ಎಸ್ ಶೇಷಾದ್ರಿ ಕಿನಾರ ಆವರ ಕಥಾಸಂಕಲನ “ಅವತಾರ” ದಲ್ಲಿ ಹತ್ತೊಂಬತ್ತು ಕತೆಗಳಿದ್ದು, ಈ ಕೃತಿಗೆ ಹೆಸರಾಂತ ‘ಮಾಸ್ತಿ’ ಪ್ರಶಸ್ತಿಯೂ ಸಂದಿದೆ. ಕತೆಗಾರ ಪ್ರಸನ್ನ ಸಂತೇಕಡೂರು ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಶೇಷಾದ್ರಿ ಕಿನಾರ ಎಂಬ ಅಜ್ಞಾತ ಕಥೆಗಾರರನ್ನ ನಾನು ಬಾಲ್ಯದಿಂದಲೂ ನೋಡುತ್ತಾ ಬೆಳೆದವನು. ನಾನು ಶಿಶುವಿಹಾರಕ್ಕೆ ಸೇರಿದ ದಿನದಿಂದ (೧೯೮೫) ಏಳನೇ ತರಗತಿ ಮುಗಿಸುವವರೆಗೂ ನನ್ನ ಶಾಲೆಗೆ (ಮಹಾತ್ಮ ಗಾಂಧಿ ಪಾರ್ಕ್ ಹಿರಿಯ ಪ್ರಾಥಮಿಕ ಶಾಲೆ, ಶಿವಮೊಗ್ಗ) ಹೊಂದಿಕೊಂಡಿದ್ದ ನಮ್ಮ ಮಕ್ಕಳ ವಿದ್ಯಾ ಸಂಸ್ಥೆಯ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಯಿಸುತ್ತಿದ್ದರು. ಆದರೆ ಅವರೊಬ್ಬ ಕನ್ನಡದ ಅದ್ಭುತ ಕತೆಗಾರರೆಂದು ಇತ್ತೀಚಿನ ದಿನಗಳವರೆಗೂ ತಿಳಿದೇ ಇರಲಿಲ್ಲ ಎಂಬುದು ವಿಪರ್ಯಾಸ. ಆನಂತರವೂ ನನ್ನ ಗೆಳೆಯ ಪರಮೇಶನ ಮನೆಯ ಹತ್ತಿರವೇ ಶಿವಮೊಗ್ಗದ ಬಸವನಗುಡಿಯಲ್ಲಿ ಅವರ ಮನೆ ಇತ್ತು. ಅಲ್ಲಿಯೂ ಅವರನ್ನ ನೋಡಿದ್ದರೂ ಮಾತನಾಡಲಾಗಿರಲಿಲ್ಲ. ಅವರೊಬ್ಬ ಅಜ್ಞಾತ ಕಥೆಗಾರ ಎಂದು ಏಕೆ ಹೇಳುತ್ತಿದ್ದೇನೆಂದರೆ ನಾಡಿನ ಖ್ಯಾತ ಕತೆಗಾರ ಮತ್ತು ವಿಮರ್ಶಕರಾದ ಎಸ್. ದಿವಾಕರ್ ಅವರು ಸಂಗ್ರಹಿಸಿರುವ ಕನ್ನಡದ ಮಹತ್ತರವಾದ ಅತೀ ಸಣ್ಣ ಕತೆಗಳ ಕಥಾಸಂಕಲನ ಒಂದರಲ್ಲಿ ಅವರ “ಚಿಟ್ಟೆ” ಎಂಬ ಉತ್ತಮ ಕಥೆಯೊಂದನ್ನು ಓದಿದ ಮೇಲೆಯೇ ಅವರೊಬ್ಬ ಕಥೆಗಾರ ಎಂದು ತಿಳಿದದ್ದು. ಇಂದು ಅವರ ಹಲವಾರು ಕತೆಗಳನ್ನು ಓದಿ ಚಿಕ್ಕ ಟಿಪ್ಪಣಿಯೊಂದನ್ನು ಇಲ್ಲಿ ಬರೆಯುತ್ತಿದ್ದೇನೆ.
ಇದುವರೆಗೆ ಕಿನಾರರವರು “ಛೇದ”, “ಕಂಡ ಜಗತ್ತು” ಮತ್ತು “ಅವತಾರ” ಎಂಬ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ.
ಇವರ “ಅವತಾರ” ಕಥಾಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ ಕೆ.ವಿ.ತಿರುಮಲೇಶ್, ಕಿನಾರ ಅವರ ಬಗ್ಗೆಯೇ ಈ ರೀತಿ ಹೇಳುತ್ತಾರೆ. “ಯಾವಾಗಲೂ ಕತೆಗಳ ಬಗ್ಗೆ ಧ್ಯೇನಿಸುತ್ತಾ, ಎಲ್ಲರ ಕತೆಗಳನ್ನೂ ಓದುತ್ತಾ, ಕೆಲವೊಮ್ಮೆ ಪ್ರತಿಕ್ರಿಯಿಸುತ್ತಾ, ಸಾಧ್ಯವಾದಾಗ ಲೇಖಕರ ಜೊತೆ ಸಂವಾದಿಸುತ್ತಾ, ತಾವು ಮಾತ್ರ ಶಬ್ದದ ಲಜ್ಜೆಯಲ್ಲಿ ಮುಳುಗಿರುವಂತೆ ಯಾಕಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಒಬ್ಬ ಲೇಖಕನ ಕೊಡುಗೆಯಿರುವುದು ಅವನ ಬರಹಗಳ ಸಂಖ್ಯೆಯಲ್ಲಲ್ಲ, ಗುಣಮಟ್ಟದಲ್ಲಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಾನು ಊಹಿಸುವಂತೆ, ಸೂಕ್ಷ್ಮಸಂವೇದನೆಯ ಕವಿಗಳು ಕವಿತೆ ಬರೆಯಲು ಹಿಂಜರಿಯುವಂತೆ, ಕಥನದ ಮೋಹದಲ್ಲಿರುವ ಕತೆಗಾರರೂ ಕತೆ ಬರೆಯಲು ಅಳುಕುತ್ತಾರೆ. ಬರೆದರೆ ಎಲ್ಲಿ ಕತೆ ಕಳೆದು ಹೋಗುತ್ತದೋ ಎನ್ನುವ ಭಾವ ಅದು”. ತಿರುಮಲೇಶರ ಈ ಮಾತಿನಿಂದ ನಮಗೆ ತಿಳಿಯುವುದು ಏನೆಂದರೆ ಕಿನಾರ ಅವರು ಸುಮಾರು ಐವತ್ತು ವರ್ಷಗಳಲ್ಲಿ ಬರೆದಿರುವದು ಅವರ ಮೂರು ಕಥಾಸಂಕಲನಗಳ ಕತೆಗಳು ಇನ್ನು ಕೆಲವು ಬಿಡಿ ಕತೆಗಳು ಸೇರಿ ಕೇವಲ ಐವತ್ತು ಕತೆಗಳು ಎಂದು ಹೇಳಬಹುದು. ಇನ್ನೊಂದು ಕಾದಂಬರಿ ಬರೆದಿದ್ದರು ಎಂದು ಕೇಳಿದ್ದೇನೆ. ಅದು ಯಾವುದೋ ಕಾರಣಗಳಿಂದ ಪ್ರಕಟವಾಗಿಲ್ಲ.

೧೯೮೧ರಲ್ಲಿ ಪ್ರಕಟವಾಗಿರುವ “ಛೇದ” ಕಿನಾರರ ಮೊದಲ ಕಥಾಸಂಕಲನ. ಇದಕ್ಕೆ ಮುನ್ನುಡಿ ಬರೆದವರು ಕೂಡ ಎಸ್. ದಿವಾಕರ್ ಅವರು. ಈ ಕಥಾಸಂಕಲನದಲ್ಲಿ ಕಿನಾರರವರು ಎಪ್ಪತ್ತರ ದಶಕದಲ್ಲಿ ಬರೆದಿರುವ ಹನ್ನೆರಡು ಕತೆಗಳಿವೆ. ಈ ಸಂಕಲನದ “ಕಿಂಡಿ” ಇವರ ಮೊದಲ ಕತೆಯೆಂದು ಕಾಣುತ್ತದೆ. ೧೯೭೨ರಲ್ಲಿ ಬರೆದಿರುವ ಕಿಂಡಿ ಕತೆಯಲ್ಲಿಯೇ ಕಿನಾರರು ಗೆದ್ದಿದ್ದಾರೆ ಎಂದು ಹೇಳಬಹುದು. ಕಿಂಡಿ ಕತೆಯ ನಾಯಕಿ ವೈಶಾಖಿ. ಅವಳಿಗೆ ಮದುವೆಯಾಗಿದೆ. ಗಂಡ ಊರೂರು ಅಲೆಯುತ್ತಾ ಟೂತ್ ಪೇಸ್ಟ್ ಮಾರುತ್ತಾನೆ. ಅವಳ ಪರಿಸ್ಥಿತಿ ಸ್ವಲ್ಪ ಭಾರತೀಸುತರ “ಎಡಕಲ್ಲು ಗುಡ್ಡದ ಮೇಲಿನ ನಾಯಕಿ”ಯದ್ದಾಗಿದ್ದರೇ ಇನ್ನು ಸ್ವಲ್ಪ ಆಲನಹಳ್ಳಿ ಶ್ರೀಕೃಷ್ಣರ “ಪರಸಂಗದ ಗೆಂಡೆತಿಮ್ಮನ ಮರಂಕಿಯ” ಸ್ಥಿತಿಯಾಗಿರುತ್ತದೆ. ಅವನು ಇದ್ದರೂ ಇಲ್ಲದೇ ಇರುವ ಬದುಕು ಅವಳಿಗೆ ರೂಡಿಯಾಗಿರುತ್ತದೆ. ಅಂತಹ ಒಂದು ದಿನ ವಿರಹಾಗ್ನಿ ಅವಳನ್ನು ಸುಡುತಿರುತ್ತದೆ. ಆ ಸಮಯಕ್ಕೆ ಧೈರ್ಯವಾಗಿ ಸಭ್ಯನಾಗಿ ಪೋಲಿ ಎಂಬಂತಹ ಮಾತುಗಳನ್ನು ಮುಕ್ತವಾಗಿ ಮಾತನಾಡುವ ರಾಮನಾಥನೆಂಬ ಬಾಲಕನನ್ನು ಅವಳು ನಿರೀಕ್ಷಿಸುತ್ತಿರುತ್ತಾಳೆ. ಆದರೆ ಆ ವೇಳೆಗೆ ಬರುವುದು ಹಸಿದ ಭಿಕ್ಷುಕ. ಅವನ ಹೆಂಡತಿ ಮೊದಲೇ ಬೇರೊಬ್ಬನ ಜೊತೆ ಓಡಿಹೋಗಿರುತ್ತಾಳೆ. ಅದು ಇವಳಿಗೆ ತಿಳಿದಿರುವುದಿಲ್ಲ. ಇವಳು ಅವನಿಗೆ ಅನ್ನ ಹಾಕಿದ ಮೇಲೆ ಓಡಿಹೋದ ಹೆಂಡತಿಯನ್ನು ಮತ್ತು ಅವಳ ಪ್ರಿಯಕರನನ್ನು ಇವನು ಕೊಂದಿರುವ ವೃತ್ತಾಂತವನ್ನು ಅವನಿಂದಲೇ ತಿಳಿಯುತ್ತಾಳೆ. ಇವನಿಗೆ ಏಕೆ ಅನ್ನ ಹಾಕಿದೆ ಅಂದುಕೊಳ್ಳುತ್ತಾಳೆ. ಇವಳಿಗೆ ತನ್ನ ಪರಿಸ್ಥಿತಿ ಅರ್ಥವಾಗುತ್ತದೆ. ಅವನ ಹೆಂಡತಿ ಏಕೆ ಓಡಿಹೋದಳು? ಇವಳೇಕೆ ರಾಮನಾಥನನ್ನು ನಿರೀಕ್ಷಿಸುತ್ತಿದ್ದಳು? ಇವು ಉತ್ತರಕ್ಕೆ ನಿಲುಕದ ಪ್ರಶ್ನೆಗಳು. ಮನೆಯ ಮೇಲಿನ ಹಂಚಿನ “ಕಿಂಡಿ”ಯಿಂದ ಬೀಳುವ ಬಿಸಿಲು ಕೋಲು ಅವ್ಯಕ್ತವಾಗಿರುವ ಏನನ್ನೋ ಸಂಕೇತಿಸುವಂತೆ ತೋರುತ್ತದೆ.
ಇದರಲ್ಲಿ “ಉತ್ತಮ ಪುರುಷ” ಎಂಬ ಇನ್ನೊಂದು ಕತೆ ಇದೆ. ಅದರ ಕಥಾನಾಯಕಿ ರೋಹಿಣಿ. ಅವಳಿಗಿನ್ನು ಮದುವೆಯಿಲ್ಲ. ಅವಳ ಮನಸ್ಸು ಸದಾ ಒಳ್ಳೆಯ ಬಾಳ ಸಂಗಾತಿಯನ್ನು ಹುಡುಕುತ್ತಿರುತ್ತದೆ. ಅದೇ ಸಮಯದಲ್ಲಿ ಅವಳ ಒಂದೇ ಕೊಠಡಿಯ ಮನೆಗೆ ಅವಳ ಬಾಸ್ ನವ ದಂಪತಿಗಳಾದ ಪುರುಷೋತ್ತಮ ಮತ್ತು ಚಂದ್ರಿಕಾರನ್ನು ಕೆಲವು ದಿನ ಇರಲು ಕಳಿಸುತ್ತಾನೆ. ಅವರು ನವ ದಂಪತಿಗಳಾದ್ದರಿಂದ ಮಧುಚಂದ್ರದ ಮನಸ್ಥಿತಿಯಲ್ಲಿರುತ್ತಾರೆ. ಅದು ಅವರು ರಾತ್ರಿ ಮಲಗುವಾಗ ಸ್ವಲ್ಪ ಹೆಚ್ಚಾಗಿಯೇ ವ್ಯಕ್ತವಾಗುತ್ತದೆ. ಅವರ ಮಾತುಗಳನ್ನು ಕೇಳಿಸಿಕೊಳ್ಳುವ ರೋಹಿಣಿ ಮನಸಿನಲ್ಲಿ ಬಿರುಗಾಳಿ ಬೀಸುತ್ತದೆ. ಅಂತಹ ಶೃಂಗಾರ ದಾಂಪತ್ಯ ನೋಡಿದ ಮೇಲೆ ಇವಳಿಗೆ ನಾನೊಂದು “ಕ್ಷಾಮ ಪೀಡಿತ ಬಂಜರು ಭೂಮಿ ಅಥವಾ ದೇಶ” ಎಂದು ಅನಿಸುತ್ತದೆ. ಆ ದಂಪತಿಗಳು ಹೋದ ಮೇಲೆ ಹೊರಗಡೆ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆ ಹೂಡಿ ಅಗತ್ಯ ವಸ್ತುಗಳ ಬೆಲೆ ಇಳಿಸಿ ಎಂದು ಮಹಿಳೆಯರ ಗುಂಪೊಂದು ಮುಷ್ಕರದಲ್ಲಿ ಕೂಗುತ್ತಿದ್ದರೆ ಇವಳು “ಗಂಡಿನ ಬೆಲೆ ಇಳಿಸಿ, ನನಗೊಂದು ಗಂಡು ಕೊಡಿಸಿ” ಎಂದು ಕೂಗುತ್ತಿರುತ್ತಾಳೆ. ಗಂಡಿನ ಸಾಂಗತ್ಯವಿಲ್ಲದೇ ನಲುಗಿರುವ ಹೆಣ್ಣಿನ ಮನೋಸ್ಥಿತಿಯನ್ನು ಈ ಕತೆಯಲ್ಲಿ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ, ನಿರೂಪಣೆಯಲ್ಲೂ ಕಿನಾರರವರು ಗೆದ್ದಿದ್ದಾರೆ.
ಇದೆ ಸಂಕಲನದ “ಆಟ” ಕತೆಯಲ್ಲಿನ ಕಥಾನಾಯಕ ಭಕ್ತ. ಅವನೊಬ್ಬ ಬ್ರಹ್ಮಚಾರಿ. ಅವನ ಗೆಳೆಯನ ಮನೆಗೆ ಬರುವ ಮೂರು ವರ್ಷದ ಪಕ್ಕದ ಮನೆಯ ಬಾಲಕಿಯೊಬ್ಬಳು ತನ್ನ ಅಡುಗೆ ಆಟದ ಮೂಲಕ ಸಂಸಾರಸ್ಥ ಉತ್ತಮ ಗೃಹಿಣಿಯೊಬ್ಬಳ ಚಿತ್ರಣವನ್ನು ಅವನ ಮುಂದೆ ಸೃಷ್ಟಿಸುತ್ತದೆ. ಆ ಬಾಲಕಿಯ ಆಟ ಭಕ್ತನಿಗೆ ಮದುವೆಯಾಗಿ ತನ್ನ ಬ್ರಹ್ಮಚರ್ಯವನ್ನು ಕಳೆದುಕೊಳ್ಳಬೇಕೆಂಬ ಭಾವನೆ ಮೂಡಿಸುತ್ತದೆ. ಕೊನೆಗೆ ಆ ಬಾಲಕಿಯ ಅಕ್ಕನನ್ನೇ ಮದುವೆಯಾಗಲು ಭಕ್ತ ನಿರ್ಧರಿಸುತ್ತಾನೆ. ಆದರೆ, ಈ ಕತೆಯಲ್ಲಿ ಬಾಲಕಿಯ ಅಕ್ಕ ನಿರ್ಮಲಳ ಮೇಲೆ ಭಕ್ತನ ಪ್ರೇಮಾಂಕುರವಾಗುವ ಸಮಯದಲ್ಲಿಯೇ ಹಠಾತ್ ಕೊನೆಯಾಗುತ್ತದೆ. ಆದರೆ ಅವಳು ಇವನನ್ನು ಇಷ್ಟಪಟ್ಟಳೇ ? ಇವರಿಬ್ಬರ ನಡುವೆ ಪ್ರೇಮಾಂಕುರವಾಯಿತೇ ? ಎಂಬ ಪ್ರಶ್ನೆಗೆ ಉತ್ತರ ಕೊಡುವುದರಲ್ಲಿ ಕತೆ ಸೋಲುತ್ತದೆ. ಕತೆ ಅಲ್ಲಿ ಅರ್ಧಕ್ಕೆ ನಿಂತುಹೋದ ಹಾಗೆ ಕಾಣಿಸುತ್ತದೆ. ಈ ಕತೆಯನ್ನು ಓದಿದ ಮೇಲೆ ಕಿನಾರರು ಇನ್ನು ಸ್ವಲ್ಪ ವಿಸ್ತರಿಸಬಹುದಿತ್ತೇನೋ ಎಂಬ ಭಾವ ಓದುಗನಿಗೆ ಮೂಡಿಸುತ್ತದೆ.
ಶಿವಮೊಗ್ಗವನ್ನು ಚೆನ್ನಾಗಿ ಬಲ್ಲವರಿಗೆ ಇವರ ಕತೆಗಳು ಶಿವಮೊಗ್ಗ ಅಥವಾ ಸುತ್ತಮುತ್ತ ಹಳ್ಳಿಗಳಲ್ಲಿಯೇ ಸಾಗುವುದನ್ನು ಕಾಣಬಹುದು. ಚಿತ್ತಾಲರ ಹನೇಹಳ್ಳಿಯಂತೆ, ಆರ್.ಕೆ. ನಾರಾಯಣರ ಮಾಲ್ಗುಡಿಯಂತೆ ಕಿನಾರರ ಕತೆಯ ಕೇಂದ್ರ ಬಿಂದು ಶಿವಮೊಗ್ಗ. ಇಲ್ಲಿನ ದೊಡ್ಡ ಬ್ರಾಹ್ಮಣರ ಬೀದಿ, ಗಾಂಧಿ ಬಜಾರು, ಜಯನಗರ, ಬಸವನಗುಡಿ, ರವೀಂದ್ರ ನಗರ, ಮಂಡಗದ್ದೆ, ಕರ್ನಾಟಕ ಸಂಘ ಎಲ್ಲವೂ ಇವರ ಕತೆಗಳಲ್ಲಿ ಆಗಾಗ ಬರುತ್ತವೆ.
“ಕಂಡ ಜಗತ್ತು” ಕಿನಾರರ ಎರಡನೇ ಕಥಾಸಂಕಲನ. ಇದರ ಮುನ್ನಡಿಯನ್ನು ಬರೆದಿರುವವರು ಖ್ಯಾತ ಕವಿ ಎಚ್. ಎಸ್. ವೆಂಕಟೇಶ ಮೂರ್ತಿಯವರು. ಬೆನ್ನುಡಿ ಬರೆದಿರುವವರು ನಾಡಿನ ಇನ್ನೊಬ್ಬ ಖ್ಯಾತ ಸಾಹಿತಿ ರಾಘವೇಂದ್ರ ಪಾಟೀಲರು. ಇಲ್ಲಿ ಹನ್ನೊಂದು ಕತೆಗಳಿವೆ. ಇಲ್ಲಿನ “ಕರಿಯನ ಕತೆ”, “ಎಲ್ಲಿಗೆ”, “ಅಸಂಗತಿಗಳು”, “ವಾರಸುದಾರ”, “ತಿಥಿ”, “ಪ್ರಾಪ್ತಿ” ಕತೆಗಳು ತುಂಬಾ ಉತ್ತಮ ಕತೆಗಳು ಎಂದು ಹೇಳಬಹುದು.
ಕರಿಯನ ಕತೆಯ ನಾಯಕ ಒಬ್ಬ ಬಾಲಕ. ಅವನ ತಾಯಿ ಕೂಲಿ ಮಾಡುವ ಮಹಿಳೆ ಕಾಳಿ. ಕತೆಯ ಶೀರ್ಷಿಕೆಯೇ ಸೂಚಿಸುವಂತೆ ಅವನು ಬಣ್ಣದಲ್ಲಿಯೂ ಕರಿಯ. ಅವನಿಗೆ ಚಲನಚಿತ್ರವೊಂದನ್ನು ನೋಡಬೇಕೆಂಬ ಆಸೆ. ಜೊತೆಗೆ ಗೋಲಿ ಆಡುವುದು ಅವನಿಗೆ ತುಂಬಾ ಇಷ್ಟ. ಕುಡುಕ ಗಂಡನಿಂದ ಬದುಕಿನಲ್ಲಿ ಏನನ್ನೂ ಕಾಣದ ವಿರಹಿ ರಂಗನಾಯಕಿ. ಕತೆಯಲ್ಲಿನ ಕಳನಾಯಕಿ. ಜೊತೆಗೆ ಅವಳಿಗೆ ಓ.ಸಿ. ಆಡುವ ವಿಚಿತ್ರ ಚಟ. ಇಲ್ಲಿ ರಂಗನಾಯಕಿ ಕರಿಯನನ್ನ ಹೇಗೆಲ್ಲಾ ಬಳಸಿಕೊಳ್ಳುತ್ತಾಳೆ ಎಂಬುದು ವಿಪರ್ಯಾಸ. ಕೊನೆಗೆ ರಂಗನಾಯಕಿಯ ಗಂಡ ಆರುಮುಗಂ ಬಂದು ಕರಿಯನಿಗೆ ಚೆನ್ನಾಗಿ ತದುಕಿ ಸಕ್ಕರೆಬೈಲು-ಮಂಡಗದ್ದೆ ಕಾಡಿನಲ್ಲಿ ಬಿಟ್ಟು ಬರುತ್ತಾನೆ. ಕರಿಯ ಅಲ್ಲಿಯೇ ಕಳೆದು ಹೋಗುತ್ತಾನೆ.
“ಎಲ್ಲಿಗೆ” ಕತೆಯಲ್ಲಿ ಕಥಾನಾಯಕನಿಗೆ ಒಂದು ವಿವಾಹ ಅಹ್ವಾನ ಪತ್ರಿಕೆ ಪೋಸ್ಟಿನಲ್ಲಿ ಬಂದಿರುತ್ತದೆ. ಆದರೆ ಆ ಮದುವೆಯ ಗಂಡು ಹೆಣ್ಣಿನ ಹೆಸರುಗಳು ನಮೂದಿಸಿದ್ದರೂ ಅವರು ಯಾರು ಎಂದು ಕಥಾನಾಯಕನಿಗೆ ಗೊತ್ತಾಗುವುದಿಲ್ಲ ಮತ್ತು ನೆನಪಿಗೆ ಹೊಳೆಯುವುದಿಲ್ಲ. ಆದರೂ ಮನಸಿನಲ್ಲಿಯೇ ಮದುವೆಗೆ ಹೊರಡಲು ಸಿದ್ಧನಾಗುತ್ತಾನೆ. ಕತೆಯ ಕೊನೆಗೆ ಅದು ಬೇರೆಯವರಿಗೆ ಬಂದ ಅಹ್ವಾನ ಪತ್ರಿಕೆಯಾಗಿರುತ್ತದೆ. ಅದೇ ಸಮಯಕ್ಕೆ ಇವನಿಗೆ ಟೆಲಿಗ್ರಾಮ್ ಒಂದು ಬಂದಿರುತ್ತದೆ. ಅವರೆಡೂ ಅದಲು ಬದಲಾಗಿ ಅವನ ಅಜ್ಜಿ ಸಾವಿನ ಹಾಸಿಗೆಯ ಮೇಲೆ ಇದ್ದಾರೆ ಬೇಗ ಬಾ ಎಂದು ತುರ್ತು ಸಂದೇಶ ಟೆಲಿಗ್ರಾಮಿನಲ್ಲಿ ಕಳುಹಿಸಿರುತ್ತಾರೆ. ಇಲ್ಲಿ ನಮಗೆ ಡಿ.ವಿ.ಜಿ. ಯವರ ಮಂಕುತ್ತಿಮ್ಮನ ಕಗ್ಗದ ಮದುವೆಗೋ ಅಥವಾ ಮಸಣಕೋ ಎಂಬ ಗೀತೆ ಜ್ಞಾಪಕಕ್ಕೆ ಬರುತ್ತದೆ.
“ಅಸಂಗತಿಗಳು” ಕತೆ ಫ್ರೆಂಚ್ ಲೇಖಕ, ನೋಬೆಲ್ ಪ್ರಶಸ್ತಿ ವಿಜೇತ ಆಲ್ಬರ್ಟ್ ಕಮೂವಿನ “ವ್ಯಭಿಚಾರಿ ಮಹಿಳೆ” ಅಥವಾ “ಚಂಚಲೆ” ಎಂಬ ಕತೆಯನ್ನು ಜ್ಞಾಪಕಕ್ಕೆ ತರುತ್ತದೆ. ಇಲ್ಲಿ ನಿರೂಪಕ ಮಂಡಗದ್ದೆಯಲ್ಲಿರುವ ತನ್ನ ಆತ್ಮೀಯ ಗೆಳೆಯ ಮತ್ತು ಸಂಬಂಧಿಯನ್ನು ನೋಡಲು ಹೋಗುತ್ತಾನೆ. ಆ ಗೆಳೆಯ ಯಾವುದೋ ಗುಪ್ತ ರೋಗದಿಂದ ಹಾಸಿಗೆ ಹಿಡಿದಿರುತ್ತಾನೆ. ಆ ಗೆಳೆಯನ ಹೆಂಡತಿ ಸುಮಿತ್ರ ತನ್ನ ಕಾಮನೆಗಳನ್ನು ನಿರೂಪಕನೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತಾಳೆ. ಆ ಮನೆಯಲ್ಲಿ “ಕರಿಯ” ಕತೆಯ ಕರಿಯ ಕೂಡ ಕೆಲಸಕ್ಕೆ ಬಂದು ಸೇರಿಕೊಂಡಿರುವ ಹಾಗೆ ಕಾಣಿಸುತ್ತದೆ. ಇದು ಆಧುನಿಕ ಮಹಿಳೆಯೊಬ್ಬಳ ಬದುಕಿನ ಆಯ್ಕೆಯನ್ನು ಚೆನ್ನಾಗಿ ತೋರಿಸುವ ಕತೆಯಾಗಿದೆ. ಕಮೂವಿನ ಕತೆಯಲ್ಲೂ ತನ್ನ ಗಂಡ ಅಶಕ್ತನಾಗಿರುವಾಗ ಕಥಾನಾಯಕಿ ಬಸ್ಸಿನಲ್ಲಿ ಕಂಡ ಮಿಲಿಟರಿ ಅಧಿಕಾರಿಯ ಕಡೆ ಆಕರ್ಷಿತಳಾಗಿ ಅವನನ್ನು ಹುಡುಕಿಕೊಂಡು ಹೋಗಿ ತನ್ನ ಕಾಮನೆಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುವ ಪ್ರಸಂಗವಿದೆ.
“ಪ್ರಾಪ್ತಿ” ಜಯಣ್ಣ ಎಂಬ ವಿಧಿಯಾಟದಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬನ ವಿಚಿತ್ರ ಜೀವನದ ಕತೆ. “ತಿಥಿ” ಕತೆಯಲ್ಲಿ ಸಾವಿನ ನಂತರ ನಡೆಯುವ ಬದುಕಿನ ವ್ಯಾಪಾರದ ಚಿತ್ರಣವಿದೆ. ಆದರೆ ಇಲ್ಲಿ ಗಿರಡ್ಡಿ ಗೋವಿಂದರಾಜರ “ಮಣ್ಣು” ಕತೆಯಂತೆ ಸಾವಿನ ತಕ್ಷಣವೇ ನಡೆಯುವ ವ್ಯಾಪಾರವಿಲ್ಲ. ಇಲ್ಲಿ ಆಗಲೇ ಸಾವು ಸಂಭವಿಸಿ ಹತ್ತು ವರ್ಷಗಳಾಗಿವೆ. ಕಾಲ ಎಲ್ಲವನ್ನು ಮರೆಸುತ್ತೆ ಎಂಬುದು ಒಂದು ಕಡೆಯಾದರೆ ವ್ಯಾವಹಾರಿಕ ಜಗತ್ತಿನಲ್ಲಿ ಜೀವಿಸುವ ಜನ ಹತ್ತು ವರ್ಷದ ನಂತರ ವ್ಯಕ್ತಿಯನ್ನು ನೆನೆದು ಅಳುವುದು ತುಂಬಾ ಕಮ್ಮಿಯೇ. ಆ ಕಾರಣದಿಂದ ಆ ಮನೆಯಲ್ಲಿ ಹತ್ತು ವರ್ಷದ ತಿಥಿಯನ್ನು ಸಂಭ್ರಮದಿಂದ ಯಾವುದೇ ವಿಷಾದವಿಲ್ಲದೆ ಆಚರಿಸುತ್ತಿರುತ್ತಾರೆ. ಆ ಮನೆಯ ಯಜಮಾನಿ ಮಾತ್ರ ಯಾವುದೋ ವಿಷಾದದಲ್ಲಿ ತನ್ನ ಗಂಡ ಸತ್ತು ಹತ್ತು ವರ್ಷದ ನಂತರವೂ ಅವನ ನೆನೆಪಿನಲ್ಲಿಯೇ ಜೀವನ ಸಾಗಿಸುತ್ತಿರುವಂತೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ, ಅದೇ ಪಾತ್ರ “ನನಗೆ ನೂರು ಸಲ ನೆನಪು ಮಾಡಿಕೊಂಡರು ಆ ಪುಣ್ಯಾತ್ಮನ ಮುಖ ಜ್ಞಾಪಕಕ್ಕೆ ಬರುತ್ತಾ ಇಲ್ಲ…. ” ಎಂದು ಹೇಳುವ ಪ್ರಸಂಗ ಬರುತ್ತದೆ. ಇದು ಆ ಮುದುಕಿಯ ಮನೋಭಿಲಾಷೆಯನ್ನು ಚೆನ್ನಾಗಿ ತೋರಿಸುತ್ತದೆ.
“ವಾರಸುದಾರ” ಕತೆಯಲ್ಲಿಒಂದು ಕುಟುಂಬದಲ್ಲಿರುವ ಹಿರಿಯ ವ್ಯಕ್ತಿ ಎಲ್ಲಿಗೆ ಹೋದರೂ ಜೊತೆಗೆ ತಮ್ಮ ಕೊಡೆಯನ್ನು ಹಿಡಿದು ಹೋಗುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇಲ್ಲಿ ಡಾ.ಕೆ. ಎಸ್. ನಿಸಾರ್ ಆಹಮದ್ ಅವರ “ಮಾಸ್ತಿ” ಕವಿತೆ ಜ್ಞಾಪಕಕ್ಕೆ ಬರಬಹುದು. ಮಾಸ್ತಿಯವರು ಕೂಡ ಬೆಂಗಳೂರಿನ ಗಾಂಧೀಬಜಾರಿನಲ್ಲಿ ಯಾವಾಗಲೂ ಕೊಡೆ ಹಿಡಿದು ಓಡಾಡುತ್ತಿದ್ದ ದೃಶ್ಯ ಅದರಲ್ಲಿದೆ. ಈ ಕತೆಯ ಅಜ್ಜ ಕೊಡೆಯನ್ನು ಹಿಡಿದು ಓಡಾಡುತ್ತಿದ್ದದ್ದು ಎರಡು ಕಾರಣಕ್ಕೆ ಎಂದು ಹೇಳಬಹುದು. ಒಂದು ಅವರ ಹೆಂಡತಿ ರಾಧಿ ಆ ಕೊಡೆಯ ಮೇಲೆ ಏನನ್ನೋ ಬರೆದಿರುತ್ತಾಳೆ. ಅವಳ ನೆನಪಿಗೆ ಸದಾ ಆ ಕೊಡೆಯನ್ನು ಆ ವೃದ್ದರು ಹಿಡಿದಿರುತ್ತಾರೆ. ಜೊತೆಗೆ ಅದು ಅವರ ಬಾಲ್ಯದ ಗೆಳತಿಯ ಜೊತೆ ಮಲೆನಾಡಿನ ಮಳೆಗಾಲದಲ್ಲಿ ಆ ಕೊಡೆ ಹಿಡಿದು ಓಡಾಡಿದ ನೆನಪು ಅವರಿಗೆ ಸದಾ ನೆನಪಿನಲ್ಲಿದ್ದು ಕಾಡುತ್ತಿರುತ್ತದೆ. ಕತೆಯ ಕೊನೆಗೆ ಆ ಕೊಡೆಗೆ ಸರಿಯಾದ ವಾರಸುದಾರರು ಸಿಗುತ್ತಾರೆ. ಇಲ್ಲಿ ಆ ವೃದ್ಧರ ಪ್ರೇಮದ ಸಂಕೇತವಾಗಿ ಕೊಡೆ ಬರುತ್ತದೆ. ಇಲ್ಲಿ ನಿಮಗೆ ಪಡುಕೋಣೆ ರಮಾನಂದರಾಯರ “ಕೊಡೆಯ ವಿಚಾರ” ಕೂಡ ಜ್ಞಾಪಕಕ್ಕೆ ಬರಬಹುದು.
ಕಿನಾರರ ಇತ್ತೀಚಿನ ಕಥಾಸಂಕಲನ “ಅವತಾರ”ದ ಬಗ್ಗೆ ಹೇಳುವುದಾದರೆ ಇಲ್ಲಿ ಹತ್ತೊಂಬತ್ತು ಕತೆಗಳಿವೆ. ಇವು ಗಾತ್ರದಲ್ಲಿ ಚಿಕ್ಕ ಕತೆಗಳೇ ಆಗಿವೆ. ಈ ಕಥಾಸಂಕಲನಕ್ಕೆ ಕಿನಾರರಿಗೆ ಹೆಸರಾಂತ ಮಾಸ್ತಿ ಪ್ರಶಸ್ತಿಯೂ ಸಿಕ್ಕಿದೆ. ಮೊದಲೇ ತಿಳಿಸಿರುವಂತೆ ಇದರ ಮುನ್ನುಡಿಯನ್ನು ಬರೆದಿರುವವರು ಖ್ಯಾತ ಸಾಹಿತಿ ಕೆ.ವಿ. ತಿರುಮಲೇಶ್. ಇಲ್ಲಿ ತಿರುಮಲೇಶರು “ಕೆಲವೇ ಕತೆಗಳನ್ನು ಬರೆದು ಕನ್ನಡ ಕಥಾಲೋಕದಲ್ಲಿ ಚಿರಸ್ಥಾಯಿಯಾದ ರಾಘವೇಂದ್ರ ಖಾಸನೀಸ, ಬಿ.ಸಿ. ದೇಸಾಯಿ, ಜಿ.ಎಸ್. ಸದಾಶಿವ, ಕೆ. ಸದಾಶಿವ, ರಾಜಲಕ್ಷ್ಮಿ.ಎನ್. ರಾವ್, ಕೊಡಗಿನ ಗೌರಮ್ಮ, ಬಾಗಲೋಡಿ ದೇವರಾಯ, ವೆಂಕಟರಾಜು ಪಾನಸೆ ಅವರಂತೆಯೇ ಸಂಖ್ಯೆಯ ದೃಷ್ಟಿಯಿಂದ ಕಡಿಮೆ ಬರೆದಿದ್ದರೂ ಮೌಲ್ಯದ ದೃಷ್ಟಿಯಿಂದ ದೊಡ್ಡ ಮೊತ್ತದ ಕತೆಗಳನ್ನು ನೀಡಿದ್ದಾರೆ” ಎಂದು ಕಿನಾರರನ್ನು ಕುರಿತು ಹೇಳುತ್ತಾರೆ. ಇದು ಕಿನಾರರು ಕನ್ನಡ ಸಾಹಿತ್ಯಕ್ಕೆ ಉನ್ನತ ಮೌಲ್ಯದ ಕತೆಗಳನ್ನು ಕೊಟ್ಟಿರುವುದನ್ನು ಚೆನ್ನಾಗಿ ತೋರಿಸುತ್ತದೆ. ಜೊತೆಗೆ ಯಾವುದೇ ಪ್ರಸಿದ್ದಿ ಪ್ರಲೋಭನೆಗಳಿಗೂ ಒಳಗಾಗದೇ ನಮ್ಮ ಮುಂದೆಯೇ ಕಂಡು ಕಾಣದಂತೆ ಇರುವ ಕಿನಾರರ ಸ್ವಭಾವಾದ ಬಗ್ಗೆಯೂ ಇಲ್ಲಿ ತಿರುಮಲೇಶ್ ಹೇಳುತ್ತಾರೆ. ಎಪ್ಪತ್ತು ಎಂಬತ್ತರ ದಶಕದಲ್ಲಿ ಬರವಣಿಗೆ ಆರಂಭಿಸಿದ ಇಂದಿನ ಕನ್ನಡದ ಬಹುದೊಡ್ಡ ಸಾಹಿತಿಗಳೆಲ್ಲರ ಜೊತೆ ಕಿನಾರರ ಒಡನಾಟವಿದ್ದರೂ ಅವರೆಂದು ಜನಪ್ರಿಯತೆಯ ಹಿಂದೆ ಬಿದ್ದವರಲ್ಲ. ಅವರ ಸಂಕೋಚ ಸ್ವಭಾವದ ಜೊತೆಗೆ ಕತೆಗಾರ ಮೌನಿಯಾಗಿ ಕತೆಗಳೇ ಮಾತನಾಡಬೇಕೆಂಬ ಅರಿವು ಅವರಲ್ಲಿ ಹೆಚ್ಚಾಗಿ ಕಾಣುತ್ತದೆ. ಇದರಿಂದ ಕನ್ನಡನಾಡಿನಲ್ಲಿಯೇ ಇದ್ದು ಮರಾಠಿ ಕಥಾಸಾಹಿತ್ಯದಲ್ಲಿ ಬಹು ದೊಡ್ಡ ಕತೆಗಾರರಾಗಿದ್ದ ಜಿ. ಎ. ಕುಲಕರ್ಣಿಯವರ ರೀತಿ ಕಿನಾರರು ಯಾರಿಗೂ ಕಾಣದಂತೆ ಅಜ್ಞಾತದಲ್ಲಿರುವ ಕತೆಗಾರ ಎಂದು ಹೊಸ ತಲೆಮಾರಿನ ಲೇಖಕರಿಗೆ ಅನಿಸಲು ಸಾಧ್ಯವಿದೆ.

ಕಿನಾರರ ಇಲ್ಲಿನ ಕತೆಗಳಲ್ಲಿ ಮಧ್ಯಮವರ್ಗದ ಅಥವಾ ಕೆಳವರ್ಗದ ಮುದುಕ ಮುದುಕಿಯರ, ಬಡವರ, ನಿರ್ಗತಿಕರ, ಸೋತವರ, ಏನನ್ನೋ ಕಳೆದುಕೊಂಡು ಹುಡುಕುತ್ತಿರುವವರ ಕತೆಗಳೇ ಹೆಚ್ಚು. ಇಲ್ಲಿನ “ಕೈ ತುತ್ತು”, “ಪಾತ್ರ”, “ಅವತಾರ”, “ತಿಂಡಿಸುಬ್ಬ”, “ತಿನ್ನುವ ಮನುಷ್ಯ”, “ಚಿಟ್ಟೆ” ಅತ್ಯುತ್ತಮ ಕತೆಗಳು ಎಂದು ಹೇಳಬಹುದು.
ಇಲ್ಲಿನ “ಚಿಟ್ಟೆ” ಕತೆ ಅತೀ ಚಿಕ್ಕ ಕತೆಯಾದರೂ ಓದಿದ ಮೇಲೆ ವಾವ್ ಈಗೂ ಕತೆಯನ್ನು ಬರೆಯಬಹುದೇ ಎಂದು ಹೇಳಬಹುದಾದ ಕತೆ. ಇಲ್ಲಿನ ಕಥಾನಾಯಕಿ “ಛೇದ” ಕಥಾಸಂಕಲನದ “ಕಿಂಡಿ” ಕತೆಯ ವೈಶಾಖಿ ಮತ್ತು “ಉತ್ತಮ ಪುರುಷ” ಕತೆಯ ರೋಹಿಣಿಯರನ್ನು ನೆನಪಿಸುತ್ತಾಳೆ. ಒಂದು ಚಿಟ್ಟೆ ಅವಳು ಸ್ನಾನ ಮಾಡುವ ಸಮಯದಲ್ಲಿ ಬಂದು ಏನೆಲ್ಲಾ ಸಂಭವಿಸುತ್ತದೆ ಎಂಬುದೇ ಇಲ್ಲಿನ ಕಥಾವಸ್ತು.
“ಕೈ ತುತ್ತು” ಕತೆಯ ನಾಯಕ ಜಯರಾಮ ಬಡವ. ಒಂದು ಹೊತ್ತು ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಅವನದು. ಮನೆಯಲ್ಲಿ ಹೆಂಡತಿ ಮಕ್ಕಳು ಊಟಕ್ಕೆ ಏನಾದರೂ ಸಿಗುತ್ತದೆಯೋ ಎಂದು ಹಸಿದು ಬಕಪಕ್ಷಿಯಂತೆ ಕಾಯುವ ಜೀವಗಳು. ಅವನದೊಂದು ಹಳೆಯ ಸೈಕಲ್. ಸೈಕಲ್ ಏರಿ ಅವನು ಗಾಂಧೀಬಜಾರಿನಿಂದ ಜಯನಗರದ್ಲಲಿರುವ ಅಕ್ಕನ ಮನೆಗೆ ಹೋಗುತ್ತಾನೆ. ಅಕ್ಕ ತುಂಬಾ ಶ್ರೀಮಂತೆ. ಅವಳು ತನ್ನ ಗಂಡನಿಗೆ ಕಾಣದಂತೆ ಹಣ ಮತ್ತು ದಿನಸಿಗಳನ್ನೆಲ್ಲಾ ಆಗಾಗ ಜಯರಾಮನಿಗೆ ಕೊಡುತ್ತಿರುತ್ತಾಳೆ. ಆ ದಿನ ಸೈಕಲ್ಲಿನಲ್ಲಿ ಹೊರಟ ಜಯರಾಮನಿಗೆ ಊಟ ಸಿಗುತ್ತದೆಯೋ ಇಲ್ಲವೋ ಎಂಬುದೇ ಕತೆ.
“ಅವತಾರ” ಕತೆ ನಡೆಯುವುದು ಕೂಡ ಶಿವಮೊಗ್ಗದ ದೊಡ್ಡ ಬ್ರಾಹ್ಮಣರ ಬೀದಿಯ ಹಿಂದಿನ ಒಂದು ಹಳೆಯ ಬಾವಿಯ ಹತ್ತಿರ. ಇಲ್ಲಿನ ಕಥಾನಾಯಕ ಕಪನೀಪತಿ ಮತ್ತು ಅವನ ಹೆಂಡತಿ ರಂಗನಾಯಕಿ, ದೆವ್ವವಿದೆ ಎಂದು ಸುತ್ತಮುತ್ತಲಿನವರೆಲ್ಲಾ ಅಂದುಕೊಂಡಿದ್ದ ಮನೆಗೆ ಬಾಡಿಗೆಗೆ ಬರುತ್ತಾರೆ. ಆ ಮನೆಯ ಹಿಂದೆ ಒಂದು ಹಾಳು ಬಾವಿ ಇರುತ್ತದೆ. ಆ ಪಾಳುಬಾವಿಯಲ್ಲಿ ಎಷ್ಟೋ ವರ್ಷದಿಂದ ಸುತ್ತ ಮುತ್ತಲಿನ ಜನರ ಬಿಂದಿಗೆ, ಸೌಟು, ತಟ್ಟೆ, ಚೆಂಡುಗಳು ಏನೇನೋ ಬಿದ್ದಿರುತ್ತವೆ. ನಲ್ಲಿ ನೀರಿನ ಸಮಸ್ಯೆ ಸ್ವಲ್ಪ ಹೆಚ್ಚಾದಾಗ ರಂಗನಾಯಕಿ ಆ ಪಾಳು ಬಾವಿಯನ್ನು ಶುದ್ಧ ಮಾಡಿ ಅದರ ನೀರನ್ನೇ ಏಕೆ ಕುಡಿಯಲು ಬಳಸಬಾರದು ಎಂದು ಯೋಚಿಸುತ್ತಾಳೆ. ಅವಳ ಯೋಚನೆಯಿಂದ ಬಾವಿ ಶುದ್ದಿಯಾಯಿತೋ ಅಥವಾ ಖಾಲಿಯಾಯಿತೋ ಎಂಬುದೇ ಕತೆಯ ಸ್ವಾರಸ್ಯ. ಅಲ್ಲಿ ಕಪನೀಪತಿಗೆ ಕೂರ್ಮಾವತಾರದ ದರ್ಶನವಾಗುವುದು ಕತೆಯ ಶೀರ್ಷಿಕೆಗೆ ಕಾರಣವಾಗುತ್ತದೆ, ಅದೇ ಈ ಕಥಾಸಂಕಲನದ ಶೀರ್ಷಿಕೆಯಾಗಿದೆ.
೧೯೭೦-೮೦ ರ ದಶಕದಲ್ಲಿ ಕನ್ನಡದ ಹಲವಾರು ಸಾಹಿತಿಗಳಿಗೆ ಮಾಯಾವಾಸ್ತವ (Magical realism) ಮತ್ತು ಅಸಂಗತವಾದ( Absurdism) ಹೆಚ್ಚು ಪ್ರಭಾವಿಸಿದ್ದ ಕಾಲ. ಇದಕ್ಕೆ ಮುಖ್ಯ ಕಾರಣ ಕೊಲಂಬಿಯಾದ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಸ್ ಮತ್ತು ಆಲ್ಬರ್ಟ್ ಕಮೂವಿನ ಪ್ರಭಾವ ಬಹಳ ಇತ್ತು. “ಪಾತ್ರ” ಕತೆ ಅಸಂಗತವಾದಕ್ಕೆ ಚೆನ್ನಾಗಿ ಒಪ್ಪುತ್ತದೆ. ರಾಜಾರಾಯರಿಗೆ ಮದುವೆ ಮನೆಯಲ್ಲಿ ಸಿಗುವ ರಾಧಾಬಾಯಿ ಮೊದಲೇ ಪ್ರೇಯಸಿಯಾಗಿದ್ದಳೇ? ಅಥವಾ ಅವಳ ಭ್ರಮೆಯೇ? ತಿಳಿಯುವದಕ್ಕೆ ಕತೆಯನ್ನೇ ಓದಬೇಕು. “ಚಿಟ್ಟೆ” ಕತೆಯಲ್ಲಿ ಮಾಯಾವಾಸ್ತವವನ್ನು ಕಾಣಬಹುದು. ಇಲ್ಲಿ ನಾಯಕಿಯ ದೇಹದ ಮೇಲೆ ಬಂದು ಕೂರುವ ಚಿಟ್ಟೆ ಸಂಪೂರ್ಣ ಕತೆಯನ್ನು ಆವರಿಸಿದೆ. ಆ ಚಿಟ್ಟೆ ಎಲ್ಲಿಂದ ಬಂತು? ಏಕೆ ಬಂತು? ಅದು ಗಂಡು ಚಿಟ್ಟೆಯೇ? ಇದನ್ನು ತಿಳಿಯಲು ಕತೆಯನ್ನು ಓದಬೇಕು.
“ತಿಂಡಿಸುಬ್ಬ” ಮತ್ತು “ತಿನ್ನುವ ಮನುಷ್ಯ” ಎರಡು ಬೇರೆ ಬೇರೆ ಕತೆಗಳಾದರೂ ಒಂದೇ ಕತೆಯೆಂಬ ಭಾವ ಮೂಡುವ ಸಂಭವವಿದೆ. ತಿಂಡಿಸುಬ್ಬ ತಿನ್ನುವುದಕ್ಕಾಗಿಯೇ ಹುಟ್ಟಿರುವ ಮನುಷ್ಯನೊಬ್ಬನ ಕತೆ. ಅವನ ರೂಮಿಗೆ ಬರುವ ಬೆಕ್ಕುಗಳು ಅವನ ಬದುಕಿಗೆ ಒಂದು ಉದ್ದೇಶವನ್ನು ಕೊಡುತ್ತವೆ. ತಿನ್ನುವ ಮನುಷ್ಯ ಕತೆಯ ನಾಯಕ ತಿಂಡಿಸುಬ್ಬನ ಹಾಗೆ ಭೀಮಾಕಾಯದವನು. ಜೊತೆಗೆ ಡೊಳ್ಳು ಹೊಟ್ಟೆ ಬೇರೆ. ಇವನು ಮೊದಮೊದಲು ದೈಹಿಕವಾಗಿ ಹೆಚ್ಚು ಹೆಚ್ಚು ಆಹಾರವನ್ನು ತಿನ್ನುತ್ತಿರುತ್ತಾನೆ. ಬರಬರುತ್ತಾ ಅದು ಹೆಚ್ಚಾಗಿ ಕತೆಯ ಕೊನೆಗೆ ಅವನು ಲಂಚ ತಿಂದು ಮಹಾ ಭ್ರಷ್ಟನಾಗುವುದನ್ನು ಇಲ್ಲಿ ಮಾರ್ಮಿಕವಾಗಿ ಚಿತ್ರಿಸಿಲಾಗಿದೆ. ಇಲ್ಲಿನ ಎಲ್ಲಾ ಪಾತ್ರಗಳು ನಮ್ಮ ಮುಂದೆಯೇ ಓಡಾಡುತ್ತಿರುವ ಪರಿಚಯದ ಜೀವಂತ ವ್ಯಕ್ತಿಗಳನ್ನು ಅಥವಾ ಅವರ ಶವವನ್ನು ತಂದು ನಿಲ್ಲಿಸುತ್ತವೆ.
ರಾಘವೇಂದ್ರ ಪಾಟೀಲರು “ಕಂಡ ಜಗತ್ತು” ಕಥಾ ಸಂಕಲನದ ಬೆನ್ನುಡಿಯಲ್ಲಿ “ಈ ಕತೆಗಳು ನಮ್ಮನ್ನು ಅಜ್ಞಾತ ಲೋಕದೊಳಗೆ ನಡಸಿಕೊಂಡು ಒಯ್ಯುತ್ತವೆ. ಈ ಅಜ್ಞಾತ ಲೋಕದ ಅಂಶಗಳು ಮನುಷ್ಯ ಪ್ರಪಂಚದ ಸರಕುಗಳೇ ಆಗಿರುವುದು ಒಂದು ಚೋದ್ಯದ ಸಂಗತಿ ಎಂದು ಹೇಳುತ್ತಾರೆ. ಈ ಕಥೆಯೊಳಗಿನ ಲೋಕದಲ್ಲಿ ಸಾಗುತ್ತಿರಬೇಕಾದರೆ ನಮ್ಮ ಎದೆಯೊಳಗೆ ಮನೆಮಾಡಿದ ಮೋಹ-ಮದ-ಮತ್ಸರಾದಿಯಾಗಿ ಏನೆಲ್ಲಾ ಅವಮಾನವೀಯ ವಿಕಾರಗಳು ಹೊರಬಂದು ಶೂರ್ಪನಖಗಳಾಗಿ ನಮ್ಮನ್ನು ಎದುರುಗೊಳ್ಳುತ್ತವೆ. ಕ್ರೂರ ಮೃಗಗಳಾಗಿ ಅಣಕಿಸುತ್ತವೆ”. ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಕತೆಯ ಪಾತ್ರಗಳು ನಮಗೆ ತೀರ ಪರಿಚಿತರಂತೆ ಇದ್ದರೂ ನಮ್ಮನ್ನು ನಿಗೂಢ ಜಗತ್ತಿನೊಳಗೆ ಕರೆದುಕೊಂಡು ಹೋಗುತ್ತವೆ.
ಶೇಷಾದ್ರಿ ಕಿನಾರರ ಕತೆಗಳನ್ನೆಲ್ಲಾ ಓದಿದ ಮೇಲೆ ಯಾರದೋ ನಿಗೂಢ ಬದುಕಿನೊಳಗೆ ಹೋಗಿ ಹೊರಬಂದ ಅನುಭವವೂ ಕೂಡ ಆಗಬಹುದು.
ನಾನು ಕೂಡ ಈ ಕತೆ ನಡೆಯುವ ಶಿವಮೊಗ್ಗದ ಎಲ್ಲಾ ಜಾಗಗಳಲ್ಲಿ ಓಡಾಡಿರುವುದರಿಂದ ಈ ಕತೆಗಳು ನನಗೇ ಇನ್ನು ಹೆಚ್ಚು ಆಪ್ತವೆನಿಸುತ್ತವೆ. ಇವರ ಕತೆಗಳಲ್ಲಿ ಮಾಯಾವಾಸ್ತವ ಮತ್ತು ಅಸಂಗತವಾದದ ಜೊತೆಗೆ ಫ್ಯಾಂಟಸ್ಸಿಯನ್ನು ಕಾಣಬಹುದು. ನಾನಂತೂ ಅವರ ಕತೆಯ ದೊಡ್ಡ ಅಭಿಮಾನಿಯೇ ಆಗಿಬಿಟ್ಟಿದ್ದೇನೆ. ಇಲ್ಲಿನ ಕೆಲವು ಕತೆಗಳು ಪುನರಾವರ್ತಿತ ಎಂಬ ಭಾವವನ್ನು ಸ್ವಲ್ಪ ಮಟ್ಟಿಗೆ ನೀಡಿದರೂ ಇವೆಲ್ಲಾ ಬೇರೆಯ ಘಟನೆಯನ್ನು ಮತ್ತು ಅರ್ಥವನ್ನು ಕೊಡುತ್ತವೆ. ಇಲ್ಲಿನ ಕತೆಗಳು ಎಪ್ಪತ್ತು, ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿಯೇ ಹೆಚ್ಚಾಗಿ ಬರೆದಿರುವುದರಿಂದ ಜಾಗತೀಕರಣದ ನಂತರದ ಇಪ್ಪತ್ತೊಂದನೆಯ ಶತಮಾನದ ಓದುಗನಿಗೆ ಸ್ವಲ್ಪ ಹಳೆಯ ವಾತಾವಾರಣವನ್ನು ಕೊಡುತ್ತವೆ. ಕಿನಾರರು ಆಧುನಿಕ ಮನುಷ್ಯನ ಸಮಕಾಲೀನ ಸಮಸ್ಯೆಯ ಕಡೇ ಹೆಚ್ಚು ಗಮನಕೊಟ್ಟರೆ ಇನ್ನು ಕತೆಗಳು ಹೊಸ ಓದುಗರಿಗೆ ತಲುಪಲು ಯಶಸ್ವಿಯಾಗುತ್ತಾರೆಂಬುದು ನನ್ನ ಭಾವನೆ. ಜೊತೆಗೆ ಬರವಣಿಗೆಯ ವೇಗವನ್ನು ಸ್ವಲ್ಪ ಹೆಚ್ಚಿಸಿಕೊಂಡರೆ ಕಿನಾರರಿಂದ ಇನ್ನು ಹೆಚ್ಚು ಕತೆಗಳು ಮತ್ತು ಕಥಾಸಂಕಲನಗಳು ಮೂಡಿಬರಬಹುದು. ಮಾಸ್ತಿ ಪ್ರಶಸ್ತಿ ಪಡೆದಿದ್ದಕ್ಕಾಗಿ ಅವರನ್ನು ಮತ್ತೊಮ್ಮೆ ಅಭಿನಂದಿಸುತ್ತ ಅವರಿಗೆ ಇನ್ನು ಹೆಚ್ಚು ಪ್ರಶಸ್ತಿಗಳು ಜೊತೆಗೆ ಜನ ಮನ್ನಣೆಯೂ ಸಿಗಲಿ ಎಂದು ಆಶಿಸುತ್ತೇನೆ.
- ಪ್ರಸನ್ನ ಸಂತೇಕಡೂರು – ಮೈಸೂರು
