‘ನೀಲಿ ಗಗನದ ತುಂಬಾ ಅಚ್ಚ ಬಿಳಿಯ ಹಕ್ಕಿಗಳು’… ಕವಿ ನಾಗರಾಜ ಬಿ.ನಾಯ್ಕ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ …
ಕಡಲ ತೆರೆಗಳ ಮೇಲೆ
ಜೀವನದ ಹಡಗು
ಅಲೆಗಳಲಿ ಮಾತನಾಡಿ
ಸುಮ್ಮನೆ ಸಾಗಿದಂತೆ
ಒಡಲಲ್ಲಿ ಜೀವಗಳ ರಾಶಿ
ಮೇಲೆ ತೆರೆಗಳ ಹಾಡು
ಕೌತುಕದಿ ಕುಣಿವ ದೋಣಿ
ಯಾರೋ ಬಿಡಿಸಿದ ಚಿತ್ರದಂತೆ
ನೀಲಿ ಗಗನದ ತುಂಬಾ
ಅಚ್ಚ ಬಿಳಿಯ ಹಕ್ಕಿಗಳು
ಸಾಗರದಂಚಿಗೆ ಸುತ್ತಾಡುವ
ಕಡಲ ಹಕ್ಕಿಯ ಒಲವಿನಂತೆ
ಪುಟ್ಟ ದೋಣಿಯ ಮೇಲೆ
ಬೆವರ ಹನಿಗಳ ಬಿಂದು
ಕುಳಿತು ಮುದಗೊಂಡಿತು
ನಲಿವು ಗೆದ್ದು ಕೊಂಡಂತೆ
ತಂಗಾಳಿ ಅಲೆಯಲ್ಲಿ ಉಳಿದ
ಹೊಂಬೆಳಕ ಸೊಬಗಲ್ಲಿ
ಜಿಗಿವ ಮೀನಂಚ ಕಣ್ಣಲ್ಲಿತ್ತು
ಮನದ ಚಿತ್ರ ಚಿತ್ತಾರದಂತೆ
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ
