‘ಅವನಿ’ ಕಿರು ಕಾದಂಬರಿ ಪರಿಚಯ

ಕತೆಗಾರ್ತಿ ಶುಭ ಶ್ರೀನಾಥ್  ಅವರ “ಅವನಿ” ಎಂಬ ಕೃತಿಯಲ್ಲಿ ಆರು ವಿಭಿನ್ನ ಕಥೆಗಳಿದ್ದು, ಲೇಖಕಿ ಆಶ್ರಿತ ಕಿರಣ್ ಅವರು ಈ ಕಾದಂಬರಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಪುಸ್ತಕದ ಹೆಸರು : ಅವನಿ  
ಲೇಖಕರು          : ಶುಭಾ ಶ್ರೀನಾಥ್
ಪ್ರಕಾರ : ಕಿರು ಕಾದಂಬರಿಗಳು 

ಪ್ರಕಾಶಕರು       : ಪುಷ್ಪಾ ಎಂಟರ್ಪ್ರೈಸಸ್ 
ಪುಟಗಳ ಸಂಖ್ಯೆ  : 248
ಪುಸ್ತಕದ ಬೆಲೆ     : 275/-

ಅದೊಂದು ಕಾಲವಿತ್ತು. ಸ್ತ್ರೀ ಪ್ರಧಾನ ಚಲನಚಿತ್ರಗಳು ತೆರೆ ಮೇಲೆ ರಾರಾಜಿಸುತ್ತಿತ್ತು. ಉತ್ತಮ ಸಂದೇಶ ಸಾರುವ ಕಥೆಗಳು ಇರುತ್ತಿದ್ದವು. ಇಂದು ಅಂತಹ ಚಿತ್ರಗಳು ಅಪರೂಪವಾಗಿದೆ. ಅಂತಹ ಕೌಟುಂಬಿಕ ಕಥೆಗಳು ಬಂದರೂ ಇಂದು ಮನಸ್ಸಿನಲ್ಲಿ ಉಳಿಯುವುದು ಬಹಳಾ ಕಡಿಮೆಯಾಗಿದೆ. “ಅವನಿ” ಪುಸ್ತಕದ ಕಥೆಗಳು ಚಲನಚಿತ್ರ ಕಂಡಂತೆ ಭಾಸವಾಗುತ್ತದೆ.

ಶುಭ ಶ್ರೀನಾಥ್  ಅವರ “ಅವನಿ” ಎಂಬ ಪುಸ್ತಕದಲ್ಲಿ ಆರು ವಿಭಿನ್ನ ಕಥೆಗಳಿವೆ. ಹೆಣ್ಣೊಬ್ಬಳ ತೊಳಲಾಟ, ಅವಳ ಸಂಕಟ, ಅವಳು ಮನದೊಳಗೆ ಅನುಭವಿಸುವ ವೇದನೆಯನ್ನು ತೋರ್ಪಡದೆ ಸಮಸ್ಯೆಯನ್ನು ಬಗೆಹರಿಸುವ ರೀತಿ ಬಹಳಾ ಅಧ್ಬುತವಾಗಿ ಮೂಡಿಬಂದಿದೆ. ಒಂದೊಂದು ಕಥೆ ಒಂದೊಂದು ವಿಷಯವನ್ನು ಸಾರುತ್ತದೆ.

ಆರು ಕಿರು ಕಾದಂಬರಿಯನ್ನು ಒಳಗೊಂಡ ಈ ಪುಸ್ತಕ ಎಲ್ಲಿಯೂ ಪುಟಗಳನ್ನು ಮಡಿಚಿಟ್ಟು, ಪುಸ್ತಕವನ್ನು ಬದಿಗಿಟ್ಟು ಓದುವುದನ್ನು ನಿಲ್ಲಿಸಿದಂತೆ ಓದಿಸಿಕೊಂಡು ಹೋಗುತ್ತದೆ.  ಇದು ಲೇಖಕಿ ಶುಭಾ ಶ್ರೀನಾಥ್ ಅವರ ನಾಲ್ಕನೆ ಕೃತಿಯಾಗಿದ್ದು ಮಹಿಳಾ ಪ್ರಧಾನ ಕಥೆಗಳಾಗಿವೆ. ಕಥೆಯ ನಿರೂಪಣೆ ಸೊಗಸಾಗಿದ್ದು ಕಥಾವಸ್ತು ನೆನಪಿನಲ್ಲಿ ಉಳಿಯುತ್ತದೆ. ಕಥೆಯ ಮೂಲಕ ಸಮಾಜಕ್ಕೆ ಸಂದೇಶವನ್ನು ನೀಡುವ ಪ್ರಯತ್ನವನ್ನು  ಈ ಆರು ಕಿರು ಕಾದಂಬರಿಗಳಲ್ಲಿ ಕಾಣಬಹುದು.

ದೀಪಾ-ಧನುಷ್ ,ಅಮಿತ್- ಸುಶೀಲಾ “ಅವನಿ” ಕಥೆಯ ಮುಖ್ಯ ಪಾತ್ರಗಳು. ಬಡ ತಾಯಿಯನ್ನು ಕಂಡರೆ ಸಿಡಿಮಿಡಿ ಎನ್ನುತ್ತಿದ್ದ ದೀಪ ತಂದೆ ತಾಯಿಯೇ ದೇವರೆಂದು ಗೌರವಿಸಿ ಅವರ ಮಾತಿನಂತೆ ನಡೆಯುವ ಧನುಷ್ ನನ್ನು ಪ್ರೀತಿಸುತ್ತಾಳೆ. ಅಮ್ಮನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಸುಶೀಲ ಮದುವೆಯ ಬಗ್ಗೆ ಯೋಚಿಸದೆ ಅಮ್ಮನಿಗಾಗಿ ಬದುಕುತ್ತಿರುತ್ತಾಳೆ. ದೀಪಾ ಸುಶಿಲಾಳ ವಿದ್ಯಾರ್ಥಿನಿಯಾಗಿರುತ್ತಾಳೆ. ಶಾಲೆಗೆ ಹೊಸದಾಗಿ ಸೇರುವ ಅಮಿತ್ ಬಗ್ಗೆ ವಿಭಾ ಕನಸು ಕಟ್ಟಿಕೊಳ್ಳುತ್ತಾಳೆ. ವಿಭಾ ಕನಸು ನನಸಾಗುವುದಿಲ್ಲ. ಸುಶೀಲಾ ಮೇಡಂ ಅವಳನ್ನು ಎಚ್ಚರಿಸುತ್ತಾಳೆ. ಊಹಿಸದ ಬದುಕು ಸುಶೀಲಾಗೆ ದೊರಕುತ್ತದೆ ಹೇಗೆ ಎನ್ನುವುದು ಇಲ್ಲಿನ ಕಥೆ. ದೀಪಾ ಧನುಷ್ ಹೇಗೆ ಒಂದಾಗಿ ಬದುಕುತ್ತಾರೆ ಎನ್ನುವ ಅಂಶವು ಕುತೂಹಲದಿಂದ ಕೂಡಿದೆ.

“ಮಂದಿ ಮಂದಿ ಎಂದು ಮಂದಿ ನಂಬಲಿ ಹೋದ” ಎನ್ನುವ ಕತೆಯಲ್ಲಿ ತನ್ನವರೆಂದು ಅತಿಯಾಗಿ ನಂಬಿ ಎಲ್ಲವನ್ನು ಕೊಟ್ಟು ಕಷ್ಟದಲ್ಲಿ ಸಿಲುಕಿಕೊಂಡು ಸಾವು ಬದುಕಿನ ಮಧ್ಯೆ ಹೋರಾಡಿದ ಶಾಮರಾಯರ ಕಥೆಯಲ್ಲಿ ಅವರ ಪತ್ನಿ ಸುನಂದ ಅನುಭವಿಸುವ ನೋವು ಅಪಮಾನ ಓದಿದಾಗ ಇಂತಹ ಬಂಧುಗಳು ಇರಬಾರದು ಎನಿಸುತ್ತದೆ. ಕಥೆ ಬಹಳಾ ನೈಜ್ಯವಾಗಿ ಮೂಡಿಬಂದಿದೆ.

ಮಹೇಶನ ತಂಗಿ ಜ್ಯೋತಿಯ ಮದುವೆಯ ಸುತ್ತ ಸುತ್ತುವ ಕಥೆ “ಹೃದಯದರಸಿ”. ಮಹೇಶನ ಹೆಂಡತಿ ಉಮಾಳನ್ನು ಕಂಡರೆ ಕೆಂಡದಂತೆ ಉರಿಯುತ್ತಾ ಅವಳನ್ನು ನಿಂದಿಸಿ ಕಷ್ಟಗಳನ್ನು ಕೊಡುತ್ತಿದ್ದ ಮಹೇಶನ ತಾಯಿ ಕಮಲಮ್ಮನಿಗೆ ಅವರ ತಪ್ಪು ಅರಿವಾಗುತ್ತದೆ. ಅದಕ್ಕೆ ಉಮಾ ಏನು ಮಾಡುತ್ತಾಳೆ ಜ್ಯೋತಿ ಮದುವೆ‌ ಹೇಗಾಗುತ್ತದೆ? ಯಾಕಾಗಿ ಆಗುತ್ತಿರಲಿಲ್ಲ ಎನ್ನುವುದು ಇಲ್ಲಿನ ಕಥೆ.

ಕಾಯಿಲೆಯ ಜೊತೆಗೆ ಹೊರಳಾಡಿ ಗೆದ್ದು ಬದುಕನ್ನು ಕಟ್ಟಿಕೊಳ್ಳುವ ಕಥೆ “ವರ್ಣ”. ಕಥಾ ನಾಯಕಿ ವರ್ಣ ತನ್ನ ಸಂಸಾರದಿಂದ ದೂರಾಗಿ ಬದುಕನ್ನು ನಡೆಸುವ ಪರಿ ಹೆಣ್ಣಿನ ಸ್ವಾಭಿಮಾನ ಧೈರ್ಯ ಹಾಗು ಛಲವನ್ನು ಸಾರುತ್ತದೆ.

“ಹರೆಯ ಉಕ್ಕಿ ಹಕ್ಕಿ ಕರೆದಿದೆ ” ಕಥೆಯಲ್ಲಿ ನಂಬಿಕೆ ಇಟ್ಟು ಅಕ್ಕನ ಮಗನನ್ನು ಮನೆಯಲ್ಲಿ ಇರಿಸಿಕೊಳ್ಳುವ ಪ್ರಭುವಿಗೆ ತನ್ನ ಮಗಳ ಮೇಲೆ ಕೆಟ್ಟ ದೃಷ್ಟಿಯನ್ನು ಇಟ್ಟುಕೊಂಡಿರುವ ಅಕ್ಕನ ಮಗನ ಬಗ್ಗೆ ತಿಳಿದು ಆಘಾತವಾಗುತ್ತದೆ. ಅಕ್ಕನಿಗೆ ತಿಳಿಸಿದರೆ ಮಗ ಅಂಥವನಲ್ಲ ಎಂದು ವಾದ ಮಾಡುತ್ತಾಳೆ. ಅವನನ್ನು ಸರಿದಾರಿಗೆ ತರಲು ಪ್ರಭು ಏನು ಮಾಡುತ್ತಾನೆ ಎನ್ನುವುದು ಇಲ್ಲಿನ ಕಥೆ. ಇಲ್ಲಿ ಪೋಷಕರಿಗೊಂದು ಸಂದೇಶವಿದೆ. ಸ್ತ್ರೀಯರು ವಹಿಸಬೇಕಾದ ಎಚ್ಚರಿಕೆಯ ದಾರಿ ಇದೆ.

ಅಮ್ಮನಾಗುವ ಕನಸು ಕಾಣುವ ವಿಮಾಲಾಳ ಮನದ ತುಮುಲಗಳು, ಮಗುವಿಗಾಗಿ ಹಂಬಲಿಸುವ ಮಾತೃ ಹೃದಯದ ತುಡಿತ ” ತಾಯ್ತನ” ಕಥೆಯ ಕಥಾ ಹಂದರ. ತಾಯ್ತನದ ಸವಿಯನ್ನು ಅನುಭವಿಸುವ ಮಾರ್ಗದಲ್ಲಿ ಅವಳು ಅನುಭವಿಸುವ ನೋವು ನಲಿವುಗಳ ಚಿತ್ರಣ ನೈಜ್ಯತೆಯಿಂದ ಕೂಡಿದೆ. ಬಹಳಾ ಬೇಗೆ ಮನದಾಳಕ್ಕೆ ಇಳಿಯುತ್ತದೆ.

ಆರು ಕಥೆಗಳ ಕಥಾ ನಾಯಕಿಯರು ಹೆಣ್ಣಿನ ದೃಡ ಸಂಕಲ್ಪಕ್ಕೆ ಅವಳ ಸ್ವಾಭಿಮಾನ, ಪ್ರೀತಿ, ವಿಶ್ವಾಸ, ಕ್ಷಮೆ, ಕಾಳಜಿಗೆ ಮಾದರಿಯಾಗಿ ನಿಲ್ಲುತ್ತಾರೆ. ಕಥೆಗಳು ಸಿನಿಮಾ ನೋಡಿದ ಅನುಭವವನ್ನು ನೀಡುತ್ತದೆ. ಆರು ಕಥೆ.. ಆರು ಸಿನಿಮಾ ನೋಡಿದ ಭಾವನೆ ಮೂಡಿಸುತ್ತದೆ. ಮಿಸ್ ಮಾಡ್ಕೋಬೇಡಿ.


  • ಆಶ್ರಿತ ಕಿರಣ್ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW