ಮಾತಾಡಿ ಎಲ್ಲೋ ಹೊರಟಂತೆ ಕಾಣುವ ಪುಟ್ಟ ದೋಣಿಯ ತುಂಬಾ…ಕವಿ ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಹಗಲು ತುಂಬುವ ಕನಸು
ಪುಟ್ಟ ದೋಣಿಯಲ್ಲಿ
ಸಂಚರಿಸಿ ದಡಕೆ
ಮರಳುತ್ತಿತ್ತು ಖಾಲಿ
ಏನಿಲ್ಲವೆಂದರೂ ಬೊಗಸೆ
ತುಂಬುವಷ್ಟು ಪ್ರೀತಿಯ ಹೊತ್ತು
ಮಾತಿನ ಗುರುತಿಗೆ
ಮರಕಳಿಸುತಿತ್ತು ಕನಸುಗಳ
ಅಲೆಗಳ ನಡುವೆ
ಅಲೆಗಳ ಚಿತ್ತಾರ ಬಿಡಿಸಿ
ತಂದು ಹರಡಿತ್ತು ಮನಕೆ
ಗಾಳಿಯಂಗಳದಿ ಒಲವಿನ
ಮಂದಾರವಿರಿಸಿ
ಜಗದ ನಿಯಮಕೆ
ತಾನೇ ತಾನಾಗಿ ನಿಂತು
ಬೆಳಕಿನ ಎಳೆಗೆ
ಚಿನ್ನದ ಅಂಚು ಅಂಟಿಸಿ
ನೋಟವಾಗಿ ಉಳಿದಿತ್ತು
ಈ ಜಗದಿ
ಅಂದದ ಉಸಿರಿನ
ಮೂಲವೂ ಉಸಿರು
ಸಾಗುವ ಸಾಲುಗಳು
ಮಾತಾಡಿ ಎಲ್ಲೋ ಹೊರಟಂತೆ
ಕಾಣುವ ಪುಟ್ಟ
ದೋಣಿಯ ತುಂಬಾ
ಬದುಕಿನ ಚಿತ್ರಗಳು
ಆಪ್ತ ಸಂಚಿಕೆಗೆ
ಹೊಸ ಪುಟಗಳ
ಹಳೆಯ ಸಾಲುಗಳು
ಅವ್ಯಕ್ತವಾಗಿ ಕವಿತೆಯೊಳಗೆ
ಸಾಗಿ ಬಂದಂತೆ
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ.
