‘ಮರೀಚಿಕೆ..!’ ಕವನ – ಎ.ಎನ್.ರಮೇಶ್.ಗುಬ್ಬಿ

“ಇದು ಒಡೆದ ಒಲವಿನ ಕವಿತೆ. ಮರೀಚಿಕೆಯಾದ ಅನುರಾಗದ ಆರ್ದ್ರ ಭಾವಗೀತೆ. ಇಲ್ಲಿ ಕಂಡ ಕಟು ವಾಸ್ತವದೆದುರು ಬಿಕ್ಕುವ ಭ್ರಮನಿರಸನ ಜೀವದ ರಿಂಗಣಗಳಿವೆ. ಭಗ್ನಪ್ರೇಮದ ಬೂದಿಯಾದ ಭಾವಗಳ ಸ್ಮರಣಗಳಿವೆ. ಇಲ್ಲಿ ಆಳಕ್ಕಿಳಿದಷ್ಟೂ ನೋವಿನ ಹನಿಗಳು ನಿಮ್ಮನ್ನು ತೋಯಿಸಬಲ್ಲುವು. ಅರ್ಥೈಸಿದಷ್ಟೂ ನರಳಿಕೆಯ ದನಿಗಳು ನಿಮ್ಮನ್ನು ಕನಲಿಸಬಲ್ಲುವು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ನಾ ತುಂಬಾ ಇಷ್ಟಪಟ್ಟು ಕಣ್ಣುಗಳಲೇ
ಹಗಲಿರುಳು ಎಡಬಿಡದೆ ತುಂಬಿಕೊಂಡೆ
ನೀ ಕಂಗಳ ಕನಸುಗಳನೆ ಕಸಿದುಕೊಂಡೆ
ಕಂಗಳಾಯ್ತು ಕಂಬನಿಯ ಬಿಸಿ ಹಂಡೆ.!

ನಾನಿನ್ನ ಅತಿಯಾಗಿ ಆಶಿಸಿ ಹೃದಯದಲೇ
ಅವಿರತ ಹೊರಬಿಡದೆ ಕೂರಿಸಿಕೊಂಡೆ
ನೀ ಎದೆಯ ಭಾವಗಳನೆ ಇರಿದುಕೊಂದೆ
ಹೃದಯವಾಯ್ತು ನಿಟ್ಟುಸಿರ ಕಲ್ಲು ಬಂಡೆ.!

ನಾ ಅಪಾರವಾಗಿ ಹಂಬಲಿಸಿ ಬದುಕಿನಲೇ
ಅರೆಘಳಿಗೆ ಕರಬಿಡದೆ ಮೇಳೈಸಿಕೊಂಡೆ
ನೀ ಬಾಳಿನ ನಂಬಿಕೆಗಳನೇ ನೀಗಿಸಿ ನಿಂದೆ
ಬದುಕಾಯ್ತು ಒಡೆದುಹೋದ ಚಂಡೆ.!

ನಾನಿನ್ನ ಆದ್ಯಂತ ಬಯಸಿ ಜೀವದಲೇ
ಅನುಕ್ಷಣ ಜೊತೆಬಿಡದೆ ಬೆಸೆದುಕೊಂಡೆ
ನೀ ಜೀವದ ಭರವಸೆಗಳನೆ ಬಸಿದುಕೊಂಡೆ
ಜೀವನವಾಯ್ತು ಅಶ್ರುಶರಧಿಯ ದಂಡೆ.!


  • ಎ.ಎನ್.ರಮೇಶ್. ಗುಬ್ಬಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading