ಬಸ್ಯಾ ಹುಟ್ಟುಹಬ್ಬದ ದಿನವನ್ನು ಸಂಭ್ರಮದಿಂದ ಎಲ್ಲರೂ ಆಚರಿಸುತ್ತಿದ್ದರು, ಅದನ್ನು ನೋಡಿ ಚಿನ್ನಿ ಅವರಮ್ಮನಿಗೆ ನನ್ನ ಹುಟ್ಟುಹಬ್ಬವನ್ನು ಬಸ್ಯಾನ ಹುಟ್ಟುಹಬ್ಬದಂತೆ ಅದ್ದೂರಿಯಾಗಿ ಯಾಕೆ ಆಚರಿಸಲಿಲ್ಲ ಎಂದುಕೇಳಿದಳು, ಅದಕ್ಕೆ ಚಿನ್ನಿಯವರ ಅಮ್ಮ ಅವನು ಗಂಡುಮಗ ಅಂದಾಗ ಚಿನ್ನಿ ಮನಸ್ಸಿಗೆ ಏನಾಯಿತು ತಪ್ಪದೆ ಓದಿ ಕವಿತಾ ಹೆಗಡೆ ಅಭಯಂ ಅವರ ಈ ಸಣ್ಣಕತೆ …
“ಅಕ್ಕಾರ… ನಾಳಿ ಸಂಜೀ ಮುಂದ ನಮ್ಮನೀಗ ಬರ್ರೀ…ನಮ್ಮ ಬಸ್ಯಾದು ಯಾಪಿ ಬಡ್ಡೇ ಐತಿ…” ಎಂದಳು ರೇಣುಕಾ. ಮಿತ್ರಾಳಿಗೆ ನಗು ಬಂತು.
“ಎಲ್ಲಿದೆಯೇ ಜಾಗ ವಾಚ್ ಮ್ಯಾನ್ ಶೆಡ್ಡಿನಲ್ಲಿ?” ಅಂದಳು.
“ಅಕ್ಕಾರ… ಅಲ್ಲೇ ಮಾಡ್ತೀವಿ, ಬರ್ರಿ,” ಎಂದು ಹೋದ ರೇಣುಕಾಳನ್ನೇ ನೋಡುತ್ತ ಕುಳಿತಳು ಮಿತ್ರಾ.
ಅವಳ ಮನೆಯ ಬಾಲ್ಕನಿಯಿಂದಲೇ ಕಾಣುವ ಶೆಡ್ಡಿಗೆ ಹೋದ ವಾರವಷ್ಟೇ ವಾಚ್ ಮ್ಯಾನ್ ಪರಿವಾರವೊಂದು ಬಂದಿತ್ತು. ಬಾಗಿಲು ತೆಗೆದಾಕ್ಷಣ ಹಾರಿ ಬರುವ ಕೋಳಿಗಳ ಹಾಗೆ ಭರ್ತಿ ಎಂಟು ಜನರು ಆರು ಎಂಟರ ಇಡಚಣಿಯ ಶೆಡ್ಡಿನೊಳಗೆ ಹೋಗುವ ಬರುವ ಸಂಭ್ರಮ ನೋಡುತ್ತ ಮಿತ್ರಾ ‘ಹೇಗಪ್ಪಾ ಇದು ಸಾಧ್ಯ’ ಎಂದು ದಿಗಿಲುಗೊಳ್ಳುತ್ತಿದ್ದಳು. ಎಷ್ಟೊಂದು ವಸ್ತುಗಳು ರಸ್ತೆಯ ಮೇಲೆ, ಮರದಡಿಗೆ, ಶೆಡ್ಡಿನ ಬಗಲಲ್ಲಿ, ಹಿಂದೆ, ಮುಂದೆ ಜಾಗ ಕಚ್ಚಿಕೊಂಡವು, ಹಳೇ ಮುದುಕಿಯೊಬ್ಬಳು ಹಿಡಿದುಕೊಂಡ ಪ್ರಾಣದ ಹಾಗೆ! ಇಡೀ ಬೀದಿಯ ಜನರ ಕೆಂಗಣ್ಣಿಗೆ ಗುರಿಯಾಗಿ ಕುಳಿತವು.
ಮರುದಿನ ಸಂಜೆ ಐದು ಗಂಟೆಯಿಂದಲೇ ರಾವುರಾವಾದ ವಸ್ತ್ರ ಸುತ್ತಿಕೊಂಡ ಜನ ಎಲ್ಲೆಲ್ಲಿಂದಲೋ ಹುಯ್ ಎಂದು ಬರತೊಡಗಿ ರಸ್ತೆಯ ಮೇಲೆ ಹಾಸಿದ ಹರುಕು ಚಾಪೆ, ಸಿಮೆಂಟು ಚೀಲ, ಚಿಂದಿ ಗೋಣಿಗಳು ಅರ್ಧ ತಾಸಿನಲ್ಲಿ ತುಂಬಿ ಜನ ಮಣ್ಣು, ಕಲ್ಲು, ರಸ್ತೆ ಎನ್ನದೆ ಕಂಡಲ್ಲಿ ಕೂತರು.
ಆರು ಗಂಟೆಗೆಲ್ಲ “ಏ ಅವ್ವಾ, ಕೇಕ್ ತರ್ರಿ… ಕಟ್ ಮಾಡೋಣು” ಎಂದು ಬಡ್ಡೇಬಾಯ್ ಬಸ್ಯಾ ಕೂಗತೊಡಗಿದ. ಜೋರಾದ “ಯಾಪಿ ಬಡ್ಡೇ ಟೂ ಯೂ…..” ಮೊಳಗಿ ಬಸ್ಯಾ ಅನೂಹ್ಯ ಥ್ರಿಲ್ ಅನುಭವಿಸಿದ.
“ಏ.. ಗಿಪಟ್ ತಂದೋರೆಲ್ಲ ಈ ಲೈನ್ಯಾಗ ಬರ್ರಿ…. ಮೊದಲ ನನ ಕೈಯಾಗ ಕೊಟ್ಟ ಊಟಕ್ ಹೋಗ್ರಿ,” ಎಂದು ಚೀರಿದ ಹೊಡೆತಕ್ಕೆ ಗಿಫ್ಟ್ ತರದ ಒಂದಿಷ್ಟು ಮಂದಿ ಕಂಗಾಲಾಗಿ ಹೋದರು. ಹೆಂಡತಿಯರ ಕೆಂಗಣ್ಣು ಜೀವಕ್ಕೇ ಕತ್ತರಿ ಹಾಕಿದಹಾಗಾಗಿ ಗಾಳಿಯೇ ತುಂಬಿದ್ದ ಕಿಸೆಯನ್ನು ಕೆದಕಿ ಸಿಕ್ಕ ನೋಟನ್ನು ಬಸ್ಯಾನ ಕೈಗೆ ಹೆಮ್ಮೆಯಿಂದ ತುರುಕಿ “ಯಾಪಿ ಬಡ್ಡೇ…ಯಾಪಿ ಯಾಪಿ…”
ಎನ್ನುತ್ತ ಊಟಕ್ಕೆ ನುಗ್ಗಿದರು. ಕೇಕನ್ನು ನೋಡಿ ಅನಿಯಂತ್ರಿತವಾಗಿ ಹರಿಯುತ್ತಿದ್ದ ಜೊಲ್ಲನ್ನು ಒರೆಸಿಕೊಳ್ಳುವುದನ್ನು ಮರೆತಿದ್ದ ಚಿನ್ನಿಯನ್ನು ನೋಡಿ ಅಧಿಕಾರವಾಣಿಯಿಂದ
“ಎಲ್ಲೈತಿ ನಿನ್ ಗಿಪಟು?” ಅಂದ ಬಸ್ಯಾ.
“ನಾ…..ಏನೂ ತಂದಿಲ್ಲ,” ಎಂದು ತೊದಲಿದಳು.
“ಮತ್ಯದಕ್ ಬಂದಿ? ಬಡ್ಡೇಗ್ ಗಿಪಟ್ ತರಬೇಕನ್ನೂದ ಗೊತ್ತಿಲ್ಲ? ನಿನಗ್ ಊಟ ಹಾಕಂಗಿಲ್ಲ, ನಡಿ ಅತ್ತ,” ಅಂತ ಜೋರಾಗಿ ದಬಾಯಿಸಿದ. ತನ್ನ ಜೊತೆಗೆ ಮಣ್ಣಲ್ಲಿ ಬಿದ್ದಾಡಿಕೊಂಡು ಬೆಳೆಯುತ್ತಿರುವ ದೊಡ್ಡಪ್ಪನ ಮಗನ ಮಾತಿಗೆ ಕಂಗಾಲಾಗಿಹೋದಳು.
ಹೋದ ವಾರ, ಶೆಡ್ಡಿಗೆ ಬಂದ ದಿನ ಅವಳ ಬಡ್ಡೇ ಇತ್ತಲ್ಲ, ಮನೆಮಂದಿ ಅವಳಿಗೊಂದು ಗುಲಾಬಿ ಅಂಗಿ ಹಾಕಿ, ಚಾಕಲೇಟ್ ಕೊಟ್ಟು “ಯಾಪಿ ಬಡ್ಡೇ ಚಿನ್ನಿ” ಅಂತ ಹಾಡಿದ್ದರು.
“ಇವತ್ತ ಬಸ್ಯಾದು ಬಡ್ಡೇವಳಗ ಎಸ್ಟ್ ಮಂದಿ ಬಂದಾರ! ಊಟಾ ಹಾಕಸಾಕ್ಹತ್ತಾರ, ನಂದಕ್ಯಾರೂ ಬಂದಿಲ್ಲ…ಯದಕವ್ವ?” ಎಂದರೆ
“ಅವಾ ಗಣಮಗಾ ಬಿಡ್ಲೇ..” ಅಂದು ಹೊಸ ಸೀರೆ ಉಡಹತ್ತಿದ್ದಳು.
ಚಿನ್ನಿ ಅವತ್ತು ತನ್ನ ಬಡ್ಡೇ ದಿನ ಗುಲಾಬಿ ಅಂಗಿ ಹಾಕಿಕೊಂಡು ರಸ್ತೆಯಲ್ಲಿ ಹೋಗುವಾಗ ಮಿತ್ರಾ ಆಂಟಿ ತನ್ನನ್ನು ಮಾತನಾಡಿಸಿ, ನಿಲ್ಲು ಎಂದು, ಒಳಗೋಡಿ ಹೋಗಿ ಒಂದು ಗುಲಾಬಿ ಮುತ್ತಿನಸರ ಹಾಕಿ ನೂರು ರೂಪಾಯಿ ಕೈಗಿಟ್ಟ ಕೂಡಲೇ ಬಸ್ಯಾ ಅದನ್ನು ಕಸಿದು ಓಡಿ ಹೋಗಿ ಅಂಗಡಿಯಿಂದ ಚಿಪ್ಸ್ ತಂದು ಒಬ್ಬನೇ ತಿಂದಿದ್ದ. ಚಿನ್ನಿಯ ಗೋಳಾಟ ನೋಡಿ ಅವ್ವ, “ಗಣಮಕ್ಕಳು ಹಂಗ್… ಬಿಡ..” ಅಂದು ಅವಳ ರಟ್ಟೆ ಹಿಡಿದೊಯ್ದಿದ್ದಳು.ಆಂಟಿ ಏನು ಹೇಳುವುದೋ ತಿಳಿಯದೆ ಕಲ್ಲಾಗಿದ್ದರು.
ಮಿತ್ರಾ ದೊಡ್ಡದೊಂದು ಗಿಫ್ಟ್ ಹಿಡಿದುಕೊಂಡು ಬಂದು ಬಸ್ಯಾಗೆ ಕೊಟ್ಟಾಗ, “ಥ್ಯಾಂಕ್ಸ್ರಿ ಆಂಟಿ…ಊಟಾ ಮಾಡಬರ್ರಿ,” ಎಂದು ಜೋತುಬಿದ್ದ.
“ಈ ವಾಚ್ಮ್ಯಾನ್ ಲೈಪು ಅಂದ್ರ ಹಿಂಗ ನೋಡ್ರಿ ಅಕ್ಕಾರ…ಮನಿ ಇಲ್ಲ ಅಂತ ಸುಮ್ಮನಿರಾಕ್ ಆಗಂಗಿಲ್ಲ. ಶೆಡ್ಡಿನಾಗ ಎಲ್ಲಾ ಮಾಡಬೇಕ್ರಿ. ಬಿಡಾಕ್ ಬರಂಗಿಲ್ಲ, ಬಿಶಿಬ್ಯಾಳಿಬಾತು, ಸಿರಾ ಮಾಡ್ಸೇವಿ, ” ಎನ್ನುತ್ತ ರೇಣುಕಾ ಮೇಜವಾನಿಕೆ ಮಾಡಿದಳು.
ಬಸ್ಯಾನ ಮಾತಿಗೆ ನೊಂದು ಸಿಕ್ಕ ಹಾದಿಹಿಡಿದು ಹೊರಟ ಬಾಲೆಯನ್ನು ಪರಿಚಿತ ಕೈಯೊಂದು ಮೆತ್ತಗೆ ಸುತ್ತುವರಿಯಿತು.
“ಗಿಪಟ್ ತಂದೋರು ಲೈನ್ಯಾಗ ಬರ್ರಿ….” ಎಂಬ ಬಸ್ಯಾನ ಆರ್ಭಟ ಮೂರು ಲೋಕಕ್ಕೂ ಕೇಳುತ್ತ ಕಿವಿ ಸೀಳುತ್ತಿದ್ದಾಗ ಆ ಕೈ ಚಿನ್ನಿಯನ್ನು ಭದ್ರವಾಗಿ ಹಿಡಿದುಕೊಂಡು ಹೋಗಿ ಹೋಟೆಲ್ ಒಂದರಲ್ಲಿ ಬಿಸಿ ಬೇಳೆ ಬಾತು, ಶಿರಾ ಮತ್ತು ಕೇಕು ಕೊಡಿಸಿ ಕೂರಿಸಿತು.
ಚಿನ್ನಿಯ ಹಂಗಿಲ್ಲದ ತಾಟಿನ ಎದುರು ಕುಳಿತು ಅವ್ವ ಮುಗುಳ್ನಕ್ಕಳು.
- ಕವಿತಾ ಹೆಗಡೆ ಅಭಯಂ
