ಹೊಲಕ್ಕೋದ ಗಂಡನಿಗೆ ಬುತ್ತಿ ಒಯ್ಯೋಕು…ಕುರಿಗೋದ ಮಗನಿಗೆ ಹಿಟ್ಟ ಉಕ್ಕರಿಸೋಕು… ಮನಸಿಲ್ಲದೆ ಮಾಡು ನೋಡುತ್ತಾ ಮನಿಕ್ಕೊಂಡ ಮಾಧೇವಿ…ಮುಂದೆ ಓದಿ ಕವಿ ಕು.ಸ.ಮಧುಸೂದನ ರಂಗೇನಹಳ್ಳಿ ಅವರ ಕವನದ ಸುಂದರ ಸಾಲುಗಳು…
(ಮಧ್ಯಾಹ್ನದ ಮಂಪರಿನೊಳಗೊಬ್ಬ ಮಾಧೇವಿ!)
ಎಂಥಾ ಕಾಲಬಂತೊ ಶಿವ ಶಿವನೇ
ಮೂಡಿ ಮೂರು ಗೇಣಾಗೊಷ್ಟರಲ್ಲಿ
ಅದೆಷ್ಟು ಉರಿತಾನೆ ಸೂರ್ಯ
ಆಗುಂಬೆಯ ಸಹ್ಯಾದ್ರಿ ಪರ್ವತ ಶ್ರೇಣಿಗಳ
ನೆತ್ತಿಯ ಹಾರಿ
ಬತ್ತ ಕಬ್ಬಿನ ಗದ್ದೆಗಳ ದಾಟಿ
ಅಡಿಕೆ ತೋಟಗಳಮರಗಳ
ದಾಟಿ ಬಯಲು ಸೀಮೆಯೀ ಕಲ್ಲುಬಂಡೆಗಳ ಕಾಯಿಸುತಾನೆ
ಅಂತರಘಟ್ಟವ್ವಂಗೆ ಬಿಟ್ಟ ನಾಟಿಕೋಳಿ
ಗುಡಿಗೋಗಿ ಕುಯ್ದು
ಅದರ ಪುಕ್ಕ ತರಿಯೋಕಂತ ಇಟ್ಟ
ಕುದಿಕುದಿ ಬಿಸಿನೀರಲ್ಲಿ ಮೈತೊಳೆದಂಗಿದು
ಈ ಉರಿಬಿಸಿಲು
ಅದ್ಯಾಕಂಗೆ ಆಕಾಶದೊಳಗಾ
ದೇವತೆಗಳು ಸಿಟ್ಟಾಗಿದಾರೊ
ಯಾವ ರಾಕ್ಷಸಗಣ ನಮ್ಮ ಮೇಲೆ
ಮುರಕೊಂಡು ಬಿದ್ದಿದೆಯೊ
ಊರಾಚೆಯ ಯಾವ ಕೆರೆಗಳಲ್ಲೂ ನೀರಿಲ್ಲ
ಯಾವ ಬಾವಿಯೊಳಗು ಜಲವಿಲ್ಲ
ಇಂತದ್ರಾಗು ಅದ್ಯಾವನು ಸತ್ತನೊ
ಕೇರಿತುಂಬಾ ತಮಟೆ ಸದ್ದು
ಹೊಲಕ್ಕೋದ ಗಂಡನಿಗೆ ಬುತ್ತಿ ಒಯ್ಯೋಕು
ಕುರಿಗೋದ ಮಗನಿಗೆ ಹಿಟ್ಟ ಉಕ್ಕರಿಸೋಕು
ಮನಸಿಲ್ಲದೆ
ಮಾಡು ನೋಡುತ್ತಾ ಮನಿಕ್ಕೊಂಡ ಮಾಧೇವಿ
ಆ ಮಧ್ಯಾಹ್ನ ದುರಿ ಬಿಸಿಲಿಗೆ
ಅಡರಿದ ಮಂಪರಿನೊಳಗೆ
ಹಳೆಯ ಗೆಣೆಕಾರನ ಕನಸು ಬಿದ್ದಾಗ
ತಡಬಡಿಸಿ ಎದ್ದೋಳು
ಹೊರಗೆ ಬಂದು ಸೂರ್ಯಂಗೆ
ಮುಖ ಮಾಡಿ ಉಗೀತಾಳೆ
ಯಾಕಿಂತ ಧಗೆಯಿಟ್ಟು
ಮನಸೊಳಗೆ ಕಪಟವಿಟ್ಟೆ
ಹಾದರಗಿತ್ತಿಯ ಮಗನೆ
ಅಂತ ಸೆರಗು ಕಟ್ಟಿ
ಆರಿದೊಲೆಯ ಮತ್ತೆ ಹಚ್ಚಲು ಕಡ್ಡಿಪಟ್ಟಣ
ಹುಡುಕುತ್ತಾಳೆ
ಪತಿವ್ರತೆಯ ಶಾಪಕ್ಕೆ ಹೆದರಿದವನು
ಪಡುವಣದ ಕಡೆಗೆ ಮುಖಮಾಡಿ
ನಡೆಯತೊಡಗುತ್ತಾನೆ!
- ಕು.ಸ.ಮಧುಸೂದನ ರಂಗೇನಹಳ್ಳಿ – ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ರಂಗೇನಹಳ್ಳಿ ಎನ್ನುವ ಹಳ್ಳಿಯಲ್ಲ ನೆಲೆಸಿರುವ ಇವರು ‘ಸಂಗಾತಿ’ ಸಾಹಿತ್ಯದ ವೆಬ್ ಪತ್ರಿಕೆಯ ಸಂಸ್ಥಾಪಕರ, ಪ್ರಧಾನ ಸಂಪಾದಕರಾಗಿರುವ ಇವರು ಇದುವರೆಗು ನಾಲ್ಕು ಕವನ ಸಂಕಲನಗಳನ್ನು, ಎರಡು ಕಥಾ ಸಂಕಲನಗಳನ್ನು,ಎರಡು ರಾಜಕೀಯ ಬರಹಗಳ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
