‘ಮಣ್ಣಿನ ಬೇರನು ತಾಕಿ ಹೂವಾಗಿ ನಗುತ್ತದೆ’… ಕವಿ ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಬೆಳಗಾದರೆ ಸಾಕು
ಬೆಳಕಿನ ಟಪಾಲುಗಳು
ಭೂಮಿಯ ತಲುಪಿ
ಮಾತಾಗಿ ಉಳಿದು
ಪುಟಾಣಿ ಹಕ್ಕಿಯ
ಗೂಡನು ಬಡಿದು
ಹಾಡಾಗುತ್ತದೆ
ಮಣ್ಣಿನ ಬೇರನು ತಾಕಿ
ಹೂವಾಗಿ ನಗುತ್ತದೆ
ಹೂವಿನ ಕಿರಣಗಳ
ತುದಿಗೆ ಅಂಟಿ ನಿಂತ
ಟಪಾಲುಗಳಿಗೆ ವಿಳಾಸದ
ಗುರುತಿಲ್ಲವಾದರೂ
ದಿನಕ್ಕೆ ಮುನ್ನುಡಿ
ಬರೆಯುತ್ತದೆ
ಅದೆಲ್ಲಿಗೋ ಸಾಗುವ
ದುಂಬಿ ಜೀರುಂಡೆಗೂ
ಬೆಳಕಿನ ಟಪಾಲುಗಳ
ಹೊತ್ತು ಸಾಗುವ ತವಕ
ಚಿಟ್ಟೆ ಝರಿಗಳಿಗೂ
ಟಪಾಲುಗಳ ಗುರುತು
ಬೆಳಕಿನ ಈ ಸಾಲುಗಳು
ದೀಪವಾಗುವುದಂತೆ
ಮನದ ಮೌನಕೆ
ಕವಿತೆಯಾಗಿ
ಒಲವ ಹಂಚುವುದಂತೆ.
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ.
