ಏಕೆ ಬರೆಯುವೆ ಕವಿತೆ ಜೀವವಿರದ ಪದಗಳಲಿ?…ಆತ್ಮ ಝೇಂಕರಿಸದ ಒರಟು ಹಾಳೆಗಳಲಿ!…ಕವಿ ಟಿ.ಪಿ.ಉಮೇಶ್ ಅವರ ಸೊಗಸಾದ ಸಾಲುಗಳು ಓದುಗರಿಗಾಗಿ, ಮುಂದೆ ಓದಿ…
ಬದುಕಲಾಗದ ಕವಿತೆಗಳ ಬರೆಯುವುದೇಕೆ?
ಅನುಭವಗಳಿರದ ಪದಗಳ ಹಡೆಯುವುದೇಕೆ?
ಹೊನ್ನ ಕಿರಣಗಳಿಗೆ ಎದೆಯೊಡ್ಡಿ ಹೀರಿಕೊಳ್ಳದೆ;
ಬೆಟ್ಟ ತುದಿಗಳ ಚುಂಬಿಸಿ ತಬ್ಬಿ ಉನ್ಮಾದಗೊಳ್ಳದೆ;
ಗಾಳಿ ಕೆನ್ನೆಗಳ ನೇವರಿಸುತ್ತಾ ಚೇತನಗೊಳ್ಳದೆ;
ಏಕೆ ಬರೆಯುವೆ ಕವಿತೆ ಜೀವವಿರದ ಪದಗಳಲಿ?
ಆತ್ಮ ಝೇಂಕರಿಸದ ಒರಟು ಹಾಳೆಗಳಲಿ!
ಉದ್ವಿಗ್ನ ಕಡಲ ಅಲೆಗಳಲಿ ಹೃದಯ ತೇಲಿಸದೆ;
ಭೂ ಒಡಲ ಕಂಪನಗಳಿಗೆ ಕರುಳುಗಳ ತಾಕಿಸದೆ;
ಉಲ್ಕಾಪಾತದ ಬಾಣಲೆಯಲಿ ಮೆದುಳ ಕುದಿಸದೆ;
ಬರೆವೆಯೇಕೆ ಕವಿತೆ ಪಕ್ವಗೊಳದ ಪದಗಳಲಿ?
ಬದುಕು ಕಾಣಿಸದ ಗಣಕದ ಪುಟಗಳಲಿ!
ಗಗನದ ಅಂಗಳದಿ ಆಡಿ ಬೆವರ ಮನೆ ಮಾಡದೆ;
ತಾರೆಗಳ ತೋಟದಿ ಪವಡಿಸಿ ಕನಸ ಹೂವರಳದೆ;
ಹಗಲಿರುಳುಗಳ ಒರಟು ನಡುಗಳ ಮೀಟದೆ;
ಬರೆಯುವುದೇ ಕವಿತೆ ಕಣ್ಣುಗಳಿರದ ಪದಗಳಲಿ?
ಬಣ್ಣಗೂಡಿಸದ ಮುರಿವ ಹಲಗೆಗಳಲಿ!
ನಿರ್ಭಾವದಿ ದುಡಿವ ಹಣೆ ತೋಳುಗಳ ರಮಿಸದೆ;
ನಿಸ್ತೇಜ ಭವಿಷ್ಯದ ಭರವಸೆಯ ಬೆನ್ನ ನೇವರಿಸದೆ;
ಬೆಳಗು ರಾತ್ರಿಯ ಸಚೇತನ ಕುಚಗಳ ಮರ್ಧಿಸದೆ;
ಹೇಗೆ ಬರೆವೆ ಕವಿತೆ ಮೂಕವಾದ ಪದಗಳಲಿ?
ಬೆಳಕು ಒಂದಿನಿತು ಪ್ರತಿಫಲಿಸದ ಮನಗಳಲಿ!
ಬದುಕಲಾಗದ ಕವಿತೆಗಳ ಬರೆಯುವುದೇಕೆ?
ಅನುಭವಿಸದ ಪದಗಳನು ಹೆರುವುದೇಕೆ?
- ಟಿ.ಪಿ.ಉಮೇಶ್ (ಸಹಶಿಕ್ಷಕರಾಗಿ ವೃತ್ತಿ ನಿರ್ವಹಿಸುತ್ತ ಕಥೆ, ಕವನಗಳನ್ನು ಬರೆಯುವ ಹವ್ಯಾಸವುಳ್ಳವರು. ‘ಫೋಟೊಕ್ಕೊಂದು ಫ್ರೇಮು’, ‘ನನ್ನಯ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್’, ‘ಅಪ್ಪನು ಕೊಡಿಸಿದ ಮೊದಲ ಪುಸ್ತಕ’, ‘ವಚನವಾಣಿ’, ‘ವಚನಾಂಜಲಿ’, ‘ದೇವರಿಗೆ ಬೀಗ’ ಕೃತಿಗಳನ್ನು ಪ್ರಕಟಿಸಿದ್ದಾರೆ), ಚಿತ್ರದುರ್ಗ.
