಇದರ ವಿಶೇಷತೆಯೇನು ಎನ್ನುವುದನ್ನು ಖ್ಯಾತ ಕಾದಂಬರಿಕಾರರಾದ ಶಶಿಧರ ಹಾಲಾಡಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೇವಲ ನಾಲ್ಕು ದಶಕಗಳ ಹಿಂದೆ ಬಳಕೆಯಲ್ಲಿದ್ದ ಒಂದು `ಹಸುಗೂಸುಗಳ ಆಹಾರ’ವು ನಮ್ಮ ಹಳ್ಳಿಯಿಂದ ಕಣ್ಮರೆಯಾಗಿ ಹೋದ ವಿದ್ಯಮಾನವು ನನ್ನಲ್ಲಿ ಅಚ್ಚರಿ ಹುಟ್ಟಿಸಿದೆ! ನಮ್ಮ ಮನೆಯ ಸುತ್ತ, ಆಚೀಚಿನ ಮನೆಗಳಲ್ಲಿ ಇದು ಧಂಡಿಯಾಗಿ ಸಿಗುತ್ತಿತ್ತು; ಧೈರ್ಯವಾಗಿ ಅದನ್ನು ಬೇಯಿಸಿ ಮಕ್ಕಳಿಗೆ ತಿನ್ನಿಸುತ್ತಿದ್ದರು. ಹಳ್ಳಿಯ ಹಸುಗಳ ಜೀವನಾಧಾರ ಎಂದರೂ ತಪ್ಪಿಲ್ಲ – ಅಷ್ಟು ವ್ಯಾಪಕವಾಗಿ ಅದರ ಬಳಕೆಯಿತ್ತು, ಮಾತ್ರವಲ್ಲ ಅಷ್ಟೇ ಧೈರ್ಯವಾಗಿ ಜನರು ಅದನ್ನು ಹಸುಗೂಸುಗಳಿಗೆ ಮೂರು ಹೊತ್ತೂ ತಿನ್ನಿಸುತ್ತಿದ್ದರು. ಈಗ ಅದರ ಹೆಸರನ್ನೇ ಕೇಳದವರು ನಮ್ಮ ಹಳ್ಳಿಯಲ್ಲಿದ್ದಾರು – ಆಧುನಿಕತೆಯ ಗಾಳಿಯು ಹಳ್ಳಿಯ ಮೂಲೆಯಲ್ಲೂ ತಂದ ಈ ಬದಲಾವಣೆಯು ದಿಗ್ಬ್ರಮೆ ಹುಟ್ಟಿಸುತ್ತಿದೆ!

ಯಾವುದದು ಅಷ್ಟು ಉತ್ತಮ ಹಸುಗೂಸಿನ ಆಹಾರ ಎಂದು ಕೇಳುತ್ತೀರಾ? ಅದೇ `ಅರಾರೂಟ್ ಮಣ್ಣಿ’. ನಮ್ಮ ಹಳ್ಳಿಯ ಹಸುಗೂಸುಗಳ ಹೊಟ್ಟೆ ತಂಪು ಮಾಡಲು `ಅರಾರೂಟ್ ಮಣ್ಣಿ’ ಬಹು ಬಳಕೆಯಲ್ಲಿದ್ದ ಆಹಾರ. ನಗರ, ಪೇಟೆಗಳ ಹಂಗಿಲ್ಲದೇ, ಮನೆಯಲ್ಲೇ ತಯಾರಿಸಿದ ಅದನ್ನು ಪುಟಾಣಿಗಳಿಗೆ ತಿನ್ನಲು ಕೊಡುತ್ತಿದ್ದ ದಿನಗಳು ನನಗಿನ್ನೂ ಚೆನ್ನಾಗಿ ನೆನಪಿವೆ. ಅಂಗಡಿಗೆ ಹೋಗುವುದು ಬೇಡ, ಕಾಸು ಬಿಚ್ಚುವುದು ಬೇಡ, ಮನೆಯ ಸುತ್ತಲೂ ಸಿಗುತ್ತಿದ್ದ ಗಿಡಗಳಿಂದಲೇ ಆಹಾರ ತಯಾರಿಸುವು ಈ ಪದ್ಧತಿಯು, ಹಸುಗೂಸುಗಳ ಬೆಳವಣಿಗೆಗೂ ಸಹಕರಿಸುತ್ತಿತ್ತು, ಪೌಷ್ಟಿಕ ಆಹಾರ ಒದಗಿಸುತ್ತಿತ್ತು. ಹಸುಳೆಗಳಿಗೆ ಆರು ತಿಂಗಳು ತುಂಬುತ್ತಿದ್ದಂತೆ, ಮೊದಲಿಗೆ ನೀಡುತ್ತಿದ್ದ ಘನ ಆಹಾರವೇ ಅರಾರೂಟ್ ಮಣ್ಣಿ. ಕೆಲವು ಕೃಷಿಕ ಕುಟುಂಬದವರು, ಅನಿವಾರ್ಯವಾಗಿ ತಾಯಿ ಕೃಷಿ ಕೆಲಸಕ್ಕೆ ಹೋದಾಗ, ಮಗುವಿಗೆ ಆರು ತಿಂಗಳು ತುಂಬುವ ಮುಂಚೆಯೇ ಈ ಮಣ್ಣಿಯನ್ನು ಹಸುಗೂಸಿಗೆ ನೀಡುತ್ತಿದ್ದರು ಎಂದೂ ನಮ್ಮೂರಲ್ಲಿ ಹೇಳುತ್ತಿದ್ದರು.

ಫೋಟೋ ಕೃಪೆ :google

ತಂಪು ಜಾಗದಲ್ಲಿ ಬೆಳೆಯುವ ಗಿಡ

ನಮ್ಮ ಮನೆಯಿಂದ ಪಶ್ಚಿಮ ದಿಕ್ಕಿನಲ್ಲಿದ್ದ `ನೀಕ್ಮಡಿ’ ಮನೆಯಲ್ಲಿ ಅರಾರೂಟ್ ಗಿಡಗಳಿದ್ದವು. ೧೯೭೦ರ ದಶಕದ ಒಂದು ದಿನ, ಆ ಗಿಡಗಳನ್ನು ಅಗೆದು ಅದರ ಗಡ್ಡೆಗಳನ್ನು ಸಂಗ್ರಹಿಸಿದ್ದನ್ನು ನಾನು ಕಂಡಿದ್ದೆ. `ಅರಾರೂಟ್ ಗಿಡ ಹರಡುತ್ರಂಬ್ರು, ಎಲ್ಲರೂ ಬನ್ನಿ, ಹ್ವಾಪ, ಸ್ವಲ್ಪ ಗಡ್ಡೆ ತಕಂಡು ಬಪ್ಪ’ ಎಂದು ಯಾರೋ ಹೇಳಿದ ತಡ, ನಮ್ಮ ಅಮ್ಮಮ್ಮನ ಸವಾರಿ ನೀಕ್ಮಡಿ ಮನೆಗೆ ಹೊರಟಿತು; ಆಗಿನ್ನು ವಿದ್ಯಾರ್ಥಿಯಾಗಿದ್ದ ನಾನೂ ಅವರ ಹಿಂದೆ ಹೊರಟೆ. ನೀಕ್ಮಡಿಯಲ್ಲಿ ಅದಾಗಲೇ ಹತ್ತಾರು ಜನ ಬಂದು ಸೇರಿದ್ದರು. ಆ ಮನೆಯ ಎದುರಿನಲ್ಲಿ ಒಂದು ಪುಟ್ಟ ಅಡಿಕೆ ತೋಟವಿತ್ತು; ಅದರ ಒಂದು ಮೂಲೆಯಲ್ಲಿ ಸಾಕಷ್ಟು ತಂಪು ಪ್ರದೇಶ; ಪಕ್ಕದಲ್ಲೇ ಸಣ್ಣ ತೋಡು ಹರಿಯುತ್ತಿತ್ತು ಅಂತ ಕಾಣಿಸುತ್ತದೆ. ಆ ತೋಟದ ಇಳಿಜಾರಿನ ತಂಪು ಪ್ರದೇಶದಲ್ಲಿ ತಮ್ಮಷ್ಟಕ್ಕೆ ತಾವು ಬೆಳೆದಿದ್ದ ಒಂದಷ್ಟು ಗಿಡಗಳನ್ನು ಹರಡಿ (ಅಗೆದು), ಅದರ ಬೇರುಗಳನ್ನು (ಗಡ್ಡೆ) ಒಂದು ಮೂಲೆಯಲ್ಲಿ ರಾಶಿ ಹಾಕಿದ್ದರು; ಮನೆಯವರು ದೊಡ್ಡ ಗಾತ್ರದ ಒಂದಷ್ಟು ಬೇರುಗಳನ್ನು ತಮಗಿಟ್ಟುಕೊಂಡು, `ಇಷ್ಟು ನಮಗೆ ಸಾಕು; ಉಳಿದದ್ದನ್ನು ನೀವೆಲ್ಲರೂ ತಕೊಳ್ಳಿ’ ಎಂದರು. ಎಲ್ಲರೂ ತಲಾ ನಾಲ್ಕೆಂಟು ಗಡ್ಡೆಗಳನ್ನು ಆಯ್ದುಕೊಂಡರು; ಬಂದವರಿಗೆಲ್ಲರಿಗೂ ಒಂದಷ್ಟು ಗಡ್ಡೆಗಳು ಸಿಗುವಂತೆ ಅವುಗಳ ಹಂಚಿಕೆಯಾಯ್ತು; ಯಾರೂ ಖಾಲಿ ಕೈಯಲ್ಲಿ ಹೋಗುವಂತಿಲ್ಲ, ಕಡಿಮೆ ಬಿದ್ದವರಿಗೆ ಜಾಸ್ತಿ ಆಯ್ದುಕೊಂಡವರು ಒಂದಷ್ಟು ಗಡ್ಡೆ ಕೊಟ್ಟರು – ಅದೇ ತಾನೆ ಹಳ್ಳಿಗಳಲ್ಲಿರುವ ಸೌಹಾರ್ದ!

ಅರ್ಧ ಅಡಿಯಿಂದ ಒಂದು ಅಡಿ ಉದ್ದದ ಅರಾರೂಟ್ ಗಡ್ಡೆಗಳು ಮೂಲಂಗಿಯನ್ನು ಸುಮಾರಾಗಿ ಹೋಲುತ್ತವೆ; ಅದೇ ಬಣ್ಣ, ಮಧ್ಯೆ ಸ್ವಲ್ಪ ಒರಟು ಗೆರೆಗಳು. ತಂದ ಗಡ್ಡೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ತರಕಾರಿಯ ರೀತಿ ಹೆಚ್ಚಿ, ಅರೆಯುವ ಕಲ್ಲಿನಲ್ಲಿ ಸಣ್ಣಗೆ ಅರೆಯುವುದು ಮೊದಲ ಕೆಲಸ; ನೀರು ನೀರಾಗಿ ಅರೆದು, (ಈಗಲಾದರೆ ಮಿಕ್ಸಿಯಲ್ಲಿ ಅರೆಯಬಹುದೇನೋ!), ಒಂದು ದೊಡ್ಡ ಪಾತ್ರೆಯಲ್ಲಿ ಅದನ್ನು ಒಂದೆರಡು ಗಂಟೆ `ಹನಿಯಲು’ ಬಿಡಬೇಕು. ಅಂದರೆ, ಆ ದೊಡ್ಡ ಪಾತ್ರೆಯನ್ನು ಯಾರೂ ಅಲ್ಲಾಡಿಸದಂತೆ ಒಂದು ಮೂಲೆಯಲ್ಲಿಟ್ಟು, ಅದರೊಳಗಿರುವ ದ್ರವವು ಸೆಟಲ್ ಆಗಲು ಅವಕಾಶ ನೀಡಬೇಕು. ನಸು ಬಿಳಿ ಬಣ್ಣದ ಆ ದ್ರವವು, ಕ್ರಮೇಣ ತಿಳಿಯಾಗಿ ಕಾಣಿಸುತ್ತದೆ, ಬಿಳಿ ಬಣ್ಣದ ಅಂಶ ತಳಕ್ಕೆ ಹೋಗಿರುತ್ತದೆ. ನಂತರ, ಮೇಲಿನಿ ತಿಳಿ ನೀರನ್ನು ಬಸಿದರೆ, ಪಾತ್ರೆಯ ತಳದಲ್ಲಿ `ಅರಾರೂಟು ಪುಡಿ’ ಸಂಗ್ರಹವಾಗಿರುತ್ತದೆ. ಅದನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಡಬ್ಬಿಗೆ ಹಾಕಿ ಭದ್ರಪಡಿಸಿಟ್ಟರೆ, ಅರಾರೂಟು ಪುಡಿ ಸಿದ್ಧ. ಮುಂದಿನ ಕೆಲವು ತಿಂಗಳುಗಳ ಕಾಲ ಅದನ್ನು ಆಹಾರವಾಗಿ ಉಪಯೋಗಿಸಬಹುದು!

ಆದರೆ ನಮ್ಮೂರಿನಲ್ಲಿ ಅದನ್ನು ಸಾಮಾನ್ಯವಾಗಿ ತಿನ್ನಿಸುತ್ತಿದ್ದುದು ಸಣ್ಣ ಮಕ್ಕಳಿಗೆ ಮಾತ್ರ. ಅರಾರೂಟು ಪುಡಿಯನ್ನು ಹದವಾಗಿ ಬೇಯಿಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, ಹಸುಗೂಸುಗಳಿಗೆ ತಿನ್ನಿಸಿದರೆ, ಉತ್ತಮ ಎಂಬ ನಂಬಿಕೆ. ಅರಾರೂಟು ಮಣ್ಣಿಯು ಬೇಗನೆ ಜೀರ್ಣವಾಗುತ್ತದೆ ಮತ್ತು ತಕ್ಕಮಟ್ಟಿಗೆ ಕಾರ್ಬೋಹೈಡ್ರೇಟು ಹೊಂದಿದ ಪುಡಿಯಾಗಿದ್ದರಿಂದ, ಮಕ್ಕಳಿಗೆ ಶಕ್ತಿಯನ್ನೂ ತುಂಬಿಕೊಡುತ್ತದೆ. ಹಸುಗೂಸುಗಳಿಗೆ, ಪುಟಾಣಿಗಳಿಗೆ ದಿನಕ್ಕೆ ಮೂರು ಬಾರಿ ಅರಾರೂಟು ಮಣ್ಣಿಯನ್ನು ತಿನ್ನಿಸಿ, ಅವರನ್ನು ಬೆಳೆಸಿದ್ದನ್ನು ನಾನು ಕಂಡಿದ್ದೇನೆ. (೧೯೭೦ರ ದಶಕದಲ್ಲಿ) ಜೀರ್ಣಶಕ್ತಿ ಕೂಡಿ ಬಂದ ನಂತರ, ಮಕ್ಕಳು ಅನ್ನ ತಿನ್ನಲು ಆರಂಭಿಸಿ, ಅರಾರೂಟು ಮಣ್ಣಿಗೆ ಶುಭವಿದಾಯ ಹೇಳುತ್ತಿದ್ದರು! ಸಣ್ಣ ಮಕ್ಕಳಿದ್ದ ಮನೆಯಲ್ಲಿ ಅರಾರೂಟು ಪುಡಿ ಇರಲೇಬೇಕು, ಅದರಿಂದ ಮಣ್ಣಿ ಮಾಡಿಸಿ ಪುಟಾಣಿಗಳಿಗೆ ತಿನ್ನಿಸಲೇಬೇಕು ಎಂಬ ಪದ್ಧತಿ ಇದ್ದ ಕಾಲವದು.

ಆದರೆ, ೧೯೮೦ರ ದಶಕದ ಹೊತ್ತಿಗಾಗಲೇ, ಈ ಮಣ್ಣಿಯು ನಮ್ಮ ಹಳ್ಳಿಯ ಮಾತೆಯರ ಕೈಯಿಂದ ನಿಧಾನವಾಗಿ ದೂರವಾಗಿತ್ತು! ಆ ಸಮಯದಲ್ಲಿ ಹಸುಗೂಸುಗಳಿಗೆ ನಮ್ಮ ಮನೆಯಲ್ಲಿ ತಿನ್ನಿಸಲು ಆರಂಭಿಸಿದ್ದು ಅಂಗಡಿಗಳಲ್ಲಿ ಡಬ್ಬಿಗಳಲ್ಲಿ ಸಿಗುತ್ತಿದ್ದ , ಸಿದ್ಧ ಆಹಾರ! ನಂತರದ ವರ್ಷಗಳಲ್ಲಿ ನಮ್ಮ ಹಳ್ಳಿಯ ತೇವಾಂಶವಿದ್ದ ಪ್ರದೇಶಗಳಲ್ಲಿ ಅಲ್ಲಲ್ಲಿ ಬೆಳೆದುಕೊಂಡಿದ್ದ ಅರಾರೂಟು ಗಿಡಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡವು. ಈಗ ಅರಾರೂಟು ಪುಡಿಯನ್ನು ನಮ್ಮ ಹಳ್ಳಿಯವರು ಯಾರೂ ತಯಾರಿಸುತ್ತಿಲ್ಲ; ಅದರ ಜಾಗವನ್ನು ಡಬ್ಬಿಗಳಲ್ಲಿ ಸಿಗುವ ಪುಡಿ ರೂಪದ ಆಹಾರ ಆಕ್ರಮಿಸಿದೆ.

ಕರ್ನಾಟಕದ ಹಳ್ಳಿಗಳಲ್ಲಿ ಅರಾರೂಟು ಗಿಡದ ಬೇರಿನಿಂದ ಪುಡಿ ತಯಾರಿಸಿ, ಮಣ್ಣಿ ಮಾಡಿ, ಮಕ್ಕಳಿಗೆ ತಿನ್ನಿಸುತ್ತಿದ್ದ ಪದ್ಧತಿಯನ್ನು ನೆನದರೆ, ಈಗ ಸಣ್ಣಗೆ ವಿಸ್ಮಯ ಮೂಡುತ್ತದೆ. ಏಕೆಂದರೆ, `ಅರಾರೂಟು’ ಎಂಬ ಹೆಸರಿನ ಮೂಲವು ದಕ್ಷಿಣ ಅಮೆರಿಕ ಮತ್ತು ಕ್ಯಾರಿಬಿಯನ್ ದ್ವೀಪಗಳಲ್ಲಿದೆ. ಅಲ್ಲಿನ ಜನರು (ಅರಾವಕ್ ಜನಾಂಗ) ಈ ಗಿಡದ ಗಡ್ಡೆಯನ್ನು `ಅರು ಅರು’ ಎಂದು ಕರೆಯುತ್ತಿದ್ದರಂತೆ. ಅವರ ಭಾಷೆಯಲ್ಲಿ ಅರು ಎಂದರೆ ಊಟ ಎಂದರ್ಥ. ಅರಾರೂಟಿನ ಗಡ್ಡೆಯನ್ನು ಚೆನ್ನಾಗಿ ಅರೆದು, ತಿಳಿಯನ್ನಾಗಿಸಿ, ಅದರಿಂದ ಬೇರ್ಪಡಿಸಿದ `ಅರಾರೂಟು ಪುಡಿ’ಯ ವಿಶೇಷತೆ ಎಂದರೆ, ಅದನ್ನು ಡಬ್ಬಿಗಳಲ್ಲಿ, ಪಾತ್ರೆಗಳಲ್ಲಿ ತುಂಬಿಸಿಟ್ಟುಕೊಂಡು, ಯಾವಾಗ ಬೇಕಾದರೂ ಉಪಯೋಗಿಸಬಹುದು. ದಕ್ಷಿಣ ಅಮೆರಿಕ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸುಮಾರು ೭,೦೦೦ ವರ್ಷಗಳ ಹಿಂದೆಯೇ ಅರಾರೂಟನ್ನು ಆಹಾರವಾಗಿ ಬಳಸಿದ್ದಕ್ಕೆ ಪುರಾವೆಗಳು ದೊರಕಿವೆ!

ಫೋಟೋ ಕೃಪೆ :google

ಅಷ್ಟು ದೂರದ ದೇಶದಿಂದ ಅರಾರೂಟು ಗಿಡಗಳು, ನಮ್ಮ ದೇಶದ ಕರಾವಳಿಗೆ ಬಂದದ್ದಾದರೂ ಯಾವಾಗ? ಗೋಡಂಬಿ, ಮೆಣಸಿನ ಕಾಯಿ ಮೊದಲಾದ ಸಸ್ಯಗಳ ಜತೆಯಲ್ಲಿ, ಪೋರ್ಚುಗೀಸರು ಇದನ್ನುಭಾರತಕ್ಕೆ ತಂದೆರೆ? ಅಥವಾ, ಅವರಿಗಿಂತಲೂ ಮುಂಚೆ ಇದ್ದ ಸಮುದ್ರ ವ್ಯಾಪಾರಿಗಳು ಇದನ್ನು ತಂದರೆ? ಅರಾರೂಟನ್ನು ಹೋಲುವ ಗಿಡಗಳು ನಮ್ಮ ದೇಶದಲ್ಲೂ ಇದ್ದಿರಬಹುದೆ? ಸಂಶೋಧಕರು ಉತ್ತರಿಸಬೇಕು. ಈಚಿನ ವರ್ಷಗಳಲ್ಲಿ ನಮ್ಮೂರಿನಲ್ಲಿ ಈ ಗಿಡದ ಬಳಕೆಯೇ ನಿಂತು ಹೋಗಿದೆ! ಕ್ಯಾರಿಬಿಯನ್ ದ್ವೀಪಗಳಲ್ಲಿ ಮತ್ತು ದಕ್ಷಿಣ ಅಮೆರಿಕದಲ್ಲಿ ಅರಾರೂಟನ್ನು ಬಿಸ್ಕಟ್ ತಯಾರಿಗೆ, ಹಿಟ್ಟಿನ ರೂಪದಲ್ಲಿ ಉಪಯೋಗಿಸುವರಂತೆ. ಕಳೆದ ಶತಮಾನದಲ್ಲಿ ಬಾಳೆಯ ಕೃಷಿಯು ವ್ಯಾಪಕವಾದ ನಂತರ, ಇದರ ಬಳಕೆ ಕಡಿಮೆಯಾಯಿತು ಎಂದು ತಜ್ಞರು ಗುರುತಿಸಿದ್ದಾರೆ.

ಇಂದಿನ ದಿನಗಳಲ್ಲೂ ಅರಾರೂಟು ಪುಡಿಯನ್ನು ಉಪಯೋಗಿಸುವ ಪದ್ಧತಿ ಕೆಲವು ಪ್ರದೇಶಗಳಲ್ಲಿ ಇದೆ. ಇಂದು ನಾವು ಅಂತರ್ಜಾಲವನ್ನು ಹುಡುಕಿದರೆ, ಅರಾರೂಟು ಪುಡಿಯನ್ನು ಮಾರಾಟ ಮಾಡುವ ಹಲವು ಆನ್‌ಲೈನ್ ಅಂಗಡಿಗಳು ಕಾಣಸಿಗುತ್ತವೆ. ಆರೋಗ್ಯದ ದೃಷ್ಟಿಯಿಂದಲೂ, ಅರಾರೂಟು ಪುಡಿ ಸುಲಭವಾಗಿ ಜೀರ್ಣವಾಗುವ ಆಹಾರ ಎಂದೇ ಗುರುತಿಸಿಕೊಂಡಿದೆ. ಆದರೆ, ನಮ್ಮ ಹಳ್ಳಿಯಲ್ಲಿ ಈಗ ಈ ಪುಡಿಯನ್ನು ಮಕ್ಕಳಿಗೆ, ಹಸುಗೂಸುಗಳಿಗೆ ತಿನ್ನಿಸುವ ಪದ್ಧತಿ ಬಹುಮಟ್ಟಿಗೆ ನಿಂತು ಹೋಗಿರುವುದು ಒಂದು ವಾಸ್ತವ.

ಅರಾರೂಟು ಪುಡಿಯ ರೀತಿಯೇ, ಮಣ್ಣಿ ತಯಾರಿಸಿ ಉಪಯೋಗಿಸಬಹುದಾದ ಇತರ ಗಡ್ಡೆಗಳು, ಆಹಾರ ಮೂಲಗಳು ನಮ್ಮ ದೇಶದಲ್ಲಿ ಇದ್ದವು. ಮಲೆನಾಡು ಮತ್ತು ಕರಾವಳಿಯಲ್ಲಿ ಬಹು ಹಿಂದೆ ಆಹಾರವಾಗಿ ಬಳಕೆಯಾಗುತ್ತಿದ್ದ, ಬಗನಿ ಮರದ ತಿರುಳಿನಲ್ಲಿರುವ ಬಿಳಿ ಪುಡಿಯನ್ನು ಇದಕ್ಕೆ ಒಂದು ಉದಾಹರಣೆಯಾಗಿ ನೀಡಬಹುದು. ಚೆನ್ನಾಗಿ ಬಲಿತ ಬಗನಿ ಮರದ ಕಾಂಡವನ್ನು ಬಗೆದರೆ, ಶುದ್ಧ ಬಿಳಿ ಬಣ್ಣದ ಪುಡಿ ಸಿಗುತ್ತದೆ; ಅದನ್ನು ಬೇಯಿಸಿ ಗಂಜಿ ಮಾಡುವ ಪದ್ಧತಿ ಇತ್ತು. ಮುಖ್ಯವಾಗಿ, ಬಡತನದಲ್ಲಿದ್ದ ಕೃಷಿ ಕುಟುಂಬಗಳು ಈ ಪುಡಿಯನ್ನು ತುರ್ತು ಸಂದರ್ಭದಲ್ಲಿ ಸೇವಿಸುತ್ತಿದ್ದರಂತೆ. ಈಗಲೂ ಕೇರಳದ ಕಾಡಿನ ಅಂಚಿನಲ್ಲಿರುವ ಕೆಲವು ಜನರು, ಇಂತಹ ಪುಡಿಯನ್ನು ಆಹಾರವಾಗಿ ಬಳಸುತ್ತಾರಂತೆ.

ನಮ್ಮ ಹಳ್ಳಿಯಲ್ಲಿ ಆಹಾರವಾಗಿ ಬಳಕೆಯಾಗುವ ಕಾಡುಗಡ್ಡೆಯೊಂದಿದೆ; ಮುಖ್ಯವಾಗಿ ಮಳೆಗಾಲದಲ್ಲಿ ಇದರ ಬಳಕೆ. ಇದೇ ಕ್ಯಾನಿಗೆಂಡೆ (ಕ್ಯಾನೆ ಗಡ್ಡೆ). ಸುವರ್ಣಗಡ್ಡೆಯ ದೂರದ ಸಂಬಂಧಿಯಾದ ಕ್ಯಾನಿಗೆಂಡೆ ಗಿಡವು, ಸುವರ್ಣ ಗಡ್ಡೆಯ ಗಿಡವನ್ನೇ ಹೋಲುತ್ತದೆ. ಆದರೆ, ಗಾತ್ರದಲ್ಲಿ ಸಾಕಷ್ಟು ಚಿಕ್ಕದು. ಬಲಿತ ಕ್ಯಾನಿಗೆಂಡೆಯು ಸುಮಾರು ಎರಡು ಮುಷ್ಟಿ ಗಾತ್ರವಿರುತ್ತದೆ. ಭಾರೀ ಮಳೆ ಬೀಳುವ ಆಸಾಡಿ ತಿಂಗಳಲ್ಲಿ (ಆಷಾಢ) ಕಾಡಿನಲ್ಲಿ ಕ್ಯಾನಿಗೆಂಡೆ ಸಿಗುತ್ತದೆ. ಸುವರ್ಣ ಗಡ್ಡೆಯ ಎಲೆಗಳನ್ನು ಹೋಲುವ ಎಲೆಗಳು ಕಾಡು, ಗುಡ್ಡಗಳಲ್ಲಿ ಕಂಡರೆ, ಅಲ್ಲಿ ಕ್ಯಾನಿ ಗೆಂಡೆ ಇದೆ ಎಂದು ತಿಳಿಯಬಹುದು. ಅಲ್ಲಿ ಬಗೆದರೆ, ಮುಷ್ಟಿ ಗಾತ್ರದ, ತುಸು ದೊಡ್ಡದಾಗಿಯೂ ಇರುವ ಕ್ಯಾನಿಗೆಂಡೆಗಳು ಸಿಗುತ್ತವೆ. ಅದನ್ನು ಕಿತ್ತು ತಂದು, ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು, ಹಬೆಯಲ್ಲಿ ಬೇಯಿಸಿ, ಅರೆದು, ಕಡುಬನ್ನು ತಯಾರಿಸುವ ಪದ್ಧತಿ ಇಂದೂ ಇದೆ. ಆಸಾಡಿ ಅಮಾವಾಸ್ಯೆಯಂದು ಆಚರಿಸುವ `ಆಸಾಡಿ ಹಬ್ಬ’ದ ಅವಿಭಾಜ್ಯ ಅಂಗವೆಂದರೆ ಕ್ಯಾನಿಗೆಂಡೆ ಕಡುಬು. ಆ ದಿನದಂದು, ಕೋಣಗಳಿಗೆ ಕ್ಯಾನಿಗೆಂಡೆ ಕಡುಬು ಮತ್ತು ಬೇಯಿಸಿದ ಹುರುಳಿಯನ್ನು ಕೊಡುತ್ತಾರೆ. ಜತೆಗೆ, ಮನೆಯವರು ಸಹ ಕ್ಯಾನಿಗೆಂಡೆ ಕಡುಬನ್ನು ಸಂತಸದಿಂದ ತಿನ್ನುತ್ತಾರೆ. ಮಳೆ ಸುರಿಯುವ ಕಾಲದಲ್ಲಿ, ಕೃಷಿಕರಿಗೆ ಆಹಾರ ಧಾನ್ಯವು ಸುಲಭವಾಗಿ ದಕ್ಕದೇ ಇರುವ ದಿನಗಳಲ್ಲಿ, ಹಿಂದಿನ ಕಾಲದಲ್ಲಿ ಕ್ಯಾನಿಗೆಂಡೆಯನ್ನು ಹುಡುಕಿ ತಂದು ತಿನ್ನುವ ಅಭ್ಯಾಸವಿದ್ದಿರಬಹುದು ಮತ್ತು ಅದು ಆಸಾಡಿ ಹಬ್ಬದ ಆಚರಣೆಯ ರೂಪದಲ್ಲಿ ಇಂದಿಗೂ ಉಳಿದುಕೊಂಡು ಬಂದಿರಬಹುದೇ ಎಂಬ ಅನುಮಾನ ನನ್ನದು. ಕಾಡಿನಲ್ಲಿ ಸಿಗುವ ಗಡ್ಡೆ ಗೆಣಸುಗಳನ್ನು ಅಗೆದು ತಂದು, ಬೇಯಿಸಿ, ಆಹಾರವಾಗಿ ಸೇವಿಸುತ್ತಿದ್ದರು ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ಕ್ಯಾನಿಗೆಂಡೆ ಕಡುಬು! (Photo : courtesy : Internet)

ಫೋಟೋ ಕೃಪೆ :google

ಟಿಪ್ಪಣಿ:
1. ಉತ್ತರ ಕನ್ನಡದಲ್ಲಿ ಇದನ್ನು ಈಗಲೂ ತಯಾರಿಸುತ್ತಾರೆ ಎಂದು ಗೆಳೆಯರು ಮಾಹಿತಿ ನೀಡಿದರು.

2. ಮುಂಬಯಿಯಲ್ಲಿ ಈಗ ಅರಾರೂಟು ಪುಡಿ ಸಿಗುತ್ತದಂತೆ.. ಬೆಲೆ ಸುಮಾರು ರು.2000 ಎಂದಿದ್ದಾರೆ ಪ್ರೊ. ಉಪಾಧ್ಯ ಅವರು.

3. ದಕ್ಷಿಣ ಕನ್ನಡದಲ್ಲಿ ಕೂವೆ ಗಡ್ಡೆಯ ಪುಡಿಯನ್ನು ಇದೆ ರೀತಿ ಉಪಯೋಗಿಸುತ್ತಾರಂತೆ.

4. “ಸರ್, ಅರಾರೂಟ್ ತರಹನೆ ಕತ್ರಪೀಟ್ ಎಂಬ ಒಂದು ಹಿಟ್ಟನ್ನು ಹಾಲಾಡಿಯಲ್ಲಿ ನಮ್ಮ ಬಂಧುಗಳಲ್ಲಿ ಕೆಲವು ಹಿರಿಯ ಅಜ್ಜಿಯಂದಿರು ಮಾಡುತಿದ್ದರು, ಕಾಡುರಸಿನ ಗಡ್ಡೆ ಶುಂಠಿಯ ತರಹ ಅಷ್ಟೇದೊಡ್ಡ ದೊಡ್ಡ ಗಡ್ಡೆ ತಂದು ಅರೆದು ನೀರು ಸೋಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಉಪಯೋಗಿಸುತಿದ್ದರು, ತಿಂಗಳುಟ್ಟಲೆ ಹಾಳಾಗುತಿರಲಿಲ್ಲ, ಆದೆರೆ ಈಗ ಮಾಡುವವರಿಲ್ಲ ” ಎಂದಿದ್ದಾರೆ ಗೆಳೆಯ Shenoy ಅವರು.

5.ಇದರ ಪುಡಿ ತಯಾರಿಸಿ, ಮಣ್ಣಿ ಮಾಡಿ ಮಕ್ಕಳಿಗೆ ತಿನ್ನಿಸುವ ಕುರಿತು ನಿಮ್ಮಲ್ಲೂ ಮಾಹಿತಿ ಇದ್ದರೆ ತಿಳಿಸಿ.

6. ನೀವು ಅರರೂಟು ಮಣ್ಣಿ ತಿಂದಿದ್ದೀರಾ?


  • ಶಶಿಧರ ಹಾಲಾಡಿ – ಖ್ಯಾತ ಕಾದಂಬರಿಕಾರರು, ಕತೆಗಾರರು, ಪತ್ರಕರ್ತರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW