“ಭಾವಯಾನ”ಕ್ಕೆ ನಿಮ್ಮ ಪ್ರೀತಿಯ ಭಾವಜೀವಿಯಿಂದ ಬೆನ್ನುಡಿ..

ಬೆಂಗಳೂರಿನ ಕನ್ನಡ ಮೇಷ್ಟ್ರು ಉದಯೋನ್ಮುಖ ಕವಿ, ಪ್ರತಿಭಾವಂತ ಬರಹಗಾರ ಶ್ರೀಯುತ ಪುಟ್ಟಹೊನ್ನಯ್ಯನವರ ಎರಡನೇ ಕವನ ಸಂಕಲನ “ಭಾವಯಾನ” ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿದೆ. ಚೆಂದದ ಕೃತಿ. ಕೊಂಡು ಓದಿ, ಕವಿಯನ್ನು ಪ್ರೋತ್ಸಾಹಿಸಿ ಪುಟ್ಟಹೊನ್ನಯ್ಯನವರ ಅಕ್ಕರೆಯಿಂದ ಆಗ್ರಹಿಸಿ ಅವರ ಕೃತಿಗೆ ಕವಿ ಎ.ಎನ್.ರಮೇಶ್. ಗುಬ್ಬಿ ಅವರಿಂದ ಬೆನ್ನುಡಿ ಬರೆಸಲಾಗಿದೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಭಾವಯಾನ
ಲೇಖಕರು : ಪುಟ್ಟಹೊನ್ನಯ್ಯ
ಪ್ರಕಾಶನ : ನಿರುತ ಪಬ್ಲಿಕೇಷನ್
ಬೆಲೆ : ೧೦೦.೦೦

ಕನ್ನಡ ಕಾವ್ಯಲೋಕಕ್ಕೆ ತಮ್ಮ ಎರಡನೇ ಕವನ ಸಂಕಲನ ‘ಭಾವಯಾನ’ ಮೂಲಕ ಅಡಿಯಿಡುತ್ತಿರುವ ಶ್ರೀಯುತ ಪುಟ್ಟ ಹೊನ್ನಯ್ಯನವರು ಮೂಲತಃ ವೃತ್ತಿಯಿಂದ ಕನ್ನಡ ಮೇಷ್ಟ್ರು. ಹದಿನಾರು ಸಂವತ್ಸರಗಳಿಂದ ಕನ್ನಡ ಭಾಷೋಪಾಸನೆಯ ಕಾಯಕ ಮಾಡುತ್ತಾ, ಮಕ್ಕಳಿಗೆ ಕನ್ನಡ ಕಲಿಸುತ್ತಾ, ಅವರ ಹೃನ್ಮನಗಳಲ್ಲಿ ಕನ್ನಡದ ಕಂಪನ್ನು, ಬದುಕಿನಲ್ಲಿ ಕನ್ನಡದ ಕಾಂತಿಯನ್ನು ಪಸರಿಸುತ್ತಾ ಕನ್ನಡದ ದೀಪ ಬೆಳಗುತ್ತಿರುವ ಪುಟ್ಟಹೊನ್ನಯ್ಯನವರು ಪ್ರವೃತ್ತಿಯಿಂದ ನಗೆ ಬರಹಗಾರರು, ಸೃಜನಶೀಲ ಕವಿ ಮತ್ತು ಸಂವೇದನಾಶೀಲ ಲೇಖಕರು.
‘ಭಾವಯಾನ’ ಇದು ಅವರ ಎರಡನೆಯ ಕೃತಿ. ಈ ಕವನಸಂಕಲನದಲ್ಲಿ 70 ವೈವಿಧ್ಯಮಯ ಕವಿತೆಗಳಿವೆ. ಈ ಕೃತಿಯಲ್ಲಿ ಶ್ರೀಯುತರು ಒಂದಕ್ಕಿಂತ ಒಂದು ವಿಭಿನ್ನವಾದ ಭಾವಪೂರ್ಣ ಮತ್ತು ಅಷ್ಟೇ ಅರ್ಥಪೂರ್ಣವಾದ ಕವನ ಕುಸುಮಗಳನ್ನು ಪೆÇೀಣಿಸಿ, ಚೆಂದದ ಕಾವ್ಯಮಾಲೆ ಕಟ್ಟಿಕೊಟ್ಟಿದ್ದಾರೆ. ಪ್ರತಿ ಕವಿತೆಯ ವಸ್ತು ಮತ್ತು ಪ್ರಸ್ತುತಿ ವಿನೂತನವಾಗಿದೆ. ಗ್ರಾಮೀಣ ಪ್ರದೇಶದ, ಬಡ ಕುಟುಂಬದಿಂದ ಬಂದು, ತಮ್ಮ ಸ್ವಂತ ಪ್ರತಿಭೆ, ಅವಿರತ ಪರಿಶ್ರಮ, ಕಠಿಣ ದುಡಿಮೆಗಳಿಂದ ಬದುಕಿನ ನೆಲೆ ಕಂಡುಕೊಂಡ ಪುಟ್ಟಹೊನ್ನಯ್ಯನವರ ಬದುಕಿನ ಹೋರಾಟ, ಕಂಡ ಕಟುಸತ್ಯ, ಪಾಲಿಸಿದ ತತ್ವ, ಅನುಸರಿಸಿದ ಆದರ್ಶ ಅವರ ಕವಿತೆಯ ಸಾಲುಗಳಲ್ಲಿ ವ್ಯಕ್ತವಾಗಿವೆ. ಅವರ ಭವ್ಯ ಕವಿಹೃದಯದ ಕಲ್ಪನೆ, ಕಾಮನೆ, ಸ್ಪಂದನೆ, ಭಾವಸಂವೇದನೆಗಳು ಮುದ ನೀಡಿ, ಓದುಗರನ್ನು ಮೂಕವಿಸ್ಮಿತರನಾಗಿಸುತ್ತದೆ.

ಚೊಚ್ಚಲ ಪ್ರಯತ್ನದಲ್ಲೇ ಭರವಸೆ ಮೂಡಿಸಿರುವ ಶ್ರೀಯುತರ ಕವನ ಸಂಕಲನದ ಕವಿತೆಗಳು ಜೀವನ್ಮುಖಿಯಾಗಿ, ಸಮಾಜಮುಖಿಯಾಗಿ ಹೊಳೆಯುತ್ತವೆ. ಸೆಳೆಯುತ್ತವೆ. ‘ಅಂದು ಎನ್ನ ತುಳಿದು ಮೆರೆದವರು, ಇಂದು ಎನ್ನ ಜರಿಯುತಿಹರು’, ‘ಮಕ್ಕಳ ಭವಿಷ್ಯವ ಬರೆಯುತ, ತಮ್ಮ ಭವಿಷ್ಯವನ್ನೇ ಮರೆತವರು’, ‘ಹುಟ್ಟಿ ಬಂದಿರುವೆ ಪಡೆದು ಮಾರಪಿತನ ಶೋಡಶಾಂಶವ, ಬದುಕು ದೂಡಲಿಕ್ಕೆ ನೀಡು ನಿನ್ನದೊಂದು ಅಂಶವ’ ಎನ್ನುವಂತಹ ಅನೇಕ ಸಾಲುಗಳ ಮೂಲಕ ಪುಟ್ಟಹೊನ್ನಯ್ಯನವರು ಥಟ್ಟನೆ ಓದುಗನ ಎದೆಯಾಳಕ್ಕಿಳಿದು ವಿಸ್ಮಯಗೊಳಿಸುತ್ತಾರೆ.
ಇಂತಹ ಉತ್ತಮ ಸಂಗ್ರಹಯೋಗ್ಯ ಮಧುರ ಕಾವ್ಯಕೃತಿಯನ್ನು ಕೊಡಮಾಡಿದ ಉದಯೋನ್ಮುಖ ಕವಿ ಶ್ರೀ ಪುಟ್ಟಹೊನ್ನಯ್ಯನವರನ್ನು ಅಭಿನಂದಿಸುತ್ತಾ, ಶ್ರೀಯುತರಿಂದ ಮತ್ತಷ್ಟು ಕೃತಿಗಳು ಮೂಡಿ ಬಂದು ಕನ್ನಡ ಕಾವ್ಯಲೋಕವನ್ನು ಬೆಳಗಲಿ ಎಂದು ಆಶಿಸುತ್ತಾ, ಆ ಸಾಹಿತ್ಯ ಸರಸ್ವತಿ ಶ್ರೀಯುತರಿಗೆ ಅಕ್ಷರಲೋಕದಲ್ಲಿ ಉತ್ತರೋತ್ತರ ಶ್ರೇಯೋಭಿವೃದ್ದಿಗಳನ್ನು ನೀಡಲೆಂದು ಹಾರೈಸುತ್ತೇನೆ.


  • ಎ.ಎನ್.ರಮೇಶ್. ಗುಬ್ಬಿ – ಕವಿ, ನಾಟಕಕಾರರು, ನಿರ್ದೇಶಕರು, ಕೈಗಾ. ಕಾರವಾರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading