“ಇದು ಬದುಕೆಂಬ ಮಹಾಗುರುವಿನ ಮೇಲಿನ ಕವಿತೆ. ಜೀವದ ಹಾದಿಗೆ ಬೆಳಕು ಚೆಲ್ಲುವ ಭಾವಪ್ರಣತೆ. ಜೀವನವೆಂದರೆ ಅನುಭವಗಳ ಭವ್ಯ ಹೊತ್ತಗೆ. ಇಲ್ಲಿ ಬದುಕೇ ಮಹಾಗುರು ಜೀವದ ನಡಿಗೆಯ ಅಡಿಗಡಿಗೆ. ಜೀವದ ಹುಟ್ಟಿನಿಂದ ಸಾವಿನವರೆಗೂ ಪ್ರತಿಕ್ಷಣವೂ ಪಾಠ ಕಲಿಸುತ್ತಲೇ, ಜೀವನವನ್ನು ಪಕ್ವಗೊಳಿಸುವ ಬದುಕಿಗಿಂತ ಮಹಾಗುರು ಬೇರೊಬ್ಬರಿಲ್ಲ. ಬದುಕು ನೀಡುವ ಅರಿವಿಗಿಂತ ಮಿಗಿಲಾದ ಬೆಳಕು ಮತ್ತೊಂದಿಲ್ಲ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಯಾವೊಂದೂ ಬಂಧಕ್ಕಂಟಿಕೊಳ್ಳದೆ
ಭಾವನೆಗಳಿಲ್ಲದೆ ಇರುವವರೊಂದಿಗೆ
ನಿರ್ಭಾವುಕರಾಗಿ ಬಾಳುವುದನ್ನೂ
ಕಲಿಸಿ ಬಿಡುತ್ತದೆÉ ಇಲ್ಲಿ ಬದುಕು.!
ಏನೊಂದೂ ನೆನಪುಗಳ ನೆನೆಯದೆ
ನೆಪಮಾತ್ರಕ್ಕಷ್ಟೇ ಬರುವವರೊಂದಿಗೆ
ನಿರ್ಲಿಪ್ತವಾಗಿ ಬದುಕುವುದನ್ನೂ
ತಿಳಿಸಿ ಕೊಡುತ್ತದೆ ಇಲ್ಲಿ ಬದುಕು.!
ಎಂತಹದೂ ಸಂವೇದನೆಗಳಿಲ್ಲದೆ
ಸುಖಾಸುಮ್ಮನೆ ಸಾಗುವವರೊಂದಿಗೆ
ನೀರಸವಾಗಿ ನಡೆಯುವುದನ್ನೂ
ರೂಢಿ ಮಾಡುತ್ತದೆ ಇಲ್ಲಿ ಬದುಕು.!
ಏನೊಂದೂ ಮುಚ್ಚುಮರೆಗಳಿಲ್ಲದೆ
ಎದೆ ತೆರೆದು ಬೆರೆವವರೊಂದಿಗೆ
ಸಂಪ್ರೀತಿಯಿಂದ ಬೆಸೆಯುವುದನ್ನು
ಸಾಕಾರವಾಗಿಸುತ್ತದೆ ಇಲ್ಲಿ ಬದುಕು.!
ಯಾವೊಂದೂ ಬೇಧಭಾವಗಳಿಲ್ಲದೆ
ಬಿಗಿದಪ್ಪಿ ಒಂದಾಗುವವರೊಂದಿಗೆ
ಒಡಲಾಳದಿಂದ ಒಡನಾಡುವುದನ್ನೂ
ಸಾಧ್ಯವಾಗಿಸುತ್ತದೆ ಇಲ್ಲಿ ಬದುಕು.!
ಬದುಕೆಂಬ ನಿತ್ಯಸತ್ಯ ಮಹಾಗುರು..
ಬೋಧಿಸದಿರುವುದೇನಿದೆ ಬುವಿಯಲ್ಲಿ.?
ಕಲಿಸದಾ ಪಠ್ಯವೇನಿದೆ? ತತ್ವವೇನಿದೆ?
ಕಟ್ಟಿಕೊಡದ ಅನುಭವವೇನಿದೆ ಇಳೆಯಲ್ಲಿ?
ಬದುಕು ಕಲಿಸಿದಂತೆ ನಡೆಯುತಿದ್ದರೆ..
ಪ್ರತಿಕ್ಷಣವೂ ಪಠ್ಯ, ಪ್ರತಿನಡೆಯೂ ವೇದ್ಯ
ಅರಿತು ಅಳವಡಿಸಿಕೊಂಡರೆ ಅನುಭವಸಾರ
ಬದುಕೆಂಬ ಮಹಾಗುರುವಿನ ಸಾಕ್ಷಾತ್ಕಾರ.!
- ಎ.ಎನ್.ರಮೇಶ್. ಗುಬ್ಬಿ.