‘ಚಿಕ್ಕ ಪುಟ್ಟಮ್ಮನ ಗೃಹನ್ಯಾಯ’ ಪುಸ್ತಕ ಪರಿಚಯ

ಕತೆಗಾರ ಕೆ.ಸತ್ಯನಾರಾಯಣ ಅವರ ‘ಚಿಕ್ಕ ಪುಟ್ಟಮ್ಮನ ಗೃಹನ್ಯಾಯ’ ಪುಸ್ತಕದ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಚಿಕ್ಕ ಪುಟ್ಟಮ್ಮನ ಗೃಹನ್ಯಾಯ
ಲೇಖಕರು : ಕೆ.ಸತ್ಯನಾರಾಯಣ
ಪ್ರಕಾಶಕರು : ವೀರಲೋಕ
ಬೆಲೆ : ೧೪೦.೦೦

ಏಳು ಕತೆಗಳನ್ನು ಹೊಂದಿರುವ ಈ ಕತೆಗಳ ಸಂಕಲನ ಇಲ್ಲಿಯವರೆಗಿನ ಅವರ ಸ್ತ್ರೀ ಚಿಂತನೆಯು ಮುಂದುವರಿದ ಪರಿಣಾಮವಾಗಿದೆ.

ಸ್ವಿಗ್ಗಿ ಹುಡುಗಿ ಎನ್ನುವ ಹದಿಹರೆಯದ ಹುಡುಗಿಯ ಕೊನೆಯ ಕತೆ ಬಿಟ್ಟರೆ, ಉಳಿದ ಕತೆಗಳು ಮಧ್ಯವಯಸ್ಕ ಹೆಣ್ಣನ್ನು ಕೇಂದ್ರವನ್ನಾಗಿ ಹೊಂದಿವೆ. ಅವರ ಮನಸ್ಸಿನ ಒಳತೋಟಿಗಳ ಅನಾವರಣವನ್ನು ಈ ಕತೆಗಳಲ್ಲಿ ಕಾಣುತ್ತೇವೆ. ಮೊದಲ ಕತೆ ಚಿಕ್ಕ ಪುಟ್ಟಮ್ಮನ ಗೃಹನ್ಯಾಯ ಅನ್ಯಜಾತಿಯ ಹುಡುಗಿಯನ್ನು ಮದುವೆಯಾಗಿ ಬಂದ ಮಗನಿಂದ, ಎದುರಿಸುವ ಸವಾಲುಗಳು, ಹೊಸ ಸೊಸೆಯೊಂದಿಗೆ ಹೊಂದಿಕೊಳ್ಳಲು ಆಗದೆ, ಹೊಂದಿಕೊಳ್ಳದೆ ಪರ್ಯಾಯವಿಲ್ಲದ ಇಕ್ಕಟ್ಟಾದ ಸ್ಥಿತಿ.ಇದು ಮಧ್ಯಮ ವರ್ಗದ ಪ್ರಗತಿಪರ ಎನಿಸಿಕೊಂಡಿರುವವರ ಸಮಸ್ಯೆ. ನಮ್ಮ ಜಾತಿ ನಿಷ್ಠ ಸಮಾಜದ ಸೋಗು ಮತ್ತು ವಾಸ್ತವಗಳ ನಡುವಣ ಅಂತರದ ಅನಾವರಣ.

ಸಾವಿತ್ರಿ ಬರುತ್ತಾರಂತೆ,!! ಬಂದರಂತೆ!!! ಕತೆಯಲ್ಲಿ, ಇಕ್ಕಟ್ಟಾದ ದಾಂಪತ್ಯದಲ್ಲಿ ಸಿಲುಕಿದ ಹೆಣ್ಣು, ಅದರಿಂದ ಬಿಡುಗಡೆ ಹೊಂದಲು ಪರದೇಶಕ್ಕೆ ಹೋಗಿ , ಬೌದ್ದಿಕ ವಿಕಾಸ ಹೊಂದಿದರೂ, ಎಲ್ಲಿಯೋ ಉಳಿದು ಹೋದ ಮನದ ಅತೃಪ್ತಿಯನ್ನು ತಣಿಸಿಕೊಳ್ಳಲು, ಮೂರು ದಶಕಗಳ ನಂತರ, ಬಿಟ್ಟು ಹೋದ ರೋಗಿಷ್ಟ ಗಂಡನ ಬಳಿಗೆ ಮರಳಿ ಬಂದ ಕಥನ. ಇದು ಬೇಂದ್ರೆಯವರ ಸಖೀಗೀತದ ದಾಂಪತ್ಯದ ಕಟುಮಧುರ ಆಖ್ಯಾನದಂತಿದೆ. ಅದರಂತೆ ಪುರಾಣದ ಸಾವಿತ್ರಿ ಕತೆಯನ್ನು ಒಂದು ರೀತಿಯಲ್ಲಿ ನೆನಪಿಗೆ ತಂದು ವೈರುಧ್ಯಗಳ ಅನಾವರಣ ಮಾಡುತ್ತದೆ. ಈಶಾನ್ಯೆಯರು ಕತೆ, ಈಶಾನ್ಯ ರಾಜ್ಯಗಳಿಂದ ಈಚೆಗೆ ಅಲ್ಲಿನ ಹೆಣ್ಣು ಮಕ್ಕಳ ವಲಸೆ, ಬೆಂಗಳೂರಿನಲ್ಲಿ ಅವರು ಎದುರಿಸುತ್ತಿರುವ ವಿಭಿನ್ನ ಸವಾಲುಗಳಿಗೆ , ಉತ್ತರ ಕಂಡು ಹಿಡಿಯಲು ಮಾಡುವ ಪ್ರಯತ್ನದ ಸಂಕೀರ್ಣ ಸ್ವರೂಪದ ಮೇಲೆ ಬೆಳಕು ಚೆಲ್ಲುತ್ತದೆ. ಈಚೆಗೆ ನಡೆದ ಸರ್ಕಾರದ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣದೊಂದಿಗೆ ಇದನ್ನು ಲಗತ್ತಿಸಿರುವುದು, ಸೇರ್ಪಡೆಯಾಗಿ ಕಾಣಿಸುತ್ತದೆ . ಸಕೇಶಿಯರು ನಿರ್ದಿಷ್ಟ ಜಾತಿಯ ಹೆಣ್ಣು ಮಕ್ಕಳ ಕುರಿತು ,ಸಾಮಾನ್ಯವಾಗಿ ಇತರೆ ಸಮುದಾಯದ ಪೂರ್ವಗ್ರಹಗಳನ್ನು ಬಯಲುಗೊಳಿಸಬಲ್ಲ ಶಕ್ತಿ ಹೊಂದಿದೆ. ದೃಷ್ಟಿಯಂತೆ ಸೃಷ್ಟಿ ಎನ್ನುವ ಮಾತಿಗೆ ನಿದರ್ಶನದಂತೆ ಕತೆಯನ್ನು ಹೆಣೆಯಲಾಗಿದೆ . ಆದರೆ, ಕೊನೆಯ ಕತೆ ಅಸ್ತಿತ್ವಕ್ಕೆ ಹೋರಾಟ ನಡೆಸಬೇಕಾದ ,ಇಲ್ಲದವರ ಸವಾಲಿನ ಅನಾವರಣ. ಸ್ವಿಗ್ಗಿ ಹುಡುಗಿ ಮೇಲ್ಸಂಪಾದನೆಗಾಗಿ ಆಹಾರ ವಿತರಣೆ ಮಾತ್ರವಲ್ಲದೆ, ಇನ್ನಿತರ ವಸ್ತುಗಳನ್ನು ವಿತರಣೆ ಮಾಡಬೇಕಾಗಿ ಬಂದ ಅನಿವಾರ್ಯತೆ, ಅಸ್ಮಿತೆಯನ್ನು ಸ್ಥಾಪಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಹದಿಹರೆಯದ ಹುಡುಗಿಯರ ಪ್ರತೀಕ. ಅವರ ಶೇಕದಾರ್ ಅತ್ತೆ ಕತೆ ಅಳಿಯನಿಗೆ ಸಿಕ್ಕ ಆ ಪದವಿಯಿಂದ ಮತ್ತೇರಿಸಿಕೊಂಡು ಮೆರೆವ , ಬಂದಳಿಕೆಯಾದ ಮಧ್ಯವಯಸ್ಕ ಸೋಗಿನ ಹೆಣ್ಣನ್ನು ಕೇಂದ್ರವನ್ನಾಗಿ ಹೊಂದಿದೆ.

ಈ ಕತೆಗಳ ಮೂಲಕ ಲೇಖಕರು, ವಿಭಿನ್ನ ವರ್ಗಕ್ಕೆ ಸೇರಿದ ಮಹಿಳಾ ಲೋಕದ ಅನಾವರಣ ಮಾಡಿ, ಸ್ತ್ರೀವಾದದ ಸೀಮಿತ ಪರಿಕಲ್ಪನೆಗಳನ್ನು ಒಡೆದು, ವಿಸ್ತರಿಸುವ ಅಸಾಮಾನ್ಯ ಸಾಹಸಕ್ಕೆ ಕೈ ಹಾಕಿದ್ದಾರೆ. ಜಾತಿ ಲಿಂಗ ಆಧಾರಿತವಾದ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ, ಆಳವಾಗಿ ಅಸಮಾನತೆ ಮತ್ತು ಪೂರ್ವಾಗ್ರಹಗಳು ಬೇರು ಬಿಟ್ಟಿವೆ. ಚಿಕ್ಕ ಪುಟ್ಟಮ್ಮನ ಗೃಹನ್ಯಾಯ ಮೊದಲನೆಯದಕ್ಕೆ ಸಾಕ್ಷಿ ಆದರೆ , ಸಕೇಶಿಯರು ಎರಡನೆಯದಕ್ಕೆ ಸಾಕ್ಷಿ .

ನನ್ನ ಮೆಚ್ಚಿನ ಮೇಷ್ಟ್ರು. ಜಿ.. ಎಸ್ . ಎಸ್ ಅವರು “ಸಾಹಿತ್ಯವನ್ನು ಜೀವನದ ಗತಿಬಿಂಬ” ಎಂದು ಕರೆದಿದ್ದಾರೆ . ಗತಿ ಎಂದರೆ ಹೆಜ್ಜೆ ಗುರುತು ಎಂದು ಅರ್ಥ . ಇಲ್ಲಿನ ಸಂಕಲನದ ಕತೆಗಳು ಈ ಅರ್ಥದಲ್ಲಿ ಸಮಕಾಲೀನ ಸಮಾಜದಲ್ಲಿ ಮಹಿಳಾಲೋಕದ ಹೆಜ್ಜೆ ಗುರುತುಗಳಾಗಿರುವುದು ಇದರ ವೈಶಿಷ್ಟ್ಯ.

ಕನ್ನಡದಲ್ಲಿ ಸ್ತ್ರೀ ಪ್ರಜ್ಞೆಯನ್ನು ವಿಸ್ತರಿಸಿದ ಲೇಖಕಿಯರಿಗೆ ಈ ಕೃತಿಯನ್ನು ಅರ್ಪಿಸಿರುವುದು ಅರ್ಥಪೂರ್ಣವಾಗಿದೆ . ಲೇಖಕರಿಗೆ ಅಭಿನಂದನೆಗಳು.


  • ರಘುನಾಥ್ ಕೃಷ್ಣಮಾಚಾರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading