‘ಪ್ರೇಮದ ಬಲೆ’ ಸಣ್ಣಕತೆ – ರೂಪಶ್ರೀ ಎಂ

ಪ್ರಾಯದಲ್ಲಿ ಗಂಡನ ಕಳೆದುಕೊಂಡು ಒಂಟಿಯಾಗಿ ರಶ್ಮಿ, ಗಂಡನ ಸ್ನೇಹಿತ ಕಾರ್ತಿಕ್ ನನ್ನ ಬಿಗಿದಪ್ಪುತ್ತಾಳೆ. ಕಾರ್ತಿಕ ಅವಳ ಪ್ರೀತಿಯಲ್ಲಿ ತೇಲಿ ಹೋಗುತ್ತಾನಾ? ಅಥವಾ ಅವಳ ಪ್ರೀತಿಯನ್ನು ನಿರಾಕರಿಸುತ್ತಾನಾ?…ರೂಪಶ್ರೀ ಎಂ ಅವರ ಲೇಖನಿಯಲ್ಲಿ ಅರಳಿದ ಪ್ರೇಮದ ಬಲೆ, ತಪ್ಪದೆ ಮುಂದೆ ಓದಿ…

ರವಿ ಮತ್ತು ಕಾರ್ತಿಕ್ ಬಾಲ್ಯ ಸ್ನೇಹಿತರು. ಚೆನ್ನಾಗಿ ಓದಿ ಇಬ್ಬರೂ ಒಳ್ಳೆಯ ಉದ್ಯೋಗದಲ್ಲಿದ್ದರು . ಕಾರ್ತಿಕ್ ಬೆಳಗಾವಿಯಲ್ಲಿದ್ದರೆ , ರವಿ ಬೆಂಗಳೂರಿನಲ್ಲಿ ತನ್ನ ಕುಟುಂಬದೊಂದಿಗೆ ಸುಖವಾಗಿದ್ದ. ಎರಡೂ ಕುಟುಂಬಗಳು ಆಗಾಗ ಭೇಟಿಯಾಗುತ್ತಿದುದರಿಂದ ಪರಸ್ಪರ ಚಿರಪರಿಚಿತರಾಗಿದ್ದರು ರವಿಯ ಪತ್ನಿ ರಶ್ಮಿ ಮತ್ತು ಕಾರ್ತಿಕ್ ನ ಪತ್ನಿ ಕುಸುಮ ಕೂಡ ಆತ್ಮೀಯ ಗೆಳತಿಯರಾಗಿಬಿಟ್ಟಿದ್ದರು.

ಒಂದು ದಿನ ” ತಕ್ಷಣ ಹೊರಟು ಬಾ ಕಾರ್ತಿಕ್,” ಕರೆ ಬಂದಿತ್ತು. ” ಏನೋ ಕೆಲಸವಿದೆ ನಂತರ ಕರೆ ಮಾಡಿ ಎಲ್ಲಾ ಹೇಳುತ್ತೇನೆ , ಅರ್ಜೆಂಟ್ ಬೆಂಗಳೂರಿಗೆ ಹೋಗ್ಬೇಕು” ಎಂದಷ್ಟೇ ಹೇಳಿ ಹೊರಟ. ಬೆಂಗಳೂರು ತಲುಪುವ ಹೊತ್ತಿಗೆ ಬೆಳಕಾಗಿತ್ತು ಆದರೆ ತನ್ನ ಪ್ರಾಣ ಸ್ನೇಹಿತನ ಸಾವಿನಿಂದ ಆ ಮನೆ ಮಾತ್ರ ಕತ್ತಲಲ್ಲಿ ಮುಳುಗಿತ್ತು.

ಆ ಶೋಕದ ಮನೆಯೊಳಗೆ ಹೋದವನಿಗೆ ಗೆಳೆಯನ ಪಾರ್ಥಿವ ಶರೀರವನ್ನು ನೋಡಿ ದಿಗ್ಭ್ರಮೆ ಆಯ್ತು. ಪ್ರಾಣ ಸ್ನೇಹಿತ ಶವವಾಗಿ ಮಲಗಿದ್ದ.

ಈ ಬೇಸಿಗೆ ರಜೆಯಲ್ಲಿ ಇಬ್ಬರೂ ಫಾರಿನ್ ಟ್ರಿಪ್ ಹೋಗೋ ಪ್ಲಾನ್ ಬಗ್ಗೆ ಮೊನ್ನೆ ಎಲ್ಲಾ ಮಾತಾಡಿ ಈಗ ಸಡನ್ನಾಗಿ ಹೀಗೆ ಆಯ್ತಲ್ಲ ಅದನ್ನು ಅರಗಿಸಿಕೊಳ್ಳೋಕೆ ಆಗ್ಲಿಲ್ಲ ಕಾರ್ತಿಕ್ ಗೆ.
ಅಂಕಲ್ ಹೇಗಾಯ್ತು ಇದೆಲ್ಲ? ಕೇಳಿದ.

ರವಿಯ ಅಪ್ಪ : ಅದೇನು ಗ್ರಹಚಾರವೋ ಏನೋ ಪ . ನಿನ್ನೆ ಬೆಳಿಗ್ಗೆ ಡ್ಯೂಟಿಗೆ ಅಂತ ಹೊರಟವನು ದಾರೀಲಿ ಆಕ್ಸಿಡೆಂಟ್ ಆಗಿ ತುಂಬಾ ರಕ್ತ ಹೋಗಿ ಅಲ್ಲೇ ಉಸಿರು ಬಿಟ್ಟನಪ್ಪ . ಇದ್ದ ಒಬ್ಬನೇ ಮಗನನ್ನೂ ಕಸಿದುಕೊಂಡುಬಿಟ್ಟ ದೇವ್ರು.
ಕೇಳಿ ಕರುಳು ಕಿವುಚಿದಂತಾಯಿತು. ಆದರೂ ಮುಂದಿನ ಕಾರ್ಯಗಳನ್ನು ಮುಗಿಸಿ ಹೊರಡುವ ಮುನ್ನ

ಕಾರ್ತಿಕ್ : ಅಳಬೇಡಿ ಅಂಕಲ್….ಆಂಟಿ , ಇನ್ನು ಮುಂದೆ ನಾನೇ ನಿಮ್ ಮಗ. ರವಿ ತನ್ನ ಜವಾಬ್ದಾರಿಯನ್ನು ನನಗೆ ಕೊಟ್ಟು ಹೋಗಿದ್ದಾನೆ . ನಿಮ್ಮ ಎಲ್ಲಾ ಕಷ್ಟಗಳು ನನ್ನವು , ಒಂದು ಕರೆ ಮಾಡಿ ಸಾಕು ಹಾಜರಿರುತ್ತೇನೆ ಎಂದು ಹೇಳಿದ.

ರಶ್ಮಿಯನ್ನು ನೋಡಿ ” ಏನೆಂದು ಸಮಾಧಾನ ಹೇಳಲಿ ?ಸಾಕಷ್ಟು ಕನಸುಗಳನ್ನು ಹೊತ್ತು ಜೊತೆ ಬದುಕಲು ಬಂದವಳು. ಅರ್ಧ ದಾರಿಯಲ್ಲೇ ಒಂಟಿಯಾಗಿದ್ದಾಳೆ.” ಮನಸಲ್ಲೇ ಮರುಗಿದ. ನಾವು ಬಯಸುವುದು ಒಂದಾದರೆ ನಡೆಯುವುದೇ ಬೇರೆ ! ಈಗ ನಿಮ್ಮ ಮೇಲೆ ಈ ಮನೆಯ ಜವಾಬ್ದಾರಿ ಇದೆ. ನೋವಿದ್ದರೂ ಎಲ್ಲಾ ನಿಭಾಯಿಸಲೇಬೇಕಲ್ಲ, ನಿಮ್ಮೊಂದಿಗೆ ಸದಾ ನಾನಿರುತ್ತೇನೆ. ಆಗಾಗ ಬಂದು ನಿಮ್ಮನ್ನೆಲ್ಲ ನೋಡಿಕೊಂಡು ಹೋಗುತ್ತೇನೆ. ಈಗ ನಾನು ಬರುತ್ತೇನೆ ಎಂದು ಬೆಳಗಾವಿಗೆ ವಾಪಾಸಾದ. ಕಾರ್ತಿಕ್ ನ ಮಾತಿಗೆ ಸ್ಪಂದಿಸದೇ ಬರೀ ಕಣ್ಣೀರಿಡುತ್ತಾ ಕೂತಿದ್ದಳು ರಶ್ಮಿ .

ಮನೆಯಲ್ಲಿ ವಿಷಯ ತಿಳಿದು ಎಲ್ಲರೂ ತುಂಬಾ ಸಂಕಟಪಟ್ಟರು. ಅಮ್ಮ…” ಛೇ, ಎಷ್ಟು ಒಳ್ಳೇ ಹುಡ್ಗ ಅವ್ನು.. ಹೀಗೆ ಆಗ್ಬಾರ್ದಿತ್ತು… ನಾವೂ ಬರ್ತಿದ್ವಿ ನಿನ್ ಜೊತೆ… ಅವ್ರಿಗೊಂದಿಷ್ಟು ಸಮಾಧಾನ ಮಾಡೋಕೂ ಆಗ್ಲಿಲ್ಲ ” ಅಂದರು. ” ನಾಲ್ಕು ದಿನ ಹೋಗ್ಲಿ, ನಾನೇ ಫೋನ್ ಮಾಡಿ ಕೊಡ್ತೀನಿ ಮಾ, ಈಗ ಯಾರೂ ಮಾತಾಡೋ ಸ್ಥಿತಿಲಿ ಇಲ್ಲ” ಅಂದ ಕಾರ್ತಿಕ್. ಸರಿ ಎಂದು ಸುಮ್ಮನಾದರು ಅಮ್ಮ.

ಒಂದು ವಾರ ಕಳೆಯಿತು… ಕಾರ್ತಿಕ್ ರವಿಯ ತಂದೆಗೆ ಕರೆ ಮಾಡಿ ” ಅಂಕಲ್ ಹೇಗಿದ್ದೀರಿ? ಆರೋಗ್ಯ ಹೇಗಿದೆ? ನಿಮ್ಮ ಅಕೌಂಟ್ ಗೆ ಸ್ವಲ್ಪ ಅಮೌಂಟ್ ಹಾಕ್ತೀನಿ ಅಂಕಲ್ , ಪ್ಲೀಸ್ ಬೇಡ ಅನ್ನಬೇಡಿ ” ಎಂದ.

” ಬೇಡಪ್ಪ , ಸಾಲ ಮಾಡದೇ ಏನಿದೆಯೋ ಅದರಲ್ಲೇ ತೃಪ್ತಿಪಟ್ಟುಕೊಂಡು ಬದುಕಿದವರು ನಾವು. ಹೊಸ ಮನೆಗೆ ಸ್ವಲ್ಪ ಸಾಲವಾಗಿತ್ತು. ನಮ್ಮ ಸುರಕ್ಷತೆ ಬಗ್ಗೆ ಯೋಚಿಸಿ ರವಿ ಮೊದಲೇ ಲೈಫ್ ಇನ್ಸೂರೆನ್ಸ್ ಮಾಡಿಸಿದ್ದಾನೆ ನೋಡು.. ಇಲ್ಲವಾಗಿದ್ದರೆ ನಾವು ಈ ವಯಸ್ಸಲ್ಲಿ ಎಷ್ಟು ಕಷ್ಟಪಡ್ಬೇಕಿತ್ತೋ ಏನೋ ! ಏಜೆಂಟ್ ಕುಮಾರ್ ಬಂದು ಎಲ್ಲಾ ದಾಖಲೆಗಳನ್ನು ಕೊಡಲು ತಿಳಿಸಿದ್ದಾರೆ. ಹಣದ ಕೊರತೆ ಇಲ್ಲ, ಆದ್ರೆ…. ಆದ್ರೆ ಅವನೇ ಇಲ್ಲವಲ್ಲಪ್ಪ ” ಅಂತ ಅತ್ತರು.

ಎಲ್ಲಾ ವಿಧಿ ಅಂಕಲ್, ನಮ್ಮ ಕೈಲೇನಿದೆ ಅಲ್ವಾ ? ನೀವು ಸಮಾಧಾನ ತಂದುಕೊಳ್ಳಬೇಕು.
ಹೌದಪ್ಪ… ನಿಟ್ಟುಸಿರುಬಿಟ್ಟರು.

ಅಂದು ಕಾರ್ತಿಕ್ ಕಂಪನಿಯ ಮೀಟಿಂಗಿಗೆ ಬೆಂಗಳೂರಿಗೆ ಹೋಗಬೇಕಾಗಿ ಬಂತು . ಕುಸುಮ ” ರಿ…. ಹೇಗೋ ಹೋಗಿರ್ತೀರಲ್ಲ , ರಶ್ಮಿ ಮತ್ತೆ ಮನೆಯವರನ್ನು ಮಾತಾಡಿಸಿಕೊಂಡು ಬನ್ನಿ” ಅಂದಳು.

ಕಾರ್ತಿಕ್ ಅಲ್ಲಿ ಒಂದು ದೊಡ್ಡ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದ. ರವಿಯ ಮನೆಗೆ ಹೋಗಲು ಸಮಯ ಇಲ್ಲದ್ದರಿಂದ ರಶ್ಮಿಗೆ ಕರೆ ಮಾಡಿದ . ” ಸಾಧ್ಯವಾದರೆ ಊಟಕ್ಕೆ ಬನ್ನಿ ರಶ್ಮಿ ಹೋಟೆಲ್ಗೆ ಅಂದ.

ಅವಳೂ ಬಂದಳು. ಕಾರ್ತಿಕ್ ನನ್ನು ನೋಡಿ ಖುಷಿ ಇಂದ ಮಾತಾಡಿಸಿದಳು. ಇಬ್ಬರೂ ಅದೂ ಇದೂ ಮಾತಾಡುತ್ತಾ ಊಟ ಮಾಡಿದರು. ಕಾರ್ತಿಕ್ ” ಸರಿ ತಡವಾಗುತ್ತಿದೆ , ಹೊರಡೋಣ , ನನ್ನನ್ನೂ ಹಾಗೇ ರೂಮ್ಗೆ ಡ್ರಾಪ್ ಮಾಡ್ತೀರಾ ತೊಂದ್ರೆ ಇಲ್ಲ ಅಂದ್ರೆ ? ” ಕೇಳಿದ.

ರಶ್ಮಿ :: ಖಂಡಿತ ! ಡ್ರಾಪ್ ಮಾಡ್ತೀನಿ . ಅದಕ್ಯಾಕೆ ಸಂಕೋಚ ? ಬನ್ನಿ…

ಎಂದು ಕಾರು ಹತ್ತಿದಳು ತನ್ನ ಖುಷಿಯನ್ನು ತೋರಿಸಿಕೊಳ್ಳದೆ ! ರೂಮ್ ಸಮೀಪ ಬರುತ್ತಿದ್ದಂತೆ ಕಾರ್ತಿಕ್ ಕಾರಿಂದ ಇಳಿದು ಸರಿ… ಬೈ ಹೇಳಿದ. ಅವನನ್ನು ತಡೆದ ರಶ್ಮಿ ಕಾರ್ತಿಕ್ …. ಎಂದು ಕೂಗಿ ನನ್ನನ್ನ ಕರೆಯೊಲ್ವಾ ಎಂದು ರಾಗ ಎಳೆದಳು…ಕಾರ್ತಿಕ್ ಕೊಂಚ ಗಲಿಬಿಲಿಗೊಂಡ….. ಅದೂ ಅದೂ …. ನೀವು … ಬೇಡ… ಬಡಬಡಿಸಿದೆ. ಅವಳೂ ನಕ್ಕು ಕಾರು ಹತ್ತಿ ಮನೆ ಕಡೆ ಹೊರಟಳು.

ಕಾರ್ತಿಕ್ ಮಂಚದ ಮೇಲೆ ಮಲಗಿದ್ದರೂ ಮನಸ್ಸು ಮಾತ್ರ ರಶ್ಮಿ ಬಗ್ಗೆ ಯೋಚಿಸುತ್ತಿತ್ತು . ಇಷ್ಟು ಹೊತ್ತು ಜೊತೆಯಲ್ಲೇ ಇದ್ದೆವು. ಆಗ ಹೇಳಲಾಗದ್ದು ಈಗ ಏನು ಹೇಳಬೇಕೆಂದಿದ್ದರು ? ಅವರ ಅತ್ತೆ ಮಾವನ ಬಗ್ಗೆ ? ಕೆಲಸದ ಬಗ್ಗೆ ಏನಾದ್ರೂ ಹೇಳೋಕೆ ಇತ್ತಾ? ಒಂಟಿ ಹೆಣ್ಣೆಂದು ಯಾರಾದರೂ ತೊಂದರೆ ಕೊಡುತ್ತಿರಬಹುದಾ? ಏನಿದ್ದಿರಬಹುದು? ಆದರೆ ಅವರ ನಡವಳಿಕೆ ಬೇರೆ ಥರಾನೇ ಇತ್ತಲ್ಲ. ಯೋಚಿಸುತ್ತಾ ಉತ್ತರ ಸಿಗದೆ ಹಾಗೇ ನಿದ್ರೆಗೆ ಜಾರಿದ.

ಮರುದಿನ ಎಲ್ಲ ವಿಷಯವನ್ನು ತನ್ನ ಹೆಂಡತಿಯಲ್ಲಿ ಹೇಳಿದ . ಅವಳು, ” ನೀವು ಇನ್ನೊಮ್ಮೆ ಬೆಂಗಳೂರಿಗೆ ಹೋದಾಗ ಹೀಗೆ ಅವಳನ್ನು ಬರಲು ಹೇಳಿ. ಸರಿಯಾಗಿ ತಿಳಿಯದೆ ಸಂಶಯ ಪಡುವುದು ತಪ್ಪು. ನೋಡೋಣ , ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇದೆ, ಚಿಂತಿಸಬೇಡಿ” ಎಂದಳು.

ಕಾರ್ತಿಕ್ ತನ್ನ ಹೆಂಡತಿಯ ವಿಚಾರವಂತಿಕೆಗೆ ತುಂಬಾ ಹೆಮ್ಮೆ ಎನಿಸಿತು. ಹಣೆಗೊಂದು ಸಿಹಿಮುತ್ತನಿಟ್ಟು ತಬ್ಬಿಕೊಂಡ. ಗಂಡನ ಅಪ್ಪುಗೆಯಲ್ಲಿದ್ದರೂ ಮುಂದಿನ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಕೊಡು ದೇವರೇ ಎಂದು ಮನದೊಳಗೇ ದೇವರ ಬೇಡಿಕೊಂಡಳು ಕುಸುಮ. ಆದರೂ ತನ್ನ ಗಂಡನ ಮೇಲೆ ಪ್ರೀತಿ ನಂಬಿಕೆಯಲ್ಲಿ ಒಂಚೂರೂ ಸಂಶಯ ಮೂಡಲಿಲ್ಲ .

ಕೆಲವು ತಿಂಗಳ ನಂತರ ಮತ್ತೊಮ್ಮೆ ಕಾರ್ತಿಕ್ ಬೆಂಗಳೂರಿಗೆ ಹೋಗುವ ಸಂದರ್ಭದಲ್ಲಿ ಮೊದಲೇ ನಿರ್ಧರಿಸಿದಂತೆ ಈ ಸಾರಿಯೂ ರಶ್ಮಿಗೆ ಕರೆ ಮಾಡಿದ್ದ. ಇಬ್ಬರೂ ಜೊತೆಯಲ್ಲಿ ಕೂತು ಮಾತಾಡುತ್ತ ಊಟವನ್ನು ಮುಗಿಸಿದರು. ಸರಿ ತುಂಬಾ ತಡವಾಗ್ತಿದೆ , ನನಗೆ ಜರ್ನಿ ಮಾಡಿ ಸ್ವಲ್ಪ ಸುಸ್ತು , ಹೊರಡೋಣ್ವಾ , ನನ್ನನ್ನ ರೂಮಿಗೆ ಡ್ರಾಪ್ ಮಾಡ್ತೀರಾ ಪ್ಲೀಸ್ ರಶ್ಮಿ ಎಂದು ರಾಗವೆಳೆದ.

ರಶ್ಮಿ :: ‘ನಿಮಗಿಲ್ಲ ಅಂತೀನಾ? ಬನ್ನಿ ಹೋಗೋಣ’ ಎಂದು ಎದ್ದು ನಿಂತಳು . ನೀವೇ ಡ್ರೈವ್ ಮಾಡಿ ಎಂದು ಕೀ ಕೊಟ್ಟು ಮುಂದಿನ ಸೀತಿನಲ್ಲಿ ಕೂತಳು. ಹೋಟೆಲ್ ಬಂದಾಗ ರಶ್ಮಿ ಕೂಡ ಇಳಿದು ಕಾರಿಗೊರಗಿ ನಿಂತಳು. ರಶ್ಮಿ ” ಹೌದೂ.. ಇವತ್ತೂ ನೀವು ನನ್ನ ಬಾ ಅಂತ ಕರೆಯಲ್ವಾ” ತುಂಟತನದಲ್ಲಿ ನಕ್ಕಳು “ಸರಿ ಈಗ ಕರೀತಿದೀನಲ್ಲ ಬನ್ನಿ ಎಂದ.

ಕಾರ್ ಪಾರ್ಕ್ ಮಾಡಿ ರೂಮೊಳಗೆ ಬಂದರು. ಕಾರ್ತಿಕ್ ರೆಸ್ಟ್ ರೂಮ್ಗೆ ಹೋಗಿ ಬರ್ತೀನಿ ಅಂತ ಹೋದ.. ಅಷ್ಟರಲ್ಲಿ ಕಾರ್ ಪಾರ್ಕ್ ಮಾಡಿ ರೂಮೊಳಗೆ ಬಂದರು. ಕಾರ್ತಿಕ್ ರೆಸ್ಟ್ ರೂಮ್ಗೆ ಹೋಗಿ ಬರ್ತೀನಿ ಅಂತ ಹೋದ.. ಅಷ್ಟರಲ್ಲಿ ತನ್ನ ವ್ಯಾನಿಟಿ ಬ್ಯಾಗ್ ಅನ್ನು ಟೇಬಲ್ ಮೇಲಿಟ್ಟು ಅವನು ಬರೋದನ್ನೇ ಕಾಯುತ್ತಾ ಕೂತಳು. ” ನಿಮ್ಗೆ ಮನೆಗೆ ತಡ ಆಗ್ತಾ ಇಲ್ವಾ ? ” ಕೇಳುತ್ತಾ ಆ ಕಡೆ ತಿರುಗಿ ಟವೆಲ್ನಲ್ಲಿ ಮುಖ ಒರೆಸಿಕೊಳ್ಳುತ್ತಿದ್ದವನನ್ನು ಹಿಂದಿನಿಂದ ಗಾಢವಾಗಿ ಆಲಂಗಿಸಿದಳು ರಶ್ಮಿ. ತುಂಬಾ ಸಮಯದ ನಂತರ ಒಬ್ಬ ಪುರುಷನ ಸಾಂಗತ್ಯದಲ್ಲಿ ಅವಳು ರೋಮಾಂಚನಗೊಂಡಳು.. ನವಿರಾಗಿ ಅವನ ಬೆನ್ನಿಗೆ ತುಟಿಮುದ್ರೆ ಒತ್ತಿದಳು. ಅವನೂ ಒಂದು ಕ್ಷಣ ಕಳೆದುಹೋದ. ಅವಳ ಬಿಸಿಯುಸಿರು, ಮೃದು ಮಲ್ಲಿಗೆಯಂತ ಕೈಗಳು ಅವನೆದೆಯನ್ನು ಸ್ಪರ್ಶಿಸುವಾಗ , ಹಿತವಾದ ಅಪ್ಪುಗೆಗೆ ಮೋಹಗೊಂಡು ಹಿತಾನುಭವ ಪಡೆದ. ತಾನೂ ಸ್ಪಂದಿಸಿದ.

ಮರುಕ್ಷಣವೇ ಅವನಲ್ಲಿ ಪ್ರಜ್ಞೆ ಜಾಗೃತವಾಯಿತು. ತನ್ನ ಹೆಂಡತಿ ಕುಸುಮಳ ನೆನಪಾಯಿತು. ಅರೆ, ನಾನಿದೇನು ಮಾಡುತ್ತಿದ್ದೇನೆ ? ಇವಳು ನನ್ನ ಪ್ರಾಣ ಸ್ನೇಹಿತನ ಹೆಂಡತಿ, ಮಿತ್ರ ದ್ರೋಹ ಮಾಡುತ್ತಿದ್ದೇನಲ್ಲ… ತಕ್ಷಣ ರಶ್ಮಿಯನ್ನು ದೂರ ತಳ್ಳಿದ. ಅವನ ಬಾಹುಗಳ ಅಪ್ಪುಗೆಯಲ್ಲಿ ಸುಖಿಸುತ್ತಿದ್ದವಳು ಗಾಬರಿಯಿಂದ ನೋಡುತ್ತಿದ್ದಳು.

ಇಲ್ಲ ರಶ್ಮಿ , ಕ್ಷಮಿಸಿ ಒಂದು ಕ್ಷಣ ನಾನೂ ಮೈ ಮರೆತುಬಿಟ್ಟೆ. ಇದು ತಪ್ಪು. ನನಗೂ ಮದ್ವೆ ಆಗಿದೆ, ಕುಸುಮ ನನ್ನನ್ನು ತುಂಬಾ ಪ್ರೀತಿಸ್ತಾಳೆ ಮತ್ತು ತುಂಬಾ ನಂಬಿಕೆ ಇಟ್ಟಿದ್ದಾಳೆ. ತನ್ನ ಹೆಂಡ್ತಿ ಪವಿತ್ರವಾಗಿರಬೇಕು ಅಂತ ಬಯಸೋ ಗಂಡೂ ಕೂಡ ಅಷ್ಟೇ ಪವಿತ್ರವಾಗಿರಬೇಕು ಅಲ್ವಾ?

“ಪ್ರಾಯದಲ್ಲಿ ಗಂಡನ ಕಳೆದುಕೊಂಡು ಒಂಟಿಯಾಗಿರುವ ನಿಮ್ಮ ಬಗ್ಗೆ ಕರುಣೆ ಇದೆ . ಈಗಲೂ ನೀವು ಆ ಮನೆಯಲ್ಲಿಯೇ ಇದ್ದು ಎಲ್ಲವನ್ನು ನಿಭಾಯಿಸುತ್ತಿರುವ ಬಗ್ಗೆ ಹೆಮ್ಮೆ ಕೂಡ ಇದೆ. ತೋರಿಸಿದ ಕಾಳಜಿಯನ್ನೇ ಪ್ರೀತಿ ಅಂದುಕೊಂಡು ನೀವೂ ಮುಂದುವರೆದಿದ್ದೀರಿ. ನೀವಂದುಕೊಂಡ ಹಾಗೆ ಎಲ್ಲಾ ಗಂಡಸರೂ ಸ್ತ್ರೀಯ ಪರಿಸ್ಥಿತಿಯ ಲಾಭ ಪಡೆಯಲು ಬಯಸುವುದಿಲ್ಲ . ಬಾಂಧವ್ಯಗಳ ಕುರಿತು ಮೌಲ್ಯ ಇರುತ್ತದೆ . ನಿಸ್ವಾರ್ಥತೆ ಯಿಂದ ಸಹಾಯ ಮಾಡುವ ಗುಣವಿರುತ್ತದೆ. ಅರ್ಥ ಮಾಡಿಕೊಳ್ಳಿ ರಶ್ಮಿ . ಎಲ್ಲರಂತೆ ನಿಮಗೂ ಆಸೆ ಆಕಾಂಕ್ಷೆ ಇರುವುದು ಸಹಜ . ಅದು ತಪ್ಪೂ ಅಲ್ಲ, ಇಡೀ ಜೀವನ ಗಂಡನ ನೆನಪಿನಲ್ಲಿ ಒಂಟಿಯಾಗಿ ಕಳೆಯಿರಿ ಎಂದು ನಾನು ಹೇಳುವುದಿಲ್ಲ. ನಿಮಗೂ ಒಂದು ಜೀವದ ಆಸರೆ, ಪ್ರೀತಿ ಎಲ್ಲಾ ಬೇಕು. ಹಾಗಂತ ಇಂಥ ಯೋಚನೆಗಳು ಒಳ್ಳೇದಲ್ಲ. ಹೀಗೆ ಪ್ರೀತಿಯನ್ನು ಹುಡುಕುತ್ತಾ ಮೋಸ ಹೋಗುತ್ತಾರೆ ಹೆಣ್ಣು ಮಕ್ಕಳು. ನಿಮ್ಮ ನಗುವಲ್ಲಿ ನನ್ನ ಗೆಳೆಯನ ಸಂತೃಪ್ತ ಆತ್ಮವನ್ನು ನೋಡಲು ಬಯಸುತ್ತೇನೆ. ಕೊನೆವರೆಗೂ ನಿಮ್ಮ ಅಣ್ಣನಾಗಿ ನಿಮ್ಮ ಕಷ್ಟ ಸುಖದಲ್ಲಿ ಜೊತೆ ನಿಲ್ಲುತ್ತೇನೆ . ಯೋಚಿಸಿ ” ಎಂದು ಹೇಳಿ ಹೋಟೆಲ್ನ ಪಾರ್ಕ್ ಕಡೆ ಬಿರುಸಾಗಿ ಹೆಜ್ಜೆ ಹಾಕಿದ. ಕೆಲವು ನಿಮಿಷಗಳವರೆಗೂ ರೂಮಿನಲ್ಲಿ ಒಬ್ಬಳೇ ಅಳುತ್ತಾ ಕೂತಿದ್ದವಳ ಕಿವಿಯಲ್ಲಿ ಕಾರ್ತಿಕ್ ನಾ ಮಾತುಗಳೇ ಮಾರ್ದನಿಸುತ್ತಿತ್ತು.

ನಿಜ. ಇಂಥ ಒಬ್ಬ ಒಳ್ಳೆಯ ವ್ಯಕ್ತಿಯನ್ನು ದುಡುಕಿ ಕಳೆದುಕೊಳ್ಳುತ್ತಿದ್ದೆನಲ್ಲ ! ಈ ಹೆಣ್ಣು ಕುಲ ಯಾಕೆ ಗಂಡಸರ ಒಳ್ಳೆತನವನ್ನು ಗುರುತಿಸುವುದಿಲ್ಲ. ನಂಬಿಕೆಗೆ ಪದೇಪದೇ ಪೆಟ್ಟು ಬಿದ್ದಾಗ ಯಾರಾದರೂ ಹೇಗೆ ತಾನೇ ನಂಬಿಯಾರು? ಆದ್ರೆ ನಾನು ಆ ತಪ್ಪು ಮಾಡಬಾರದು ಎಂದು ಪಶ್ಚಾತಾಪದಲ್ಲಿ ಅಳುತ್ತಲೇ ಕಾರ್ತಿಕ್ ಹತ್ತಿರ ಹೋಗಿ ಅವನ ಕಾಲು ಹಿಡಿದು ಕ್ಷಮೆ ಕೇಳುತ್ತಾಳೆ.

ಕಾರ್ತಿಕ್ ಕೂಡ ತನ್ನ ತಪ್ಪನ್ನ ಅರಿತಿದ್ದ. ಹಾಗಾಗಿ ” ಹುಚ್ಚಿ, ಪ್ರೀತಿ ಅಂದುಕೊಂಡು ಹೀಗೆ ನೀನು ಯಾರ್ಯಾರನ್ನೋ ನಂಬಿ ಮೋಸ ಹೋಗೋಕೆ ಮುಂಚೆ ಒಬ್ಬ ಒಳ್ಳೆ ಹುಡುಗನ್ನ ಹುಡುಕಿ ಮದ್ವೆ ಮಾಡಿ ಬಿಡಬೇಕು ನಿಂಗೆ. ನನ್ ಜವಾಬ್ದಾರಿನೂ ಕಡ್ಮೆ ಆಗುತ್ತೆ. ಸಾಕು ಸುಮ್ನೆ ಇರು ಅಳಬೇಡ ಅಂತ ಕಣ್ಣೀರನೊರೆಸುತ್ತಾ ಹೇಳಿದ……. ಈ ಹೋಟೆಲ್ನವ್ರು ಇಲ್ಲಿ ಒಂದು ಬಕೆಟ್ ಕೂಡ ಇಟ್ಟಿಲ್ಲ ! ಬಕೆಟ್ ಯಾಕೆ ? ಮುಗ್ಧತೆಯಲ್ಲಿ ಕೇಳಿದಳು… ಇನ್ಯಾಕೆ ? ನಿನ್ ಕಣ್ಣೀರ್ ತುಂಬಿಸೋಕೆ ! ಅಂತ ತಲೆಗೆ ಮೆಲುವಾಗಿ ಹೊಡೆದು ನಕ್ಕ.

ಪ್ರೀತಿ ಎಂದುಕೊಂಡು ಹುಚ್ಚುಚ್ಚಾಗಿ ತಪ್ಪು ದಾರಿ ಹಿಡಿಯುತ್ತಿದ್ದ ಹುಡುಗಿಯನ್ನು ಸರಿ ದಾರಿಗೆ ತಂದ ತೃಪ್ತಿಯಲ್ಲಿ ಕಾರ್ತಿಕ್ ನೆಮ್ಮದಿಯ ನಿದ್ರೆಗೆ ಜಾರಿದ . ತನ್ನ ಭವಿಷ್ಯವನ್ನು ರೂಪಿಸುತ್ತೇನೆ ಎಂದು ಭರವಸೆ ಕೊಟ್ಟ ಹೊಸ ಅಣ್ಣನ ಮೇಲೆ ನಂಬಿಕೆ ಇಟ್ಟು ನಿಶ್ಚಿಂತೆಯಿಂದ ತನ್ನ ಗೂಡು ಸೇರಿ ಮಲಗಿದಳು ರಶ್ಮಿ.


  • ರೂಪಶ್ರೀ ಎಂ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading