ಶುಂಠಿ ಬಳಸಿ, ಆರೋಗ್ಯ ವೃದ್ಧಿಸಿಕೊಳ್ಳಿ!!

ಪ್ರತಿದಿನ ಹೆಚ್ಚು ಶುಂಠಿ ಚಹಾ ಕುಡಿಯುವುದರಿಂದ ದೇಹದಲ್ಲಿ ಆಯಾಸ ಉಂಟಾಗುತ್ತದೆ. ಇದು ದೌರ್ಬಲ್ಯ ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು.ಶುಂಠಿ ಕುರಿತು ಒಂದಷ್ಟು ಮಾಹಿತಿಯನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ಶಿಕ್ಷಕಿ, ಲೇಖಕಿ ಸೌಮ್ಯಾ ಸನತ್ ಅವರು ತಪ್ಪದೆ ಮುಂದೆ ಓದಿ…

“‘ಶುಂಠಿ”… ಯಾರಿಗೆ ಗೊತ್ತಿಲ್ಲ ಹೇಳಿ… ಪ್ರತಿ ಮನೆಯ ಅಡಿಗೆ ಮನೆಯಲ್ಲಿಯೂ ಶುಂಠಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ದಿನವೂ ಶುಂಠಿಯನ್ನು ಒಂದಲ್ಲ ಒಂದು ಕಾರಣಕ್ಕೆ ಬಳಕೆ ಮಾಡುತ್ತಲೇ ಇರುತ್ತೇವೆ. ಇದು ಕೇವಲ ಮಸಾಲೆ ಮಾತ್ರವಲ್ಲ. ಕಟುವಾದ ಮತ್ತು ಸ್ವಲ್ಪ ಸಿಹಿ ಸುವಾಸನೆಯನ್ನು ಹೊಂದಿರುವ ಇದು ಗಿಡಮೂಲಿಕೆ ಔಷಧಿಯಾಗಿ ಆಯುರ್ವೇದದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ.

ನೆಗಡಿಯಾದರೆ ಸಾಕು ಶುಂಠಿ ಕಷಾಯ ಮಾಡಿ ಕುಡಿ ಸಾಕು ಎನ್ನುವುದು ನಮ್ಮ ಕಡೆ ರೂಢಿಮಾತು. ಗಂಟಲಿನ ಕಿಚ್ ಕಿಚ್ ದೂರಾಗಿಸಲು ವಿಕ್ಸ್ ಗೋಲಿಗಳನ್ನು ತೆಗೆದುಕೊಳ್ಳುವ ಮೊದಲೆ ಹಸಿ ಶುಂಠಿ ಸಕ್ಕರೆ ನಮ್ಮ ಬಾಯಿ ಸೇರಿರುತ್ತದೆ

ಆಹಾರದಲ್ಲಿ ಶುಂಠಿ ಬಳಸುವುದರಿಂದ ಆಹಾರದ ಸುವಾಸನೆ ಮತ್ತು ರುಚಿ ಹೆಚ್ಚುವುದಷ್ಟೇ ಅಲ್ಲದೆ , ಆರೋಗ್ಯ ಮತ್ತು ಸೌಂದರ್ಯದ ಮೇಲೂ ಉತ್ತಮ ಪರಿಣಾಮವನ್ನು ಬೀರುತ್ತದೆ. ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಸಿ, ರಂಜಕ, ತಾಮ್ರ, ಸತು ಮತ್ತು ಮ್ಯಾಂಗನೀಸ್‌ನಂತಹ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಶುಂಠಿಯು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ತುಂಬಾ ಪ್ರಯೋಜನಕಾರಿ.

1.ನಿಲ್ಲದ ಕೆಮ್ಮಿದ್ದರೆ, ಶುಂಠಿ ರಸಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿಕೊಂಡು ಸೇವಿಸಿದರೆ ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ.

2. ಶುಂಠಿಯಲ್ಲಿ ನೋವು ನಿವಾರಿಸುವ ಗುಣ ಹೊಂದಿದೆ. ಹೀಗಾಗಿ ಮಾಂಸ ಖಂಡದ ನೋವು, ಸಂಧಿ ನೋವು ಇದ್ದರೆ ಶುಂಠಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

3. ಊಟ ಮಾಡುವುದಕ್ಕೂ ಮುನ್ನು ಸಣ್ಣ ತುಂಡು ಶುಂಠಿಯನ್ನು ಜಗಿದು ಸೇವಿಸಿದರೆ ಹಸಿವು ಹೆಚ್ಚಾಗುವುದು.

4. ಹೊಟ್ಟೆಯಲ್ಲಿ ಸಂಕಟವಾದರೆ ಸಣ್ಣು ತುಂಡು ಶುಂಠಿಯನ್ನು ಬಾಯಿಗೆ ಹಾಕಿಕೊಂಡು ಜಗಿದರೆ ಪರಿಹಾರ ಸಿಗುವುದು.

5. ಶುಂಠಿ ಟೀ ಸೇವಿಸುವುದರಿಂದ ಗಂಟಲು ಬೇನೆ ಮತ್ತು ಕಟ್ಟಿದ ಮೂಗಿನಿಂದ ರಿಲೀಫ್ ಸಿಗುವುದು.

6.ಶುಂಠಿಯನ್ನು ನೀರಿನಲ್ಲಿ ಅರೆದು ಬರುವ ಗಂಧವನ್ನು ಹಣೆಗೆ ಲೇಪ ಮಾಡಿ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

7. ಸುಲಭವಾಗಿ ಜೀರ್ಣವಾಗದ ಆಹಾರ ಸೇವಿಸಿದಾಗ ಒಂದು ತುಂಡು ಶುಂಠಿ ತಿಂದರೆ ಬೇಗನೇ ಜೀರ್ಣವಾಗುತ್ತದೆ. ಅಥವಾ ಚಹಾ ಮಾಡುವಾಗ ಚಿಕ್ಕ ಚೂರು ಶುಂಠಿ ಸೇರಿಸಿ ಮಾಡಿದರೂ, ಜೀರ್ಣಕ್ರಿಯೆ ಸುಗಮವಾಗುತ್ತದೆ.

8. ಗಂಟಲು ನೋವು, ಕೆಮ್ಮಿನಿಂದಾಗಿ ಗಂಟಲು ಕೆರೆದಂತಾಗುತ್ತಿದ್ದರೆ, ಹಸಿ ಶುಂಠಿ ಮತ್ತು ಉಪ್ಪು ಹಾಕಿ ತಿಂದರೆ ಗಂಟಲು ಕೆರೆತ ನಿವಾರಣೆಯಾಗುತ್ತದೆ. ರಾತ್ರಿಯಿಡೀ ಕೆಮ್ಮಿನಿಂದಾಗಿ ನಿದ್ರೆ ಮಾಡಲೂ ತೊಂದರೆಯಾಗುತ್ತಿದ್ದರೆ, ಹೀಗೆ ಮಾಡಬಹುದು.

9. ಶುಂಠಿರಸವನ್ನು ಮಜ್ಜಿಗೆಯೊಡನೆ ಸೇವಿಸುವುದರಿಂದ ಆಮಾತಿಸಾರವು ಗುಣವಾಗುತ್ತದೆ.

10. ವಾಂತಿ ಬರುವಂತಾದರೆ, ಜೇನುತುಪ್ಪದೊಂದಿಗೆ ಸಣ್ಣ ತುಂಡು ಶುಂಠಿ ಸೇರಿಸಿ ಸೇವಿಸಿದರೆ ಪರಿಹಾರವಾಗುವುದು.

11. ಒಂದು ದೊಡ್ಡ ಲೋಟ ಕಡೆದ ಮಜ್ಜಿಗೆಗೆ ಎರಡು ಚಮಚ ಹಸಿ ಶುಂಠಿ ರಸ ಮತ್ತು ಸ್ವಲ್ಪ ಸೈಂಧವ ಲವಣವನ್ನು ನೀರಿನಲ್ಲಿ ಪ್ರತಿ ದಿನ ತೆಗೆದುಕೊಂಡು ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳನ್ನು ಬಿಟ್ಟು ಪಥ್ಯ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಇದಲ್ಲದೆ ಪಚನ ಶಕ್ತಿ ಹೆಚ್ಚಾಗುತ್ತದೆ. ತಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಸುಧಾರಣೆಯಾಗುತ್ತದೆ.

12. ಆಯುರ್ವೇದದ ಪ್ರಕಾರ ಹಸಿಶುಂಠಿಯನ್ನು ಒಣಶುಂಠಿಗಿಂತಲೂ ಉತ್ತಮವೆಂದು ಪರಿಗಣಿಸಲಾಗುತ್ತದೆ. ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳಿಗೆ ಹಸಿಶುಂಠಿಗೆ ಹೋಲಿಸಿದರೆ ಒಣಶುಂಠಿ ಸೇವನೆ ಉತ್ತಮ. ಹಸಿಶುಂಠಿ ವಾತವನ್ನು ಹೆಚ್ಚಿಸುತ್ತದೆ. ಒಣಶುಂಠಿ ಸೇವನೆಯಿಂದ ವಾತವನ್ನು ಸಮತೋಲನದಲ್ಲಿ ಇರಿಸಬಹುದು. ಆ ಕಾರಣಕ್ಕೆ ಗ್ಯಾಸ್ಟ್ರಿಕ್‌ ಅಥವಾ ಹೊಟ್ಟೆಯಬ್ಬರದ ಸಮಸ್ಯೆ ಕಾಣಿಸಿದಾಗ ಹಸಿಶುಂಠಿಯನ್ನು ಜಗಿಯುವುದು ಅಥವಾ ಇದರಿಂದ ಕಷಾಯ, ಟೀ ಮಾಡಿ ಸೇವಿಸುವುದು ಒಳ್ಳೆಯದಲ್ಲ, ಅದರ ಬದಲು ಒಣಶುಂಠಿ ಬಳಸಬೇಕುʼ ಎನ್ನುತ್ತಾರೆ ಆಯುರ್ವೇದ ವೈದ್ಯ ಡಾ. ರೇಖಾ ರಾಧಾಮೋನಿ.

ಒಣಶುಂಠಿ ಸೇವನೆ ಹೇಗೆ ?

1 ಇಂಚು ಒಣಶುಂಠಿಯೊಂದಿಗೆ 2 ಗ್ಲಾಸ್‌ ನೀರನ್ನು ಸೇರಿಸಿ ಕುದಿಸಿ. ಅದು ಕದ್ದು 1 ಲೋಟದಷ್ಟಾದ ಮೇಲೆ ಕುಡಿಯಬೇಕು. ಒಳ್ಳೆಯದು ಎಂದು ಶುಂಠಿ ಹೆಚ್ಚು ಸೇವಿಸಿದರೆ ಅಪಾಯ ಕಟ್ಟಿಟ್ಟಬುತ್ತಿ!

***

1. ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಸೇವಿಸುವುದರಿಂದ ಅಜೀರ್ಣ, ಆಮ್ಲೀಯತೆ ಉಂಟಾಗುತ್ತದೆ. ಹೊಟ್ಟೆಯ ಕಿರಿಕಿರಿ ಮತ್ತು ಅತಿಸಾರದಂತಹ ಸಮಸ್ಯೆಗಳು ಕಂಡುಬರಬಹುದು. .

2. ಪ್ರತಿದಿನ ಬೆಳಿಗ್ಗೆ ಹೆಚ್ಚು ಶುಂಠಿ ಚಹಾ ಕುಡಿದರೆ ಕೂದಲು ಉದುರುವಿಕೆ ಸಮಸ್ಯೆ ಕಾಡಬಹುದು. ಏಕೆಂದರೆ, ಇದರಲ್ಲಿ ಜಿಂಜರಾಲ್ ಇರುತ್ತದೆ. ಇದು ಕೂದಲಿಗೆ ಹಾನಿಕಾರಕ.

3. ಪ್ರತಿದಿನ ಹೆಚ್ಚು ಶುಂಠಿ ಚಹಾ ಕುಡಿಯುವುದರಿಂದ ದೇಹದಲ್ಲಿ ಆಯಾಸ ಉಂಟಾಗುತ್ತದೆ. ಇದು ದೌರ್ಬಲ್ಯ ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು.

4. ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ, ಆಹಾರದಲ್ಲಿ ಶುಂಠಿಯನ್ನು ಸೀಮಿತ ಪ್ರಮಾಣದಲ್ಲಿ ಬಳಸಬೇಕು. ಇದು ರಕ್ತವನ್ನು ತೆಳುಗೊಳಿಸುವ ಗುಣಗಳನ್ನು ಹೊಂದಿದ್ದು, ಬಿಪಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೊಂದರೆ ಉಂಟುಮಾಡಬಹುದು.

5. ಹಲವರಿಗೆ ಶುಂಠಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಚರ್ಮದ ಅಲರ್ಜಿ ಉಂಟಾಗುತ್ತದೆ. ಅಂದರೆ ಚರ್ಮದ ಮೇಲೆ ದದ್ದುಗಳು, ಕಣ್ಣುಗಳು ಕೆಂಪಾಗುವುದು, ಚರ್ಮದ ಕೆರೆತ, ತುಟಿಗಳು ಊದಿಕೊಳ್ಳು ವುದು, ಕಣ್ಣುಗಳ ಕೆರೆತ ಇತ್ಯಾದಿ ಸಮಸ್ಯೆಗಳು ಶುಂಠಿಯಿಂದ ಶುರುವಾಗುತ್ತವೆ.


  • ಸೌಮ್ಯಾ ಸನತ್

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading