ಪ್ರತಿಯೊಬ್ಬ ಜೀವಿಯು ಬದುಕಿನಲ್ಲಿ ಮೂರು ಹಂತಗಳನ್ನು ಕಾಣಲೇಬೇಕು. ಜನನ,ಜೀವನ ಮರಣ ಈ ಮೂರು ಹಂತಗಳು ಕರ್ಮಫಲದಿಂದಲೆ ಬರುವುದು ನಿಶ್ಚಿತ. ಯಾವುದೇ ಕಾರಣಕ್ಕೂ ಪರಮಾತ್ಮನ ಮರೆಯದೇ ಸುಖವಾಗಿ ಜೀವನ ಬಂಡಿಯನ್ನು ನಡೆಸಲು ಪ್ರಯತ್ನಿಸೋಣ. ಕೆ ಸಂಧ್ಯಾ ಅವರ ಲೇಖನಿಯಲ್ಲಿ ಮೂಡಿದ ಬದುಕಿನ ಸಾರವನ್ನು ಕವಿತೆಯ ಮೂಲಕ ಕಟ್ಟುಕೊಟ್ಟಿದ್ದಾರೆ ತಪ್ಪದೆ ಮುಂದೆ ಓದಿ…
ಸ್ವಾತಂತ್ರ್ಯ, ಹಕ್ಕು ಪ್ರಜಾಪ್ರಭುತ್ವ ಎನ್ನುತ ಬದುಕಿನ ಮಹತ್ವವೇ ಅಳಿಸಿ ಹೋಗಿದೆ.ಆಧುನಿಕ ಹೆಸರಿನಿಂದಿರುವ ಲೌಕಿಕ ಸೆಳೆತದಿಂದ ಪರಮಾತ್ಮನ ಇರುವು ಮರೆತಂತಾಗಿದೆ. ಮಾನವನು ತನ್ನ ತಾ ಅರ್ಥ ಮಾಡಿಕೊಳ್ಳಲು ಬದುಕಿಗೊಂದು ದಾರಿ, ಜೀವನಕ್ಕೆ ಒಂದು ಗುರಿ,ಆಚರಣೆಗೊಂದು ಧರ್ಮ ನಂಬಿಕೆಗೆ ಸರ್ವೋತ್ತಮ ದೈವ ಇವು ಸಾಧನಗಳು.
ಸರ್ವೋತ್ತಮ ದೈವ ಎಂಬುದು ಅಧ್ಯಾತ್ಮಿಕ ಚಿಂತನೆಗಳ ಉಸಿರು. ಬದುಕಿಗೆ ಬೇಕು ಈ ಸುಂದರ ಚೌಕಟ್ಟು.ಇವುಗಳಲ್ಲಿದ್ದು ಹೆಮ್ಮೆ ಪಡಬೇಕು. ಮೀರಿ ನಾನು ಎಂಬ ಅಹಂನಲ್ಲಿ ದಾನವನ ಆವೇಶ ಸೇರುತ್ತದೆ. ಬದಕನ್ನು ಮರೆತು ಮಾಡುವ ಕರ್ಮಗಳು ಅಕರ್ಮಗಳಾಗಿ ಬಿಡುವವು. ಕಾರಣ ಬದುಕಿಗೆ ಅರ್ಥ ಕೊಟ್ಟು ಜೀವನವನ್ನು ಸಾರ್ಥಕಗೊಳಿಸಬೇಕು.
ಪ್ರತಿಯೊಬ್ಬ ಜೀವಿಯು ಬದುಕಿನಲ್ಲಿ ಮೂರು ಹಂತಗಳನ್ನು ಕಾಣಲೇಬೇಕು. ಜನನ,ಜೀವನ ಮರಣ ಈ ಮೂರು ಹಂತಗಳು ಕರ್ಮಫಲದಿಂದಲೆ ಬರುವುದು ನಿಶ್ಚಿತ. ಜನನ ಆಕಸ್ಮಿಕ ಎನಿಸಿದರೂ ಮರಣ ಮಾತ್ರ ನಿಶ್ಚಿತ. ಇವೆರಡರ ಮಧ್ಯ ಇರುವದೆ ಜೀವನ.ಈ ಜೀವನವೆ ಜನನ, ಮರಣಗಳಿಗೆ ಬಿಂದು.ಜೀವನದಲ್ಲಿ ನಾವು ಸಂಪಾದಿಸಿದ ಸಂಪತ್ತೆ ನಮ್ಮನ್ನು ಮಾನವ ಅಥವಾ ದಾನವನನ್ನಾಗಿ ಮಾಡುವುದು.ಪ್ರಕೃತಿಯ ನಿಯಮ ಇದು. ಬ್ರಹ್ಮಾಂಡ ಮತ್ತು ಬ್ರಹ್ಮಾಂಡದೊಳಗಗಿರುವ ಜೀವಿಗಳನ್ನು ದೇವರು ಪಂಚಭೂಗಳಿಂದ ಸೃಷ್ಟಿಸಿದ್ದಾನೆ. ಭೂಮಿ, ಜಲ, ಅಗ್ನಿ, ವಾಯು, ಆಕಾಶ ಇವು ಪಂಚಭೂತಗಳು. ಪಂಚಭೂತಗಳಾದ ಭೂಮಿಯಲ್ಲಿ ಗಂಧ, ಜಲದಲ್ಲಿ ರಸ, ಅಗ್ನಿ ಯಲ್ಲಿ ರೂಪ, ವಾಯುವಿನಲ್ಲಿ ಸ್ಪರ್ಶ ಆಕಾಶದಲ್ಲಿ ಶಬ್ದ ಎಂಬ ತನ್ಮಾತ್ರ ತತ್ವಗಳನ್ನು ಸೃಷ್ಟಿಸಿದ್ದಾನೆ. ನಮ್ಮ ಬದುಕಿಗೆ ಸಹಾಯವಾಗಲೆಂದು ಸೃಷ್ಟಿಸಿದ್ದಾನೆ. ಇವುಗಳ ಸಹಾಯದಿಂದ ಬದುಕಬೇಕಾದರೆ ನಮಗೆ ಅಹಂಕಾರವೇಕೆ?. ಇದರಿಂದ ದೇವರಿಗೆ ಲಾಭವು ಇಲ್ಲ ನಷ್ಟವೂ ಇಲ್ಲ.
ಅಧ್ಯಾತ್ಮಿಕ ಚಿಂತನೆಯಲ್ಲಿ ಬದುಕಿನ ದಾರಿ ಹುಡುಕಿದರೆ ಸಂಪಾದಿಸುವ ಜ್ಞಾನ ಸಂಪತ್ತಿನ ರಹಸ್ಯ ಸ್ವಲ್ಪ ಮಟ್ಟಿಗೆ ತಿಳಿಯುವುದು.ಅಧ್ಯಾತ್ಮಿಕ ಎಂದರೆ ನಮ್ಮ ಆತ್ಮ ಸಾಕ್ಷಿಯಾಗಿ ಸಾತ್ವಿಕದಿಂದ ದೇವರೊಬ್ಬನಿರುವನು ಎಂಬ ಅನುಸಂಧಾನದಿಂದ ಜೀವನದ ಅಧ್ಯಾಯ ಮುಗಿಸುವುದು.ಜೀವನದಲ್ಲಿ ಭಾವ,ದ್ರವ್ಯ (ಚಲನೆ), ಕ್ರಿಯೆ ಈ ಮೂರು ನಿತ್ಯ ನಡೆಯುವ ಕರ್ಮಗಳು.ಭಾವನೆಯಲ್ಲಿ ನಾವು ಯಾವ ರೀತಿ ಯೋಚನೆ ಮಾಡುತ್ತೇವೋ ಆ ರೀತಿ ಚಲನೆ ಬರುವುದು.ಆ ಚಲನೆಯೆ ಮುಂದೆ ಕರ್ಮಗಳಾಗಿ ಆ ಕರ್ಮದ ಫಲವನ್ನು ಸಂಪಾದಿಸುವೆವು. ಈ ಕರ್ಮಗಳಿಗೆ “ಅಕ್ಷರ” ಬ್ರಹ್ಮಾಂಡದ ಸಹಾಯವೇ ಮುಖ್ಯ.ಅಕ್ಷರಗಳಲ್ಲಿ ದೈವ, ಹಾಗೂ ದೈತ್ಯ ಶಕ್ತಿ ಎರಡು ಇರುವುದು.ದೈವಶಕ್ತಿ ಯಾವಾಗಲೂ “ಅಕ್ಷರ” ವಾಗಿ ಸಲಹುವ ನಿಧಿಯಾಗಿ ಸಕರ್ಮಗಳನ್ನು ಮಾಡಿಸುತ್ತದೆ. ದೈತ್ಯಶಕ್ತಿ “ಕ್ಷರ” ವಾಗಿ ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವಂತೆ ಅಕರ್ಮಗಳಲ್ಲಿ ಜೀವನವನ್ನು ಪರತಪಿಸುವಂತೆ ಮಾಡುತ್ತದೆ.ಕಾರಣ ವಿದ್ಯೆ ಬೇಕು.ವಿನಯದಿಂದ ಕೂಡಿದ ವಿದ್ಯೆ ಬೇಕು.ಆ ವಿದ್ಯೆ ಯಾರೂ ಕದಿಯಲಾರದ ನಿಧಿ.ಅದಕ್ಕೆ ದ,ರಾ, ಬೇಂದ್ರೆಯವರು “ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ”ಎಂದು ತುಂಬಾ ಸ್ವಾರಸ್ಯಕರವಾಗಿ ತಿಳಿಸಿದ್ದಾರೆ. ನಾವು ಈ ಭೂಮಿಗೆ ಯಾತ್ರಿಕರಾಗಿಯೆ ಬಂದಿರುವೆವು.ಹೋಗುವಾಗ ಕರ್ಮದ ಫಲವನ್ನು ಒಯ್ಯಲೇಬೇಕು.ಅಂದಮೇಲೆ ಗರ್ವಯಾಕೆ?ಅಧ್ಯಾತ್ಮವು ಮೂಲತಃ ಸಮಾಜ ಮುಖಿ. ಜೀವನದ ಹೋರಾಟಕ್ಕೆ ಧರ್ಮವೇ ರಕ್ಷಾಕವಚ.ಅಹಿಂಸೆಯಿಂದ ಕೂಡಿದ ಸಾತ್ವಿಕ ತತ್ವಾಚರಣೆಯೇ ಧರ್ಮ ಎಂದು ಸ್ವಾಮಿ ವಿವೇಕಾನಂದರು ಹೇಳಿರುವರು.
ಮಾನವ ಜನ್ಮ ಬರುವುದೇ ದುಲ೯ಭ.ಇದನ್ನು ಹಾನಿ ಮಾಡಕೊಳ್ಳಬೇಡಿ ಎಂದು ಪುರಂದರದಾಸರು ಹೇಳಿರುವರು.ಪರಮಾತ್ಮನು ಸಾಧನ ಶರೀರವನ್ನು ಜೊತೆಗೆ ಐದು ಜ್ಞಾನೇಂದ್ರಿಯಗಳನ್ನು, ಐದು ಕರ್ಮೇಂದ್ರಿಯಗಳನ್ನು ಜೊತೆಗೆ ವಿಶಿಷ್ಟವಾದ ಮನಸ್ಸು ಎಂಬ ಇಂದ್ರಿಯನ್ನು ಕೊಟ್ಟು ಸಾಧನೆ ಮಾಡಲು ಭೂಮಿಗೆ ಕಳಿಸಿದ್ದಾನೆ.ದೇವರು ಎಲ್ಲಿರುವನು? ಇದಕ್ಕೆ ಎಲ್ಲಿಲ್ಲ ಹೇಳಿ? ಇದುವೇ ಉತ್ತರ.ಸಮಸ್ತರಲ್ಲೂ ಅಂತರ್ಯಾಮಿಯಾಗಿ,ಸಕಲ ಇಂದ್ರಿಯಗಳಲ್ಲಿ ಪ್ರೇರಕನಾಗಿ ನಿಯಾಮಕನಾಗಿರುವನು.ಮೋಡವು ಒಂದೇ ಬಗೆಯ ನೀರನ್ನು ಮಳೆಯಾಗಿ ಸುರಿಸಿದರೂ ವೃಕ್ಷಗಳು ಮಾತ್ರ ಅವುಗಳ ಬೀಜಕ್ಕೆ ತಕ್ಕಂತೆ ಆಕಾರಗಳಲ್ಲಿ,ಹಣ್ಣುಗಳಲ್ಲಿ,ಬಣ್ಣ ರುಚಿಗಳಲ್ಲಿ ಭಿನ್ನವಾಗಿರುತ್ತವೆ.ಅದರಂತೆ ದೇವರು ಎಲ್ಲರೊಳಗೂ ಒಂದೇ ಪ್ರಮಾಣದಲ್ಲಿದ್ದರೂ ಜೀವರ ಗುಣಭೇಧಗಳಂತೆ ಕಾರ್ಯ ಮಾಡಿಸಿ ಅವರವರ ಯೋಗ್ಯತೆಗೆ ಅನುಗುಣವಾಗಿ ಫಲ ಕೊಡುವನು.ಪರಮಾತ್ಮನು ಯಾರಿಗೂ ಪಕ್ಷಪಾತ ಮಾಡುವದಿಲ್ಲ.ಅವನಿಗೆ ಯಾವ ದೋಷ ಲೇಪವಾಗುವದಿಲ್ಲ.ಪರಮಾತ್ಮನು ಕರುಣಾ ಸಾಗರ.ಅವನ ಗುಣ ಮಹಿಮೆಯನ್ನು ತಿಳಿಯಲು ನಾವು ಯಾವದೆ ಕಾರ್ಯ ಮಾಡುವಾಗಲೂ ಶುದ್ಧ ಮನಸ್ಸಿನಿಂದ ದೇವರ ಅನುಸಂಧಾನ ಪೂರ್ವಕ ಮಾಡಿದರೆ ಭಕ್ತಿಯ ರಸಪಾನ ಮಾಡಲು ಸಲಭವಾಗಿ ಸಿಗುವುದು.
ಕಮಲದ ಹೂವು ಕೆಸರಿನಲ್ಲಿದ್ದರೂ ಕೆಸರಿನ ಬಾಧೆ ಅದಕ್ಕೆ ತಟ್ಟುವುದಿಲ್ಲ. ಅದರಂತೆ ಪರಮಾತ್ಮನು ನಮ್ಮೊಳಗಿದ್ದರೂ ನಮ್ಮ ದೋಷ ಅವನಿಗೆ ತಟ್ಟುವುದಿಲ್ಲ. ಭಕ್ತಿಯಿಂದ ನಡೆದಲ್ಲಿ ನಮ್ಮ ದೋಷವನ್ನು ನಿವಾರಿಸಿ ಸಲಹುವನು. ಕಮಲದ ಹೂವಿನ ಮಕರಂದದ ರುಚಿ ಅದರ ಕೆಳಗಡೆ ಕುಳಿತಿರುವ ಕಪ್ಪೆಗೆ ಗೊತ್ತಿರುವದಿಲ್ಲ. ಅದು ಸುಮ್ಮನೆ ವಟ ವಟ ಅನ್ನುತ್ತಿರುತ್ತದೆ. ಆದರೆ ಮಧು ರುಚಿ ಸವಿಯಲು ಎಲ್ಲಿಯೋ ಇರುವ ದುಂಬಿಯು ಹಾರಿ ಬಂದು ಹೂವಿಗೆ ಯಾವ ತೊಂದರೆ ಆಗದಂತೆ ರಸ ಪಾನ ಮತ್ತೆ ಮತ್ತೆ ಮಾಡುತ್ತಿರುತ್ತದೆ. ಎಷ್ಟು ಸುಂದರ ಅಷ್ಟೇ ವಿಸ್ಮಯ. ಅದರಂತೆ ಯಾವುದೇ ಕಾರಣಕ್ಕೂ ಪರಮಾತ್ಮನ ಮರೆಯದಂತೆ ಸುಖವಾಗಿ ಜೀವನ ಬಂಡಿಯನ್ನು ನಡೆಸಲು ಪ್ರಯತ್ನಿಸೋಣ. ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ.
ಕವನ
ಮಾನವ ಜನ್ಮ ದೊಡ್ಡದು
ಸಾಧನಕೆ ತಿರುಗಿ ಸಿಗದು
ಏಕಾದಶೇಂದ್ರಿಯಗಳಲಿ ಇರುತಹ ಪರಮಾತ್ಮ
ಅನೇಕಾನೇಕ ಮಹಿಮೆ ತೋರುತಿಹ ಸತ್ಯಾತ್ಮ
ಅವಕಾಶ ಕೊಟ್ಟಿಹ ಶರೀರಕೆ ನಿತ್ಯಾತ್ಮ
ಸದಾವಕಾಶ ನೀಡು ಸಾಧನಕೆ ಪೂರ್ಣತೆ
ಸರ್ವ ಜೀವಿಗಳ ಸಲಹುವ ದೋಷವಿಗತ
ಬ್ರಹ್ಮಾದಿ ಅಮರಗಣಗಳಿಂದ ಸನ್ಮಹಿತ
ಪ್ರೇರ್ಯ ಪ್ರೇರಕನಾಗಿಹ ಇಂದ್ರಿಯ ಸಹಿತ
ಕಾರ್ಯಸಹಿತ ಸಾಧನ ಮಾಡು ವಿಹಿತ
ಕಾಲಾಂತರ್ಗತ ಕಾಲನಿಯಾಮಕಾಲಾತೀತ
ಕಾಲಸೂತ್ರನ ಒಂದೌಂಶ ತಿಳಿ ನೀ ತನುವಂತ
ಎಲ್ಲ ಜಡ _ಚೇತನಗಳಲಿ ವ್ಯಾಪ್ತ ಭಗವಂತ
ಬಲ್ಲಿದ ಜನ್ಮದಾತರಿಗೆ ಸಲ್ಲುವನು ಪ್ರಾಣವಂತ
- ಕೆ ಸಂಧ್ಯಾ
