ಮಾಲೂರಿನ ಸುಪ್ರಸಿದ್ದ ಸಂಘಟಕರೂ, ಸಮಾಜ ಸೇವಕರೂ, ಸಾಹಿತಿಗಳೂ, ವಕೀಲರೂ ಆಗಿರುವ ಹಿರಿಯ ಬಹುಮುಖ ಪ್ರತಿಭೆ ಶ್ರೀ ಕೆ. ಮುನಿಕೃಷ್ಣಪ್ಪನವರ ಲೇಖನಿಯಿಂದ ಅನನ್ಯವಾಗಿ ಮೂಡಿ ಬಂದಿರುವ ಈ ಕೃತಿ “ಮಾತೃಹೃದಯೀ – ಸಿ,ವಿ,ರಾಮನ್” ಓದುಗರ ಮನ ಮುಟ್ಟುವಂತಿದೆ, ತಟ್ಟುವಂತಿದೆ. ಎ.ಎನ್.ರಮೇಶ್. ಗುಬ್ಬಿ ಅವರು ಮುನ್ನುಡಿಯನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಮಾತೃ ಹೃದಯಿ ಸಿವಿ ರಾಮನ್
ಲೇಖಕರು : ಶ್ರೀ ಮುನಿಕೃಷ್ಣಪ್ಪ
ಬೆಲೆ : ೧೫೦.೦೦
ಪ್ರಕಾಶನ : ಹೆಚ್ ಎಸ್ ಆರ್ ಎ ಪ್ರಕಾಶನ
“ಬೆನ್ನುಡಿಯಲ್ಲ.. ಬೆನ್ನುಬಿದ್ದು ಆಗ್ರಹಪೂರ್ವಕವಾಗಿ ಬರೆಸಿದ ನುಡಿಗಳು”
ಕೋಲಾರ ಜಿಲ್ಲೆಯ ಮಾಲೂರಿನ ಶ್ರೀ ಮುನಿಕೃಷ್ಣಪ್ಪನವರದು ಅಪರೂಪದ ವ್ಯಕ್ತಿತ್ವ. 70 ವಸಂತಗಳು ಕಳೆದರೂ 20 ರ ಜೀವನೋತ್ಸಾಹ. ಸಾಹಿತ್ಯ, ಸಂಘಟನೆ, ಸಮಾಜ ಸೇವೆಗಳಿಗೆ ಬದುಕನ್ನೇ ಮುಡುಪಾಗಿಟ್ಟವರು. ರಾಜ್ಯ ಅನಿಕೇತನ ಸಂಸ್ಥೆಯನ್ನು ಸಂಸ್ಥಾಪಿಸಿ, ಅದರ ಮೂಲಕ ನಾಡಿನ ಉದ್ದಗಲಕ್ಕೂ, ವರ್ಷಪೂರ್ತಿ ಸಾಹಿತ್ಯಿಕ, ಸಾಂಸ್ಕೃತಿಕ, ಜನಪರ ಕಾರ್ಯಕ್ರಮಗಳ ಮೂಲಕ ಅಪಾರ ಜನಪ್ರಿಯತೆಯನ್ನು, ಅಗಾಧ ಜನಪ್ರೀತಿಯನ್ನೂ ಗಳಿಸಿದವರು. ಈಗ್ಗೆ 3-4 ವರ್ಷಗಳ ಹಿಂದೆ ನನಗೆ ವಾಟ್ಸಾಪು ಬಳಗದ ಮೂಲಕ ಪರಿಚಿತರಾಗಿ, ನಿತ್ಯ ನನ್ನ ಕವಿತೆಗಳನ್ನು ಓದಿ, ಮೆಚ್ಚಿ ಆಶೀರ್ವದಿಸುತ್ತಾ ಬಂದಿರುವ ಆತ್ಮೀಯ ಹಿರಿಯ ಅಕ್ಷರಬಂಧು.
ಈ 5-6 ತಿಂಗಳ ಹಿಂದೆ ಮುನಿಕೃಷ್ಣಪ್ಪನವರು ಕರೆ ಮಾಡಿ, ತಾವು ಸಿ.ವಿ.ರಾಮನ್ ಅವರ ಬಗೆಗೆ ಬರೆದಿರುವ ಪುಸ್ತಕಕ್ಕೆ ಬೆನ್ನುಡಿ ಬರೆದುಕೊಡಲು ಕೇಳಿದರು. ಅವರ ಅರಿವು, ಅಧ್ಯಯನ, ಜೀವನಾನುಭವಗಳ ಮುಂದೆ ಏನೇನೂ ಅಲ್ಲದ ನಾನು, ಅವರ ಕೋರಿಕೆಗೆ ನಮ್ರವಾಗಿ ನಿರಾಕರಿಸುತ್ತ ಹಿಂದೆ ಸರಿದೆ. ಆದರೆ ನಿರಂತರ ಒಂದು ತಿಂಗಳು ಹಗಲು ರಾತ್ರಿ ಎಡಬಿಡದೆ ಕರೆ ಮಾಡಿ ಅತ್ಯಂತ ಅಕ್ಕರೆ ಆಗ್ರಹಗಳಿಂದ ಒತ್ತಾಯಿಸಿ ಬರೆಸಿಕೊಂಡರು. ಆಗ ಅವರು ಆಡಿದ ನುಡಿಗಳು ಈಗಲೂ ನನ್ನ ಕಿವಿಗಳಲ್ಲಿ ರಿಂಗಣಿಸುತ್ತಿದೆ..”ರಮೇಶ್ ಸಾರೂ.. ಪದ್ಯ ಅಷ್ಟೇ ಅಲ್ಲ, ಗದ್ಯನೂ ನೀವು ತುಂಬಾ ಚೆಂದ ಬರೆಯುತ್ತೀರಾ.. ನಿಮ್ಮ ಬರಹದ ಶಕ್ತಿ ನಿಮಗೇ ಗೊತ್ತಿಲ್ಲ. ಈ ನನ್ನ ಪುಸ್ತಕಕ್ಕೆ ನೀವೇ ಬೆನ್ನುಡಿ ಬರೀಬೇಕು.. ಒಂದು ಪೇಜಿನಷ್ಟು ಬೆನ್ನುಡಿ ಬರೆದುಬಿಡಿ.. ಜೊತೆಗೆ ನಿಮ್ಮದೊಂದೆರಡು ಚುಟಕನು ಬುಟ್ಟುಬುಡಿ..”

ನನ್ನಂತಹ ಸಾಮಾನ್ಯ ಕಿರಿಯನನ್ನೂ ಅಕ್ಕರೆಯಿಂದ ಆದರಿಸುವ ಅನನ್ಯ ವ್ಯಕ್ತಿತ್ವದ, ಅಪೂರ್ವ ಹೃದಯ ವೈಶಾಲ್ಯದ ಶ್ರೀ ಮುನಿಕೃಷ್ಣಪ್ಪನವರ ಪ್ರೀತಿಯ ಕೃತಿ”ಮಾತೃ ಹೃದಯಿ ಸಿ.ವಿ.ರಾಮನ್” ಲೋಕಾರ್ಪಣೆಗೊಂಡಿದೆ. ಅದರ ಬೆನ್ನುಡಿಯ ಪುಟವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.. ಓದಿ ಹಾರೈಸಿ.. ಹಾಗೆ ಆ ಕೃತಿಯನ್ನು ಕೊಂಡು ಓದಿ ಶ್ರೀ ಮುನಿಕೃಷ್ಣಪ್ಪನವರನ್ನು ಅಭಿನಂದಿಸಿ..” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
NOW OVER TO BENNUDI
ಹಾರೈಕೆಯ ಹೃದ್ಯ ನುಡಿಗಳು :
“ಸಿ.ವಿ.ರಾಮನ್ ಎಂದೇ ಜನಮಾನಸದಲ್ಲಿ ಜನಜನಿತರಾದ ಶ್ರೀ ಚಿಕ್ಕ ವೆಂಕಟ ರಮಣಪ್ಪನವರ ಬದುಕೇ ಒಂದು ರೋಚಕ ಯಶೋಗಾಥೆ. ಕೈಚೆಲ್ಲಿ ಕುಳಿತ ಯುವಕ-ಯುವತಿಯರಿಗೆ ಸ್ಫೂರ್ತಿ ತುಂಬಿ ಸಾಧನೆಯ ಶೃಂಗದೆಡೆಗೆ ನಡೆಸಬಲ್ಲ ಪ್ರೇರಣಾದಾಯಕ ಮಹಾಗಾತೆ.
ಅರವತ್ತರ ದಶಕದಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೋಕಿನ ಅತ್ಯಂತ ಪುಟ್ಟಗ್ರಾಮ ಮಡಿವಾಳದಲ್ಲಿ ಅತ್ಯಂತ ನಿರಕ್ಷರ ಬಡ ಕುಟುಂಬದಲ್ಲಿ ಜನಿಸಿ, ಅವಿರತ ಪರಿಶ್ರಮ, ಅನವರತ ಹೋರಾಟಗಳಿಂದ ಜೀವನದ ಪ್ರತಿ ಮಜಲುಗಳನ್ನು ಸಮರ್ಥವಾಗಿ ದಾಟಿ, ಬಾಳ ನಾವೆಯನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದ ಸಂಗತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಹುದ್ದೆಯವರೆಗೆ ಬೆಳೆದ ರೀತಿ ಅಭಿನಂದನೀಯ ಮತ್ತು ಅನುಕರಣನೀಯ. ಅವರು ಏರಿದ ಎತ್ತರ, ಸಾಧಿಸಿದ ಕಾರ್ಯ ವಿಸ್ತಾರ ಗಣನೀಯ ಮತ್ತು ಶ್ಲಾಘನೀಯ.
ಪ್ರಣತೆಯೊಂದು ತಾನು ಪ್ರಜ್ವಲಿಸುವುದರ ಜೊತೆಗೆ, ತನ್ನ ಸುತ್ತಮುತ್ತಲ ಸ್ಥಳವನ್ನೂ ಬೆಳಗುವಂತೆ, ಸಿ.ವಿ.ರಾಮನ್ ಅವರ ಬದುಕು ಕೂಡ ದೇದೀಪ್ಯಮಾನವಾದದ್ದು. ಮಾಲೂರಿನಲ್ಲಿ ’ಊರುಗೋಲು ವೈಚಾರಿಕ ಸಂಘದ’ ಮೂಲಕ ಪ್ರಗತಿಪರ ಚಿಂತನೆಗಳು, ಸಾಮಾಜಿಕ ಅರಿವಿನ ಕಾರ್ಯಚಟುವಟಿಕೆಗಳಿಂದ ಸಾವಿರಾರು ಜನರ ಹಾದಿಗೆ ಮಾರ್ಗದರ್ಶಕರಾಗಿ, ದಮನಿತರ ಬಾಳಿಗೆ ಬೆಳಕಾಗಿ ಆಸರೆಯಾಗಿದ್ದಾರೆ, ಆದರ್ಶವಾಗಿದ್ದಾರೆ. ಶ್ರೀಯುತರು ತಮ್ಮ ವೃತ್ತಿಪರತೆ, ಸೇವಾ ನಿಸ್ಪೃಹತೆಗಳಿಂದ ತಮ್ಮ ಆಡಳಿತಾವಧಿಯಲ್ಲಿ ಮಾಡಿದ ಕಾರ್ಯಗಳು, ಕೈಗೊಂಡ ಸುಧಾರಣ ಕ್ರಮಗಳು, ಸೇವಾ ಕೈಂಕರ್ಯಗಳು ಅವರ ಹೆಸರನ್ನು ಇಲಾಖಾ ವಲಯದಲ್ಲμÉ್ಟೀ ಅಲ್ಲದೆ, ಶೋಷಿತರ, ಫಲಾನುಭವಿಗಳ ಮನೆ-ಮನಗಳಲ್ಲೂ ಚಿರಸ್ಥಾಯಿಯಾಗುವಂತೆ ಮಾಡಿದೆ.

ಸರಕಾರಿ ಕೆಲಸಕ್ಕೆ ನಿವೃತ್ತಿ, ತಮ್ಮ ದುಡಿಯುವ ಚೈತನ್ಯಕ್ಕೆ ಎಂದಿಗೂ ಇರದು ವಿಶ್ರಾಂತಿ ಎಂಬತೆ, ಸೇವಾ ನಿವೃತ್ತಿಯ ನಂತರ ಮಾಲೂರಿನ ಬಳಿಯ “ಬುದ್ದ ವಿಹಾರದ” ಕಾರ್ಯಬಾಹುಳ್ಯದಲ್ಲಿ ತಮ್ಮನ್ನೂ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಬುದ್ದ- ಅಂಬೇಡ್ಕರ್ ಅವರ ನೀತಿ, ತತ್ವಗಳನ್ನು ಸಾಕಾರಗೊಳಿಸಲು, ಅಶಕ್ತರ-ಅಬಲರ ಬದುಕುಗಳನ್ನುದ್ದರಿಸಲು ದಣಿವರಿಯದ ಚೇತನದಂತೆ ಚಿರಯುವಕರಾಗಿ ಶ್ರಮಿಸುತ್ತಿದ್ದಾರೆ. ನಾಳಿನ ಪೀಳಿಗೆಗೆ ಪಠ್ಯದಂತಿರುವ ಅವರ ಜೀವನ ಚರಿತ್ರೆಯನ್ನು ಪುಟ ಪುಟದಲ್ಲೂ ಅತ್ಯದ್ಭುತವಾಗಿ ಅನಾವರಣಗೊಳಿಸುವುದರಲ್ಲಿ ಈ ಕೃತಿ ಅತ್ಯಂತ ಯಶಸ್ವಿಯಾಗಿದೆ.
ಮಾಲೂರಿನ ಸುಪ್ರಸಿದ್ದ ಸಂಘಟಕರೂ, ಸಮಾಜ ಸೇವಕರೂ, ಸಾಹಿತಿಗಳೂ, ವಕೀಲರೂ ಆಗಿರುವ ಹಿರಿಯ ಬಹುಮುಖ ಪ್ರತಿಭೆ ಶ್ರೀ ಕೆ. ಮುನಿಕೃಷ್ಣಪ್ಪನವರ ಲೇಖನಿಯಿಂದ ಅನನ್ಯವಾಗಿ ಮೂಡಿ ಬಂದಿರುವ ಈ ಕೃತಿ “ಮಾತೃಹೃದಯೀ – ಸಿ,ವಿ,ರಾಮನ್” ಓದುಗರ ಮನ ಮುಟ್ಟುವಂತಿದೆ, ತಟ್ಟುವಂತಿದೆ. ಸಂಗ್ರಹ ಯೋಗ್ಯವಾದ ಮತ್ತು ಸಮಾಜಕ್ಕೆ ನಿದರ್ಶನವಾಗುವಂತಹ ಜೀವನ ಚರಿತ್ರೆ ಕೃತಿಯನ್ನು ನೀಡಿದ ಶ್ರೀ ಕೆ. ಮುನಿಕೃಷ್ಣಪ್ಪನವರಿಗೆ ನನ್ನ ತುಂಬು ಹೃದಯದ ಆಬಿನಂದನೆಗಳು ಮತ್ತು ವಿಶೇಷ ಧನ್ಯವಾದಗಳು. ಶ್ರೀಯುತರಿಂದ ಇನ್ನಷ್ಟು ಇಂತಹ ಉತ್ಕೃಷ್ಟ ಕೃತಿಗಳು ಹೊರಬಂದು, ಕನ್ನಡ ಸಾರಸ್ವತಲೋಕವನ್ನು ಶ್ರೀಮಂತಗೊಳಿಸಲಿ ಎಂದು ಎದೆತುಂಬಿ ಹಾರೈಸುತ್ತೇನೆ. ಸಿ.ವಿ.ರಾಮನ್ ಅವರ ಕುರಿತಾದ ನನ್ನ ಸ್ವರಚಿತ ಕವಿತೆಯೊಂದಿಗೆ ನನ್ನೀ ನಾಲ್ಕು ನುಡಿಗಳಿಗೆ ವಿರಾಮ ನೀಡುತ್ತಿದ್ದೇನೆ.
ಚಿರಾಯು ನೀವು.!
ಅಮ್ಮನ ಒಡಲಿನ
ಅಕ್ಕರೆಗುರು ನೀವು.!
ದೀನ ದಲಿತರ
ಕಾಯುವ ಕರವು.!
ನಿಸ್ವಾರ್ಥ ಸೇವೆ
ಆದರ್ಶಗಳ ತಾವು.!
ಊರುಗೋಲಲಿ
ನಿತ್ಯ ಪ್ರಗತಿಪರ
ಚಿಂತನೆಗಳ ಅರಿವು
ಬುದ್ದ ವಿಹಾರದಿ
ಭೀಮಾ-ಬೌದ್ದರ
ತತ್ವಗಳ ಹರಿವು.!
ಇಲಾಖೆ ಅಭಿವೃದ್ದಿಗೆ
ನೀವೇ ವರವು
ದಮನಿತರ ಬಾಳನು
ಬೆಳಗಿದ ಸ್ವರವು
ಮರೆಯದು ನಾಡು
ನಿಮ್ಮ ಪ್ರೀತಿ ನೆರವು.!
ಎ.ಎನ್.ರಮೇಶ್. ಗುಬ್ಬಿ.
ಕೈಗಾ. ಕಾರವಾರ.
- ಎ.ಎನ್.ರಮೇಶ್. ಗುಬ್ಬಿ – ಕವಿ, ನಾಟಕಕಾರರು, ನಿರ್ದೇಶಕರು, ಕೈಗಾ ಅಣುವಿದ್ಯುತ್ ಉತ್ಪಾದನಾ ಕೇಂದ್ರ.
