ಇರುವುದೆಲ್ಲವ ಬಿಟ್ಟು – ಆಶ್ರಿತ ಕಿರಣ್

ಇದ್ದ ಕಾಲಮಾನಕ್ಕೆ ತಕ್ಕಂತೆ ಬದುಕುವ ಬದಲು ಅದು ಸರಿ ಇಲ್ಲ, ಇದು ಸರಿ ಇಲ್ಲ ಅನ್ನೋವ ನಮ್ಮ ದಡ್ಡತನಕ್ಕೆ ಆಶ್ರಿತ ಕಿರಣ್ (ಆಕೆ) ಅವರು ಒಂದು ಚಿಂತನ ಲೇಖನ ಬರೆದಿದ್ದಾರೆ ತಪ್ಪದೆ ಮುಂದೆ ಓದಿ…

ಇರುವುದನ್ನು ಮೆಚ್ಚಿಕೊಳ್ಳದೆ ಇಲ್ಲದರ ಬಗ್ಗೆ ಅಥವಾ ಹಿಂದೆ ಇದ್ದಿದ್ದರ ಬಗ್ಗೆ ಮಾತಾಡೋದು ಸಾಮಾನ್ಯವಾಗಿ ಮನುಷ್ಯ ಸಹಜ ಗುಣ. ಚಿಕ್ಕದೊಂದು ಕತೆ ಹೇಳುವೆ..

ಒಮ್ಮೆ ಮನೆಯಲ್ಲಿ ಟಿವಿ ನೋಡುತ್ತಿದ್ದ ಅಜ್ಜಿ ಗೊಣಗುತ್ತ ಕೂತರು.”ಟಿವಿ ನೋಡೋಣ ಎಂದರೆ ಅದರಲ್ಲಿ ಏನೂ ಬರುವುದಿಲ್ಲ ಒಬ್ಬನಿಗೆ ಇಬ್ಬರು ಹೆಂಡಿರು ಅದೇ ಮನೆಹಾಳು ಸೊಸೆಯಂದಿರು ಬರೀ ಇವೆ ಆಯ್ತು. ಹೊತ್ತು ಹೋಗುವುದೇ ಇಲ್ಲ. ಬರೀ ಬೇಜಾರು ನಮ್ಮ ಕಾಲದಲ್ಲಿ ಚೆನ್ನಾಗಿತ್ತು ಎಂದು ಬೈದು ಕೊಳ್ಳುತ್ತಾ ರಿಮೋಟ್ ಹಿಡಿದುಕೊಂಡು ಚಾನೆಲ್ ಚೇಂಜ್ ಮಾಡದೆ ಬಾಯಿ ಬಿಟ್ಟುಕೊಂಡು ಬರುತ್ತಿದ್ದ ಸೀರಿಯಲ್ ನೋಡುವುದರಲ್ಲಿ ಮುಳುಗಿ ಹೋಗಿದ್ದನ್ನು ಗಮನಿಸಿದ ಮೊಮ್ಮಗಳಿಗೆ ಕುತೂಹಲ ತಡೆಯಲಾಗಲಿಲ್ಲ. ನಿಮ್ಮ ಕಾಲದಲ್ಲಿ ಕರೆಂಟ್ ಇರಲಿಲ್ಲ. ಟಿವಿಯು ಇರಲಿಲ್ಲ. ಅದು ಹೇಗೆ ಟೈಂಪಾಸ್ ಮಾಡುತ್ತಿದ್ದೀರಿ ಅಜ್ಜಿ ಎಂದು ಪ್ರಶ್ನಿಸಿದಳು.

“ನಮ್ಮ ಕಾಲದಲ್ಲಿ ಕಲ್ಲಿನಲ್ಲಿಯೇ ರುಬ್ಬಿ ಅಡಿಗೆ ತಿಂಡಿಯನ್ನು ತಯಾರಿಸುತ್ತಿದ್ದೆವು. ಮುಂಜಾನೆ ಐದಕ್ಕೆ ಎದ್ದು ಸ್ನಾನ ಇತ್ಯಾದಿ ಕೆಲಸವನ್ನು ಮುಗಿಸಿ ಹಾಲು ಕರೆದು ಹಾಲು ಕಾಯಿಸಿ ಮನೆಯವರಿಗೆಲ್ಲಾ ಕಾಫಿ ತಯಾರಿಸಿ ತಿಂಡಿಯನ್ನು ತಯಾರಿಸಲು ಆರಂಭಿಸುತ್ತಿದೆವು. ತೋಟದ ಕೆಲಸಕ್ಕೆ ಬರುವವರಿಗೂ ಕೂಡ ತಿಂಡಿಯನ್ನು ತಯಾರಿಸುತ್ತಿದ್ದೆವು. 10 ಗಂಟೆಯರವರೆಗೂ ತಿಂಡಿಯ ಕೆಲಸವಾಗುತ್ತಿತ್ತು. ನಂತರ ಅಡಿಗೆಯ ಕೆಲಸ ಪ್ರಾರಂಭಿಸಿದರೆ ಮಧ್ಯಾಹ್ನ 12 ರವರೆಗೂ ಅದೇ ಆಗುತ್ತಿತ್ತು. ಒಂದು ಗಂಟೆಗೆ ಸರಿಯಾಗಿ ಮನೆಯ ಕೆಲಸದವರು ಊಟಕ್ಕೆ ಹಾಜರಾಗುತ್ತಿದ್ದರು. ಅವರಿಗೆ ಊಟ ಬಡಿಸಿ ನಾವು ಊಟ ಮಾಡಿ ಅಕ್ಕಿ ಆರಿಸುವ ಕೆಲಸವನ್ನು ಮಾಡುತ್ತಿದ್ದೆವು. ನಂತರ ನಾಳೆಗೆ ಬೇಕಾಗುವ ತರಕಾರಿಗಳನ್ನು ತರಲು ತೋಟಕೆ ಹೋಗುತ್ತಿದ್ದೆವು. ಪುನಃ ಸಂಜೆ 4 ಗಂಟೆಗೆ ಹಾಲು ಕರೆದು ಕಾಯಿಸಿ ಮನೆಯವರಿಗೆಲ್ಲಾ ಕಾಫಿ ಕೊಟ್ಟು ಅಡಿಕೆ ಸುಲಿಯುವ ಕೆಲಸ ಇಲ್ಲವೇ ಅಡಿಕೆ ಆರಿಸುವ ಕೆಲಸ ಅಥವಾ ಅಕ್ಕಿ ಬೀಸಿ ರವೆ ಮಾಡುವುದು ಇಲ್ಲವೇ ನೆನೆ ಹಾಕಿದ ಅಕ್ಕಿಯನ್ನು ರುಬ್ಬುವುದು ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ಮುಳುಗಿ ಹೋಗುತ್ತಿದ್ದಿದ್ದರಿಂದ ಸಮಯ ಸಾಲುತ್ತಿರಲಿಲ್ಲ. ಎಲ್ಲರೂ ದೀಪದ ಬೆಳಕಿನ ಅಡಿಯಲ್ಲಿ ಕುಳಿತು ಮಾತನಾಡಿ ಬೇಗ ನಿದ್ದೆಗೆ ಜಾರುತ್ತಿದ್ದೆವು. ಆ ಕಾಲ ಎಷು ಚೆನ್ನಾಗಿತ್ತು” ಎಂದರು.

ಫೋಟೋ ಕೃಪೆ : google

ಕೇಳಿಸಿಕೊಂಡ ಮೊಮ್ಮಗಳು ಆಶ್ಚರ್ಯದಿಂದ ಅಜ್ಜಿಯನ್ನು ಪುನಃ ಪ್ರಶ್ನೆಸಿದಳು. ಅಲ್ಲಾ ಅಜ್ಜಿ ಕರೆಂಟ್ ಇರಲಿಲ್ಲ, ಸಮಯ ಕಳೆಯಲು ಟಿವಿ ಇರಲಿಲ್ಲ. ಈಗ ಉಪಯೋಗಿಸುವಂತಹ ಮಿಕ್ಸಿ ಗ್ರೈಂಡರ್ ಯಾವುದೂ ಇರಲಿಲ್ಲ ಎಲ್ಲದಕ್ಕಿಂತ ಮಿಗಿಲಾಗಿ ನಿಮಗಾಗಿ ಸಮಯ ಕಳೆಯಲು ನಿಮಗೆ ಸಮಯವಿರಲಿಲ್ಲ. ಈ ಕಾಲಕ್ಕೆ ಆ ಕಾಲ ಹೋಲಿಸಿದರೆ ಈಗಲೇ ನೀವು ಸುಖವಾಗಿ ಇದ್ದೀರಿ ಅಲ್ಲವೇ? ಎಂಬ ಪ್ರಶ್ನೆಗೆ ಅಜ್ಜಿ ಏನನ್ನು ಉತ್ತರಿಸಲಾಗದೆ ಮೌನವಾಗಿದ್ದರು…

ಆಫೀಸಿನಿಂದ ಬಂದ ತಂದೆ ಸುಸ್ತಾಗಿದೆ ಎಂದು ಸೋಫಾ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿರುವಾಗ ತನ್ನ ಕಾಲೇಜು ಗೆಳೆಯನ ಕರೆ ಬಂದಿತ್ತು. ಅದನ್ನು ಸ್ವೀಕರಿಸಿ ಮಾತನಾಡಿದ ತಂದೆ ತಮ್ಮ ಶಾಲಾ-ಕಾಲೇಜು ದಿನಗಳನ್ನೆಲ್ಲಾ ನೆನೆಸಿಕೊಂಡು ಆ ದಿನಗಳು ಚೆನ್ನಾಗಿದ್ದವು ಎಂದು ಹೇಳುತ್ತಿದ್ದಿದ್ದನ್ನು ಕೇಳಿದ 16 ವರ್ಷದ ಮಗಳು ಓಡಿ ಬಂದು “ಯಾವಾಗ ಒಮ್ಮೆ ನಿಮ್ಮಂತೆ ಕೆಲಸಕ್ಕೆ ಹೋಗುತ್ತೇನೆ ಎಂದು ಅನಿಸುತ್ತಿದೆ ಅಪ್ಪ . ಕಾಲೇಜಿಗೆ ಲೇಟ್ ಆದರೆ ಬೈಯುವ ಪ್ರಿನ್ಸಿಪಾಲ್ ಪುಟಗಟಲೆ ಅಸೈನ್ ಮೆಂಟ್ ಬರೆದು ತರಲು ಹೇಳುವ ಲೆಕ್ಚರರ್ ಗಳು ಎಲ್ಲಾದಕ್ಕೂ ಪಾರ್ಟಿ ಕೇಳುವ ಫ್ರೆಂಡ್ಸ್ ಗಳು ಇವರಗಳ ಸಹವಾಸ ಸಾಕಾಗಿ ಹೋಗಿದೆ ಎಂದಳು…ಮೌನವಾಗುವ ಸರಿದು ಅಪ್ಪನದು..ಏಕೆಂದರೆ ಆತನು ಕಾಲೇಜಿಗೆ ಹೋಗುವಾಗ ಅವನ ಮನಸ್ಥಿತಿ ಮಗಳಂತೆ ಇತ್ತು…

ಫೋಟೋ ಕೃಪೆ : google

ಇದೇ ಬದುಕಿನ ವಿಪರ್ಯಾಸ ಅಲ್ಲವೇ. ಇದ್ದ ಕಾಲಮಾನ ನಮಗೆ ಸರಿಯೆನಿಸದು… ಬಾಲ್ಯದಲ್ಲಿ ಆದಷ್ಟು ಬೇಗ ದೊಡ್ಡವರಾಗಬೇಕು ಎಂದು ಕನಸು ಕಾಣುತ್ತೇವೆ. ದೊಡ್ಡವರಾದ ಮೇಲೆ ಪುನಃ ಮಕ್ಕಳಂತೆ ಇರಲು ಸಾಧ್ಯವಿಲ್ಲವಲ್ಲ ಎಂದು ಬೇಸರಿಸಿಕೊಳ್ಳುತ್ತೇವೆ. ಇದು ಎಲ್ಲರನ್ನೂ ಕಾಡುವ ಸಹಜ ಆಲೋಚನೆಗಳು. ಯಾವುದು ತಪ್ಪಲ್ಲ .ಎಲ್ಲವೂ ಬದುಕಿನ ಒಂದೊಂದು ಹಂತ. ದುಡಿಯುವಾಗ ಯಾವಾಗ ಒಮ್ಮೆ ವಿಶ್ರಾಂತಿ ಪಡೆದುಕೊಳ್ಳುವೆನು ಎಂದನಿಸುತ್ತದೆ .ವಿಶ್ರಾಂತಿ ಪಡೆಯುವಾಗ ಅಂದರೆ ರಿಟೈರ್ಮೆಂಟ್ ಕಾಲದಲ್ಲಿ ದುಡಿಯುತ್ತಿದ್ದ ಕಾಲ ಚೆನ್ನಾಗಿತ್ತು ಎಂದೆನಿಸುತ್ತದೆ.. ಓಡುತ್ತಿರುವ ಸಮಯದ ಹಿಂದೆ ನಾವು ನಡೆಯುತ್ತಿರಬೇಕಷ್ಟೆ.ಹಿಂದಿನದನ್ನು ಮೆಲುಕು ಹಾಕುತ್ತಾ ಇಂದಿನದನ್ನು ಆನಂದಿಸುತ್ತಾ ಬದುಕಬೇಕೆ ವಿನಃ ಕಳೆದು ಹೋಗಿದ್ದನ್ನು ನೆನೆಯುತ್ತಾ ಕುಳಿತರೆ ಮಾತನಾಡಲು ಒಂದು ವಿಷಯ ಸಿಗಬಹುದು ಅಷ್ಟೇ.. ಒತ್ತಡ ಹೆಚ್ಚಾದಾಗ ಹಿಂದಿನದ್ದು ಚೆನ್ನಾಗಿತ್ತು ಎಂದು ಅನಿಸುವುದು ಸಹಜವಲ್ಲವೇ..!

ಮಗು ಹುಟ್ಟಿದಾಗ ನಗುವುದನ್ನು ಕಾಯುತ್ತೇವೆ.. ಮಗು ನಗಲಾರಂಬಿಸಿದಾಗ ನಡೆಯುವ ದಿನಗಳಿಗಾಗಿ ಕಾಯುತ್ತೇವೆ..ಮಗು ನಡೆಯುವಾಗ ತಂಟೆ ತಡೆಯಲಾಗದೆ ಬೇಗ ನಿದ್ರಿಸಿದರೆ ಸಾಕೆಂದು ಕಾಯುತ್ತೇವೆ..ಮುಂಜಾನೆ ಆರಾಮಾಗಿ ನಿದ್ರೆಸಿದ ಮಗುವನ್ನು ಶಾಲೆಗೆ ತಡವಾಗುತ್ತದೆ ಎಂದು ಎಬ್ಬಿಸಲು ಕಾಯುತ್ತೇವೆ.. ಶಾಲೆಗೆ ಹೋಗಲು ಆರಂಭಿಸಿದ ಮಗು ದೊಡ್ಡವನಾದನಲ್ಲ ಎಂದು ಬೇಸರಿಸಿಕೊಳುತ್ತಾ ಪ್ರಾಯಕ್ಕೆ ಬಂದಾಗ ಬೇಗ ಮದುವೆ ಮಾಡಿಸಿ ಮೊಮ್ಮಗುವಿಗಾಗಿ ಕಾಯುತ್ತೇವೆ.ಆ ಮಗು ಪುನಃ ತಂಟೆ ಮಾಡುವಾಗ ಚೂರು ದೊಡ್ಡ ಆಗಲಿ ಎಂದು ಕಾಯುತ್ತೇವೆ …ಇದೇ ಜೀವನವಲ್ಲವೇ??


  • ಆಶ್ರಿತ ಕಿರಣ್ (ಆಕೆ) – ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading