ಯಾವ ಜಾತಿ, ಧರ್ಮಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಡು ರಸ್ತೆಯಲ್ಲಿ ಕಿತ್ತಾಡುವುದು ಸರಿಯೇ? ಎಲ್ಲದಕ್ಕಿಂತ ಮಿಗಿಲಾದದ್ದು ಮಾನವೀಯತೆ, ಅದನ್ನೇ ಮರೆತು ಮೃಗಗಳಂತೆ ಬದುಕುವ ರೀತಿ ಸರಿಯಲ್ಲ. ತಪ್ಪದೆ ಮುಂದೆ ಓದಿ…
ಅಪ್ಪ- ಅಮ್ಮ, ನನ್ನ ಮಕ್ಕಳನ್ನು ಕರಕೊಂಡು ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ನಡೆಯುತ್ತಿದ್ದ ರಂಗ ಸಂತೆ ಕಾರ್ಯಕ್ರಮಕ್ಕೆ ಹೊರಟ್ಟಿದ್ದೆ. ಐದು ಜನಕ್ಕೆ ಒಂದು ಟ್ಯಾಕ್ಸಿ ಸಾಕು ಅಂದುಕೊಂಡು ಒಂದು ತಾಸಿನಿಂದ ಮೊಬೈಲ್ ನಲ್ಲಿ ಬುಕ್ ಮಾಡಲು ನೋಡಿದೆ. ಯಾವುದು ಬುಕ್ ಆಗಲಿಲ್ಲ. ಕಾರ್ಯಕ್ರಮಕ್ಕೆ ತಡವಾಗುತ್ತೆ ಎಂದು ಭಾವಿಸಿ ಎರಡು ಆಟೋ ಮಾಡೋಣ ಅಂತ ಬುಕ್ ಮಾಡಲು ಹೊರಟೆ. ನನ್ನ ಹಣೆಬರಹಕ್ಕೆ ಒಂದೇ ಆಟೋ ಬುಕ್ ಆಗಿ ಮನೆ ಬಾಗಿಲಿಗೆ ಬಂದು ನಿಂತಿತ್ತು. ತಲೆ ಬಿಸಿ ಆಯಿತು. ಆಟೋದಲ್ಲಿ ಮೂರು ಜನರಿಗೆ ಮಾತ್ರ ಕೂರೋದಕ್ಕೆ ಅವಕಾಶವಿದೆ. ನಾವು ಐದು ಜನ. ಇನ್ನೊಂದು ಆಟೋ ಬುಕ್ ಮಾಡೋಕೆ ಹೋದೆ. ಒಂದೇ ಒಂದು ಆಟೋ ಕೂಡಾ ಬುಕ್ ಆಗಲಿಲ್ಲ. ಚಿಂತೆ ಶುರುವಾಯ್ತು. ನನ್ನ ಟೆನ್ಶನ್ ನೋಡಿ ಆಟೋ ಚಾಲಕ ನೀವು ಒಪ್ಪೋದಾದ್ರೆ ನನ್ನ ಆಟೋದಲ್ಲಿಯೇ ಐದು ಜನಕ್ಕೆ ಕೂರಸ್ಕೊಂಡು ಹೋಗ್ತೀನಿ ಅಂದ. ಕಾರ್ಯಕ್ರಮ ಶುರುವಾಗುವ ಸಮಯ. ತಡವಾಗ್ತಿದೆ ಎನ್ನುವ ಆತಂಕದಲ್ಲಿ “ನೋಡಪ್ಪ, ಐದು ಜನ ಆಟೋದಲ್ಲಿ ಹೇಗೆ ಆಗುತ್ತೆ. ಪೊಲೀಸ್ ಹಿಡೀತಾರೆ, ಬೇಡ. ಅದು ಅಲ್ದೇ ನನ್ನ ಒಬ್ಬ ಮಗನನ್ನು ಮುಂದೆ ಕೂರಸಕೊಂಡು ಗಾಡಿ ಓಡಸ್ತೀನಿ ಅಂತೀಯಾ, ಅವನಿಗೆ ಆ ತರ ಕೂತು ಅಭ್ಯಾಸವಿಲ್ಲ, ಕೈ ಜಾರಿದ್ರೆ ಬೇಡ.ಇನ್ನೊಂದು ಆಟೋ ಟ್ರೈ ಮಾಡ್ತೀನಿ” ಅಂದೆ. ಆಟೋದವನು ಏನ್ ಮಾಡಿದ್ರೂ ಬಿಡಲಿಲ್ಲ. ಏನೋ ದೇವರ ಮೇಲೆ ಭಾರ ಹಾಕಿ ಆಟೋ ಹತ್ತಿದ್ವಿ. ಹಿಂದೆ ನಾನು, ಅಪ್ಪ – ಅಮ್ಮ, ನನ್ನ ಮೇಲೆ ಒಬ್ಬ ಮಗ ಕೂತ್ರೆ, ಇನ್ನೊಬ್ಬ ಮಗ ಆಟೋ ಚಾಲಕನ ಪಕ್ಕದಲ್ಲಿ ಕೂತ. ನಾನು ನನ್ನ ಮಗನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದೆ. ನನ್ನ ಮಗ ಆಗಾಗ ಹಿಡ್ಕೋಬೇಡ ಅಂತ ಕೈಯಲ್ಲಿಯೇ ತಳ್ಳುತ್ತಿದ್ದ. ಹೆತ್ತ ಕರಳು ಭಯಕ್ಕೆ ಮತ್ತೆ ಮತ್ತೆ ಅವನ ಕೈ ಹಿಡಿಯುತ್ತಿದ್ದೆ. ಆಟೋ ಚಾಲಕ ಗಾಡಿ ಓಡಿಸುತ್ತಲೇ ನನ್ನ ಆತಂಕವನ್ನು ಗಮನಿಸುತ್ತಿದ್ದ ಮಧ್ಯೆ ಮಧ್ಯೆದಲ್ಲಿ “ಮೇಡಂ, ಭಯ ಬೇಡ. ನಾನು ನಿಧಾನಕ್ಕೆ ಹೋಗ್ತೀನಿ. ಟೆನ್ಶನ್ ತಗೋಬೇಡಿ”… ಅನ್ನುತ್ತಿದ್ದ. ಆಟೋ ಚಾಲಕ ನಿಧಾನಕ್ಕೆ ಹೊರಟಿದ್ದರೂ ನನಗೆ ಕಲಾಗ್ರಾಮ ಮುಟ್ಟಿದ್ರೆ ಸಾಕಪ್ಪಾ ಅನ್ನಿಸಿ ಬಿಟ್ಟಿತು. ರಸ್ತೆಯಲ್ಲಿ ಪೊಲೀಸಪ್ಪಾ ಇದ್ದಾರೋ ಇಲ್ವೋ ಅಂತ ನೋಡಿ ಗಾಡಿಗಳ ಮಧ್ಯೆ ನುಗ್ಗುತ್ತಿದ್ದ. ನಿಯಮ ಉಲ್ಲಂಘನೆಗೆ ನಾನು ಸಹಕರಿಸುತ್ತಿದ್ದೇನೆ ಎಂದು ಮನಸ್ಸು ಬಾಯಿಗೆ ಬಂದಂತೆ ನನ್ನನ್ನು ಬೈಯುತ್ತಿತ್ತು. ನಾಚಿಕೆಯಿಂದ ಕೂತಿದ್ದೆ.
ಅಂತೂ ಇಂತೂ ಚಾಲಕ ಕಲಾಗ್ರಾಮ ಮುಟ್ಟಿಸಿದಾಗ ಬಿಗಿಯಾಗಿ ಹಿಡಿದಿದ್ದ ಉಸಿರನ್ನು ನಿಧಾನಕ್ಕೆ ಬಿಟ್ಟೆ. ಇಳಿಯುವಾಗ ಚಾಲಕನಿಗೆ ಕಾಲ್ ಬಂತು ಉರ್ದುವಿನಲ್ಲಿ ಮಾತಾಡ ತೊಡಗಿದ. ಅದನ್ನು ಕೇಳಿ ಚಾಲಕ ಮುಸ್ಲಿಂ ಧರ್ಮದವನು ಅಂತ ಗೊತ್ತಾಯ್ತು. ಆಟೋದಿಂದ ಕೆಳಗೆ ಇಳಿದು ಧನ್ಯವಾದ ಹೇಳಿ, ಸರಿಯಾದ ಸಮಯಕ್ಕೆ ಕರಕೊಂಡು ಬಂದಿಯಪ್ಪಾ…ಅಂತ ಹೆಚ್ಚು ದುಡ್ಡು ಕೊಡೋಕೆ ಹೋದೆ. ಆ ಚಾಲಕ ಬೇಡ ಮೀಟರ್ ದುಡ್ಡಷ್ಟೇ ಕೊಡಿ ಅಂದ. ಆಶ್ಚರ್ಯದ ಜೊತೆಗೆ ಸಂತೋಷವೂ ಆಯಿತು. “ಒಳ್ಳೇದಾಗ್ಲಿ, ಟ್ಯಾಕ್ಸಿ ಕೊಳ್ಳುವಷ್ಟು ದುಡ್ಡು ಮಾಡು” ಅಂತ ಶುಭ ಹಾರೈಸಿ ಮೀಟರ್ ಮೇಲೆ 100 ರೂಪಾಯಿ ಜಾಸ್ತಿಯೇ ಹಣ ಕೊಟ್ಟು ಕಳುಹಿಸಿದೆ.
ಮಲ್ಲತ್ತಹಳ್ಳಿಯಲ್ಲಿ ಕಾರ್ಯಕ್ರಮವೆಲ್ಲ ಮುಗಿಸಿ ಮನೆಗೆ ಹೊರಟು ನಿಂತಾಗ ರಾತ್ರಿ 8.30 ಆಗಿತ್ತು. ಬ್ಯಾಗ್ ನಲ್ಲಿದ್ದ ಮೊಬೈಲ್ ತೆರೆದು ಮನೆಯತ್ತ ಹೊರಡಲು ಟ್ಯಾಕ್ಸಿ ಬುಕ್ ಮಾಡಲು ನೋಡಿದೆ. ಹತ್ತು ಹದಿನೈದು ನಿಮಿಷವಾದ ಮೇಲೆ ಒಂದು ಟ್ಯಾಕ್ಸಿ ಬುಕ್ ಆಯಿತು. ಅಬ್ಬಾ…ಟ್ಯಾಕ್ಸಿ ಸಿಗ್ತಲ್ಲ ಅಂತ ಕಲಾಗ್ರಾಮದೊಳಗೆ ಎಲ್ಲರನ್ನು ಕೂರಿಸಿಕೊಂಡು ಕಾಯುತ್ತಾ ಕೂತಿದ್ದೆ. 15 ನಿಮಿಷವಾದರೂ ಟ್ಯಾಕ್ಸಿ ಡ್ರೈವರ್ ಬರಲಿಲ್ಲ, ತಡವಾಯ್ತು ಅಂತ ಕರೆ ಮಾಡಿದೆ. ಟ್ಯಾಕ್ಸಿ ಚಾಲಕ ಕರೆ ಸ್ವೀಕರಿಸಿ “ಇದು ಎಲ್ಲಿದೆ? ಯಾವ ಏರಿಯಾದಲ್ಲಿದೆ?”… ಸಿಡುಕುತ್ತಾ ಪ್ರಶ್ನೆ ಕೇಳೋಕೆ ಶುರು ಮಾಡಿದ. ನಾನು ತಾಳ್ಮೆಯಿಂದ ಹೀಗಿಗೆ ಅಂತ ಹೇಳಿ ಕರೆ ಕಟ್ ಮಾಡಿದೆ. ಸ್ವಲ್ಪ ಹೊತ್ತಾದ್ಮೇಲೆ ಚಾಲಕನೇ ಕಾಲ್ ಮಾಡಿ “ಕಲಾಗ್ರಾಮದ ದಾರಿ ಎಲ್ಲಿದೆ?”…ಎಂದ. ನಾನು ಅವಾಗಲೂ ತಾಳ್ಮೆಯಿಂದ ಉತ್ತರಿಸಿದೆ. “ಓಹ್… ಲೈಟ್ ಹಾಕಿದ್ದಾರಲ್ವಾ… ಒಳಗೆ ಬರಬೇಕಾ?…ನೀವೇ ಹೊರಗಡೆಯವರೆಗೂ ನಡ್ಕೊಂಡು ಬರೋಕೆ ಆಗೋಲ್ವಾ?… ಛೇ”… ಅಂದ. ಸಿಟ್ಟು ಸ್ವಲ್ಪ ಬಂತು ಆದ್ರೂ ತಾಳ್ಮೆಯಿಂದ “ನಾನು ನಡೀತೀನಿ, ವಯಸ್ಸಾದವರು ಇದ್ದಾರೆ, ಅವರಿಗೆ ನಡಿಯೋಕೆ ಆಗೋಲ್ವಲ್ಲಪ್ಪಾ” ಅಂದೆ. ಸಿಡಿ ಮಿಡಿ ಮಾಡುತ್ತಾ ಬಂದ. ಬಂದ್ಮೇಲೆ ಓ ಟಿ ಪಿ ಹೇಳಿ ಅಪ್ಪ, ನಾನು ಮೊದಲು ಕೂತೇವು. ಮಕ್ಕಳು ಮತ್ತು ಅಮ್ಮ ಇನ್ನೇನು ಕೂರಬೇಕಿತ್ತು. ಚಾಲಕ ಕಿರಿಕ್ ಶುರು ಮಾಡಿದ. ಕಾರ್ ಲ್ಲಿ ನಾಲ್ಕೇ ಜನ ಕೂತ್ಕೋಬೇಕು, ಐದು ಜನ ಆಗೋಲ್ಲ ಅಂದ.
ಆಟೋದಲ್ಲಿ ಬೇಡ ಬೇಡ ಅಂದ್ರು ಆ ಆಟೋ ಚಾಲಕ ಐದು ಜನನ್ನು ಬಿಡದೇ ಕೂರಿಸಿಕೊಂಡು ಬಂದ. ಈ ಟ್ಯಾಕ್ಸಿ ಮನುಷ್ಯ ಆಗೋಲ್ಲ ಅಂತ ಗುರ್ ಗುರ್ ಮಾಡ್ತೀದ್ದಾನಲ್ಲ ಅಂತ ಒಂದು ಕ್ಷಣ ವಿಚಿತಳಾದೆ. ಆಮೇಲೆ ತಾಳ್ಮೆ ಕಳೆದುಕೊಳ್ಳದೆ ಹೇಳಿದೆ “ನೋಡು, ನಿನ್ನ ಟ್ಯಾಕ್ಸಿಗೆ ನಾಲ್ಕೆ ಜನ ಬೇಕು ಅಂದ್ರೆ, ಮಕ್ಕಳನ್ನ ಬಿಟ್ಟಿ ಹತ್ತೋಕೆ ಆಗೋಲ್ಲ ಅಥವಾ ವಯಸ್ಸಾದವರನ್ನ ಬಿಟ್ಟಿ ಹತ್ತೋಕೆ ಆಗೋಲ್ಲ.”…ನನ್ನ ಮಾತು ಮುಗಿದಿರಲಿಲ್ಲ, ಅಪ್ಪ ” ನೂರು ರೂಪಾಯಿ ಎಕ್ಸ್ಟ್ರಾ ದುಡ್ಡು ಕೊಡ್ತೀನಿ ನಡಿಯಪ್ಪ ಅಂದರು”… ಗಂಟು ಮುಖ ಮಾಡಿ ಸರಿ ಅಂದ. ಆಗ ನನ್ನ ತಾಳ್ಮೆ ಮಿತಿ ಮೀರಿತ್ತು. “ಅಪ್ಪ, ಕಾರಿಂದ ಇಳಿ… ಈ ಟ್ಯಾಕ್ಸಿ ಕ್ಯಾನ್ಸಲ್ ಮಾಡ್ತೀನಿ. ಹತ್ತುವಾಗಲೇ ಇಷ್ಟು ಕಿರಿಕಿರಿ ಮಾಡೋನು. ರಸ್ತೆಯಲ್ಲಿ ಹಂಪು ಬಂತು, ರಸ್ತೆಯಲ್ಲಿ ಗುಂಡಿ ಇದೆ, ರಸ್ತೆಯಲ್ಲಿ ಟ್ರಾಫಿಕ್ ಇದೆ ಅಂತೆಲ್ಲ ಹೇಳಿ ನಡು ರಸ್ತೆಯಲ್ಲಿ ಹೈ ಡ್ರಾಮಾ ಮಾಡಿದ್ರೆ ಮಕ್ಕಳು, ವಯಸ್ಸಾದ ನಿಮ್ಮನ್ನ ಕಟ್ಟಕೊಂಡು ಎಲ್ಲಿ ಹೋಗ್ಲಿ. ಅದರ ಬದಲು ಈ ಟ್ಯಾಕ್ಸಿನೇ ಬೇಡ, ಬೇರೆ ಟ್ಯಾಕ್ಸಿ ಬುಕ್ ಮಾಡ್ತೀನಿ”ಅಂದೆ.
ಎಲ್ಲರೂ ಕಾರಿಂದ ಇಳಿದೆವು. ಚಾಲಕನಿಗೆ ಸಿಟ್ಟು ಬಂತು, ಆ ಸಿಟ್ಟಲ್ಲಿ ಕಾರನ್ನು ಜೋರಾಗಿ ಓಡಿಸಿಕೊಂಡು ಹೋದ. ಆ ಮಹಾ ಚಾಲಕನ ಹೆಸರು ಸತೀಶ್, ತುಮಕೂರಿನವನು, ಅದರಲ್ಲಿಯೂ ಕನ್ನಡದವನು. ಅವನಿಗಿದ್ದ ಅಹಂಕಾರ ನೋಡಿದ್ರೆ ಯಾವ ಪ್ರಯಾಣಿಕರ ಜೊತೆ ಒಳ್ಳೆ ಮಾತು ಕತೆ ಆಡಿರಕ್ಕಿಲ್ಲ. ಹೀಗೆ ಕಿರಿಕ್ ಮಾಡ್ಕೊಂಡೆ ಓಡಾಡ್ತೀರಬೇಕು. ಸದ್ಯ ಹತ್ತುವ ಮೊದಲೇ ಅವನ ಕಿರಿಕ್ ಬುದ್ದಿ ಗೊತ್ತಾಯ್ತು ದೇವರು ದೊಡ್ಡವನು ಅಂದುಕೊಂಡೆ.
ಮೊಬೈಲ್ ತಗೆದು ಮಗನಿಗೆ ಬೇರೆ ಕ್ಯಾಬ್ ಬುಕ್ ಮಾಡಲು ಹೇಳಿದೆ. ಆಗ ಸಮಯ 9 ಗಂಟೆಯಾಗಿತ್ತು. ಮಗ ಅಕ್ಕರೆ ಮೊಬೈಲ್ ನಲ್ಲಿ ವ್ಯಾಗನರ್ ಕಾರ್ ಬುಕ್ ಮಾಡಿದ. ಆ ಡ್ರೈವರ್ 10 ನಿಮಿಷದಲ್ಲಿ ಬರುತ್ತೇನೆ. ಬರುವ ದಾರಿಯಲ್ಲಿ ಟ್ರಾಫಿಕ್ ಇದೆ ಎಂದು ಮೆಸ್ಸೇಜ್ ಹಾಕಿದ. ಪರವಾಗಿಲ್ಲ, ಯಾರೋ ದೊಡ್ಡ ಮನಸ್ಸಿನ ಚಾಲಕ ಬರತ್ತಿದ್ದಾನೆ ಅಂತ ಕೊತ ಕೊತನೇ ಕುದಿಯುತ್ತಿದ್ದ ಮನಸ್ಸು ಆಗ ಶಾಂತವಾಯಿತು. ಆ ಕಡೆ ಈ ಕಡೆ ಓಡಾಡುವ ಕಲಾವಿದರನ್ನ, ಸ್ನೇಹಿತರನ್ನ ಮಾತಾಡುವಷ್ಟರಲ್ಲಿ ಕ್ಯಾಬ್ ಬಂದು ನಿಂತಿತ್ತು. ಈ ಯಪ್ಪಾ… ಈ ಚಾಲಕ ಏನ್ ರಾಗ ತಗಿತ್ತಾನೋ ಅಂತ ಕೂರುವ ಮೊದಲೇ ಚಾಲಕನ ಕಿಟಕಿಯತ್ತ ಹೋಗಿ “ನೋಡಪ್ಪಾ, ಮೂರು ಫುಲ್ ಸೀಟ್, ಎರಡು ಹಾಫ್ ಸೀಟ್. ಒಟ್ಟು ಐದು ಸೀಟ್ ಇದೆ. ಮಾದ್ಲೆ ಹೇಳ್ತಿದ್ದೀನಿ, ಕೂಡಲೋ ಬೇಡವೋ” ಅಂದೆ. ಅವನಿಗೆ ಮೊದಲು ಅರ್ಥ ಆಗಲಿಲ್ಲ. ವಾಟ್?… ಅಂತ ಇಂಗ್ಲೀಷ್ ನಲ್ಲಿ ಕೇಳಿದ. ಓಹ್… ಇದು ಆಂಗ್ಲ ಡ್ರೈವರ್ ತಿಳಿದು ಇಂಗ್ಲೀಷ್ ನಲ್ಲಿಯೇ “ಥ್ರೀ ಫುಲ್ ಸೀಟ್, ಟೂ ಹಾಫ್ ಸೀಟ್, ಟೋಟಲ್ ಫೈವ್ ಸೀಟ್” ಅಂದೆ. ಅವನು ನಗುತ್ತಾ ಇಂಗ್ಲೀಷ್ ನಲ್ಲಿಯೆ ಪರವಾಗಿಲ್ಲ ಅಂದ. ಸ್ವಲ್ಪ ಸಮಾಧಾನವಾಯಿತು. ಆಂಗ್ಲ ಡ್ರೈವರ್ ಮನಸ್ಸು ದೊಡ್ಡದಿದೆ ಅನಸ್ತು. ಎಲ್ಲ ಹೋಗಿ ಕಾರನಲ್ಲಿ ಕೂತೆವು. ಕಾರ್ ಓಡಿಸುವಾಗ ಅವನಿಗೆ ಒಂದು ಕರೆ ಬಂತು. ಮಳಿಯಾಳಿ ಭಾಷೆಯಲ್ಲಿ ಮಾತಾಡಿದ. ಓಹ್… ಈ ಚಾಲಕ ಆಂಗ್ಲ ಅಲ್ಲ, ಮಲ್ಲು ಅಂತ ಗೊತ್ತಾಯ್ತು.
ನನ್ನ ಬಾಯಿ ಸುಮ್ನೆ ಇರದೆ ಚಾಲಕನಿಗೆ ಕೇರಳದವರಾ?… ಅಂದೆ. ಹೌದು… ಹೇಗೆ ಗೊತ್ತಾಯ್ತು ಎಂದು ಖುಷಿಯಿಂದ ಕೇಳಿದ. ಫೋನ್ ನಲ್ಲಿ ನೀವು ಮಳಿಯಾಳo ನಲ್ಲಿ ಮಾತಾಡೋದು ನೋಡಿ ಅಂದುಕೊಂಡೆ ಎಂದೆ. ಚಾಲಕ ಖುಷಿಯಾದ. ಅವನಿಗೆ ಕನ್ನಡ ಬರುತ್ತಿರಲಿಲ್ಲ. ನಾನು ಕೇಳಿದ್ದಕ್ಕೆಲ್ಲ ಇಂಗ್ಲೀಷ್ ನಲ್ಲಿಯೇ ಉತ್ತರಿಸುತ್ತಿದ್ದ. ದಾರಿಯುದ್ಧಕ್ಕೂ ಹಾಗೆ ಎನೋ ಮಾತಾಡುತ್ತಾ ದಾರಿ ಸವಿಸಿ ಮನೆಗೆ ಬಂದೆವು. ಬುಕ್ ಮಾಡಿದ ದುಡ್ಡನ್ನು ಕೈಯಲ್ಲಿ ಕೊಟ್ಟು ಇಳಿದೆ. ವಾಪಾಸ್ ಕರೆದು ಐದು ಜನ ಕೂತಿದ್ದಕ್ಕೆ ಜಾಸ್ತಿ ದುಡ್ಡು ಕೇಳ್ತಾನೇನೋ ಅಂದುಕೊಂಡೆ. ದೊಡ್ಡ ಮನಸ್ಸಿನ ಚಾಲಕ ವಾಪಾಸ್ ಕರ ಕೇಳಲಿಲ್ಲ ಜಾಸ್ತಿ ಕೇಳಲಿಲ್ಲ.
ಮನೆಯೊಳಗೆ ಕೂತು ಚಾಲಕರ ಬಗ್ಗೆ ಯೋಚಿಸಿದೆ. ನಾವು ಭಾಷೆಗಾಗಿ, ಧರ್ಮಕ್ಕಾಗಿ ಹೊಡೆದಾಡುತ್ತೇವೆ. ಅದೇ ನಾನು ಕೂತ ಗಾಡಿಯವ ಅನ್ಯ ಧರ್ಮ, ಅನ್ಯ ಭಾಷೆಯವನು. ಅವರ ಜಾತಿ, ಧರ್ಮ, ಊರು, ಭಾಷೆ ಯಾವುದು ನನ್ನ ಕಣ್ಣಿಗೆ ಕಾಣಲಿಲ್ಲ. ಕಂಡದ್ದು ಅವರಲ್ಲಿನ ಮಾನವೀಯತೆ ಮಾತ್ರ. ಚಾಲಕರಾಗಲಿ, ಪ್ರಯಾಣಿಕರಾಗಲಿ ಒಳ್ಳೆ ಮಾತು ಮಾನವೀಯತೆ ಇದ್ದರೇ ಗೌರವದ ಜೊತೆಗೆ ಹಣವೂ ಬರುತ್ತದೆ.
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ
