“ಅಸುರ” ಆದಿವಾಸಿ ಸಮುದಾಯ ಕೃತಿ ಪರಿಚಯ

ನಾಗ ಎಚ್. ಹುಬ್ಳಿ ಅವರ ‘ಅಸುರ’ ಕೃತಿಯಲ್ಲಿನ ಅಸುರರು ” ಅಸಿರಿಯಾ” ಎಂಬ ನಗರದ ನಿವಾಸಿಯಾಗಿದ್ದರು ಮತ್ತು ಅವರು ಮಿಶ್ರ ಹಾಗೂ ಬಬಿಲೋನಿಯನ್ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡಿದ್ದರು. ಈ ಕೃತಿಯ ಕುರಿತು ಎಲ್. ಎಸ್. ಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಅಸುರ
ಲೇಖಕರು : ನಾಗ ಎಚ್. ಹುಬ್ಳಿ
ಖರೀದಿಗಾಗಿ : ನಾಗ ಎಚ್. ಹುಬ್ಳಿ ಮೊ. ನಂ. ೮೭೬೨೯೨೦೮೮೧

ಸರಸ್ವತಿ ಪುಸ್ತಕ ಮಾರಾಟ ಮಳಿಗೆ
ಕನ್ನಡ ವಿಶ್ವವಿದ್ಯಾಲಯ, ಹಂಪಿ,
ವಿದ್ಯಾರಣ್ಯ -೫೮೩ ೨೭೬
ಅಥವಾ
ಕನ್ನಡ ವಿವಿ ಪ್ರಾದೇಶಿಕ ಕಚೇರಿ
ಕಾನೂನು ಕಾಲೇಜಿನ ಹಳೆಯ ಕಟ್ಟಡ
ಮೈಸೂರ ಬ್ಯಾಂಕ್ ವೃತ್ತ,
ಅರಮನೆ ರಸ್ತೆ , ಬೆಂಗಳೂರು-೯
ದೂರವಾಣಿ: ೦೮೦-೨೨೩೭೨೩೮೮

” ಅಸುರ ಎಂದತಕ್ಷಣ ನಮಗೆ ನೆನಪಾಗುವ ಶಬ್ದಗಳೆಂದರೆ ” ರಾಕ್ಷಸ / ರಕ್ಕಸ/ ದೈತ್ಯ ಇತ್ಯಾದಿ. ನಮ್ಮ ಪೌರಾಣಿಕ ಕಥಾನಕಗಳ ಪರಿಣಾಮವಾಗಿ ನಮ್ಮೆದುರು ರೂಪುಗೊಂಡ ಸುರ-ಅಸುರ, ದೇವರು- ದೈತ್ಯರುಗಳ ಕಲ್ಪನೆಯಿಂದ ನಾವು ಹೊರಬರುವದು ಕಷ್ಟ. ಆದ್ದರಿಂದಲೇ ಡಾ. ನಾಗ ಎಚ್. ಹುಬ್ಳಿ ಅವರ “ಅಸುರ” ಎಂಬ ಪುಸ್ತಕದ ಹೆಸರು ಕೇಳಿದಾಗ ನನ್ನಲ್ಲಿ ಅದನ್ನು ಓದಬೇಕೆಂಬ ಕುತೂಹಲ ಮೂಡಿದ್ದು. ಅವರು ನನಗೆ ಆ ಪುಸ್ತಕ ಕಳಿಸಿ ಬಹಳ ಉಪಕಾರ ಮಾಡಿದ್ದಾರೆ. ಏಕೆಂದರೆ ಅದನ್ನು ಓದಿ ನನಗೆ ಅನೇಕ ಹೊಸ ಸಂಗತಿಗಳ ಅರಿವು ಉಂಟಾದದ್ದು ಸುಳ್ಳಲ್ಲ.

ನನಗೆ ಈ ಮಧ್ಯೆ ಒಬ್ಬ ವಿದ್ವಾಂಸರು ಹೇಳಿದ್ದು ನೆನಪಾಗುತ್ತದೆ -” ಸುರೆಯನ್ನು ಕುಡಿಯುವವರು ಸುರರು. ಸುರೆಯನ್ನು ಸೇವಿಸದೇ ಇರುವವರು ಅಸುರರು”. ಸಾಮಾನ್ಯವಾಗಿ ನಮ್ಮ ಕಲ್ಪನೆಯಲ್ಲಿ ರಾಕ್ಷಸರೆಂದರೆ ದುಷ್ಟರು, ದೇವತೆಗಳೆಂದರೆ ದುಷ್ಟರ ದಮನ ಮಾಡುವವರು ಇತ್ಯಾದಿ. ಹಾಗಿದ್ದರೆ ವಾಸ್ತವ ಸಂಗತಿ ಏನು ? ಅಸುರರೆಂದರೆ ಯಾರು? ಅವರ ಇತಿಹಾಸ ಏನು? ನಾಗ ಅವರ ಈ ಕೃತಿ ಈ ಸಂಗತಿಗಳ ಮೇಲೆ ಬೆಳಕು ಚೆಲ್ಲುವಂತಹದು. ಬಹಳ ಆಸಕ್ತಿ ಕೆರಳಿಸಿ ಓದಿಸಿಕೊಂಡ ಪುಸ್ತಕ. ಎಲ್ಲರೂ ತರಿಸಿ ಓದಬೇಕಾದ ಪುಸ್ತಕ.

ಜನಾಂಗೀಯ ಅಧ್ಯಯನ ಸುಲಭವಾದುದೇನಲ್ಲ. ಕೇವಲ ಪುಸ್ತಕಗಳ ಓದಿನಿಂದ ಆ ಅಧ್ಯಯನ ಪೂರ್ಣಗೊಳ್ಳುವದಿಲ್ಲ. ಅದು ಕ್ಷೇತ್ರ ಕಾರ್ಯವನ್ನೂ ಅಪೇಕ್ಷಿಸುವಂತಹದು. ನಾಗ ಎಚ್. ಅವರ ಅಧ್ಯಯನದ ಮೂಲ ಆಸಕ್ತಿಯ ಕ್ಷೇತ್ರವೇ ಅದಾಗಿರುವದರಿಂದ ಮತ್ತು ಅವರು ಅಂತಹ ಪ್ರದೇಶದಲ್ಲೇ ನೆಲೆಸಿ ಆ ವಿಷಯದಲ್ಲಿ ವಿಶೇಷ ಪರಿಶ್ರಮ ವಹಿಸಿ ಮಾಹಿತಿ ಸಂಗ್ರಹ ಮಾಡಿರುವದರಿಂದ ನಮಗೆ ಇಂತಹ ಅಪರೂಪದ ಸಂಗತಿಗಳು ದೊರಕುವಂತಾಗಿದೆ.

ಆದಿಮ ಸಂಸ್ಕೃತಿಯ ವಾರಸುದಾರರಾದ ” ಅಸುರ ಸಮುದಾಯ” ದ ಬದುಕನ್ನು ಒಳಹೊಕ್ಕು ನೋಡಿರುವ ನಾಗ ಅವರ ಈ ಪುಸ್ತಕವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವದೇ ಅದರ ಮಹತ್ವಕ್ಕೆ ಸಾಕ್ಷಿ. ನಾಗ ಅವರು ತಮ್ಮ ಉದ್ಯೋಗದ ನೆಲೆಯನ್ನು ಕಂಡುಕೊಂಡ ಜಾರ್ಖಂಡ ರಾಜ್ಯವೇ ಈ ಅಸುರ ಆದಿವಾಸಿ ಜನಾಂಗದ ಮೂಲ ಬೇರುಗಳನ್ನು ಹೊಂದಿದ್ದರಿಂದ ಸಹಜವಾಗಿಯೇ ಅವರು ಆ ವಿಷಯವಾಗಿ ತಿಳಿದುಕೊಳ್ಳುವ ಪ್ರಯತ್ನಕ್ಕಿಳಿಯುತ್ತಾರೆ. ಜಾರ್ಖಂಡ್ ರಾಜ್ಯವೊಂದರಲ್ಲೇ ೩೩ ಆದಿವಾಸಿ ಜನಾಂಗದ ಸಮುದಾಯಗಳು ಇದ್ದು ಅವುಗಳಲ್ಲಿ ಈ ಅಸುರ ಸಮುದಾಯವೂ ಒಂದು. ಆದಿವಾಸಿಗಳ ಬದುಕನ್ನು ಅರಿಯಬೇಕೆಂದರೆ ಅವರ ಹತ್ತಿರ ಹೋಗುವ ಸಾಹಸದ ಕೆಲಸಕ್ಕೆ ಕೈಹಾಕಬೇಕು. ಕೆಲವೊಂದು ಅಪಾಯಕಾರಿ ಸಮುದಾಯಗಳೂ ಇವೆ. ಆ ಅಪಾಯದ ನಡುವೆಯೂ ನಾಗ ಅವರು ನುಸುಳಿ ಮಾಹಿತಿ ಸಂಗ್ರಹಿಸಿರುವದು ಮೆಚ್ಚಲೇಬೇಕಾದ ವಿಷಯ.

ಅಸುರ ಸಮುದಾಯದ ಮೂಲ ಮಹೂದೀಗಢ ಅಥವಾ ಮೆಹದೀಗಢ. ಇವರ ಪೂರ್ವಜರು ಅದೊಂದು ಪ್ರತಿಕೂಲ ಸನ್ನಿವೇಶದಲ್ಲಿ ಅಲ್ಲಿಂದ ಪಲಾಯನಗೈದು ಇಲ್ಲಿ ಬಂದು ನೆಲೆಸಿದವರು. ಬಿಹಾರ ಹಾಗೂ ಜಾರ್ಖಂಡ ಪ್ರದೇಶಗಳ ವ್ಯಾಪ್ತಿಯಲ್ಲು ಬರುವ ಪ್ರಸ್ಥಭೂಮಿ ವಿವಿಧ ಆದಿವಾಸಿ ಸಮುದಾಯಗಳ ಆಶ್ರಯತಾಣವಾಗಿದ್ದು ಕಳೆದ ನೂರಿನ್ನೂರು ವರುಷಗಳಲ್ಲಿ ಇವರ ಕುರಿತು ಹಲವರು ಸಂಶೋಧನೆಯ ಕೆಲಸ ಕೈಕೊಂಡಿದ್ದಾರೆ. ನಾಡಿನಿಂದ ದೂರವಾಗಿ ಕಾಡಿನಲ್ಲಿ ತಮ್ಮದೇ ಆದ ಒಂದು ಅಭೇದ್ಯ ಆವರಣವನ್ನು ನಿರ್ಮಿಸಿಕೊಂಡು ನಾಗರಿಕ ಜೀವನದಿಂದ ಒಂದಿಷ್ಟು ಅಂತರವನ್ನು ಕಾದುಕೊಂಡು ಬದುಕುವ ಈ ಸಮುದಾಯಗಳ ಬಗ್ಗೆ ಮೊದಲು ಕೆಲವು ಮಾಹಿತಿಗಳನ್ನು ಒದಗಿಸಿದವರು ವೆರಿಯರ್ ಎಲ್ವಿನ್ ಮತ್ತು ಕೆ. ಕೆ. ಲೆಯುವಾ ಎಂಬವರು. ಮುಂದೆ ಹಲವರು ಅಧ್ಯಯನ ನಡೆಸಿದ್ದಾರೆ. ಅವರ ಪ್ರಕಾರ “ಅಸುರರು ಭಾರತದ ಅತ್ಯಂತ ಪ್ರಾಚೀನ ಲೋಹಕರ್ಮಿಗಳು” ಅಂದರೆ ಕಬ್ಬಿಣ ಕರಗಿಸುವ ಕಲೆಯನ್ನು ಕರಗತ ಮಾಡಿಕೊಂಡವರು. ಈಚೆಗೆ ಅವರು ಆ ಕುಲಕಸುಬಿನಿಂದ ದೂರವಾಗಿ ಕೃಷಿವ್ಯವಸಾಯವನ್ನು ಆಧರಿಸಿದ್ದಾರೆ.

ಅಸುರ ಶಬ್ದ ನಮಗೆ ಋಗ್ವೇದದಲ್ಲೇ ಕಂಡುಬರುತ್ತದೆ. ಅಷ್ಟೊಂದು ಪ್ರಾಚೀನ ಹಿನ್ನೆಲೆ ಅವರಿಗಿರುವದು ಸ್ಪಷ್ಟ. ನಾಗ ಅವರು ಈ ವಿಷಯವನ್ನು ಸಾಕಷ್ಟು ವಿಸ್ತಾರವಾಗಿ ವಿವೇಚಿಸುತ್ತಾರೆ. ಉಪನಿಷತ್ತು, ರಾಮಾಯಣ ಮಹಾಭಾರತ, ಪುರಾಣಗಳಲ್ಲೆಲ್ಲ ಅಸುರ ಶಬ್ದ ಪ್ರಯೋಗವಾಗಿದೆ. ಮಾನವ ಶಾಸ್ತ್ರಜ್ಞರಾದ ಬ್ಯಾನರ್ಜಿ ಮತ್ತು ಶಾಸ್ತ್ರಿ ಎಂಬವರು ಹೇಳುವಂತೆ(೧೯೨೬) ” ಪೂರ್ವ ವೈದಿಕ ಕಾಲದಿಂದ ವೈದಿಕ ಕಾಲದವರೆಗೆ ಅಸುರರು ಅತ್ಯಂತ ಶಕ್ತಿಶಾಲಿ ಸಮುದಾಯದವರಾಗಿದ್ದರು. ಮತ್ತು ಅವರು ಆರ್ಯರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ವರುಣನ ಆರಾಧಕರಾಗಿದ್ದರು… ”

” ಅಸುರ ಸಾಮ್ರಾಜ್ಯದ ಅಂತ್ಯ ಆರ್ಯರೊಂದಿಗಿನ ಸಂಘರ್ಷದೊಂದಿಗೆ ಆಯಿತು ಮತ್ತು ಕೊನೆಯಲ್ಲಿ ಅಸುರರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಆರ್ಯರು ಸಿದ್ಧರಾಗಲಿಲ್ಲ. ಅವರನ್ನು ರಾಕ್ಷಸ, ದೈರ್ಯ ಮೊದಲಾದ ರೀತಿಯಲ್ಲಿ ಸಂಬೋಧಿಸಲಾಯಿತು ಎನ್ನುವದು ಮಜುಮ್ ದಾರ ಅವರ ಅಭಿಪ್ರಾಯ.

ಅಸುರರು ” ಅಸಿರಿಯಾ” ಎಂಬ ನಗರದ ನಿವಾಸಿಯಾಗಿದ್ದರು ಮತ್ತು ಅವರು ಮಿಶ್ರ ಹಾಗೂ ಬಬಿಲೋನಿಯನ್ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡಿದ್ದರು. ನಮತರ ಅವರು ಭಾರತ ಮತ್ತು ಇರಾನ್ ಕಡೆಗೆ ವಲಸೆ ಹೊರಟರು. ಸಿಂಧೂ ನಾಗರಿಕತೆಯ ಹರಪ್ಪಾ ಮೊಹೆಂಜೊದಾರೊ ನಾಗರಿಕತೆಯ ನಿರ್ಮಾಣದಲ್ಲಿ ಅಸುರರ ಪಾತ್ರ ಮಹತ್ವದ್ದಾಗಿದೆ ಎಂದೂ ಮಾನವ ಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

ಇಂತಹ ಕುತೂಹಲಕರವಾದ ಸಂಗತಿಗಳ ಮೂಲಕ ನಾಗ ಅವರು ಒಂಬತ್ತು ಅಧ್ಯಾಯಗಳಲ್ಲಿ ಅಸುರರ ಸಾಮಾಜಿಕ,ವ್ಯವಸ್ಥೆ, ಭೌತಿಕ ಸಂಸ್ಕೃತಿ, ಆರ್ಥಿಕ ವ್ಯವಸ್ಥೆ, ಆಡಳಿತ ವ್ಯವಸ್ಥೆ, ಧಾರ್ಮಿಕ ಜೀವನ, ಪರಿವರ್ತನೆ ಮತ್ತು ಸಮಸ್ಯೆಗಳು, ಅಸುರ ಸಮುದಾಯದ ಜನಪದ ಕಥೆಗಳು ಇತ್ಯಾದಿ ವಿಷಯಗಳನ್ನು ವಿವರಿಸುತ್ತಾರೆ. ಈ ಸಮುದಾಯದ ಆಚರಣೆಗಳು, ರೂಢಿರಿವಾಜುಗಳು, ಸಂಪ್ರದಾಯಗಳು, ಬದುಕಿನ ರೀತಿ ನೀತಿ, ನಂಬಿಕೆಗಳು , ಅವರ ಉದ್ಯೋಗ ವ್ಯವಸಾಯಗಳು ಎಲ್ಲವನ್ನೂ ಈ ೧೫೦ ಪುಟಗಳ ಪುಸ್ತಕದಲ್ಲಿ ಹಿಡಿದಿಡುವ ಪ್ರಯತ್ನವನ್ನು ನಾಗ ಅವರು ಮಾಡಿದ್ದಾರೆ. ಆಳುವ ಸರಕಾರಗಳು ಆಗಾಗ ಅಲ್ಲಲ್ಲಿ ಇವರ ಬದುಕನ್ನು ಸುಧಾರಿಸುವ ಪ್ರಯತ್ನ ನಡೆಸಿದ್ದುಂಟಾದರೂ ಅದು ಪೂರ್ತಿ ಫಲ ನೀಡಿಲ್ಲ. ಅವರು ಆಧುನಿಕ ಪ್ರಪಂಚದೊಡನೆ ಬೆರೆಯಲು ಇಂದಿಗೂ ಹಿಂಜರಿಯುತ್ತಾರೆನ್ನಲಾಗಿದೆ.

ನಿಜಕ್ಕೂ “ಅಸುರ” ರ ಕುರಿತು ಅರಿಯಬಯಸುವವರು ಈ ಕೃತಿ ಓದಬೇಕು. ಅಥವಾ ಅಸುರರ ಕುರಿತು ಅರಿಯುವ ಮನಸ್ಸು ರೂಪಿಸಿಕೊಳ್ಳಬೇಕು. ಇಂತಹ ಒಂದು ಉಪಯುಕ್ತ ಕೃತಿ ನೀಡಿದ್ದಕ್ಕಾಗಿ ನಾಗ ಎಚ್. ಹುಬ್ಳಿ ಅವರಿಗೆ ಮನಸಾ ಅಭಿನಂದನೆಗಳು.


  • – ಎಲ್. ಎಸ್. ಶಾಸ್ತ್ರಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW